ಪ್ರಧಾನಿ ಭೇಟಿಯಾಗಿ ಮರಳಿದ ಸಂಸದರು: ರಾಜ್ಯದ ಮೂವರು ಸಂಪುಟಕ್ಕೆ

ನವದೆಹಲಿ: ಕೇಂದ್ರ ಸಂಪುಟದಲ್ಲಿ ಸೇರ್ಪಡೆ ಆಗಲಿರುವ ಸಂಸದರೊಂದಿಗೆ ಬುಧವಾರ ಮಧ್ಯಾಹ್ನ ಪ್ರಧಾನಿ ಮೋದಿ ವೈಯಕ್ತಿಕವಾಗಿ ಮಾತುಕತೆ ನಡೆಸಿದ್ದಾರೆ.
ಸಂಸದರಾದ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದು, ಕರ್ನಾಟಕದಿಂದ ಈ ಮೂವರನ್ನುಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.
ರಾಜ್ಯದ ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಎ.ನಾರಾಯಣಸ್ವಾಮಿ ಸಭೆಯಲ್ಲಿ ಭಾಗವಹಿಸಿ ತೆರಳಿದ್ದು, ಅವರಿಗೆ ಸಚಿವ ಸ್ಥಾನ ದೊರೆಯುವುದು ಖಾತರಿ ಆದಂತಾಗಿದೆ.
'ಪಕ್ಷದ ಸಾಮಾನ್ಯ ಕಾರ್ತಕರ್ತನಾದ ನನ್ನನ್ನು ಗುರುತಿಸಿ ಜವಾಬ್ದಾರಿ ನೀಡಲಾಗುತ್ತಿದ್ದು, ಪ್ರಧಾನಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ' ಎಂದು ಚಿತ್ರದುರ್ಗದ ಸಂಸದ ಎ.ನಾರಾಯಣಸ್ವಾಮಿ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಪ್ರಧಾನಿ ಕಚೇರಿ ಕರೆಯ ಮೇರೆಗೆ ಮಂಗಳವಾರವೇ ದೆಹಲಿಗೆ ಬಂದಿರುವ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ದೊರೆಯಬಹುದು ಎಂದು ಹೇಳಲಾಗುತ್ತಿದೆ.
ಸದಾನಂದಗೌಡ ಸಂಪುಟದಿಂದ ಹೊರಕ್ಕೆ?
ರಾಸಾಯನಿಕ ಮತ್ತು ರಸಗೊಬ್ವರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ ನಿಶಾಂಕ ಪೋಖ್ರಿಯಾಲ್, ಕಾರ್ಮಿಕ ಖಾತೆ ಸಚಿವ ಸಂತೋಷ ಕುಮಾರ್ ಗಂಗ್ವಾರ್ ಸೇರಿದಂತೆ ಒಟ್ಟು ಎಂಟು ಜನ ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಎಲ್ಲ ಸಚಿವರು ಯಾವುದೇ ಸಂದರ್ಭ ರಾಜೀನಾಮೆ ಸಲ್ಲಿಸಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಒಟ್ಟು 25ರಿಂದ 30 ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.