ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರುದ್ಯೋಗ 16 ತಿಂಗಳ ಗರಿಷ್ಠ: ಶೇಕಡ 8.30ಕ್ಕೆ ಏರಿಕೆ

ಸಿಎಂಐಇ ಸಂಸ್ಥೆಯ ವರದಿಯಲ್ಲಿ ಉಲ್ಲೇಖ l ನಗರ ಪ್ರದೇಶಗಳಲ್ಲಿ ಹೆಚ್ಚು
Last Updated 1 ಜನವರಿ 2023, 21:52 IST
ಅಕ್ಷರ ಗಾತ್ರ

ನವದೆಹಲಿ: ಡಿಸೆಂಬರ್‌ ತಿಂಗಳಲ್ಲಿ ದೇಶದ ನಿರುದ್ಯೋಗ ಪ್ರಮಾಣವು ಶೇಕಡ 8.30ಕ್ಕೆ ಏರಿಕೆ ಆಗಿದೆ. ಇದು 16 ತಿಂಗಳ ಗರಿಷ್ಠ ಮಟ್ಟ. ನವೆಂಬರ್‌ನಲ್ಲಿ ನಿರುದ್ಯೋಗ ಪ್ರಮಾಣವು ಶೇ 8ರಷ್ಟು ಇತ್ತು ಎಂದು ಸೆಂಟರ್ ಫಾರ್ ಮಾನಿಟರಿಂಗ್‌ ಇಂಡಿಯನ್ ಎಕಾನಮಿ (ಸಿಎಂಐಇ) ಸಂಸ್ಥೆ ಸಿದ್ಧಪಡಿಸಿರುವ ವರದಿ ಹೇಳಿದೆ.

ನಗರ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣವು ನವೆಂಬರ್‌ನಲ್ಲಿ ಶೇ 8.96ರಷ್ಟು ಇದ್ದಿದ್ದು ಡಿಸೆಂಬರ್‌ನಲ್ಲಿ ಶೇ 10.09ಕ್ಕೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣವು ಇದೇ ಅವಧಿಯಲ್ಲಿ ಶೇ 7.55ರಿಂದ ಶೇ 7.44ಕ್ಕೆ ಇಳಿಕೆಯಾಗಿದೆ.

ನಿರುದ್ಯೋಗ ಪ್ರಮಾಣದಲ್ಲಿನ ಏರಿಕೆಗೆ ಸಂಬಂಧಿಸಿದ ಅಂಕಿ–ಅಂಶಗಳು ‘ಕಾಣುವಷ್ಟು ಕೆಟ್ಟದ್ದಾಗಿಲ್ಲ’ ಎಂದು ಸಿಎಂಐಇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿದ್ದಾರೆ. ಡಿಸೆಂಬರ್‌ನಲ್ಲಿ ಕಾರ್ಮಿಕರ ಭಾಗೀದಾರಿಕೆ ಪ್ರಮಾಣವು ಶೇ 40.48ಕ್ಕೆ ಹೆಚ್ಚಾಗಿದ್ದು, ಇದು 12 ತಿಂಗಳ ಗರಿಷ್ಠ ಎಂದು ವ್ಯಾಸ್ ಹೇಳಿದ್ದಾರೆ.

‘ಭಾರತವು ಜಿಡಿಪಿ ಬೆಳವಣಿಗೆಯ ಮೇಲೆ ಮಾತ್ರ ಗಮನ ಹರಿಸುವ ಬದಲು, ಉದ್ಯೋಗ ಸೃಷ್ಟಿಯೂ ಹೆಚ್ಚಾಗುವ, ಯುವಕರ ಕೌಶಲ ಹೆಚ್ಚಿಸುವ ಹಾಗೂ ರಫ್ತಿಗೆ ಅವಕಾಶ ಇರುವ ರೀತಿಯಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಬೆಳವಣಿಗೆಯ ಕಡೆ ಸಾಗಬೇಕು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಶನಿವಾರ ಹೇಳಿದ್ದರು.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ನವೆಂಬರ್‌ನಲ್ಲಿ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿರುದ್ಯೋಗ ಪ್ರಮಾಣವು ಶೇ 7.2ಕ್ಕೆ ಇಳಿಕೆಯಾಗಿದೆ. ನಿರುದ್ಯೋಗ ಪ್ರಮಾಣವು ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಶೇ 7.6ರಷ್ಟು ಇತ್ತು.

ಸಿಎಂಐಇ ವರದಿ ಪ್ರಕಾರ, ಡಿಸೆಂಬರ್‌ನಲ್ಲಿ ಹರಿಯಾಣದಲ್ಲಿ ನಿರುದ್ಯೋಗ ಪ್ರಮಾಣವು ಶೇ 37.4ಕ್ಕೆ ಹೆಚ್ಚಾಗಿದೆ. ರಾಜಸ್ಥಾನ
ದಲ್ಲಿ ಶೇ 28.5ರಷ್ಟು, ದೆಹಲಿಯಲ್ಲಿ ಶೇ 20.8ರಷ್ಟು ನಿರುದ್ಯೋಗ ಇದೆ ಎಂದು ಸಿಎಂಐಇ ಹೇಳಿದೆ. ಕರ್ನಾಟಕದಲ್ಲಿ ಡಿಸೆಂಬರ್‌ನಲ್ಲಿ ಶೇ 2.5ರಷ್ಟು ನಿರುದ್ಯೋಗ ಪ್ರಮಾಣ ದಾಖಲಾಗಿದೆ.

ಡಿಸೆಂಬರ್‌ ತಿಂಗಳಲ್ಲಿ ಒಡಿಶಾದಲ್ಲಿ ಅತ್ಯಂತ ಕಡಿಮೆ ಪ್ರಮಾಣದ (ಶೇ 0.9
ರಷ್ಟು) ನಿರುದ್ಯೋಗ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT