ಸೋಮವಾರ, ಸೆಪ್ಟೆಂಬರ್ 21, 2020
22 °C
ಉತ್ತರಾಖಂಡದ ಪರ್ವತ ಪ್ರದೇಶದಲ್ಲಿ ಯೋಧರ ಕಾರ್ಯಕ್ಕೆ ಶ್ಲಾಘನೆ

ಶವ ಹೊತ್ತು 25 ಕಿ.ಮೀ ನಡೆದ ಐಟಿಬಿಪಿ ಸಿಬ್ಬಂದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಂಡೊ–ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯು ವ್ಯಕ್ತಿಯೊಬ್ಬರ  ಮೃತ ದೇಹವನ್ನು ಹೊತ್ತುಕೊಂಡು ಉತ್ತರಾಖಂಡದ ಪರ್ವತ ಪ್ರದೇಶದಲ್ಲಿ ಸುಮಾರು 8 ಗಂಟೆಗಳು ಕಾಲ್ನಡಿಗೆ ಮೂಲಕ 25 ಕಿ.ಮೀ ಕ್ರಮಿಸಿ, ಆತನ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

ಪರ್ವತ ಪ್ರದೇಶಗಳಲ್ಲಿ ಇರುವಂಥ ಐಟಿಬಿಪಿ ನೆಲೆಗಳಿಗೆ ಅಗತ್ಯ ಆಹಾರ ಪದಾರ್ಥಗಳು ಹಾಗೂ ಸಾಮಾಗ್ರಿಗಳನ್ನು ಕುದುರೆಗಳ ಮುಖಾಂತರ ಭೂಪೇಂದ್ರ ಸಿಂಗ್‌ ರಾಣಾ ಎಂಬುವವರು ತಲುಪಿಸುತ್ತಿದ್ದರು. ಆ.28ರಂದು ಪರ್ವತವನ್ನು ಹತ್ತುತ್ತಿರುವ ಸಂದರ್ಭದಲ್ಲಿ ಮೇಲಿಂದ ಕಲ್ಲುಗಳು ಉರುಳಿಬಿದ್ದು ರಾಣಾ ಮೃತಪಟ್ಟಿದ್ದರು.

ಪಿಥೋರ್‌ಗಡದ ಸ್ಯೂನಿ ಗ್ರಾಮದ ಬಳಿ ಇವರ ಶವ ಪತ್ತೆಯಾಗಿತ್ತು. ಆಗಸ್ಟ್‌ 30ರಂದು ಐಟಿಬಿಪಿಯ 14ನೇ ಬೆಟಾಲಿಯನ್‌ನ ಎಂಟು ಸಿಬ್ಬಂದಿಯ ತಂಡ ಶವವನ್ನು ಹೊತ್ತುಕೊಂಡು ಬೆಳಿಗ್ಗೆ 11.30ಕ್ಕೆ ಕಾಲ್ನಡಿಗೆ
ಪ್ರಾರಂಭಿಸಿ, ಸಂಜೆ 7.30ರ ಸುಮಾರಿಗೆ ಮುನ್ಸ್ಯಾರಿ ಗ್ರಾಮವನ್ನು ತಲುಪಿತು ಎಂದು ಐಟಿಬಿಪಿ ವಕ್ತಾರರೊಬ್ಬರು ತಿಳಿಸಿದರು. 

ಪ್ರರ್ವತ ಪ್ರದೇಶಗಳ ಕಿರುದಾರಿಯ ಮೂಲಕ ಮೃತ ದೇಹವನ್ನು ಸ್ಟ್ರೆಚರ್‌ನಲ್ಲಿ ಹೊತ್ತು ಐಟಿಬಿಪಿ ಸಿಬ್ಬಂದಿ ಮಳೆ ಹಾಗೂ ಭೂಕುಸಿತದ ನಡುವೆಯೂ 25 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲೇ  ಕ್ರಮಿಸಿದ್ದಾರೆ ಎಂದು ವಿವರಿಸಿದರು. ಈ ಹಿಂದೆ, ಪರ್ವತ ಪ್ರದೇಶದಲ್ಲಿ ಗಾಯಗೊಂಡಿದ್ದ ಮಹಿಳೆಯೊಬ್ಬರನ್ನು 15 ಗಂಟೆಗಳು ಹೊತ್ತುಕೊಂಡು ಬಂದಿದ್ದ ಐಟಿಬಿಪಿ ಸಿಬ್ಬಂದಿ
ಪಿಥೋರ್‌ಗಡದಲ್ಲಿರುವ ಅವರ ಮನೆಗೆ ತಲುಪಿಸಿತ್ತು.

‘ತುರ್ತು ಸಂದರ್ಭದಲ್ಲಿ ಐಟಿಬಿಪಿ ಸಿಬ್ಬಂದಿ ನಮಗೆ ಆಹಾರ ಪದಾರ್ಥಗಳನ್ನು ಪೂರೈಸುತ್ತಾರೆ. ಜೊತೆಗೆ ಹಲವು ಸಂದರ್ಭದಲ್ಲಿ ಪ್ರಯಾಣಿಕರಿಗೂ ಆಹಾರ ಹಾಗೂ ಆಶ್ರಯವನ್ನು ನೀಡಿದ್ದಾರೆ’ ಎಂದು ಐಟಿಬಿಪಿ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸುತ್ತಾರೆ ವ್ಯಾಸ್‌ ಕಣಿವೆಯ ನಿವಾಸಿಗಳು. ‘ಐಟಿಬಿಪಿ ನೆಲೆಗಳು ಇಲ್ಲದೇ ಹೋಗಿದ್ದರೆ, ಇಂಥ ಪರ್ವತಶ್ರೇಣಿಗಳಲ್ಲಿ ವಾಸಿಸುವುದು ಕಷ್ಟವಾಗುತ್ತಿತ್ತು’ ಎನ್ನುತ್ತಾರೆ ಶಾಂತಿಹಳ್ಳಿಯ ನಿವಾಸಿ ಶಾಲು ದತಲ್‌.   

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು