ಭಾನುವಾರ, ಮೇ 29, 2022
23 °C

UP Elections: ಬಿಜೆಪಿ–ನಿಶಾದ್ ಪಕ್ಷದ ಮೈತ್ರಿ ಅಂತಿಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಿಶಾದ್ ಪಕ್ಷವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಪಕ್ಷವು 15 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯಲಿದೆ ಎಂದು ಪಕ್ಷದ ಅಧ್ಯಕ್ಷ ಸಂಜಯ್ ನಿಶಾದ್ ಹೇಳಿದ್ದಾರೆ.

‘ಮೈತ್ರಿ ಮತ್ತು ಕ್ಷೇತ್ರ ಹಂಚಿಕೆ ಸಂಬಂಧ ಈಗಾಗಲೇ ಮಾತುಕತೆ ನಡೆದಿದೆ. 403ರಲ್ಲಿ ನಾವು 15 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದೇವೆ. ಆ 15 ಕ್ಷೇತ್ರಗಳು ಯಾವುವು ಎಂಬುದನ್ನು ಅಂತಿಮಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜತೆ ಸಭೆ ಸೋಮವಾರ ಸಭೆ ನಡೆಯಲಿದೆ’ ಎಂದು ಸಂಜಯ್ ನಿಶಾದ್ ಹೇಳಿದ್ದಾರೆ.

‘ಆದರೆ ನಮ್ಮ ಪಕ್ಷಕ್ಕೆ ದೊರೆಯಲಿರುವ ಕ್ಷೇತ್ರಗಳಲ್ಲಿ ಬಹುತೇಕವು ಈಗಾಗಲೇ ಅಂತಿಮವಾಗಿವೆ. ರಾಜ್ಯದ ಪೂರ್ವಾಂಚಲದಲ್ಲಿ ಹಲವು ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡಲಾಗಿದೆ. ಪಶ್ಚಿಮಾಂಚಲದಲ್ಲಿ ಕೆಲವು ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ. ಆದರೆ ಕೆಲವು ಕ್ಷೇತ್ರಗಳಲ್ಲಿನ ರಾಜಕೀಯ ಸ್ಥಿತಿ ಭಿನ್ನವಾಗಿದೆ. ಹೀಗಾಗಿ ಕೆಲವು ಕ್ಷೇತ್ರಗಳನ್ನು ಬದಲಿಸಬೇಕಿದೆ. ಯಾವ ಕ್ಷೇತ್ರ ಎನ್ನುವುದು ನಮಗೆ ಮುಖ್ಯವಲ್ಲ, ಗೆಲುವಷ್ಟೇ ಮುಖ್ಯ’ ಎಂದು ಅವರು ಹೇಳಿದ್ದಾರೆ.

ಅಪರಾಧ ಹಿನ್ನೆಲೆಯ ಕೆಲವು ಅಭ್ಯರ್ಥಿಗಳನ್ನು ಬಿಜೆಪಿಯು ನಿಶಾದ್ ಪಕ್ಷದ ಮೂಲಕ ಕಣಕ್ಕೆ ಇಳಿಸುತ್ತಿದೆ ಎಂಬ ಆರೋಪವಿದೆ ಎಂದು ಪತ್ರಕರ್ತರು ಕೇಳಿದ್ದನ್ನು, ಸಂಜಯ್ ಅಲ್ಲಗೆಳೆದಿದ್ದಾರೆ. ‘ನಮ್ಮ ಪಕ್ಷದ ಕಾರ್ಯಕರ್ತರು ಯಾರನ್ನು ಆಯ್ಕೆ ಮಾಡುತ್ತಾರೋ ಅವರನ್ನಷ್ಟೇ ಅಭ್ಯರ್ಥಿಯನ್ನಾಗಿ ಮಾಡಲಾಗುತ್ತದೆ. ಅದಕ್ಕೂ ಮುನ್ನ ಅಂತಹವರ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ’ ಎಂದು ಉತ್ತರಿಸಿದ್ದಾರೆ.

‘ರಾಜ್ಯದ 70 ಜಿಲ್ಲೆಗಳಲ್ಲಿ ನಮ್ಮ ಡಿಜಿಟಲ್ ಕಚೇರಿ ಇದೆ. ಈ ಕಚೇರಿಗಳ ಮೂಲಕ ನಮ್ಮ ಕಾರ್ಯಕರ್ತರು ಪ್ರಚಾರ ನಡೆಸಲಿದ್ದಾರೆ. ನಾವು ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯವಾಗಿದ್ದೇವೆ. ವರ್ಚುವಲ್ ಪ್ರಚಾರಕ್ಕೆ ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇವೆ’ ಎಂದು ಅವರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು