ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತದಲ್ಲಿ ಹಿಂಸಾಚಾರಕ್ಕೆ ತಿರುಗಿದ ಬಿಜೆಪಿ ಪ್ರತಿಭಟನೆ

ಬಿಜೆಪಿ ಕಾರ್ಯಕರ್ತರ ಹತ್ಯೆ ಖಂಡಿಸಿ ಯುವಮೋರ್ಚಾ ರ್‍ಯಾಲಿ
Last Updated 8 ಅಕ್ಟೋಬರ್ 2020, 12:16 IST
ಅಕ್ಷರ ಗಾತ್ರ

ಕೋಲ್ಕತ್ತ /ಹೌರಾ: ಬಿಜೆಪಿಯು ಗುರುವಾರ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ್ದು, ಪ್ರತಿಭಟನಕಾರರನ್ನು ನಿಯಂತ್ರಿಸಲುಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಸರಣಿ ಹತ್ಯೆ ಖಂಡಿಸಿ, ಕೋಲ್ಕತ್ತ ಹಾಗೂ ಹೌರಾದ ಹಲವೆಡೆ ಬಿಜೆಪಿ ಯುವಘಟಕ ‘ಭಾರತೀಯ ಜನತಾ ಯುವಮೋರ್ಚಾ’ (ಬಿಜೆವೈಎಂ) ಈ ಮೆರವಣಿಗೆಯನ್ನು ಆಯೋಜಿಸಿತ್ತು.

ರ್‍ಯಾಲಿ ಸಂದರ್ಭದಲ್ಲಿ ರಾಜ್ಯ ಸಚಿವಾಲಯಕ್ಕೆ ಮುತ್ತಿಗೆ ಹಾಕಲು ಸಾವಿರಾರು ಕಾರ್ಯಕರ್ತರು ಯತ್ನಿಸಿದ್ದು, ತಡೆಗೋಡೆಗಳನ್ನು ದಾಟಿ ಮುನ್ನಗ್ಗಲು ಪ್ರಯತ್ನಿಸಿದಾಗ ಘರ್ಷಣೆ ಸಂಭವಿಸಿದೆ. ಅಲ್ಲಲ್ಲಿ, ಕಲ್ಲುತೂರಾಟ ನಡೆದಿದ್ದು, ಟಯರ್‌ಗಳನ್ನು ಸುಟ್ಟು ರಸ್ತೆತಡೆ ನಡೆಸಲಾಗಿದೆ.

ಘರ್ಷಣೆ ವೇಳೆಹಿರಿಯ ನಾಯಕರೂ ಸೇರಿದಂತೆ ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಅಹಿತಕರ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೋಲ್ಕತ್ತದ ಹಲವೆಡೆ ಸ್ವಯಂಘೋಷಿತ ಬಂದ್‌ ನಂತಹ ಸ್ಥಿತಿ ನಿರ್ಮಾಣವಾಗಿತ್ತು.

ಪಶ್ಚಿಮಬಂಗಾಳದಲ್ಲಿ ಕೆಲವು ತಿಂಗಳಿಂದ ರಾಜಕೀಯ ಮುಖಂಡರ ಸರಣಿ ಹತ್ಯೆಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಉತ್ತರ 24 ಪರ್‌ಗನಸ್‌ ಜಿಲ್ಲೆಯಲ್ಲಿ ಬಿಜೆಪಿ ನಾಯಕ ಮನೀಶ್‌ ಶುಕ್ಲಾ ಅವರ ಹತ್ಯೆಯಾಗಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆಗೆ ಕರೆ ನೀಡಿತ್ತು. ಕೋವಿಡ್‌ ಸ್ಥಿತಿ ಹಿನ್ನೆಲೆಯಲ್ಲಿ ಸರ್ಕಾರ ಗುಂಪುಗೂಡುವಿಕೆಯನ್ನು ನಿಷೇಧಿಸಿತ್ತು.

ತೇಜಸ್ವಿ ಸೂರ್ಯ ನೇತೃತ್ವ: ಹೌರಾ ಮೈದಾನದಿಂದ ಬಿಜೆವೈಎಂ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಪಶ್ಚಿಮ ಬಂಗಾಳ ಬಿಜೆವೈಎಂ ಘಟಕದ ಅಧ್ಯಕ್ಷ ಸೌಮಿತ್ರ ಖಾನ್‌ ನೇತೃತ್ವದಲ್ಲಿ ರ್‍ಯಾಲಿ ನಡೆಯಿತು.

ಪೊಲೀಸರು ಮಲ್ಲಿಕ್‌ ಗೇಟ್ ಬಳಿರ್‍ಯಾಲಿ ತಡೆದರು. ಆಗ ಕುಪಿತಗೊಂಡ ಕಾರ್ಯಕರ್ತರು ಕಲ್ಲುತೂರಾಟ ನಡೆಸಿದ್ದಾರೆ. ಅಶ್ರುವಾಯು ಪ್ರಯೋಗ ನಂತರವೂ ಪರಿಸ್ಥಿತಿ ತಹಬದಿಗೆ ಬರದಿದ್ದಾಗ, ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿ ಲಾಠಿಚಾರ್ಜ್‌ ನಡೆಸಿದ್ದು, ಹಲವರು ಗಾಯಗೊಂಡರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ನೇತೃತ್ವದಲ್ಲಿ ಕೋಲ್ಕತ್ತದ ಬುರ್ರಾಬಜಾರ್‌ನಲ್ಲಿ ಮೆರವಣಿಗೆ ಘರ್ಷಣೆಗೆ ತಿರುಗಿದೆ. ಪ್ರತಿಭಟನೆ ನಿಯಂತ್ರಣಕ್ಕೆ 5 ಸಾವಿರಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು.

ಪಿಸ್ತೂಲ್‌ ವಶ:‘ಪ್ರತಿಭಟನೆಯ ವೇಳೆ ಒಬ್ಬನಿಂದ ಒಂದು ಪಿಸ್ತೂಲ್‌ ವಶಕ್ಕೆ ಪಡೆಯಲಾಗಿದೆ ಹಾಗೂ ಕಾರ್ಯಕರ್ತರು ಪೊಲೀಸರ ಮೇಲೆಯೇ ಪೆಟ್ರೋಲ್‌ ಬಾಂಬ್‌ ಎಸೆದಿದ್ದರು’ ಎಂದು ಪೊಲೀಸರು ಆರೋಪಿಸಿದ್ದಾರೆ. ಇದನ್ನು ಬಿಜೆಪಿ ಅಲ್ಲಗಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT