ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಚುನಾವಣೆ: ನೂರಕ್ಕೂ ಹೆಚ್ಚು ಬಿಜೆಪಿ ಶಾಸಕರಿಗಿಲ್ಲ ಟಿಕೆಟ್‌?

Last Updated 11 ಜನವರಿ 2022, 19:31 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಹಾಲಿ ಶಾಸಕರ ಪೈಕಿಶೇ 25ಕ್ಕೂ ಹೆಚ್ಚು ಮಂದಿಗೆ ಬಿಜೆಪಿ ಟಿಕೆಟ್‌ ನಿರಾಕರಿಸುವ ಸಾಧ್ಯತೆ ಇದೆ. ಆಡಳಿತ ವಿರೋಧಿ ಅಲೆ ಮತ್ತು ತಳಮಟ್ಟದ ಕಾರ್ಯಕರ್ತರು ಕೊಟ್ಟ ನಕಾರಾತ್ಮಕ ಮಾಹಿತಿಯ ಆಧಾರದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೊದಲ ಎರಡು ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಕೆಲವೇ ದಿನಗಳಲ್ಲಿ ಅಂತಿಮಗೊಳಿಸಲಿದೆ. ಬಿಜೆಪಿಯ ಚುನಾವಣಾ ಸಮಿತಿಯ ಸಭೆಯು ಸೋಮವಾರ ಸಂಜೆ ನಡೆದಿದೆ. ಮೊದಲ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿರುವ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ.

‘ರಾಜ್ಯ ಚುನಾವಣಾ ಸಮಿತಿಯು ಶಿಫಾರಸು ಮಾಡಿದ ಹೆಸರುಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಲಾಗುವುದು. ವರಿಷ್ಠರೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಬಿಜೆಪಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ರಾಜ್ಯದ ಹಿರಿಯ ಮುಖಂಡರು ಪಕ್ಷದ ವರಿಷ್ಠರ ಜತೆಗೆ ದೆಹಲಿಯಲ್ಲಿ ಸಭೆ ನಡೆಸಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಅಭ್ಯರ್ಥಿಗಳ ಮೊದಲ ಪಟ್ಟಿಯು ಈ ವಾರದಲ್ಲಿಯೇ ಪ್ರಕಟವಾಗುವ ನಿರೀಕ್ಷೆ ಇದೆ.

‘ಹಾಲಿ ಶಾಸಕರಲ್ಲಿ ನೂರಕ್ಕೂ ಹೆಚ್ಚು ಮಂದಿಗೆ ಟಿಕೆಟ್‌ ಸಿಗುವ ಸಾಧ್ಯತೆ ಇಲ್ಲ. ವಿವಿಧ ಕ್ಷೇತ್ರಗಳ ಕಾರ್ಯಕರ್ತರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ನೂರಕ್ಕೂ ಹೆಚ್ಚು ಶಾಸಕರ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿಲ್ಲ. ಅವರಿಗೆ ಟಿಕೆಟ್‌ ಸಿಗದೇ ಇರಬಹುದು’ ಎಂದು ಟಿಕೆಟ್‌ ಹಂಚಿಕೆಯ ಬಗ್ಗೆ ಮಾಹಿತಿ ಇರುವ ಮುಖಂಡರೊಬ್ಬರು ತಿಳಿಸಿದ್ದಾರೆ.

ಟಿಕೆಟ್‌ ನಿರಾಕರಿಸಿದರೆ ಹಲವು ಶಾಸಕರು ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆ ಆಗಬಹುದು ಎಂಬ ಬಗ್ಗೆಯೂ ಬಿಜೆಪಿಯಲ್ಲಿ ಕಳವಳ ಇದೆ. ಬಿಜೆಪಿಯ 25ಕ್ಕೂ ಹೆಚ್ಚು ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಸಮಾಜವಾದಿ ಪಕ್ಷವು (ಎಸ್‌ಪಿ) ಮಂಗಳವಾರ ಹೇಳಿಕೊಂಡಿದೆ. ‘ಹಲವು ಶಾಸಕರು ಸಂಪರ್ಕಿಸಿದ್ದಾರೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೇಳಿದ್ದಾರೆ. ಪಕ್ಷದ ನಾಯಕತ್ವವು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಎಸ್‌ಪಿ ಮುಖಂಡರೊಬ್ಬರು ಹೇಳಿದ್ದಾರೆ.

ಶೇ 80ರ ವಿರುದ್ಧ ಶೇ 20: ಯೋಗಿ ಹೇಳಿಕೆಗೆ ಪ್ರಿಯಾಂಕಾ ಖಂಡನೆ

ಈ ಚುನಾವಣೆಯು ಶೇ 80ರ ವಿರುದ್ಧ ಶೇ 20ರ ಹೋರಾಟ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಖಂಡಿಸಿದ್ದಾರೆ.

ವಾಸ್ತವ ಏನೆಂದರೆ, ಬಿಜೆಪಿ ಆಳ್ವಿಕೆಯಲ್ಲಿ ನೂರರಲ್ಲಿ 68 ಮಂದಿಗೆ ಉದ್ಯೋಗ ಇಲ್ಲ. ಹಾಗಾಗಿ ಯುವ ಜನರು ಈ ವಿಚಾರಗಳನ್ನು ಮುಂದಿಟ್ಟುಕೊಂಡೇ ಮತ ಚಲಾಯಿಸಬೇಕು ಎಂದು ಪ್ರಿಯಾಂಕಾ ಹೇಳಿದ್ಧಾರೆ.

ಶೇ 80ರ ವಿರುದ್ಧ ಶೇ 20ರ ಹೋರಾಟ ಎಂದು ಯೋಗಿ ಅವರು ಹೇಳಿದ್ದನ್ನು ವಿರೋಧ ಪಕ್ಷಗಳ ಹಲವು ಮುಖಂಡರು ಟೀಕಿಸಿದ್ದಾರೆ.

ಮನೆ ಮನೆ ಭೇಟಿಗೆ ಬಿಜೆಪಿ ಚಾಲನೆ

ರ‍್ಯಾಲಿ ಮತ್ತು ಸಾರ್ವಜನಿಕ ಸಮಾವೇಶ ಏರ್ಪಡಿಸುವುದಕ್ಕೆ ಚುನಾವಣಾ ಆಯೋಗವು ನಿಷೇಧ ಹೇರಿದೆ. ಹಾಗಾಗಿ, ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಮನೆ ಮನೆ ಭೇಟಿ ಅಭಿಯಾನಕ್ಕೆ ಬಿಜೆಪಿ ಚಾಲನೆ ನೀಡಿದೆ.

ಉತ್ತರ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್ ಅವರು ಬಲ್ಲು ಅಡ್ಡಾ ಪ್ರದೇಶದ ಮನೆಗಳಿಗೆ ಭೇಟಿ ನೀಡಿ ಅಭಿಯಾನವನ್ನು ಉದ್ಘಾಟಿಸಿದರು. ಅವರು ಮನೆಗಳ ಹೊರಗೆ ಸ್ಟಿಕರ್‌ ಅಂಟಿಸಿದರು. ಕೆಲವರ ಹಣೆಗೆ ತಿಲಕ ಇರಿಸಿದರು.

‘ಆಕಾಂಕ್ಷೆಗಳನ್ನು ಈಡೇರಿಸಲಾಗಿದೆ, ಅಭಿವೃದ್ಧಿಯು ಮನೆ ಮನೆಗೂ ತಲುಪಿದೆ’ ಎಂದು ಸ್ಟಿಕರ್‌ನಲ್ಲಿ ಮುದ್ರಿಸಲಾಗಿದೆ.

‘ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಅನುಸರಿಸುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡುತ್ತಿದ್ದೇವೆ. ಪ್ರಗತಿ ವರದಿಯನ್ನು ಜನರ ಮುಂದೆ ಇರಿಸುತ್ತಿದ್ದೇವೆ. ಜನರ ಸಲಹೆಗಳನ್ನೂ ಪಡೆದುಕೊಳ್ಳುತ್ತಿದ್ದೇವೆ. ಮನೆ ಮನೆಗೆ ಹೋಗುತ್ತಿರುವ ಮೊದಲ ಸರ್ಕಾರ ನಮ್ಮದು’ ಎಂದು ಸಿಂಗ್‌ ಹೇಳಿದ್ದಾರೆ.

ಎಲ್ಲ 403 ಕ್ಷೇತ್ರಗಳಲ್ಲಿಯೂ ಅಭಿಯಾನ ಆರಂಭವಾಗಿದೆ. ಸಚಿವರು, ಶಾಸಕರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ವಕ್ತಾರ ರಾಕೇಶ್‌ ತ್ರಿಪಾಠಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT