ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UP Elections: ಪ್ರಿಯಾಂಕಾ ಗಾಂಧಿ ಮುಖ್ಯಮಂತ್ರಿ ಅಭ್ಯರ್ಥಿ?

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ನ ‘ಯುವ ಪ್ರಣಾಳಿಕೆ’ ಬಿಡುಗಡೆ
Last Updated 21 ಜನವರಿ 2022, 18:51 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆಯೇ? ಹೀಗೊಂದು ಪ್ರಶ್ನೆ ಶುಕ್ರವಾರದಿಂದ ಚರ್ಚೆಗೆ ಬಂದಿದೆ. ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರಿಯಾಂಕಾ ಅವರು, ‘ನನ್ನ ಮುಖ ಕಾಣುತ್ತಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆಗೆ ಪಕ್ಷದ ‘ಯುವ ಪ್ರಣಾಳಿಕೆ’ಯನ್ನು ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿ ಅವರು ಈ ಮಾತು ಹೇಳಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಪಕ್ಷದ ನಾಯಕ ಮತ್ತು ಪ್ರಿಯಾಂಕಾ ಸೋದರ ರಾಹುಲ್ ಗಾಂಧಿ ಸಹ ಇದ್ದರು.

‘ಉತ್ತರ ಪ್ರದೇಶದಲ್ಲಿ ಎಲ್ಲಾ ಕಡೆ ನಾನೇ ಕಾಣುತ್ತಿದ್ದೇನೆ. ಬೇರೆ ಯಾವುದಾದರೂ ಮುಖ ಕಾಣುತ್ತಿದೆಯೇ’ ಎಂದು ಅವರು ಪತ್ರಕರ್ತರನ್ನು ಮರುಪ್ರಶ್ನಿಸಿದ್ದಾರೆ. ಹಾಗಿದ್ದರೆ ಚುನಾವಣೆಯಲ್ಲಿ ನೀವೂ ಸ್ಪರ್ಧಿಸುತ್ತೀರಾ ಎಂದು ಪತ್ರಕರ್ತರು ಪ್ರಶ್ನಿಸಿದ್ದಾರೆ. ಆಗ ಪ್ರಿಯಾಂಕಾ, ‘ಅದನ್ನು ಇನ್ನಷ್ಟೇ ನಿರ್ಧರಿಸಬೇಕು’ ಎಂದು ಉತ್ತರಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆಯನ್ನು ಯೋಗಿ ಆದಿತ್ಯನಾಥ ಅವರ ನೇತೃತ್ವದಲ್ಲೇ ಎದುರಿಸುವುದಾಗಿ ಬಿಜೆಪಿ ಹೇಳಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಆದರೆ ಕಾಂಗ್ರೆಸ್‌ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ. ಉತ್ತರ ಪ್ರದೇಶ ಮಾತ್ರವಲ್ಲ ಈಗ ಚುನಾವಣೆ ನಡೆಯುತ್ತಿರುವ ಐದೂ ರಾಜ್ಯಗಳಲ್ಲಿ ಕಾಂಗ್ರೆಸ್‌ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಈವರೆಗೆ ಘೋಷಿಸಿಲ್ಲ.

ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಯೋಗಿ ಆದಿತ್ಯನಾಥ ಮತ್ತು ಎಸ್‌ಪಿ ಅಭ್ಯರ್ಥಿಯಾಗಿರುವ ಅಖಿಲೇಶ್ ಯಾದವ್ ಅವರು ಈ ಬಾರಿ ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ.

ಕಾರ್ಯಕರ್ತರಲ್ಲಿ ಉತ್ಸಾಹ

ಪ್ರಿಯಾಂಕಾ ಗಾಂಧಿ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸೂಚನೆ ನೀಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಆದರೆ ಇದರಿಂದ ಕಾಂಗ್ರೆಸ್‌ಗೆ ಹೆಚ್ಚಿನ ಉಪಯೋಗವೇನೂ ಆಗುವುದಿಲ್ಲ ಎಂದುಬೇರೆ ಪಕ್ಷಗಳ ನಾಯಕರು ಮತ್ತು ರಾಜಕೀಯ ತಜ್ಞರು ಹೇಳಿದ್ದಾರೆ.

ಪ್ರಿಯಾಂಕಾ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಈ ಮೊದಲೇ ಕೇಳಿಕೊಂಡಿದ್ದರು. ಈಗ ಅಧಿಕೃತವಾಗಿ ಘೋಷಣೆ ಮಾಡದಿದ್ದರೂ, ವಿಷಯ ಸೂಕ್ತ ಸಮಯದಲ್ಲೇ ಹೊರಗೆ ಬಂದಿದೆ. ಇದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿಸಿದೆ ಎಂದು ಕಾಂಗ್ರೆಸ್‌ನ ಮುಖಂಡರೊಬ್ಬ ಹೇಳಿದ್ದಾರೆ.

‘ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಸಾಮರ್ಥ್ಯ ಅವರಿಗೆ ಇದೆ’ ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಹೇಳಿದ್ದಾರೆ.

ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪ್ರಿಯಾಂಕಾ ಅವರ ಹೆಸರು ಘೋಷಣೆ ಪಕ್ಷದ ಕಾರ್ಯಕರ್ತರಲ್ಲಿನ ಉತ್ಸಾಹವನ್ನು ಸ್ವಲ್ಪ ಹೆಚ್ಚಿಸಬಹುದು. ಆದರೆ ಇದರಿಂದ ಪಕ್ಷ ಪುನಶ್ಚೇತನವಾಗುತ್ತದೆ ಎಂದು ಹೇಳಲಾಗದು. ಪಕ್ಷಕ್ಕೆ ರಾಜ್ಯದಲ್ಲಿ ಕಾರ್ಯಕರ್ತರ ಬಲವಿಲ್ಲ. ಜಾತಿ ಸಮೀಕರಣವೂ ಕಾಂಗ್ರೆಸ್‌ಗೆ ಪೂರಕವಾಗಿಲ್ಲ ಎಂದು ರಾಜಕೀಯ ವಿಶ್ಲೇಷಕ ಜೆ.ಪಿ.ಶುಕ್ಲಾ ಹೇಳಿದ್ದಾರೆ.

ಪ್ರಿಯಾಂಕಾ ಅವರು ಟ್ವಿಟರ್ ರಾಜಕಾರಣಿ. ಅವರ ಜತೆಗಾರರೆಲ್ಲರೂ ರಾಜಕೀಯ ಪ್ರವಾಸಿಗರು. ಚುನಾವಣೆ ಮುಗಿಯುತ್ತಲೇ ಅವರೆಲ್ಲಾ ಮಾಯವಾಗುತ್ತಾರೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಈ ಹಿಂದೆ ಹೇಳಿದ್ದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಖಾತೆ ತೆರೆಯುವುದಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸಹ ಈ ಹಿಂದೆ ಹೇಳಿದ್ದರು.

20 ಲಕ್ಷ ಉದ್ಯೋಗದ ಭರವಸೆ

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 20 ಲಕ್ಷ ಸರ್ಕಾರಿ ಉದ್ಯೋಗ ನೀಡುತ್ತೇವೆ. ಅದರಲ್ಲಿ 8 ಲಕ್ಷ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡುತ್ತೇವೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್‌ ಶುಕ್ರವಾರ ‘ಭರ್ತೀ ವಿಧಾನ’ ಎಂಬ ಮತ್ತೊಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಯುವಕರಿಗೆ 20 ಲಕ್ಷ ಉದ್ಯೋಗ ನೀಡುವ ಭರವಸೆ ಈ ಪ್ರಣಾಳಿಕೆಯಲ್ಲಿ ಇದೆ.

‘ಉತ್ತರ ಪ್ರದೇಶದ ಸಮಸ್ಯೆಗಳಲ್ಲಿ ನಿರುದ್ಯೋಗ ಪ್ರಮುಖವಾದುದು. ಇದರಿಂದ ಯುವಜನರು ತೀವ್ರ ಆಕ್ರೋಶಗೊಂಡಿದ್ದಾರೆ. ನಾವು ಈ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಸರ್ಕಾರಿ ಹುದ್ದೆಗಳ ನೇಮಕಾತಿಯನ್ನು ವ್ಯವಸ್ಥಿತಗೊಳಿಸುತ್ತೇವೆ’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಈ ಪ್ರಣಾಳಿಕೆಯನ್ನು, ಯುವಜನರ ಪ್ರಣಾಳಿಕೆ ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.

‘ಇದು ಕೇವಲ ಭರವಸೆಯಲ್ಲ. ಯುವಜನರ ಜತೆ ಚರ್ಚೆ ನಡೆಸಿ, ಈ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇವೆ. ಉತ್ತರ ಪ್ರದೇಶದ ಯುವಕರಿಗೆ ಹೊಸ ಧ್ಯೇಯ–ಗುರಿಗಳು ಬೇಕಾಗಿವೆ. ಅದನ್ನು ಕಾಂಗ್ರೆಸ್‌ ಮಾತ್ರವೇ ನೀಡಬಲ್ಲದು. ನಾವು ದ್ವೇಷವನ್ನು ಹರಡುವುದಿಲ್ಲ. ನಾವು ಜನರನ್ನು ಒಗ್ಗೂಡಿಸುತ್ತೇವೆ. ನಾವು ಯುವಕರ ಬಲದೊಂದಿಗೆ ಹೊಸ ಉತ್ತರ ಪ್ರದೇಶವನ್ನು ರೂಪಿಸುತ್ತೇವೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘2014ರಲ್ಲಿ ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ಇಂತಹದ್ದೇ ಭರವಸೆ ನೀಡಿದ್ದರು. ಆದರೆ ಅದನ್ನು ಈಡೇರಿಸುವಲ್ಲಿ ಅವರು ವಿಫಲವಾದರು. ಜಿಎಸ್‌ಟಿ, ನೋಟು ಅಮಾನ್ಯೀಕರಣ, ಲಾಕ್‌ಡೌನ್‌ನಿಂದ ಉತ್ತರ ಪ್ರದೇಶ ಒಂದರಲ್ಲೇ 16 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ’ ಎಂದು ರಾಹುಲ್ ಹರಿಹಾಯ್ದಿದ್ದಾರೆ.

ಮೈತ್ರಿಗೆ ಮುಕ್ತ: ಕಾಂಗ್ರೆಸ್‌

ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು, ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ಮುಕ್ತವಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್‌ ತನ್ನ ಭರವಸೆಗಳನ್ನು ಈಡೇರಿಸಲು ಬೇರೆ ಪಕ್ಷಗಳ ಜತೆಗೆ ಮೈತ್ರಿಮಾಡಿಕೊಳ್ಳುತ್ತದೆಯೇ ಅಥವಾ ಬೇರೆ ಪಕ್ಷಕ್ಕೆ ಬೆಂಬಲ ನೀಡುತ್ತದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರಿಯಾಂಕಾ ಈ ಉತ್ತರ ನೀಡಿದ್ದಾರೆ.

‘ನಾವು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರದ ಭಾಗವಾಗುತ್ತೇವೆಯೇ ಅಥವಾ ಹೊರಗಿನಿಂದ ಬೆಂಬಲ ನೀಡುತ್ತೇವೆಯೇ ಎಂಬುದೇ ನಿಮ್ಮ ಪ್ರಶ್ನೆ. ಅಂತಹ ಸಂದರ್ಭ ಬಂದರೆ, ನಾವು ಮೈತ್ರಿ ಮಾಡಿಕೊಳ್ಳಲು ಮುಕ್ತರಾಗಿದ್ದೇವೆ ಎಂದು ಈ ಎರಡೂ ಪ್ರಶ್ನೆಗಳಿಗೆ ನಾನು ಉತ್ತರಿಸುತ್ತೇನೆ. ಆದರೆ ಯಾವುದೇ ಮೈತ್ರಿಯಾದರೂ, ಯುವಜನರು ಮತ್ತು ಮಹಿಳೆಯರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವುದೂ ಮುಖ್ಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT