ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಬಿಜೆಪಿಗೆ ‘ಹಿಂದುತ್ವ’, ಎಸ್‌ಪಿಗೆ ಜಾತಿ ಲೆಕ್ಕಾಚಾರ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಐದನೇ ಹಂತದ ಮತದಾನ ಇಂದು
Last Updated 26 ಫೆಬ್ರುವರಿ 2022, 21:50 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭೆಗೆ ಐದನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಬಿಜೆಪಿಯು ‘ಹಿಂದುತ್ವ’ವನ್ನು ನೆಚ್ಚಿಕೊಂಡಿದೆ. ಸಮಾಜವಾದಿ ಪಕ್ಷವು (ಎಸ್‌ಪಿ) ಜಾತಿ ಲೆಕ್ಕಾಚಾರ ಮತ್ತು ಮುಸ್ಲಿಮರ ಬೆಂಬಲವನ್ನು ಅವಲಂಬಿಸಿದೆ. ಐದನೇ ಹಂತದಲ್ಲಿ ಮತದಾನ ನಡೆಯಲಿರುವ ಪ್ರದೇಶಗಳಲ್ಲಿ ಅಯೋಧ್ಯೆಯೂ ಸೇರಿದೆ.

ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಮತ್ತು ಇತರ ಮೂವರು ಸಚಿವರ ಭವಿಷ್ಯವು ಈ ಹಂತದಲ್ಲಿ ನಿರ್ಧಾರ ಆಗಲಿದೆ. ಕಾಂಗ್ರೆಸ್ ಪಕ್ಷದ ಹಳೆಯ ‘ಭದ್ರಕೋಟೆ’ ಅಮೇಠಿಯಲ್ಲಿಯೂ ಮತದಾನ ಆಗಲಿದೆ.

ಕಾಂಗ್ರೆಸ್ ಮತ್ತು ಬಿಎಸ್‌ಪಿ ಅಭ್ಯರ್ಥಿಗಳ ಸ್ಪರ್ಧೆಯಿಂದಾಗಿ ಕೆಲವು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ. ಆದರೆ, ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಎಸ್‌ಪಿ ನಡುವೆ ನೇರ ಸ್ಪರ್ಧೆಯೇ ಇದೆ.

ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ರಾಮ ಮಂದಿರದ ಶ್ರೇಯವು ಬಿಜೆಪಿಗೆ ಸಲ್ಲಬೇಕು ಎಂದು ಆ ಪಕ್ಷದ ಮುಖಂಡರು ಮತದಾರರಿಗೆ ಹೇಳಿದ್ದಾರೆ. ಚಿತ್ರಕೂಟ, ಪ್ರಯಾಗರಾಜ್‌ನಂತಹ ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯು ಈ ಹಂತದಲ್ಲಿ ಬಿಜೆಪಿಗೆ ನೆರವಾಗಬಹುದು ಎಂಬ ಲೆಕ್ಕಾಚಾರ ಇದೆ.

‘ಹಿಂದೂ ಧಾರ್ಮಿಕ ಕೇಂದ್ರಗಳನ್ನು ನವೀಕರಿಸುವ ಹಲವು ಕ್ರಮಗಳನ್ನು ನಮ್ಮ ಸರ್ಕಾರ ಕೈಗೊಂಡಿದೆ. ಚಿತ್ರಕೂಟ ಅಥವಾ ಪ್ರಯಾಗರಾಜ್‌ಗೆ ಭೇಟಿ ಕೊಡುವ ಪ್ರವಾಸಿಗರಿಗೆ ಬದಲಾವಣೆ ಕಾಣಿಸುತ್ತದೆ’ ಎಂದು ಬಿಜೆಪಿಯ ಮುಖಂಡರೊಬ್ಬರು ಹೇಳಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಅಯೋಧ್ಯೆಯಲ್ಲಿ ಗುರುವಾರ ರೋಡ್‌ಶೋ ನಡೆಸಿದ್ದಾರೆ. ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಕೈಗೊಂಡ ಕ್ರಮಗಳನ್ನು ಈ ಸಂದರ್ಭದಲ್ಲಿ ಅವರು ವಿವರಿಸಿದ್ದಾರೆ.

ಕೇಶವ ಪ್ರಸಾದ್‌ ಮೌರ್ಯ ಅವರಿಗೆ ಎಸ್‌ಪಿಯ ಪಲ್ಲವಿ ಪಟೇಲ್‌ ಅವರಿಂದ ಕಠಿಣ ಸ್ಪರ್ಧೆ ಎದುರಾಗಿದೆ. ಪಲ್ಲವಿ ಅವರು ಕ್ಷೇತ್ರದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಕುರ್ಮಿ ಜನಾಂಗಕ್ಕೆ ಸೇರಿದವರು. 2017ರ ಚುನಾವಣೆಯಲ್ಲಿ ಈ ಪ್ರದೇಶದ 38 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. 15 ಕ್ಷೇತ್ರಗಳು ಎಸ್‌ಪಿ ಪಾಲಾಗಿದ್ದವು.

ಎಸ್‌ಪಿ ಈ ಬಾರಿ ಸಣ್ಣ ಪಕ್ಷಗಳು ಮತ್ತು ಜಾತಿ ಆಧಾರಿತ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿದೆ. ಈ ಜಾತಿ ಸಮೀಕರಣವು ತನಗೆ ಅನುಕೂಲಕರವಾಗಿ ಪರಿಣಮಿಸಬಹುದು ಎಂದು ಎಸ್‌ಪಿ ನಂಬಿದೆ. ರೈತರ ಅಸಮಾಧಾನ, ಬೀಡಾಡಿ ಜಾನುವಾರು ಸಮಸ್ಯೆ ಬಿಜೆಪಿಗೆ ಪ್ರತಿಕೂಲ ಆಗಬಹುದು ಎಂಬ ಲೆಕ್ಕಾಚಾರ ಎಸ್‌ಪಿಯದ್ದಾಗಿದೆ.

ಐದನೇ ಹಂತದಲ್ಲಿ ಮತದಾನ

ನಡೆಯಲಿರುವ ಕ್ಷೇತ್ರಗಳ ಪೈಕಿ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಮರು ನಿರ್ಣಾಯಕ. ಹಾಗಾಗಿ, ಮುಸ್ಲಿಂ ಬೆಂಬಲವು ತಮ್ಮ ಗೆಲುವಿಗೆ ಪೂರಕವಾಗಬಹುದು ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಭಾವಿಸಿದ್ದಾರೆ. ಅಖಿಲೇಶ್‌ ಅವರಲ್ಲದೆ, ಎಸ್‌ಪಿಯ ಮಿತ್ರ ಪಕ್ಷಗಳಾದ ಅಪ್ನಾದಳದ ಕೃಷ್ಣಾ ಪಟೇಲ್‌, ಎಸ್‌ಬಿಎಸ್‌ಪಿಯ ಓಂ ಪ್ರಕಾಶ್‌ ರಾಜ್‌ಭರ್‌ ಅವರು ಇಲ್ಲಿ ಹಲವು ಸಮಾವೇಶಗಳನ್ನು ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT