ಭಾನುವಾರ, ಏಪ್ರಿಲ್ 18, 2021
33 °C

ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ರಾಜೀನಾಮೆ, ನಾಳೆ ಬಿಜೆಪಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹರಾಡೂನ್: ಉತ್ತರಾಖಂಡದ ಬಿಜೆಪಿ ಸರ್ಕಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಮಂಗಳವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ ಭವನದಲ್ಲಿ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು.

ವಿಧಾನಸಭೆ ಚುನಾವಣೆಗೆ ಇನ್ನೇನು ವರ್ಷವಷ್ಟೇ ಬಾಕಿ ಉಳಿದಿರುವ ವೇಳೆ, ತ್ರಿವೇಂದ್ರ ಸಿಂಗ್​ ರಾವತ್​ ಕಾರ್ಯಶೈಲಿ ಬಗ್ಗೆ ಹಲವಾರು ಸಚಿವರು ಮತ್ತು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರದಲ್ಲಿನ ಈ ಬೆಳವಣಿಗೆ ಹಿನ್ನಲೆಯಲ್ಲೇ ದೆಹಲಿಗೆ ತೆರಳಿದ್ದ ಅವರು ಬಿಜೆಪಿ ಹೈ ಕಮಾಂಡ್‌ನೊಂದಿಗೆ ಚರ್ಚಿಸಿದ್ದರು. ಸೋಮವಾರ ದೆಹಲಿಯಲ್ಲಿ ಕೇಂದ್ರ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಭೇಟಿ ಬಳಿಕ ರಾವತ್​ ರಾಜೀನಾಮೆಯ ವಿಚಾರಗಳು ಹೆಚ್ಚಾಗಿ ಕೇಳಿಬಂದಿತ್ತು.

60 ವರ್ಷದ ರಾವತ್ ಅವರು, ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತ್ರಿವೇಂದ್ರ ಸಿಂಗ್ ರಾವತ್, ನಾಲ್ಕು ವರ್ಷಗಳ ಕಾಲ ಉತ್ತರಾಖಂಡದ 'ದೇವ ಭೂಮಿ'ಯ ಸೇವೆ ಮಾಡಲು ಬಿಜೆಪಿ ನನಗೆ ಅವಕಾಶ ನೀಡಿತು. ಇದು ನನ್ನ ಜೀವನದ ಸುವರ್ಣಾವಕಾಶ. ಪಕ್ಷವು ನನ್ನನ್ನು ಇಷ್ಟು ದೊಡ್ಡ ಜವಾಬ್ದಾರಿಯಿಂದ ಗೌರವಿಸುತ್ತದೆ ಎಂಬುದನ್ನು ನಾನು ಊಹಿಸಿರಲಿಲ್ಲ ಎಂದರು.

ಪಕ್ಷದ ಆಂತರಿಕ ಚರ್ಚೆ ನಡೆಯಿತು ಮತ್ತು ಬೇರೆಯವರಿಗೆ ಈಗ ರಾಜ್ಯದ ಜವಾಬ್ದಾರಿಯನ್ನು ನೀಡಬೇಕು ಎಂಬ ಒಮ್ಮತವು ಹೊರಹೊಮ್ಮಿತು. ಹೀಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ನಾವು ಶಿಕ್ಷಣಕ್ಕಾಗಿ ಕೆಲಸ ಮಾಡಿದ್ದೇವೆ, ಹೊಸ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.

ರಾಜ್ಯದ ಮುಂದಿನ ನಾಯಕತ್ವದ ಆಯ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಎಲ್ಲ ಬಿಜೆಪಿ ಶಾಸಕರು ನಾಳೆ ಬೆಳಿಗ್ಗೆ 10 ಗಂಟೆಗೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ಸೇರಲಿದ್ದಾರೆ.

ರಾವತ್ ಆಡಳಿತ ಕುರಿತು ವರದಿ ಸಲ್ಲಿಕೆ

2017ರಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಿರೋಧ ನಾಯಕರಾಗಿ ರಾವತ್​ ಆಯ್ಕೆಯಾಗಿದ್ದರು. ಮುಂಬರುವ ಚುನಾವಣೆಯಲ್ಲಿ ರಾವತ್ ಅವರ  ವರ್ಚಸ್ಸು ಕೈಕೊಡುವ ಬಗ್ಗೆ ಬಿಜೆಪಿ ನಾಯಕರು ತಕಕಾರು ಎತ್ತಿದ್ದರು. ಚುನಾವಣೆ ಹಿನ್ನಲೆಯಲ್ಲಿ ಉತ್ತರಾಖಂಡಕ್ಕೆ ಬಿಜೆಪಿ ವೀಕ್ಷಕರಾಗಿ ಬಂದಿದ್ದ ಬಿಜೆಪಿ ಉಪಾಧ್ಯಕ್ಷ ರಮಣ್​ ಸಿಂಗ್​ ಮತ್ತು ಪ್ರಧಾನ ಕಾರ್ಯದರ್ಶಿ ದುಶ್ಯಂತ್​ ಸಿಂಗ್​ ಗೌತಮ್​ ಈ ಕುರಿತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ವರದಿ ಸಲ್ಲಿಸಿದ್ದರು.

ಇದೇ ಮಾರ್ಚ್​ 18ರಂದು ಉತ್ತರಾಖಂಡ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ವರ್ಷಗಳು ಆಗಲಿದೆ. ಮುಂದಿನ ವರ್ಷದ ಆರಂಭದಲ್ಲಿಯೇ ಇಲ್ಲಿ ಚುನಾವಣೆ ಎದುರಾಗಲಿರುವ ಹಿನ್ನಲೆಯಲ್ಲಿ ಪಕ್ಷಕ್ಕೆ ಹೊಡೆತ ಬೀಳುವುದನ್ನು ತಪ್ಪಿಸಲು ಬಿಜೆಪಿ ಈಗಲೇ ಸಿದ್ಧತೆ ಆರಂಭಿಸಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. 
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು