ಭಾನುವಾರ, ಮೇ 29, 2022
31 °C

UP Election: ಕೇಂದ್ರದ ಮಾಜಿ ಸಚಿವ ಆರ್‌ಪಿಎನ್ ಸಿಂಗ್ ಬಿಜೆಪಿ ಸೇರ್ಪಡೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಲಖನೌ/ನವದೆಹಲಿ: ಉತ್ತರ ಪ್ರದೇಶ ಕಾಂಗ್ರೆಸ್‌ನ ಹಿರಿಯ ನಾಯಕ ಆರ್‌ಪಿಎನ್‌ ಸಿಂಗ್ ಅವರು ಮಂಗಳವಾರ ಪಕ್ಷವನ್ನು ತೊರೆದು, ಬಿಜೆಪಿ ಸೇರಿದ್ದಾರೆ. ಇನ್ನೇನು ಮೊದಲ ಹಂತದ ಮತದಾನ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಇದರಿಂದ ದೊಡ್ಡ ಹಿನ್ನಡೆಯಾದಂತಾಗಿದೆ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

ಉತ್ತರ ಪ್ರದೇಶ ಚುನಾವಣಾ ಪ್ರಚಾರವು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಪ್ರಚಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ. ಹೀಗಾಗಿಯೇ ಪಕ್ಷ ತೊರೆಯುತ್ತಿದ್ದೇನೆ ಎಂದು ಆರ್‌ಪಿಎನ್‌ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್‌ ತನ್ನ ತಾರಾ ಪ್ರಚಾರಕರ ಪಟ್ಟಿಯನ್ನು ಸೋಮವಾರವಷ್ಟೇ ಬಿಡುಗಡೆ ಮಾಡಿತ್ತು. ಅದರಲ್ಲಿ ಆರ್‌ಪಿಎನ್‌ ಸಿಂಗ್ ಅವರಿಗೆ ಸ್ಥಾನ ನೀಡಲಾಗಿತ್ತು. ಆದರೆ, ಅದರ ಮರುದಿನವೇ ಆರ್‌ಪಿಎನ್‌ ಸಿಂಗ್ ಅವರು ಪಕ್ಷ ತೊರೆದಿದ್ದಾರೆ. ಮಂಗಳವಾರ ಬೆಳಿಗ್ಗೆ ಅವರು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಟ್ವೀಟ್‌ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದಾರೆ. 

‘ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಪಕ್ಷದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು’ ಎಂದು ಅವರು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. ಈ ಟ್ವೀಟ್‌ನ ನಂತರ, ‘ಬಿಜೆಪಿ ಸೇರುತ್ತಿದ್ದೇನೆ. ಇದು ಹೊಸ ಆರಂಭವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಆದ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.

ಇದಾದ ಕೆಲವೇ ಗಂಟೆಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಬಿಜೆಪಿ ಸೇರಿದ್ದಾರೆ.

ಕಾಂಗ್ರೆಸ್‌ಗೆ ಹಿನ್ನಡೆ: ಆರ್‌ಪಿಎನ್‌ ಸಿಂಗ್ ಅವರು ಪಕ್ಷ ತೊರೆದಿರುವುದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆ ಎಂದು ಪಕ್ಷದ ಹಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ. 

‘ಆರ್‌ಪಿಎನ್‌ ರಾಜ್ಯದ ಹಿಂದುಳಿದ ವರ್ಗಗಳ ನಾಯಕರಲ್ಲಿ ಪ್ರಮುಖರು. ಆರ್‌ಪಿಎನ್ ಕಾರಣದಿಂದ ಪೂರ್ವಾಂಚಲ ಪ್ರದೇಶದಲ್ಲಿ
ಕಾಂಗ್ರೆಸ್‌ಗೆ ಮತಗಳು ದೊರೆಯುತ್ತಿದ್ದವು. ಅವರು ಪಕ್ಷಕ್ಕಾಗಿ 32 ವರ್ಷ ದುಡಿದಿದ್ದರು. ಈಗ ಅವರು ಪಕ್ಷವನ್ನು ತೊರೆದಿರುವ ಕಾರಣ ಆ ಮತಗಳು ಕಾಂಗ್ರೆಸ್‌ನಿಂದ ದೂರವಾಗುತ್ತದೆ’ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

‘ಕಾಂಗ್ರೆಸ್ ಮೊದಲಿನಂತಿಲ್ಲ’

‘ಕಾಂಗ್ರೆಸ್‌ಗಾಗಿ 32 ವರ್ಷ ದುಡಿದಿದ್ದೇನೆ. ಆದರೆ, ಕಾಂಗ್ರೆಸ್ ಈಗ ಮೊದಲಿನಂತಿಲ್ಲ. ಹೀಗಾಗಿಯೇ ಪಕ್ಷ ತೊರೆದಿದ್ದೇನೆ. ಈಗ ದೇಶದ ಅಭಿವೃದ್ಧಿಗಾಗಿ ಮತ್ತು ಜನರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಏಕೈಕ ಪಕ್ಷ ಬಿಜೆಪಿ ಎಂಬುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಬಿಜೆಪಿ ಸೇರುತ್ತಿದ್ದೇನೆ’ ಎಂದು ಆರ್‌ಪಿಎನ್‌ ಸಿಂಗ್ ಟ್ವೀಟ್ ಮಾಡಿದ್ದಾರೆ.

ಮೌರ್ಯ ವಿರುದ್ಧ ಕಣಕ್ಕೆ: ಆರ್‌ಪಿಎನ್‌ ಸಿಂಗ್ ಅವರು ಬಿಜೆಪಿ ಟಿಕೆಟ್‌ನಲ್ಲಿ ಪಡ್ರೌನಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಈಚೆಗಷ್ಟೇ ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿರುವ ಒಬಿಸಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ಈ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಅವರಿಗೆ ಪೈಪೋಟಿ ನೀಡಲೆಂದೇ ಆರ್‌ಪಿಎನ್‌ ಸಿಂಗ್ ಅವರನ್ನು ಬಿಜೆಪಿ ಸೆಳೆದಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಇಬ್ಬರೂ ಒಬಿಸಿಯ ಪ್ರಬಲ ನಾಯಕರು. ಹೀಗಾಗಿ ಇಬ್ಬರ ಮಧ್ಯೆ ತೀವ್ರ ಪೈಪೋಟಿ ನಡೆಯಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು