ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರು ಪಾಲಿಟಿಕ್ಸ್‌ ಸೇರಬೇಕು, 'ಪೋಲಿಟ್ರಿಕ್ಸ್‌'ಗಲ್ಲ: ವೆಂಕಯ್ಯ ನಾಯ್ಡು

Last Updated 29 ಸೆಪ್ಟೆಂಬರ್ 2021, 5:31 IST
ಅಕ್ಷರ ಗಾತ್ರ

ಜೋಧಪುರ್‌: ರಾಜಕೀಯ ಪಕ್ಷಗಳನ್ನು ಬದಲಿಸುವುದರಲ್ಲಿ ತಪ್ಪಿಲ್ಲ. ಆದರೆ ಕೇವಲ ಅಧಿಕಾರದ ಆಸೆಗೆ ಪಕ್ಷಗಳನ್ನು ಬದಲಿಸಬಾರದು ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜೋಧಪುರ್‌ನಲ್ಲಿ ಐಐಟಿ ವಿದ್ಯಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವೆಂಕಯ್ಯ ನಾಯ್ಡು, ಸಂಸತ್ತಿನಲ್ಲಿ ಮತ್ತು ವಿಧಾನಮಂಡಲದಲ್ಲಿ ಮೌಲ್ಯಾಧಾರಿತ ರಾಜಕೀಯ ಗುಣಮಟ್ಟ ಕುಸಿಯುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.

'ಯುವ ಜನಾಂಗ ಪಾಲಿಟಿಕ್ಸ್‌ಗೆ ಬರಬೇಕು. ಆದರೆ 'ಪೋಲಿಟ್ರಿಕ್ಸ್‌'ಗೆ ಅಲ್ಲ ಎಂಬ ಪನ್‌ ಮೂಲಕ ಸಧ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಪರೋಕ್ಷವಾಗಿ ಉಪ ರಾಷ್ಟ್ರಪತಿಗಳು ವ್ಯಂಗ್ಯ ಮಾಡಿದರು.

ನೀವು ಬಯಸಿದ ಪಕ್ಷವನ್ನೇ ಸೇರಿ. ತಂಡವಾಗಿ ಕೆಲಸ ಮಾಡಿ. ಸ್ಪರ್ಧಾತ್ಮಕ ಗುಣಗಳನ್ನು ಮೈಗೂಡಿಸಿಕೊಳ್ಳಿ. ಮೌಲ್ಯಾಧಾರಿತ ರಾಜಕಾರಣ ಮಾಡಿ ಎಂದು ವೆಂಕಯ್ಯ ನಾಯ್ಡು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಮಕ್ಕಳು ಬಟ್ಟೆಗಳನ್ನು ಬದಲಿಸಿದಂತೆ ಕೆಲವರು ಪಕ್ಷ ಬದಲಿಸುತ್ತಲೇ ಇದ್ದಾರೆ. ಪಕ್ಷವನ್ನು ಬದಲಿಸುವುದು ತಪ್ಪೇನಲ್ಲ. ಆದರೆ ಕೇವಲ ಅಧಿಕಾರದ ಆಸೆಗೆ ಬದಲಿಸುವುದು ತಪ್ಪು. ಈಗ ಆಗುತ್ತಿರುವುದು ಅದೇ. ನನಗೆ ಚಿಂತೆಯಾಗಿರುವುದು ಅದಕ್ಕೆ ಎಂದರು.

ವಿದ್ಯಾರ್ಥಿಗಳಿಗೆ ರಾಜಕೀಯದ ಬಗ್ಗೆ ಸುಲಭವಾಗಿ ಅರ್ಥೈಸಿಕೊಳ್ಳಲು 4ಸಿ ಸೂತ್ರಗಳನ್ನು ಹರಿಯಬಿಟ್ಟ ಉಪ ರಾಷ್ಟ್ರಪತಿಗಳು, ರಾಜಕಾರಣದಲ್ಲಿ 4ಸಿಗಳನ್ನು ಒಳಗೊಂಡಿರಬೇಕು. 1. ಕ್ಯಾರಕ್ಟರ್‌ 2. ಕೆಪಾಸಿಟಿ, 3. ಕಂಡಕ್ಟ್‌ ಮತ್ತು 4. ಕ್ಯಾಲಿಬರ್‌. ಆದರೆ ದುರಾದೃಷ್ಟಕ್ಕೆ ಇಂದಿನ ರಾಜಕಾರಣದಲ್ಲಿ ಕೆಲವರು ಬೇರೆ ರೀತಿಯ 4ಸಿಗಳನ್ನು ಅಂದರೆ 1. ಕ್ಯಾಸ್ಟ್‌, 2. ಕಮ್ಯೂನಿಟಿ, 3.ಕ್ಯಾಶ್‌ ಮತ್ತು 4. ಕ್ರಿಮಿನಾಲಿಟಿ ಗುಣಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಕುಟುಕಿದರು.

ರಾಷ್ಟ್ರೀಯತೆ ಬಗ್ಗೆ ಮಾತನಾಡಿದ ವೆಂಕಯ್ಯ ನಾಯ್ಡು ಅವರು, ಘೋಷಣೆ ಮೊಳಗಿಸುವುದು ರಾಷ್ಟ್ರೀಯತೆ ಅಲ್ಲ. ಜಾತಿ, ಮತ, ಧರ್ಮ, ಲಿಂಗಗಳ ಭೇದ ಭಾವಗಳನ್ನು ತೋರದೆ ಎಲ್ಲರ ಅಭಿವೃದ್ಧಿಯತ್ತ ಮನನ ಮಾಡುವುದೇ ನಿಜವಾದ ರಾಷ್ಟ್ರೀಯತೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT