ಭಾನುವಾರ, ಜುಲೈ 3, 2022
28 °C

ವೀರಪ್ಪ ಮೊಯಿಲಿಗೆ ಜೀವಮಾನದ‌ ಸಾಧನೆ ಪ್ರಶಸ್ತಿ: 11 ಜನ ಸಂಸದರಿಗೆ 'ಸಂಸತ್‌ ರತ್ನ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಎಂ. ವೀರಪ್ಪ ಮೊಯಿಲಿ ಅವರು ಪ್ರತಿಷ್ಠಿತ ಪ್ರೈಮ್ ಪಾಯಿಂಟ್ ಪ್ರತಿಷ್ಠಾನವು, ಸಂಸತ್‌ನ ಹಿರಿಯರಿಗೆ ಕೊಡಮಾಡುವ ಜೀವಮಾನ ಸಾಧನೆಯ ಪ್ರಶಸ್ತಿಗೆ ನೇಮಕಗೊಂಡಿದ್ದಾರೆ.

ತಮಿಳುನಾಡಿನ ಹಿರಿಯ ಬಿಜೆಪಿ ಮುಖಂಡ ಎಚ್.ವಿ. ಹಂದೆ ಅವರನ್ನೂ ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ರಾಷ್ಟ್ರೀಯವ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಸುಪ್ರಿಯಾ ಸುಳೆ ಮತ್ತು ಬಿಜು ಜನತಾ ದಳ (ಬಿಜೆಡಿ)ದ ಅಮರ್ ಪಟ್ನಾಯಕ್ ಸೇರಿದಂತೆ ಒಟ್ಟು 11 ಜನ ಸಂಸದರು 2022ನೇ ಸಾಲಿನ 'ಸಂಸದ್ ರತ್ನ' ಪ್ರಶಸ್ತಿಗೆ ನಾಮ‌ನಿರ್ದೇಶನಗೊಂಡಿದ್ದಾರೆ ಎಂದು  ಪ್ರತಿಷ್ಠಾನವು ಮಂಗಳವಾರ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

11 ಜನ ಸಂಸದರಲ್ಲಿ ಲೋಕಸಭೆಯಿಂದ ಎಂಟು ಮತ್ತು ರಾಜ್ಯಸಭೆಯಿಂದ ಮೂವರು ಸದಸ್ಯರಿದ್ದಾರೆ.

ಕೇರಳದ ಕ್ರಾಂತಿಕಾರಿ ಸಮಾಜವಾದಿ ಪಕ್ಷದ (ಆರ್‌ಎಸ್‌ಪಿ) ಸಂಸದ ಎನ್‌.ಕೆ. ಪ್ರೇಮಚಂದ್ರನ್ ಮತ್ತು ಶಿವಸೇನಾ ಸಂಸದ ಶ್ರೀರಂಗ ಅಪ್ಪಾ ಬಾರ್ನೆ ಅತ್ಯುತ್ತಮ ಸಾಧನೆಗಾಗಿ 'ಸಂಸದ್ ವಿಶಿಷ್ಟ ರತ್ನ' ಪ್ರಶಸ್ತಿಗೆ ನೇಮಕಗೊಂಡಿದ್ದಾರೆ.

ವಿದ್ಯುತ್ ಬರನ್ ಮಹತೋ (ಬಿಜೆಪಿ, ಜಾರ್ಖಂಡ್),  ಕುಲದೀಪ್ ರಾಯ್ ಶರ್ಮಾ (ಕಾಂಗ್ರೆಸ್, ಅಂಡಮಾನ್, 
ನಿಕೋಬಾರ್ ದ್ವೀಪ), ಡಾ ಹೀನಾ ವಿಜಯಕುಮಾರ್ ಗವಿಟ್ (ಬಿಜೆಪಿ, ಮಹಾರಾಷ್ಟ್ರ), ಸೌಗತ ರಾಯ್ (ಎಐಟಿಎಂಸಿ, ಪಶ್ಚಿಮ ಬಂಗಾಳ), ಸುಧೀರ್ ಗುಪ್ತಾ (ಬಿಜೆಪಿ, ಮಧ್ಯಪ್ರದೇಶ) ಅವರೂ ‘ಸಂಸದ್ ರತ್ನ’ ಪ್ರಶಸ್ತಿಗೆ ನೇಮಕಗೊಂಡಿರುವ ಲೋಕಸಭೆಯ ಇತರ ಸದಸ್ಯರಾಗಿದ್ದಾರೆ.

ಫೌಜಿಯಾ ತಹಸೀನ್ ಅಹ್ಮದ್ ಖಾನ್ (ಎನ್‌ಸಿಪಿ, ಮಹಾರಾಷ್ಟ್ರ) ರಾಜ್ಯಸಭೆಯ ಕಾರ್ಯಕ್ಷಮತೆಗಾಗಿ, ಕೆ.ಕೆ. ರಾಗೇಶ್ (ಸಿಪಿಐಎಂ, ಕೇರಳ) ಅವರು 'ನಿವೃತ್ತ' ವಿಭಾಗದ ಅಡಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.

ಇವರೊಂದಿಗೆ ನಾಲ್ಕು ಪ್ರಮುಖ  ಸಂಸದೀಯ ಸ್ಥಾಯಿ ಸಮಿತಿಗಳಾದ ಕೃಷಿ, ಹಣಕಾಸು, ಶಿಕ್ಷಣ ಮತ್ತು ಕಾರ್ಮಿಕ ಸಮಿತಿಗಳೂ ಪ್ರಶಸ್ತಿಗೆ  ನೇಮಕಗೊಂಡಿವೆ.

ಕೇಂದ್ರದ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್.  ಕೃಷ್ಣಮೂರ್ತಿ ಅವರಿದ್ದ ಆಯ್ಕೆ ಸಮಿತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದೆ.

ಫೆಬ್ರುವರಿ 26ರಂದು ನವದೆಹಲಿಯಲ್ಲಿ ಆಯೋಜಿಸಲಾಗುವ‌ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು