ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್‌ ಡಿ

ಕೋವಿಡ್‌–19ಗೆ ಪ್ರತಿರೋಧವೊಡ್ಡುವ ಸಾಮರ್ಥ್ಯ: ತಜ್ಞರ ಅಭಿಮತ
Last Updated 31 ಡಿಸೆಂಬರ್ 2020, 11:21 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ವಿರುದ್ಧ ರೋಗನಿರೋಧ ಶಕ್ತಿ ಹೆಚ್ಚಿಸಲು ವಿಟಮಿನ್‌ ಡಿ ಪೂರಕವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಡಿಮೆ ಪ್ರಮಾಣದಲ್ಲಿ ವಿಟಮಿನ್‌ ಡಿ ಇದ್ದರೆ ಕೋವಿಡ್‌–19ನ ಗಂಭೀರವಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎನ್ನುವುದಕ್ಕೆ ಯಾವುದೇ ರೀತಿಯ ಕ್ಲಿನಿಕಲ್‌ ಸಾಕ್ಷ್ಯಗಳು ಇದುವರೆಗೆ ಲಭ್ಯವಾಗಿಲ್ಲ. ಆದರೆ, ಸೂರ್ಯನಿಂದ ಸುಲಭವಾಗಿ ದೊರೆಯುವ ಈ ವಿಟಮಿನ್‌ ಮತ್ತು ರೋಗಕ್ಕೆ ಪ್ರತಿರೋಧಕ ಶಕ್ತಿವೊಡ್ಡುವ ಪ್ರಕ್ರಿಯೆ ನಡುವೆ ಅಪಾರ ಸಂಬಂಧವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಷಯದ ಬಗ್ಗೆ 170 ತಜ್ಞರು ಡಿಸೆಂಬರ್‌ ತಿಂಗಳ ಆರಂಭದಲ್ಲಿ ಬಹಿರಂಗ ಪತ್ರ ಬರೆದಿದ್ದರು. ವಿಟಮಿನ್‌ ಡಿ ತೆಗೆದುಕೊಳ್ಳುವಂತೆ ಅರಿವು ಮೂಡಿಸಬೇಕು. ದೇಹದಲ್ಲಿ ವಿಟಮಿನ್‌ ‘ಡಿ’ ಅತಿ ಕಡಿಮೆ ಪ್ರಮಾಣದಲ್ಲಿದ್ದರೆ ಕೋವಿಡ್‌–19 ಸೋಂಕಿಗೆ ಒಳಗಾಗುವ ಮತ್ತು ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು vitamindforall.org ವೆಬ್‌ಸೈಟ್‌ನಲ್ಲಿ ಪತ್ರವನ್ನು ಅವರು ಪೋಸ್ಟ್‌ ಮಾಡಿದ್ದರು.

‘ವಿಟಮಿನ್‌ ಡಿ ಪಡೆಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಎಲ್ಲ ಆರೋಗ್ಯ ಸಚಿವಾಲಯಗಳಿಗೆ, ಆರೋಗ್ಯ ಕಾರ್ಯಕರ್ತರಿಗೆ, ಸರ್ಕಾರಿ ಸಂಸ್ಥೆಗಳಿಗೆ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಪತ್ರ ಬರೆದಿದ್ದೇವೆ’ ಎಂದು ನವದೆಹಲಿಯ ಜಮಿಯಾ ಹಮದರ್ದ್‌ ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಮಾಜಿ ಡೀನ್‌ ಪ್ರೊ. ಅಫ್ರೊಜುಲ್‌ ಹಖ್ ತಿಳಿಸಿದ್ದಾರೆ.

‘ವಿಟಮಿನ್‌ ಡಿ ಹೆಚ್ಚಿನ ಪ್ರಮಾಣದಲ್ಲಿದ್ದರೆ ಸೋಂಕಿಗೆ ಒಳಗಾಗುವ ಪ್ರಮಾಣ ಕಡಿಮೆಯಾಗಿರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವಿಷಯದ ಬಗ್ಗೆ ಹಲವರು ತಜ್ಞರು ವಿವಿಧ ವೇದಿಕೆಗಳ ಮೂಲಕ ಚರ್ಚೆ ನಡೆಸಿದ್ದಾರೆ.

‘ವಯಸ್ಕರು ಪ್ರತಿ ದಿನ 100 ಮೈಕ್ರೊಗ್ರಾಂನಷ್ಟು ವಿಟಮಿನ್‌ ಡಿ ಸೇವಿಸುವುದು ಒಳ್ಳೆಯದು. ಅತಿ ಹೆಚ್ಚಿನ ತೂಕ, ಆರೈಕೆ ಕೇಂದ್ರಗಳಲ್ಲಿ ರೋಗಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಹುದು’ ಎಂದು ಪತ್ರಕ್ಕೆ ಸಹಿ ಹಾಕಿರುವ ಇನ್ನೊಬ್ಬ ತಜ್ಞ ಪ್ರೊ. ಶ್ರೀಜಿತ್‌ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ಪರಿಸ್ಥಿತಿಯನ್ನು ಪರಿಗಣಿಸಿ ಹಲವು ತಜ್ಞರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರಬಹುದು. ಆ ರಾಷ್ಟ್ರಗಳಲ್ಲಿ ವಿಟಮಿನ್‌ ಡಿಯನ್ನು ಪೂರಕವಾಗಿ ಸೇವಿಸಲಾಗುತ್ತಿದೆ. ಆದರೆ, ಭಾರತದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ. ವಿಟಮಿನ್‌ ಡಿ ಕೊರತೆ ಇಲ್ಲಿಯೂ ಸಾಮಾನ್ಯವಾಗಿದೆ. ನಿರಂತರವಾಗಿ ವಿಟಮಿನ್‌ ಡಿ ಮಾತ್ರೆ ಸೇವಿಸುವಂತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಆದರೆ, ಇದೊಂದು ಸುದೀರ್ಘ ಪ್ರಕ್ರಿಯೆಯಾಗಬೇಕು ಮತ್ತು ತುರ್ತು ಪರಿಸ್ಥಿತಿಯಂತೆ ಪರಿಗಣಿಸಬಾರದು. ವಿಟಮಿನ್‌ ಡಿ ಜತೆಗೆ ಇತರ ವಿಟಮಿನ್‌ಗಳು ಮತ್ತು ಸೂಕ್ಷ್ಮ ಪೌಷ್ಟಿಕಾಂಶಗಳು ಸಹ ಆರೋಗ್ಯಕ್ಕೆ ಪೂರಕವಾಗಿವೆ’ ಎಂದು ತಜ್ಞರಾದ ವಿನೀತಾ ಬಾಲ್‌ ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT