ಭಾನುವಾರ, ಸೆಪ್ಟೆಂಬರ್ 19, 2021
25 °C
ಮಕ್ಕಳ ಅಶ್ಲೀಲ ಚಿತ್ರ ಪ್ರಕಟಿಸಿದ ಪ್ರಕರಣ

ಭಾರತ ಭೂಪಟ ತಿರುಚಿದ ವಿವಾದ; ಟ್ವಿಟರ್‌ ವಿರುದ್ಧ 3 ರಾಜ್ಯಗಳಲ್ಲಿ ದೂರು

ಪಿಟಿಐ Updated:

ಅಕ್ಷರ ಗಾತ್ರ : | |

ನೋಯ್ಡಾ/ನವದೆಹಲಿ: ಸಾಮಾಜಿಕ ಜಾಲತಾಣ ಟ್ವಿಟರ್‌ ವಿರುದ್ಧ ಮಂಗಳವಾರ ವಿವಿಧ ಕಡೆಗಳಲ್ಲಿ ಎಫ್‌ಐಆರ್‌ ದಾಖಲಾಗಿವೆ. ಭಾರತದ ತಿರುಚಿದ ಭೂಪಟ ಪ್ರಕಟಿಸಿದ್ದಕ್ಕಾಗಿ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಎಫ್‌ಐಆರ್‌ ದಾಖಲಾಗಿದ್ದರೆ, ಮಕ್ಕಳ ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಜಾಲತಾಣದಲ್ಲಿ ಭಾರತದ ಭೂಪಟ ತಪ್ಪಾಗಿ ತೋರಿಸಿದ್ದನ್ನು ಪ್ರಶ್ನಿಸಿ ಬಜರಂಗದಳದ ಪದಾಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಪೊಲೀಸರು ಟ್ವಿಟರ್‌ ಇಂಡಿಯಾ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಟ್ವಿಟರ್‌ ಸಂಸ್ಥೆಯು ಇತ್ತೀಚೆಗೆ ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದವಿಶ್ವ ಭೂಪಟದಲ್ಲಿ, ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್‌ ಮತ್ತು ಜಮ್ಮು–ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಿ ತೋರಿಸಿತ್ತು. ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾದುದಲ್ಲದೆ ಈ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಒತ್ತಾಯಿಸಿದ್ದರು. ಇದಾಗುತ್ತಿದ್ದಂತೆ ಟ್ವಿಟರ್ ಆ ಭೂಪಟವನ್ನು ತನ್ನ ಜಾಲತಾಣದಿಂದ ತೆಗೆದುಹಾಕಿತ್ತು.  

‘ಟ್ವಿಟರ್‌ನ ಈ ನಡೆಯು ಕಾಕತಾಳೀಯವಲ್ಲ. ಈ ಮೂಲಕ ಸಂಸ್ಥೆಯು ಭಾರತೀಯರ ಭಾವನೆಗಳನ್ನು ಗಾಸಿಗೊಳಿಸಿದೆ’ ಎಂದು ಬಜರಂಗದಳದ ಸಂಚಾಲಕ ಪ್ರವೀಣ್‌ ಭಡ್ತಿ ದೂರಿನಲ್ಲಿ ಹೇಳಿದ್ದಾರೆ.

ಟ್ವಿಟರ್‌ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ (ಎಂಡಿ) ಮನೀಶ್‌ ಮಹೇಶ್ವರಿ ಮತ್ತು ನ್ಯೂಸ್‌ ಪಾರ್ಟನರ್‌ಶಿಪ್‌ ಮುಖ್ಯಸ್ಥ ಅಮೃತಾ ತ್ರಿಪಾಠಿ ವಿರುದ್ಧ ಐಪಿಸಿ ಕಲಂ 505 (2) (ಸಾರ್ವಜನಿಕ ಕಿಡಿಗೇಡಿತನ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 74 (ಮೋಸದ ಉದ್ದೇಶಕ್ಕಾಗಿ ಪ್ರಕಟಣೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ತಪ್ಪು ಭೂಪಟ ಪ್ರಕಟಿಸಿದ್ದಕ್ಕಾಗಿ ಮಧ್ಯಪ್ರದೇಶ ಸರ್ಕಾರವೂ ಟ್ವಿಟರ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.

‘ದೀರ್ಘ ಕಾಲದಿಂದ ದೇಶದ ವಿರುದ್ಧ ಸತತವಾಗಿ ಏನೋ ನಡೆಯುತ್ತಿದೆ. ಕೆಲವೊಮ್ಮೆ ಭಾರತ ಮಾತೆಯ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಲಾಗುತ್ತದೆ, ಇನ್ನೂ ಕೆಲವೊಮ್ಮೆ ತಿರುಚಿದ ನಕ್ಷೆಯನ್ನು ಟ್ವಿಟರ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಇಂಥ ಘಟನೆಗಳನ್ನು ಲಘುವಾಗಿ ಪರಿಗಣಿಸಲಾಗದು’ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಟ್ವೀಟ್‌ ಮಾಡಿದ್ದಾರೆ.

ಘಟನೆಯ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಡಿಜಿಪಿ ವಿವೇಕ್‌ ಜೊಹರಿ ಅವರಿಗೆ ಸೂಚಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

ವಿಚಾರಣೆ ಮುಂದೂಡಿದ ಹೈಕೋರ್ಟ್‌
ಉತ್ತರ ಪ್ರದೇಶದಲ್ಲಿ ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದು ಎನ್ನಲಾದ ವಿಡಿಯೊ ಅನ್ನು ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್‌ ಪೊಲೀಸ್‌ ಠಾಣೆಯಲ್ಲಿ ಟ್ವಿಟರ್‌ ಇಂಡಿಯಾ ಸಂಸ್ಥೆಯ ಆಡಳಿತ ನಿರ್ದೇಶಕ ಮನೀಶ್‌ ಮಹೇಶ್ವರಿ ವಿರುದ್ಧ ದಾಖಲಾಗಿರುವ ದೂರಿನ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಜುಲೈ 5ಕ್ಕೆ ಮುಂದೂಡಿದೆ.

ಉತ್ತರ ಪ್ರದೇಶ ಪೊಲೀಸರ ಪರವಾಗಿ ಹಾಜರಾಗಿದ್ದ ವಕೀಲ ಪಿ. ಪ್ರಸನ್ನ ಕುಮಾರ್‌ ಅವರು ಮಾಡಿರುವ ವಿನಂತಿಯ ಮೇರೆಗೆ, ನ್ಯಾಯಮೂರ್ತಿ ಜಿ. ನರೇಂದ್ರ ಅವರ ಪೀಠವು ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 24ರಂದು ಪೊಲೀಸ್‌ ಠಾಣೆಗೆ ಹಾಜರಾಗಿ ಹೇಳಿಕೆಯನ್ನು ದಾಖಲಿಸುವಂತೆ, ಬೆಂಗಳೂರು ನಿವಾಸಿಯಾಗಿರುವ ಮನೀಶ್‌ ಅವರಿಗೆ ಗಾಜಿಯಾಬಾದ್‌ ಪೊಲೀಸರು ನೋಟಿಸ್‌ ನೀಡಿದ್ದರು. ಇದನ್ನು ಪ್ರಶ್ನಿಸಿ ಮನೀಶ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆಗ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿತ್ತು. ಜತೆಗೆ, ಪೊಲೀಸರು ಮನೀಶ್‌ ಅವರನ್ನು ತನಿಖೆಗೆ ಒಳಪಡಿಸಲು ಇಚ್ಛಿಸುವುದಾದರೆ ವರ್ಚುವಲ್‌ ಮಾಧ್ಯಮದಲ್ಲಿ ಅದನ್ನು ನಡೆಸಬಹುದು ಎಂದಿತ್ತು.

ಸುಪ್ರೀಂಗೆ ಮೊರೆ: ಮನೀಶ್‌ ಅವರಿಗೆ ಬಂಧನದಿಂದ ರಕ್ಷಣೆ ನೀಡಿರುವ ಕರ್ನಾಟಕ ಹೈಕೋರ್ಟ್‌ನ ಕ್ರಮವನ್ನು ಪ್ರಶ್ನಿಸಿ ಉತ್ತರಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ ಮೊರೆಹೋಗಿದೆ. ತನಗೆ ನೋಟಿಸ್‌ ನೀಡದೆಯೇ ಹೈಕೋರ್ಟ್‌ ಈ ಆದೇಶ ನೀಡಿದೆ ಎಂದು ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ.

ಇದರ ಜತೆಯಲ್ಲೇ, ಯಾವುದೇ ಆದೇಶವನ್ನು ನೀಡುವ ಮುನ್ನ ತನ್ನನ್ನೂ ವಿಚಾರಣೆಗೆ ಒಳಪಡಿಸಬೇಕು ಎಂಬ ಮನವಿಪತ್ರವನ್ನು ಮನೀಶ್‌ ಅವರೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.

ಮಕ್ಕಳ ಅಶ್ಲೀಲ ಚಿತ್ರ: ದೆಹಲಿ ಪೊಲೀಸರಿಂದ ದೂರು ದಾಖಲು
ಚುಟುಕು ಸಂದೇಶ ತಾಣ ಟ್ವಿಟರ್‌ನಲ್ಲಿಮಕ್ಕಳ ಅಶ್ಲೀಲ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್‌) ನೀಡಿದ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಟ್ವಿಟರ್‌ ಇಂಡಿಯಾ ಸಂಸ್ಥೆಯ ವಿರುದ್ಧ ಮಂಗಳವಾರ ಎಫ್‌ಐಆರ್‌ ದಾಖಲಿಸಿದ್ದಾರೆ.

ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಗಳ ಅಡಿಯಲ್ಲಿ ಟ್ವಿಟರ್‌ ಇಂಕ್‌ ಹಾಗೂ ಟ್ವಿಟರ್‌ ಇಂಡಿಯಾ ಪ್ರೈ.ಲಿ. ಸಂಸ್ಥೆಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ವಿಟರ್‌ನಲ್ಲಿ ಅಶ್ಲೀಲ ಚಿತ್ರಗಳ ವೀಕ್ಷಣೆ ಹಾಗೂ ಪ್ರದರ್ಶನಕ್ಕೆ ಅವಕಾಶ ಲಭ್ಯವಾಗುತ್ತಿದೆ ಎಂದು ಮೇ 29ರಂದೇ ದೂರು ನೀಡಿದ್ದರೂ ಈ ಸಾಮಾಜಿಕ ಜಾಲತಾಣದ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ದೆಹಲಿ ಸೈಬರ್‌ ಪೊಲೀಸ್‌ ವಿಭಾಗದ ಡಿಸಿಪಿ ಅನೀಶ್‌ ರಾಯ್‌ ಅವರನ್ನು ಕೆಲವು ದಿನಗಳ ಹಿಂದೆ ಎನ್‌ಸಿಪಿಸಿಆರ್‌ ಪ್ರಶ್ನಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು