ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಲ್ಲ ಜನರ ಹಕ್ಕು ರಕ್ಷಣೆ: ಭಾರತದ ಜವಾಬ್ದಾರಿ’- ಆ್ಯಂಟೊನಿಯೊ ಗುಟೆರಸ್‌

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌
Last Updated 19 ಅಕ್ಟೋಬರ್ 2022, 16:23 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ‘ದೇಶದ ಎಲ್ಲರನ್ನು ಒಳಗೊಳ್ಳುವ ತೀವ್ರ ಬದ್ಧತೆ ಮತ್ತು ಎಲ್ಲ ಜನರ ಮಾನವ ಹಕ್ಕುಗಳ ಕುರಿತು ಗೌರವ ತೋರಿಸಿದರೆ ಮಾತ್ರ ಭಾರತದ ಧ್ವನಿಯು ವಿಶ್ವಮಟ್ಟದಲ್ಲಿ ಅಧಿಕಾರಯುತವಾಗಿಯೂ ವಿಶ್ವಾಸಾರ್ಹವಾಗಿಯೂ ಧ್ವನಿಸುತ್ತದೆ’ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಬುಧವಾರ ಅಭಿಪ್ರಾಯಪಟ್ಟರು.

‘ಮಾನವ ಹಕ್ಕುಗಳ ಮಂಡಳಿಯ ಚುನಾಯಿತ ಸದಸ್ಯ ರಾಷ್ಟ್ರವಾಗಿ, ಭಾರತಕ್ಕೆ ಅಲ್ಪಸಂಖ್ಯಾತ ಸೇರಿದಂತೆ ಎಲ್ಲ ಜನರ ಹಕ್ಕನ್ನು ರಕ್ಷಿಸುವ ಜವಾಬ್ದಾರಿ ಇದೆ’ ಎಂದೂ ಹೇಳಿದರು.

ಮೂರು ದಿನಗಳ ಭಾರತದ ಭೇಟಿಯಲ್ಲಿರುವ ಅವರು, ಬುಧವಾರ ‘ಇಂಡಿಯಾ@72: ಯುಎನ್‌–ಇಂಡಿಯಾ ಪಾರ್ಟ್‌ನರ್‌ಶಿಪ್‌: ಸ್ಟ್ರೆಂಥನಿಂಗ್‌ ಸೌತ್‌–ಸೌತ್‌ ಕೋ–ಆಪರೇಷನ್‌’ ಕುರಿತು ಬಾಂಬೆಯ ಐಐಟಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

‘ಭಾರತದ ಬಹುತ್ವದ ಮಾದರಿಯು ಸರಳವಾದ ಆದರೆ ಅತ್ಯಂತ ದೃಢವಾದ ಗ್ರಹಿಕೆಯನ್ನು ಆಧರಿಸಿದೆ. ಅತ್ಯಂತ ಶ್ರೀಮಂತವಾದ ವೈವಿಧ್ಯವು ನಿಮ್ಮ ದೇಶವನ್ನು ಗಟ್ಟಿಗೊಳಿಸಿದೆ. ಈ ಗ್ರಹಿಕೆಯು ಪ್ರತಿ ಭಾರತೀಯ ಜನ್ಮಜಾತ ಹಕ್ಕು. ಆದರೆ, ಅದು ಖಾತರಿ ಅಲ್ಲ. ಆದರೆ, ಅದನ್ನು ಪ್ರತಿ ದಿನವೂ ಪೋಷಿಕಬೇಕು, ಬಲಪಡಿಸಬೇಕು ಮತ್ತು ನವೀಕರಿಸಬೇಕು’ ಎಂದರು.

‘ಮಹಾತ್ಮ ಗಾಂಧಿ, ನೆಹರೂ ಅವರ ತತ್ವಗಳಿಂದ ಮಾತ್ರವೇ ಭಾರತದ ಬಹುತ್ವವನ್ನು ರಕ್ಷಿಸುವುದು ಸಾಧ್ಯ. ದ್ವೇಷ ಭಾಷಣವನ್ನು ನಿಸ್ಸಂದೇಹವಾಗಿ ಖಂಡಿಸುವುದರ ಮುಖಾಂತರ ಬಹು–ಸಂಸ್ಕೃತಿ, ಬಹು–ಧರ್ಮ ಮತ್ತು ಬಹು–ಸಮುದಾಯವನ್ನು ಒಳಗೊಳ್ಳುವಂತೆ ಆಗಬೇಕು’ ಎಂದರು.

‘ಇಲ್ಲಿಯವರೆಗೂ ಬಹುತ್ವ ಭಾರತವನ್ನು ಜಗತ್ತು ಗೌರವಿಸುತ್ತಾ ಬಂದಿದೆ. ಎಲ್ಲರನ್ನೂ ಒಳಗೊಳ್ಳುವ, ಬಹುತ್ವದ, ವೈವಿಧ್ಯ ಸಮುದಾಯಗಳನ್ನು ಒಳಗೊಳ್ಳುವ ಕಾರ್ಯಕ್ಕೆ ಕೈಜೋಡಿಸಿ ಎಂದು ಭಾರತದ ಜನರನ್ನು ಆಗ್ರಹಿಸುತ್ತೇನೆ’ ಎಂದರು.

ಕಾರ್ಯಕ್ರಮದಲ್ಲಿ ಭಾಗಿ: ಮುಂಬೈ ಭೇಟಿಯ ಬಳಿಕ ಆ್ಯಂಟೊನಿಯೊ ಗುಟೆರಸ್‌ ಅವರು ಗುಜರಾತ್‌ಗೆ ತೆರಳಿದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗುಟೆರಸ್‌ ಅವರು ಗುಜರಾತ್‌ನಲ್ಲಿ ಗುರುವಾರ (ಅ.20) ನಡೆಯಲಿರುವ ‘ಮಿಷನ್‌ ಲೈಫ್‌’ (ಲೈಫ್‌ಸ್ಟೈಲ್‌ ಫಾರ್‌ ಎನ್ವಿರಾನ್‌ಮೆಂಟ್‌) ಕಾರ್ಯಕ್ರಮಲ್ಲಿ ಭಾಗವಹಿಸಲಿದ್ದಾರೆ.

26/11 ಸಂತ್ರಸ್ತರಿಗೆ ನಮನ

ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಎರಡನೇ ಬಾರಿಗೆ ಆಯ್ಕೆಯಾದ ಬಳಿಕ ಆ್ಯಂಟೊನಿಯೊ ಗುಟೆರಸ್‌ ಅವರು ಇದೇ ಮೊದಲ ಬಾರಿಗೆ ಭಾರತದ ಪ್ರವಾಸ ಕೈಗೊಂಡಿದ್ದಾರೆ.

ಭಾರತದ ಭೇಟಿಯ ಮೊದಲ ದಿನವಾದ ಬುಧವಾರ ಮುಂಬೈನ ತಾಜ್‌ ಮಹಾಲ್‌ ಪ್ಯಾಲೇಸ್‌ಗೆ ಭೇಟಿ ನೀಡಿದ ಗುಟೆರಸ್‌, 2008ರಲ್ಲಿ ನಡೆದ 26/11 ಉಗ್ರ ದಾಳಿಯ ಸಂತ್ರಸ್ತರಿಗೆ ನಮನ ಸಲ್ಲಿಸಿದರು. ಈ ವೇಳೆ ಗುಟೆರಸ್‌ ಅವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಇದ್ದರು.

‘26/11 ಮುಂಬೈ ದಾಳಿಯು ಭಯೋತ್ಪಾದನೆಯ ಇತಿಹಾಸದಲ್ಲೇ ಅತ್ಯಂತ ಭೀಕರ ಕೃತ್ಯವಾಗಿದೆ. ಈ ದಾಳಿಯ ಸಂತ್ರಸ್ತರು ‘ಜಗತ್ತಿನ ಹಿರೋಗಳಾಗಿದ್ದಾರೆ’. ಸಂತ್ರಸ್ತರ ಕುಟುಂಬಕ್ಕೆ ಸ್ನೇಹಿತರಿಗೆ ಮತ್ತು ಭಾರತದ ಜನರಿಗೆ ನನ್ನ ಮನದಾಳದ ಸಂತಾಪಗಳು’ ಎಂದು ಗುಟೆರಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT