ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ದಾಖಲೆಯ ಆಂಬುಲೆನ್ಸ್‌ನಲ್ಲಿ ಮುಕ್ತಾರ್‌ ಅನ್ಸಾರಿ: ತನಿಖೆಗೆ ವಿಶೇಷ ತಂಡ

ಜೈಲಿನಿಂದ ನ್ಯಾಯಾಲಯಕ್ಕೆ ಕರೆದೊಯ್ದ ಪ್ರಕರಣ
Last Updated 4 ಏಪ್ರಿಲ್ 2021, 15:54 IST
ಅಕ್ಷರ ಗಾತ್ರ

ಬಾರಾಬಂಕಿ (ಉತ್ತರ ಪ್ರದೇಶ):ಪಾತಕಿ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು ಪಂಜಾಬ್‌ನ ರೂಪನಗರದ ಜೈಲಿನಿಂದ ಮೊಹಾಲಿ ನ್ಯಾಯಾಲಯಕ್ಕೆ ಇತ್ತೀಚೆಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ದ ಪ್ರಕರಣ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ಉತ್ತರ ಪ್ರದೇಶ ಪೊಲೀಸ್‌ ರಚಿಸಿದೆ.

ಉತ್ತರ ಪ್ರದೇಶದ ಬಾರಾಬಂಕಿ ಸಂಖ್ಯೆಯ ನೋಂದಣಿ ಹೊಂದಿರುವ ಆಂಬುಲೆನ್ಸ್‌ನ ದಾಖಲೆಗಳು ನಕಲಿ ಎನ್ನುವುದು ಪತ್ತೆಯಾದ ಬಳಿಕ ಏಪ್ರಿಲ್‌ 2ರಂದು ಬಾರಾಬಂಕಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಡಾ. ಅಲ್ಕಾ ರಾಯ್‌ ಎನ್ನುವವರ ಹೆಸರಿನಲ್ಲಿ ಈ ಆಂಬುಲೆನ್ಸ್‌ ನೋಂದಣಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಮೌ ಕ್ಷೇತ್ರದ ಬಿಎಸ್‌ಪಿ ಶಾಸಕ ಆಗಿರುವ ಅನ್ಸಾರಿಯನ್ನು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ 2019ರ ಜನವರಿಯಿಂದ ರೂಪನಗರದ ಜೈಲಿನಲ್ಲಿಡಲಾಗಿದೆ. ಮಾರ್ಚ್‌ 31ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಾಲಿ ನ್ಯಾಯಾಲಯದಲ್ಲಿ ಅನ್ಸಾರಿಯನ್ನು ಹಾಜರುಪಡಿಸಲಾಗಿತ್ತು.

ಅನ್ಸಾರಿಯನ್ನು ಬಿಗಿಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಕರೆದೊಯ್ಯಲಾಗಿತ್ತು. ವಿಚಾರಣೆ ಬಳಿಕ ಆಂಬುಲೆನ್ಸ್‌ನಲ್ಲಿ ವಾಪಸ್‌ ಜೈಲಿಗೆ ಕಳುಹಿಸಲಾಗಿತ್ತು.

ಆದರೆ, ಪ್ರಾಥಮಿಕ ತನಿಖೆ ನಡೆಸಿದಾಗ ಆಂಬುಲೆನ್ಸ್‌ನ ನೋಂದಣಿಗಾಗಿ ನೀಡಿದ್ದ ವಿಳಾಸ ಮತ್ತು ಹೆಸರು ಸುಳ್ಳು ಎನ್ನುವುದು ಗೊತ್ತಾಯಿತು. ಡಾ. ಅಲ್ಕಾ ರಾಯ್‌ ವಿರುದ್ಧ ಎಫ್‌ಐಆರ್‌ ಸಹ ದಾಖಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಆಂಬುಲೆನ್ಸ್‌ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಮತದಾರರ ಗುರುತಿನ ಚೀಟಿ, ಪ್ಯಾನ್‌ ಕಾರ್ಡ್‌ ಸೇರಿದಂತೆ ಹಲವು ದಾಖಲೆಗಳು ನಕಲಿ ಎನ್ನುವುದು ಪತ್ತೆಯಾಗಿದೆ. ವಿಳಾಸ ಸಹ ತಪ್ಪು. ಹೀಗಾಗಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ’ ಎಂದು ಬಾರಬಂಕಿ ಪೊಲೀಸ್‌ ವರಿಷ್ಠಾಧಿಕಾರಿ ಯಮುನಾ ಪ್ರಸಾದ್‌ ತಿಳಿಸಿದ್ದಾರೆ.

ಈ ವಿವಾದ ಬಗ್ಗೆ ಸ್ಪಷ್ಟನೆ ನೀಡಿರುವ ಪಂಜಾಬ್‌ ಪೊಲೀಸ್‌ ಅಧಿಕಾರಿಗಳು, ವೈದ್ಯಕೀಯ ಪರಿಸ್ಥಿತಿ ಆಧರಿಸಿ ಖಾಸಗಿ ಆಂಬುಲೆನ್ಸ್‌ ಬಳಸಲು ಅವಕಾಶವಿದೆ. ಆದರೆ, ಸಾರಿಗೆ ವೆಚ್ಚವನ್ನು ಕೈದಿಯೇ ಭರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT