ಭಾನುವಾರ, ಮೇ 29, 2022
30 °C

UP Elections: ಜಾಟ್‌ ಸಿಟ್ಟು ಶಮನಕ್ಕೆ ಮುಂದಾದ ಬಿಜೆಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ರೈತರು ಅದರಲ್ಲೂ ವಿಶೇಷವಾಗಿ ಜಾಟ್‌ ಸಮುದಾಯದ ಆಕ್ರೋಶವನ್ನು ತಣಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಜಾಟ್‌ ಸಮುದಾಯವು ನಿರ್ಣಾಯಕ. ಭಾರತೀಯ ಕಿಸಾನ್ ಸಂಘದ ಮುಖಂಡರ ಜತೆ ಮಾತುಕತೆ ನಡೆಸಿ, ಸಮುದಾಯದ ಸಿಟ್ಟು ಕಡಿಮೆ ಮಾಡುವ ಕಾರ್ಯತಂತ್ರಕ್ಕೆ ಬಿಜೆಪಿ ಮುಂದಾಗಿದೆ. ಕೇಂದ್ರವು ರದ್ದು ಪಡಿಸಿದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ಜಾಟ್‌ ಸಮುದಾಯವು  ಮುಂಚೂಣಿಯಲ್ಲಿತ್ತು. 

ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ಮುಖಂಡರು ಮತ್ತು ರೈತರನ್ನು ಭೇಟಿಯಾಗಿ ಅವರ ಮನ ವೊಲಿಸುವಂತೆ ಪಕ್ಷದಲ್ಲಿರುವ ಜಾಟ್‌ ಸಮುದಾಯದ ಮುಖಂಡರಿಗೆ ಬಿಜೆಪಿ ಸೂಚಿಸಿದೆ. ವಿಧಾನಸಭೆ ಚುನಾವಣೆ ಯಲ್ಲಿ ಆಗಬಹುದಾದ ಹಾನಿಯನ್ನು ಕನಿಷ್ಠಗೊಳಿಸುವ ಪ್ರಯತ್ನವನ್ನು ಬಿಜೆಪಿ ಆರಂಭಿಸಿದೆ.

ಬಿಕೆಯು ನಾಯಕ ನರೇಶ್‌ ಟಿಕಾಯತ್‌ ಅವರನ್ನು ಕೇಂದ್ರ ಸಚಿವ ಸಂಜೀವ್‌ ಬಲ್ಯಾನ್‌ ಅವರು ಸೋಮವಾರ ಭೇಟಿ ಆಗಿದ್ದಾರೆ. ಮುಝಫ್ಫರ್‌ನಗರದ ಸಿಸೌಲಿ ಎಂಬಲ್ಲಿ ರುವ ಟಿಕಾಯತ್‌ ಮನೆಯಲ್ಲಿ ಒಂದು ತಾಸು ಚರ್ಚಿಸಿದ್ದಾರೆ. ಬಲ್ಯಾನ್‌ ಅವರು ಕೂಡ ಜಾಟ್‌ ಸಮುದಾಯದವರು. 

ಇದೊಂದು ಸೌಜನ್ಯದ ಭೇಟಿ ಎಂದು ಬಲ್ಯಾನ್‌ ಹೇಳಿದ್ಧಾರೆ. ‘ನರೇಶ್‌ ಟಿಕಾಯತ್‌ ಅವರು ನಮ್ಮ ಜಾತಿ ಪಂಚಾಯಿತಿಯ ನಾಯಕ. ಕೆಲ ದಿನಗಳ ಹಿಂದೆ ಅವರಿಗೆ ಗಾಯ ಆಗಿತ್ತು. ಆರೋಗ್ಯ ವಿಚಾರಿಸುವುದಕ್ಕಾಗಿಯೇ ಇಲ್ಲಿಗೆ ಬಂದೆ’ ಎಂದು ಬಲ್ಯಾನ್‌ ಅವರು ಸಭೆಯ ನಂತರ ಹೇಳಿದ್ದಾರೆ. 

ರಾಜಕೀಯದ ಬಗ್ಗೆ ಏನನ್ನೂ ಚರ್ಚಿಸಿಲ್ಲ ಎಂದು ಟಿಕಾಯತ್‌ ಅವರೂ ಹೇಳಿದ್ಧಾರೆ. ‘ನಮ್ಮ ಮನೆಯ ಬಾಗಿಲು ಎಲ್ಲರಿಗೂ ತೆರೆದೇ ಇದೆ. ನಾವು ಯಾವುದೇ ರಾಜಕೀಯ ಪಕ್ಷದ ಜತೆಗೆ ಸಂಬಂಧ ಇರಿಸಿಕೊಂಡಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಹೇಳಿಕೆ ನೀಡಲು ಟಿಕಾಯತ್‌ ನಿರಾಕರಿಸಿದ್ದಾರೆ ಎಂದು ಮೂಲಗಳು ಹೇಳಿವೆ. 

‘ರೈತ ವಿರೋಧಿ ನೀತಿಗಳನ್ನು ನಾವು ವಿರೋಧಿಸುತ್ತೇವೆ. ರೈತರು 13 ತಿಂಗಳು ಪ್ರತಿಭಟನೆ ನಡೆಸಬೇಕಾಯಿತು. 700 ರೈತರು ಮೃತಪಟ್ಟರು. ಜನರಿಗೆ ಎಲ್ಲವೂ ಗೊತ್ತಿದೆ. ಅವರಿಗೆ ಏನನ್ನೂ ಹೇಳುವ ಅಗತ್ಯ ಇಲ್ಲ’ ಎಂದು ಬಿಕೆಯುನ ಸ್ಥಳೀಯ ಮುಖಂಡರೊಬ್ಬರು ಹೇಳಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ತಮ್ಮ ಆಯ್ಕೆ ಏನು ಎಂಬುದನ್ನು ಪರೋಕ್ಷವಾಗಿ ಸೂಚಿಸಿದ್ಧಾರೆ. ಎಸ್‌ಪಿ–ಆರ್‌ಎಲ್‌ಡಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ಕೊಡುವಂತೆ ಟಿಕಾಯತ್‌ ಕರೆ ಕೊಟ್ಟ ಮರುದಿನವೇ, ಈ ಭೇಟಿ ನಡೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು