ಬುಧವಾರ, ಮೇ 25, 2022
24 °C

ಉತ್ತರಾಖಂಡ ಚುನಾವಣೆ: ಬೆಳಿಗ್ಗೆ ಕಾಂಗ್ರೆಸ್‌ನಲ್ಲಿ, ಮಧ್ಯಾಹ್ನ ಬಿಜೆಪಿಯಲ್ಲಿ!

ಪಿಟಿಐ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಗುರುವಾರ ಬೆಳಿಗ್ಗೆಯಷ್ಟೇ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿದ್ದ ಉತ್ತರಾಖಂಡ ಪ್ರದೇಶ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಕಿಶೋರ್‌ ಉ‍ಪಾಧ್ಯಾಯ ಅವರು ತಕ್ಷಣ ಬಿಜೆಪಿ ಸೇರಿದ್ದಾರೆ. 

ಉತ್ತರಾಖಂಡ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಲ್ಹಾದ ಜೋಷಿ ಸೇರಿದಂತೆ ಬಿಜೆಪಿ ನಾಯಕರ ಜೊತೆ ಉಪಧ್ಯಾಯ ಅವರು ಸಭೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಪಕ್ಷದ ಎಲ್ಲ ಚಟುವಟಿಕೆಗಳಿಂದ ಕಾಂಗ್ರೆಸ್ ದೂರ ಇರಿಸಿತ್ತು. 

ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ ಹಾಗೂ ಅಜಯ್ ಭಟ್ ಅವರು ಉಪಾಧ್ಯಾಯ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.  ಇವರನ್ನು ತೆಹ್ರಿ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆಯಿದೆ. 

ಉಪಾಧ್ಯಾಯ ಅವರು 2002 ಹಾಗೂ 2007ರ ವಿಧಾನಸಭಾ ಚುನಾವಣೆಯಲ್ಲಿ ತೆಹ್ರಿಯಿಂದ ಗೆದ್ದಿದ್ದರು. 2012ರಲ್ಲಿ ಪಕ್ಷೇತರ ಅಭ್ಯರ್ಥಿ ದಿನೇಶ್ ಧನಾಯಿ ಅವರ ವಿರುದ್ಧ ಕೇವಲ 377 ಮತಗಳ ಅಂತರದಿಂದ ಸೋತಿದ್ದರು. 2017ರ ಚುನಾವಣೆಯಲ್ಲಿ ಸಹಾಸ್‌ಪುರದಿಂದ ಸ್ಪರ್ಧಿಸಿದ್ದ ಉಪಾಧ್ಯಾಯ ಅವರು ಬಿಜೆಪಿ ಅಭ್ಯರ್ಥಿ ಸಹದೇವ್ ಸಿಂಗ್ ಪುಂಡಿರ್ ವಿರುದ್ಧ ಪರಾಭವಗೊಂಡಿದ್ದರು.

ಉತ್ತರಾಖಂಡದ ಮೊದಲ ಚುನಾಯಿತ ಸರ್ಕಾರದ ನೇತೃತ್ವ ವಹಿಸಿದ್ದ ನಾರಾಯಣ ದತ್ ತಿವಾರಿ ಅವರ ಸಂಪುಟದಲ್ಲಿ ಉಪಾಧ್ಯಾಯ ಅವರು ಸಚಿವರಾಗಿ ಕೆಲಸ ಮಾಡಿದ್ದರು. ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ 2014ರಿಂದ 2017ರವರೆಗೆ ಕೆಲಸ ಮಾಡಿದ್ದಾರೆ. 

ಹಿರಿಯ ನಾಯಕರಾಗಿದ್ದರೂ ಪಕ್ಷ ತಮ್ಮನ್ನು ಸುದೀರ್ಘ ಅವಧಿಯಿಂದ ಕಡೆಗಣಿಸುತ್ತಿದೆ ಎಂದು ಆರೋಪಿಸುತ್ತಿದ್ದ ಉಪಾಧ್ಯಾಯ ಅವರು ಬಿಜೆಪಿಗೆ ಹೋಗುವ ಸುಳಿವನ್ನೂ ನೀಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು