ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಚುನಾವಣೆ: ಬಿಜೆಪಿ–ಎಸ್‌ಪಿ ಮಾತ್ರವಲ್ಲ, ಇತರರೂ ಅಮುಖ್ಯರಲ್ಲ

ಜಾತಿ ಆಧಾರಿತ ಸಣ್ಣ ಪಕ್ಷಗಳ ಕಡೆಗಣನೆ ಸಾಧ್ಯವಿಲ್ಲ
Last Updated 10 ಜನವರಿ 2022, 19:58 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳು ನೇರ ಎದುರಾಳಿಗಳು ಎಂದು ಬಿಂಬಿತವಾಗಿದೆ. ಆದರೂ ಇತರೆ ಪಕ್ಷಗಳು ಅಲ್ಪವಾದರೂ ಏಟು ನೀಡಬಲ್ಲವು.

ಚುನಾವಣಾ ಪ್ರಚಾರದಿಂದ ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ದೂರ ಇದೆ ಎಂದು ತಿಳಿದರೆ ತಪ್ಪಾಗುತ್ತದೆ ಎಂದು ಆ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಹೇಳಿದ್ದಾರೆ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಮಹಿಳಾ ಕೇಂದ್ರಿತ ಕಾರ್ಯಸೂಚಿಯ ಮೂಲಕ ಮಹತ್ವದ ಬದಲಾವಣೆ ತರಬಲ್ಲ ಆಶಾಭಾವ ಮೂಡಿಸಿದೆ.

ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಖಿಲೇಶ್ ಯಾದವ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸುತ್ತಿದ್ದಾರೆ. ಎಸ್‌ಪಿ ತಮ್ಮ ಪ್ರಮುಖ ಪ್ರತಿಸ್ಪರ್ಧಿ ಎಂದು ಪರಿಗಣಿಸಿದ್ದಾರೆ.

35 ವರ್ಷಗಳಿಂದಲೂ ಯಾವ ಪಕ್ಷವೂ ಎರಡನೇ ಅವಧಿಗೆ ಚುಕ್ಕಾಣಿ ಹಿಡಿಯಲು ಸಾಧ್ಯವಾಗದ ಉತ್ತರ ಪ್ರದೇಶದಲ್ಲಿ ಹಿಂದುತ್ವ ಹಾಗೂ ಅಭಿವೃದ್ಧಿ ಕಾರ್ಯಸೂಚಿಯನ್ನು ಇಟ್ಟುಕೊಂಡ ಬಿಜೆಪಿ, ಹಿಂದುಳಿದ ವರ್ಗಗಳಿಗೆ ಸೇರಿದ ಕೆಲವು ಪಕ್ಷಗಳೊಂದಿಗೆ ಮತ್ತೆ ಅಧಿಕಾರಕ್ಕೆ ಮರಳುವ ಯತ್ನದಲ್ಲಿದೆ. ಅಪ್ನಾದಳ (ಸೋನೆಲಾಲ್) ಮತ್ತು ನಿಶಾದ್ ಪಕ್ಷದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿವೆ.

ಉತ್ತರ ಪ್ರದೇಶದಲ್ಲಿ ಈ ಹಿಂದೆ ಬಿಜೆಪಿ ಮಿತ್ರಪಕ್ಷವಾಗಿದ್ದ, ಓಂಪ್ರಕಾಶ್ ರಾಜ್‌ಭರ್ ನೇತೃತ್ವದ ಸುಹೇಲ್‌ದೇವ್ ಭಾರತೀಯ ಸಮಾಜ ಪಾರ್ಟಿ, ರಾಷ್ಟ್ರೀಯ ಲೋಕದಳ ಹಾಗೂ ಶಿವಪಾಲ್ ಯಾದವ್ ಅವರ
ಪ್ರಗತಿಶೀಲ ಸಮಾಜವಾದಿ ಪಕ್ಷಗಳ ಜೊತೆ ಅಖಿಲೇಶ್ ಮೈತ್ರಿ ಮಾಡಿಕೊಂಡಿದ್ದು, ಬಿಜೆಪಿ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ಸನ್ನಾಹದಲ್ಲಿದ್ದಾರೆ.

ಶೇ 40ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಮೀಸಲಿಡುವ ಪ್ರಿಯಾಂಕಾ ಗಾಂಧಿ ಅವರ ಯೋಜನೆಯು, ರಾಜ್ಯದ ಜಾತಿ ಸಮೀಕರಣಕ್ಕೆ ಸವಾಲಾಗಲಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಅಮೇಠಿಯಲ್ಲಿ ಪರಾಭವಗೊಂಡ ಬಳಿಕ ಕಾಂಗ್ರೆಸ್ ಭಾರಿ ಸವಾಲು ಎದುರಿಸುತ್ತಿದೆ.

ಚುನಾವಣಾ ಕಣದಲ್ಲಿ ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಬಿಎಸ್‌ಪಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದರೂ, ರಾಜ್ಯದ ಜನಸಂಖ್ಯೆಯ ಶೇ 20ರಷ್ಟು ಪಾಲು ಹೊಂದಿರುವ ದಲಿತರ ಬೆಂಬಲವು ಪಕ್ಷಕ್ಕೆ ಇದೆ ಎನ್ನಲಾಗುತ್ತಿದೆ. 403 ವಿಧಾನಸಭಾ ಕ್ಷೇತ್ರಗಳ ಪೈಕಿ 86 ಕ್ಷೇತ್ರಗಳು ಎಸ್‌ಸಿ ಹಾಗೂ ಎಸ್‌ಟಿ ಮೀಸಲು ಕ್ಷೇತ್ರಗಳಾಗಿವೆ.

2024ರ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದಲೂ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮಹತ್ವದ ಎಂದು ಪರಿಗಣಿತವಾಗಿದೆ. ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಹಾಗೂ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷಗಳು ದೊಡ್ಡ ರಾಜ್ಯದಲ್ಲಿ ತಮ್ಮ ಛಾಪು ಒತ್ತಲು ಪ್ರಯತ್ನಿಸುತ್ತಿವೆ.

ಈ ಚುನಾವಣಾ ಫಲಿತಾಂಶವು ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರಭಾವ ಬೀರಲಿದೆ. ಅದಕ್ಕೂ ಮುನ್ನ 73 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯವಾಗಲಿದ್ದು, ಈ ಪೈಕಿ ಉತ್ತರ ಪ್ರದೇಶದಲ್ಲೇ 11 ಸದಸ್ಯರಿದ್ದಾರೆ. ಗೋವಾ, ಮಣಿಪುರದ ಚುನಾವಣಾ ಕಣಕ್ಕೆ ಧುಮುಕಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ರಾಜ್ಯದಲ್ಲಿ ಅಖಿಲೇಶ್ ಅವರನ್ನು ಬೆಂಬಲಿಸಿ ಸುಮ್ಮನಾಗಿದೆ.

ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿಯು, ಹಿಂದೂಸ್ತಾನ್ ಅವಾಮ್ ಮೋರ್ಚಾ, ವಿಕಾಸಶೀಲ ಇನ್ಸಾನ್‌ ಪಾರ್ಟಿಗಳು ಕೆಲವು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ.

ಮತ ಎಣಿಕೆ ನಡೆಯಲಿರುವ ಮಾರ್ಚ್ 10ರಂದು ಕ್ರಾಂತಿ ಉಂಟಾಗಲಿದೆ ಎಂದು ಅಖಿಲೇಶ್ ಹೇಳಿದ್ದಾರೆ. ಈ ಮಾತನ್ನು ಮಾಯಾವತಿ ಒಪ್ಪುವುದಿಲ್ಲ. 2007ರ ಚುನಾವಣೆಯಲ್ಲಿ ಬಿಎಸ್‌ಪಿ–ಎಸ್‌ಪಿ ನಡುವೆ ನೇರ ಹಣಾಹಣಿ ಇರಲಿದೆ ಎಂದು ಮತದಾನಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಬಿಎಸ್‌ಪಿ ಸರ್ಕಾರ ರಚಿಸಿತ್ತು.

ಬಿಜೆಪಿ ಈ ಬಾರಿ 325 ಸ್ಥಾನಕ್ಕೆ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳಲಿದೆ. ಪ್ರತಿಪಕ್ಷಗಳು ಏನೇ ಹೇಳಿದರೂ, ಪಕ್ಷಕ್ಕೆ ಭಾರಿ ಮಟ್ಟದ ಜಯ ಸಿಗಲಿದೆ.

- ಮನೀಶ್ ಶುಕ್ಲಾ, ಉತ್ತರ ಪ್ರದೇಶ ಬಿಜೆಪಿ ವಕ್ತಾರ

ಕೋವಿಡ್ ಕಳಪೆ ನಿರ್ವಹಣೆ, ಬೆಲೆ ಏರಿಕೆ, ನಿರುದ್ಯೋಗ ಹಾಗೂ ಕಳಪೆ ಕಾನೂನು ಸುವ್ಯವಸ್ಥೆ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರದ ಮೇಲೆ ಜನರಿಗೆ ಸಿಟ್ಟಿದೆ.

- ಅಶುತೋಶ್ ಸಿನ್ಹಾ, ಎಸ್‌ಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT