ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಕೈಕುಲುಕಿದ ಯೋಗಿ–ಯಾದವ; ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂದಹಾಸ

Last Updated 28 ಮಾರ್ಚ್ 2022, 10:47 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸೋಮವಾರ 'ಉತ್ತರ ಮತ್ತು ದಕ್ಷಿಣ' ದಿಕ್ಕುಗಳು ಜೊತೆಗೂಡಿದ ಸನ್ನಿವೇಶ ಸೃಷ್ಟಿಯಾಯಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ವಿರೋಧ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು ಪರಸ್ಪರ ಕೈಕುಲುಕಿ ಮಂದಹಾಸ ಬೀರಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಈ ಲವಲವಿಕೆಯ ಸಂದರ್ಭ ಕಾಣಸಿಕ್ಕಿದೆ. ಅದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಯೋಗಿ ಮತ್ತು ಅಖಿಲೇಶ್‌ ಅವರು ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಯೋಗಿ ಆದಿತ್ಯನಾಥ್‌ ವಿಧಾನಸಭೆಗೆ ಪ್ರವೇಶಿಸುತ್ತಿದ್ದಂತೆ, ಶಾಸಕರು 'ಜೈ ಶ್ರೀರಾಮ್‌' ಮತ್ತು 'ಭಾರತ್‌ ಮಾತಾ ಕೀ ಜೈ' ಘೋಷಣೆಗಳನ್ನು ಕೂಗಿ ಸ್ವಾಗತ ಕೋರಿದರು.

ಯೋಗಿ ಆದಿತ್ಯನಾಥ್‌ ಅವರು ತಮ್ಮ ಸ್ಥಾನದಲ್ಲಿ ಕೂರುವುದಕ್ಕೂ ಮುನ್ನ ವಿರೋಧ ಪಕ್ಷದ ಸದಸ್ಯರ ಕಡೆಗೆ ಸಾಗಿ, ಅಖಿಲೇಶ್‌ ಯಾದವ್‌ ಮತ್ತು ಇತರೆ ಸದಸ್ಯರನ್ನು ಅಭಿನಂದಿಸಿದರು. ವಿಧಾನಸಭೆ ಚುನಾವಣೆ ಪ್ರಚಾರದ ಸಮಯದಲ್ಲಿ ಯೋಗಿ ಮತ್ತು ಅಖಿಲೇಶ್‌ ನಡುವೆ ತೀವ್ರ ಮಾತಿನ ಗುದ್ದಾಟ ನಡೆದಿತ್ತು.

ಶಾಸಕರಾಗಿ ಆಯ್ಕೆಯಾಗಿರುವ ಅಖಿಲೇಶ್ ಯಾದವ್‌ ಅವರು ಆಜಂಗಡ ಲೋಕಸಭಾ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಹೊಣೆ ನಿರ್ವಹಿಸಲಿದ್ದಾರೆ. ಸಮಾಜವಾದಿ ಪಕ್ಷವು 111 ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು 403 ವಿಧಾನಸಭಾ ಕ್ಷೇತ್ರಗಳ ಪೈಕಿ 273 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

'18ನೇ ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವು ಇಂದಿನಿಂದ ಆರಂಭವಾಗಲಿದೆ. ಶಾಸಕರಿಗೆ ನನ್ನ ಅಭಿನಂದನೆಗಳು...' ಎಂದು ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಭಾರಿ ಗೆಲುವಿನ ಕಡೆ ಮುನ್ನಡೆಸಿದ್ದ ಯೋಗಿ ಆದಿತ್ಯನಾಥ ಅವರು, ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ, ಎರಡನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.

ಆದಿತ್ಯನಾಥ ಅವರ ಜೊತೆ ಇಬ್ಬರು ಉಪ ಮುಖ್ಯಮಂತ್ರಿಗಳು, 16 ಸಂಪುಟ ದರ್ಜೆ ಸಚಿವರು ಸೇರಿ 50 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಕಳೆದ ಅವಧಿಯಲ್ಲಿ ಉಪ ಮುಖ್ಯಮಂತ್ರಿ ಆಗಿದ್ದ ಕೇಶವ್ ಪ್ರಸಾದ್‌ ಮೌರ್ಯ ಮತ್ತು ಬಿಜೆಪಿ ನಾಯಕ ಬ್ರಜೇಶ್‌ ಪಾಠಕ್‌ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌, ಬಿಜೆಪಿ ಆಡಳಿತ ಇರುವ ರಾಜ್ಯಗಳ ಹಲವು ಮುಖ್ಯಮಂತ್ರಿಗಳು, ಬಿಜೆಪಿಯ ಹಿರಿಯ ನಾಯಕರು ಮತ್ತು ಹಿಂದಿ ಚಿತ್ರರಂಗದ ಕೆಲ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಮತ್ತು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು ಆದರೆ ಅವರು ಹಾಜರಾಗಿರಲಿಲ್ಲ.

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ, ಈ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಘೋಷಿಸಲಾಗಿದ್ದ ಉಚಿತ ಪಡಿತರ ಯೋಜನೆಯನ್ನು ಯೋಗಿ ಆದಿತ್ಯನಾಥ್‌ ಅವರು ಮೂರು ತಿಂಗಳು ವಿಸ್ತರಿಸಲು ನಿರ್ಧರಿಸಿದ್ದಾರೆ. ಉತ್ತರ ಪ್ರದೇಶದ ಒಟ್ಟು 15 ಕೋಟಿ ಜನರು ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT