ಬುಧವಾರ, ಮೇ 25, 2022
27 °C

UP Elections: ಮುಂದಿನ 20 ವರ್ಷಗಳ ಭವಿಷ್ಯವನ್ನು ನಿರ್ಧರಿಸಲಿದೆ: ಅಮಿತ್ ಶಾ

ಪಿಟಿಐ Updated:

ಅಕ್ಷರ ಗಾತ್ರ : | |

ನೋಯ್ಡಾ: ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯು ಕೇವಲ ಶಾಸಕ, ಸಚಿವ ಅಥವಾ ಮುಖ್ಯಮಂತ್ರಿ ಆಯ್ಕೆಯನ್ನಷ್ಟೇ ಅಲ್ಲ, ಮುಂದಿನ 20 ವರ್ಷಗಳ ರಾಜ್ಯದ ಭವಿಷ್ಯವನ್ನೇ ನಿರ್ಧರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಗ್ರೇಟರ್ ನೋಯ್ಡಾದಲ್ಲಿ 'ಪರಿಣಾಮಕಾರಿ ಮತದಾರರ ಸಂವಾದ' ಉದ್ದೇಶಿಸಿ ಮಾತನಾಡಿದ ಅವರು, ಕಾನೂನು ಸುವ್ಯವಸ್ಥೆ ಸೇರಿದಂತೆ ರಾಜ್ಯದ ಹಲವು ವಿಷಯಗಳ ವೈಫಲ್ಯಗಳ ಬಗ್ಗೆ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ನೇತೃತ್ವದ ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: 

'ಹಿಂದಿನ ಸರ್ಕಾರಗಳ ಆಡಳಿತದಲ್ಲಿ ರಾಜ್ಯವು ಮಾಫಿಯಾ ಹಾಗೂ ಬಹಿರಂಗ ಸುಲಿಗೆಗೆ ಒಳಗಾಗಿತ್ತು. ಆದರೆ ಯೋಗಿ ಆದಿತ್ಯನಾಥ್ ಸರ್ಕಾರದ ಅಡಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ' ಎಂದು ಹೇಳಿದರು.

'ಕಳೆದ 20 ವರ್ಷಗಳತ್ತ ಹಿಂತಿರುಗಿ ನೋಡಿದಾಗ ಮಾಫಿಯಾ ಆಡಳಿತವಿತ್ತು. ರಾಜ್ಯದಲ್ಲಿ ಬಂಡವಾಳ ಹೂಡಲು ಯಾರೂ ಸಿದ್ಧರಿರಲಿಲ್ಲ. ಬಹಿರಂಗ ಸುಲಿಗೆ ನಡೆಯುತ್ತಿತ್ತು. ಆದರೆ ಇಂದು ಆಜಂ ಖಾನ್ ಜೈಲಿನಲ್ಲಿದ್ದಾನೆ, ಅತೀಕ್ ಅಹಮ್ಮದ್, ಮುಖ್ತಾರ್ ಅನ್ಸಾರ್ ಕೂಡ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಹಲವಾರು ಪ್ರಕರಣಗಳಿದ್ದು, ಬರೆಯಲು ಹೊರಟರೆ ನೋಟ್ ಬುಕ್ ಸಾಲದು' ಎಂದು ಹೇಳಿದರು.

ಗಡಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್, ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ತೆಗೆದು ಹಾಕಿರುವುದನ್ನು ಅಮಿತ್ ಶಾ ಉಲ್ಲೇಖಿಸಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ವಿಚಾರದಲ್ಲಿ ಅಖಿಲೇಶ್ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡರು. 'ನಾನು ಅವರಿಗೆ ಹೇಳಲು ಬಯಸುತ್ತೇನೆ. ಈಗ ಅಡಿಪಾಯ ಹಾಕಲಾಗಿದ್ದು, ಶೀಘ್ರದಲ್ಲೇ ಶ್ರೀರಾಮನ ಭವ್ಯ ಮಂದಿರ ನಿರ್ಮಿಸಲಾಗುವುದು' ಎಂದು ಹೇಳಿದರು.

'ಎಸ್‌ಪಿ ಮಾಡಿದ ಕೆಟ್ಟ ಕೆಲಸಗಳನ್ನು ಉಲ್ಲೇಖಿಸಿ ಬಿಜೆಪಿ ಮತ ಯಾಚಿಸುತ್ತಿಲ್ಲ. ಬದಲಾಗಿ ಕೇಸರಿ ಪಕ್ಷ ಇದುವರೆಗೆ ಮಾಡಿರುವ ಮತ್ತು ಭವಿಷ್ಯದಲ್ಲಿ ಮಾಡಲಿರುವ ಕೆಲಸಗಳನ್ನು ಜನರಿಗೆ ತಲುಪಿಸುವ ಮೂಲಕ ಮತ ಕೇಳುತ್ತಿದ್ದೇವೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು