ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಂತರ ಚುನಾವಣೆಯಾದರೆ ನಮಗೆ 100ಕ್ಕೂ ಹೆಚ್ಚು ಸ್ಥಾನ: ಸಂಜಯ್‌ ರಾವುತ್‌

Last Updated 5 ಜುಲೈ 2022, 12:35 IST
ಅಕ್ಷರ ಗಾತ್ರ

ಮುಂಬೈ: ‘ಶಿವಸೇನಾ ಕಾರ್ಯಕರ್ತರು ಬಂಡಾಯ ಶಾಸಕರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಒಂದು ವೇಳೆ ಈಗ ಮಹಾರಾಷ್ಟ್ರ ವಿಧಾನಸಭೆಗೆ ಮಧ್ಯಂತರ ಚುನಾವಣೆ ಎದುರಾದರೆಉದ್ಧವ್‌ ಠಾಕ್ರೆ ನೇತೃತ್ವದ ಪಕ್ಷವು 100ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ’ ಎಂದು ಪಕ್ಷದ ಸಂಸದ ಸಂಜಯ್‌ ರಾವತ್‌ ಹೇಳಿದ್ದಾರೆ.

ಬಿಜೆಪಿ ಮತ್ತು ಮುಖ್ಯಮಂತ್ರಿ ಏಕನಾಥ್‌ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಣ ಬಲ ಅಥವಾ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿ ಒತ್ತಡ ಹೇರುವ ಮೂಲಕ ಶಿವಸೇನಾ ಹೈಜಾಕ್‌ ಮಾಡಲು ಸಾಧ್ಯವಿಲ್ಲ ಎಂದರು.

‘ಪಕ್ಷದ ಕಾರ್ಯಕರ್ತರ ಉತ್ಸಾಹ ಮತ್ತು ಆಕ್ರೋಶ ನೋಡಿದರೆ ಠಾಕ್ರೆ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಿಗಲಿದೆ. ಶಾಸಕರು ಪಕ್ಷ ತೊರೆದಾಕ್ಷಣ ಮತದಾರರನ್ನೂ ಶಿವಸೇನಾ ಕಳೆದುಕೊಂಡಿತೆಂದು ಅರ್ಥವಲ್ಲ’ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವೃತ್ತಿಯಲ್ಲಿ ವಕೀಲರಾದ ನೂತನ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರನ್ನೂ ತರಾಟೆಗೆ ತೆಗೆದುಕೊಂಡ ರಾವುತ್‌, ‘ಠಾಕ್ರೆ ನೇತೃತ್ವದ ಸೇನಾವೇ ನಿಜವಾದ ಪಕ್ಷ. ಒಂದು ವೇಳೆ ಪಕ್ಷದ ಶಾಸಕರನ್ನು ಅನರ್ಹಗೊಳಿಸುವ ನಿರ್ಧಾರ ಕೈಗೊಂಡರೆ, ಅವರು ಪಡೆದಿರುವ ಕಾನೂನು ಪದವಿಯನ್ನು ಮರಳಿಸಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಶಿಂಧೆ ಅವರು ಮಾಡಿರುವ ಭಾಷಣ ಪ್ರಸ್ತಾಪಿಸಿದ ರಾವುತ್‌, ‘ಈ ಹಿಂದೆ ಪಕ್ಷ ತೊರೆಯುವಾಗ ನಾರಾಯಣ್‌ ರಾಣೆ ಮತ್ತು ಛಗನ್‌ ಭುಜಬಲ್‌ ಕೂಡ ಇದೇ ರೀತಿ ಮಾತನಾಡಿದ್ದರು.ನಾಯಕರು ಪಕ್ಷ ತೊರೆದಾಗ, ಪಕ್ಷಕ್ಕೆ ದ್ರೋಹ ಬಗೆದಾಗ ಇಂಥದೇ ಸಮರ್ಥನೆ ಕೊಡುತ್ತಾರೆ’ ಎಂದು ಟೀಕಿಸಿದರು.

ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ನಂತರ ಮುಖ್ಯಮಂತ್ರಿ ಏಕನಾಥ್‌, ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಇದು ಆಗದಿದ್ದರೆ ನಾನು ವ್ಯವಸಾಯಕ್ಕೆ ವಾಪಸಾಗುವೆ’ ಎಂದು ಹೇಳಿದ್ದರು.

ಬಿಜೆಪಿ ಮಹಾರಾಷ್ಟ್ರದಲ್ಲಿ ಮಧ್ಯಂತರ ಚುನಾವಣೆ ನಡೆಸುವ ಧೈರ್ಯ ತೋರಲಿ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಸವಾಲು ಹಾಕಿದ್ದರು.

ವಿಪ್‌ ಉಲ್ಲಂಘನೆ–14 ಶಾಸಕರಿಗೆ ನೋಟಿಸ್‌:ವಿಶ್ವಾಸ ಮತ ಸಾಬೀತುಪಡಿಸುವ ವೇಳೆ ಸರ್ಕಾರದ ಪರ ಮತ ಚಲಾಯಿಸಲು ಶಿವಸೇನಾದ ಎಲ್ಲ ಶಾಸಕರಿಗೆ ಶಿಂಧೆ ಬಣವು ವಿಪ್‌ ಜಾರಿ ಮಾಡಿತ್ತು. ವಿಶ್ವಾಸಮತ ಗೆದ್ದ ನಂತರ, ಉದ್ಧವ್‌ ಠಾಕ್ರೆ ಬಣದ 14 ಶಾಸಕರಿಗೆ ವಿಪ್‌ ಉಲ್ಲಂಘಿಸಿದ ಕಾರಣಕ್ಕೆ ಶಿಂಧೆಯ ನಂಬಿಕಸ್ಥ ಮತ್ತು ಶಿವಸೇನಾದ ಮುಖ್ಯ ಸಚೇತಕ ಭರತ್‌ ಗೊಗವಾಲೆ ಸೋಮವಾರ ರಾತ್ರಿ ನೋಟಿಸ್‌ ಜಾರಿ ಮಾಡಿದರು.

ಶಿವಸೇನಾ ಸಂಸ್ಥಾಪಕ ಬಾಳ್‌ ಠಾಕ್ರೆ ಅವರಿಗೆ ಗೌರವ ನೀಡುವ ಸಲುವಾಗಿ, ಶಾಸಕರಾದ ಉದ್ಧವ್‌ ಠಾಕ್ರೆ ಮತ್ತು ಆದಿತ್ಯ ಠಾಕ್ರೆ ಅವರಿಗೆ ವಿ‍ಪ್‌ ಉಲ್ಲಂಘನೆಯ ನೋಟಿಸ್‌ ಜಾರಿ ಮಾಡಿಲ್ಲ.

ಸಂಪುಟ ವಿಸ್ತರಣೆ ಶೀಘ್ರ: ಫಡಣವೀಸ್‌

ನಾಗ್ಪುರ:ಶಿಂಧೆ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಗೆದ್ದ ಮರು ದಿನವೇ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು, ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿದರ್ಭ ಪ್ರದೇಶದ ಅಭಿವೃದ್ಧಿಗೆ ತಮಗಿರುವ ಸಂಕಲ್ಪವನ್ನು ವ್ಯಕ್ತಪಡಿಸಿದರು.

ಹೊಸ ಸರ್ಕಾರ ರಚನೆಯ ನಂತರ ತಮ್ಮ ಹುಟ್ಟೂರು ನಾಗ್ಪುರಕ್ಕೆ ಮರಳಿದ ಪಢಣವೀಸ್‌ ಅವರಿಗೆ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ನೀಡಿದರು.ಇಲ್ಲಿನ ವಿಮಾನ ನಿಲ್ದಾಣದಿಂದ ಪಢಣವೀಸ್‌ ಅವರ ಬೆಂಬಲಿಗರು ವಿಜಯೋತ್ಸವದ ಮೆರವಣಿಗೆ ನಡೆಸಿದರು. ಫಡಣವೀಸ್‌ ಜತೆಗೆ ಅವರ ಪತ್ನಿ ಅಮೃತಾ ಪಢಣವೀಸ್‌ ಕೂಡ ಇದ್ದರು.

ಅಭಿವೃದ್ಧಿಗೆ ಮೋದಿ–ಶಾ ಭರವಸೆ: ಶಿಂಧೆ

ಠಾಣೆ:ರಾಜ್ಯದ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್‌ ಶಾ ಅವರಿಂದ ಸಂಪೂರ್ಣ ಬೆಂಬಲದ ಭರವಸೆ ಸಿಕ್ಕಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಹೇಳಿದರು.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಅವರು ಮೊದಲ ಸಲ ಹುಟ್ಟೂರಿಗೆ ಸೋಮವಾರ ರಾತ್ರಿ ಭೇಟಿ ನೀಡಿ, ನೂರಾರು ಸಂಖ್ಯೆಯಲ್ಲಿ ಸೇರಿದ್ದ ಶಿವಸೈನಿಕರನ್ನು ಉದ್ದೇಶಿಸಿ ಮಾತನಾಡಿದರು.

‘ಕಳೆದ ಹದಿನೈದು ದಿನಗಳ ರಾಜಕೀಯ ಬೆಳವಣಿಗೆಯ ಕುರಿತು ಕೆಲವು ಟೀಕೆಗಳ ಹೊರತಾಗಿಯೂ ನಾನು ತೆಗೆದುಕೊಂಡ ಸವಾಲುಗಳನ್ನು ಜನರು ಮೆಚ್ಚಿದ್ದಾರೆ’ ಎಂದು ಹೇಳಿದರು.

‘ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಯೋಜನೆಗಳನ್ನು ಮಂಜೂರು ಮಾಡುವೆ. ಇಡೀ ರಾಜ್ಯದಲ್ಲಿ ಪರಿವರ್ತನೆ ತರುವೆ. ನಾನು ಹೆಚ್ಚು ಉತ್ಪ್ರೇಕ್ಷೆ ಮಾಡುವುದಿಲ್ಲ, ಕೆಲಸ ಮಾಡಿ, ಮಾತನಾಡುತ್ತೇನೆ’ ಎಂದು ಹೇಳಿದರು.

‘ರಾಜ್ಯದ ಅಭಿವೃದ್ಧಿ ಮತ್ತು ಬೆಳವಣಿಗೆಗಾಗಿ ಕೆಲಸ ಮಾಡುವಂತೆ ಪ್ರಧಾನಿ ಮೋದಿ ಅವರು ನನಗೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ತಮ್ಮಿಂದ ಎಲ್ಲ ರೀತಿಯ ಬೆಂಬಲ ನೀಡುವುದಾಗಿಯೂ ಅವರು ಭರವಸೆ ನೀಡಿದ್ದಾರೆ. ಕೇಂದ್ರ ಸಚಿವ ಅಮಿತ್‌ ಶಾ ಅವರೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾನು ಹಿಂದುತ್ವಕ್ಕಾಗಿ ಒಳ್ಳೆಯ ಕೆಲಸ ಮಾಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ’ ಎಂದು ಶಿಂಧೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT