ಶನಿವಾರ, ಜನವರಿ 22, 2022
16 °C

ಗುಜರಾತ್‌ ಹಿಂಸಾಚಾರ ಪೂರ್ವಯೋಜಿತ: ಸುಪ್ರೀಂ ಕೋರ್ಟ್‌ಗೆ ಜಾಕಿಯಾ ಜಾಫ್ರಿ ಮಾಹಿತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘2002ರ ಗುಜರಾತ್ ಗಲಭೆಯಲ್ಲಿನ ಹಿಂಸಾಚಾರವು ಪೂರ್ವಯೋಜಿತ ಕೃತ್ಯವಾಗಿತ್ತು’ ಎಂದು ಗಲಭೆಯಲ್ಲಿ ಹತ್ಯೆಗೀಡಾದ ಕಾಂಗ್ರೆಸ್ ಮುಖಂಡ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರ ನೇತೃತ್ವದ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಜಾಕಿಯಾ ಜಾಫ್ರಿ ಪರ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್ ಅವರು, ‘ಗಲಭೆಯ ಸಂದರ್ಭದಲ್ಲಿ ದೊಡ್ಡ ಪಿತೂರಿ ನಡೆಸಲಾಗಿದೆ. ಕಾನೂನಿನ ಗೌರವಕ್ಕೆ ಆಳವಾಗಿ ಘಾಸಿಗೊಳಿಸಿದ ಪ್ರಕರಣ ಇದಾಗಿದೆ’ ಎಂದು ಹೇಳಿದ್ದಾರೆ.

‘2002ರ ಗೋಧ್ರಾ ಘಟನೆ ಹಾಗೂ ನಂತರದ ಗಲಭೆಗಳು ಅಗಾಧ ಪ್ರಮಾಣದ ರಾಷ್ಟ್ರೀಯ ದುರಂತ. ಪುರುಷರು ಪ್ರಾಣಿಗಳಂತೆ ವರ್ತಿಸಿದಾಗ ಕಾನೂನಿನ ಗಾಂಭೀರ್ಯತೆಗೆ ಧಕ್ಕೆಯೊದಗುತ್ತದೆ. ಹಿಂಸಾಚಾರವು ನಿರ್ದಿಷ್ಟ ದಾಖಲೆಗಳಿಂದ ಪೂರ್ವಯೋಜಿತವಾಗಿತ್ತು’ ಎಂದ ಕಪಿಲ್ ಅವರು, ಜಾಕಿಯಾ ಅವರು ಆಧಾರರೂಪದಲ್ಲಿರಿಸಿರುವ ಸಾಮಗ್ರಿಗಳನ್ನು ದಾಖಲೆಗಳೆಂದು ಉಲ್ಲೇಖಿಸಿದರು.

‘ವಿಶೇಷ ತನಿಖಾ ತಂಡವು (ಎಸ್‌ಐಟಿ) ದಾಖಲೆಯಲ್ಲಿ ಲಭ್ಯವಿರುವ ಹಲವು ಅಂಶಗಳು ಮತ್ತು ವಸ್ತುಗಳನ್ನು ತನಿಖೆ ಮಾಡಿಲ್ಲ. ಅಲ್ಲದೆ, ವಿಚಾರಣಾ ನ್ಯಾಯಾಲಯವು ಅವುಗಳನ್ನು ಪರಿಶೀಲಿಸಿಲ್ಲ’ ಎಂದೂ ಕಪಿಲ್ ನ್ಯಾಯಪೀಠದ ಗಮನಕ್ಕೆ ತಂದರು. 

ದಾಖಲೆಯಲ್ಲಿ ಲಭ್ಯವಿರುವ ಸಾಮಗ್ರಿಗಳನ್ನು ಉಲ್ಲೇಖಿಸಿದ ಅವರು, ‘ಪಿತೂರಿ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ಇದರಲ್ಲಿ ಎಲ್ಲರೂ ಷಾಮೀಲಾಗಿದ್ದಾರೆ ಎಂಬುದು ಎಲ್ಲ ಆಯಾಮಗಳಲ್ಲಿ ತನಿಖೆಯಾದರೆ ಮಾತ್ರ ತಿಳಿಯುತ್ತದೆ’ ಎಂದು ಹೇಳಿದರು.‌

ಕಪಿಲ್ ಸಿಬಲ್ ಅವರ ಅಹವಾಲು ಆಲಿಸಿದ ನ್ಯಾಯಪೀಠವು ಬುಧವಾರ ಎಸ್‌ಐಟಿ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹಟಗಿ ಅವರ ವಿಚಾರಣೆ ನಡೆಸುವುದಾಗಿ ತಿಳಿಸಿತು.

2002ರ ಫೆ. 28ರಂದು ಅಹಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕಾಂಗ್ರೆಸ್ ಮುಖಂಡ ಎಹ್ಸಾನ್ ಜಾಫ್ರಿ ಅವರನ್ನು ಹತ್ಯೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು