ಮಂಗಳವಾರ, ಡಿಸೆಂಬರ್ 7, 2021
23 °C

ಅಂಬಾನಿ, ಆರ್‌ಎಸ್‌ಎಸ್‌ ವ್ಯಕ್ತಿಯ ಕಡತ ವಿಲೇವಾರಿಗಾಗಿ ₹ 300 ಕೋಟಿ ಆಮಿಷ: ಮಲಿಕ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತಾವು ಅಧಿಕಾರದಲ್ಲಿದ್ದ ವೇಳೆ ಅಂಬಾನಿ ಗ್ರೂಪ್ಸ್‌ ಮತ್ತು ಆರ್‌ಎಸ್‌ಎಸ್‌ ಸಂಬಂಧಿತ ವ್ಯಕ್ತಿಗೆ ಸೇರಿದ ಕಡತಗಳನ್ನು ತೆರವುಗೊಳಿಸುವುದಕ್ಕಾಗಿ ತಮಗೆ ₹ 300 ಕೋಟಿ ಆಮಿಷ ಒಡ್ಡಲಾಗಿತ್ತು. ಆದರೆ ಅವುಗಳನ್ನು ತಿರಸ್ಕರಿಸಿದ್ದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್‌ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಸದ್ಯ ಮೇಘಾಲಯದ ರಾಜ್ಯಪಾಲರಾಗಿರುವ ಮಲಿಕ್‌, ರಾಜಸ್ಥಾನದ ಝುಂಝುನುವಿನಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ್ದಾರೆ.

ʼನಾನು ಕಾಶ್ಮೀರಕ್ಕೆ ತೆರಳಿದಾಗ‌ ಎರಡು ಕಡತಗಳು (ವಿಲೇವಾರಿಗಾಗಿ) ನನ್ನ ಬಳಿಗೆ ಬಂದಿದ್ದವು. ಒಂದು ಅಂಬಾನಿ ಅವರಿಗೆ ಸಂಬಂಧಿಸಿದ್ದು. ಇನ್ನೊಂದು ಕಡತ ಮೆಹಬೂಬಾ ಮುಫ್ತಿ ನೇತೃತ್ವದ (ಪಿಡಿಪಿ-ಬಿಜೆಪಿ ಸಮ್ಮಿಶ್ರ) ಸರ್ಕಾರದಲ್ಲಿ ಸಚಿವರಾಗಿದ್ದ, ಆರ್‌ಎಸ್‌ಎಸ್‌ ಸಂಪರ್ಕದಲ್ಲಿದ್ದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಪ್ತರಾಗಿದ್ದ ವ್ಯಕ್ತಿಗೆ ಸಂಬಂಧಿಸಿದ್ದು. ಈ ಕಡತಗಳ ವ್ಯವಹಾರದಲ್ಲಿ ಹಗರಣವಿದೆ ಎಂಬುದನ್ನು ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳು ತಿಳಿಸಿದ್ದರು. ಅದರಂತೆ ಆ ವ್ಯವಹಾರಗಳನ್ನು ರದ್ದುಪಡಿಸಿದ್ದೆ. ಪ್ರತಿ ಕಡತ ವಿಲೇವಾರಿಗೆ ನನಗೆ ತಲಾ ₹ 150 ಕೋಟಿ ಸಿಗಲಿದೆ ಎಂದು ಕಾರ್ಯದರ್ಶಿಗಳು ಹೇಳಿದ್ದರು. ಆದರೆ, ನಾನು ಐದು ಕುರ್ತಾ-ಪೈಜಾಮಾಗಳೊಂದಿಗೆ ಇಲ್ಲಿಗೆ ಬಂದಿದ್ದೇನೆ. ಇಲ್ಲಿಂದ ಹೋಗುವಾಗಲೂ ಅವುಗಳೊಂದಿಗೇ ಹೋಗುತ್ತೇನೆ ಎಂದು ಅವರಿಗೆ ಹೇಳಿದ್ದೆʼ ಎಂದಿದ್ದಾರೆ.

ಮುಂದುವರಿದು, ʼಮುನ್ನೆಚ್ಚರಿಕೆಯಾಗಿ ಕಡತಗಳು ಮತ್ತು ಹಗರಣದಲ್ಲಿ ಶಾಮೀಲಾಗಿದ್ದ ವ್ಯಕ್ತಿಗಳ ಬಗ್ಗೆ ಪ್ರಧಾನಿ ಅವರಿಗೂ ತಿಳಿಸಿದ್ದೆ. ನಾನು ಸ್ಥಾನ ತ್ಯಜಿಸಲು ಸಿದ್ಧವಿರುವುದಾಗಿ ಮತ್ತು ಸ್ಥಾನದಲ್ಲಿ ಮುಂದುವರಿಯಬೇಕಾದರೆ ಕಡತಗಳಿಗೆ ಅನುಮೋದನೆ ನೀಡುವುದಿಲ್ಲ ಎಂಬುದಾಗಿ ಅವರಿಗೆ (ಮೋದಿಗೆ) ನೇರವಾಗಿ ಹೇಳಿದ್ದೆʼ ಎಂದು ಹೇಳಿಕೆ ನೀಡಿದ್ದಾರೆ. ಆಗ ಮೋದಿಯವರು ಭ್ರಷ್ಟಾಚಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ನನ್ನ ನಿರ್ಧಾರವನ್ನು ಬೆಂಬಲಿಸಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಲಿಕ್‌ ಅವರು ಕಡತಗಳ ಬಗ್ಗೆ ವಿವರವಾಗಿ ಹೇಳಿಲ್ಲ. ಆದರೆ, ಸರ್ಕಾರಿ ನೌಕರರು, ಪಿಂಚಿಣಿದಾರರಿಗೆ ವಿಮಾ ಸೌಲಭ್ಯ ಒದಗಿಸುವುದಕ್ಕೆ ಸರ್ಕಾರದ ಜೊತೆ ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಗ್ರೂಪ್‌ನ ರಿಲಯನ್ಸ್‌ ಜನರಲ್‌ ಇನ್ಶ್ಯೂರೆನ್ಸ್‌ ಒಪ್ಪಂದ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದ್ದು ಎಂದಿದ್ದಾರೆ.

ವಿಮಾ ಯೋಜನೆಗಳಲ್ಲಿ ದೋಷಗಳಿವೆ ಎಂಬ ಕಾರಣಕ್ಕೆ ರಿಲಯನ್ಸ್‌ ಜೊತೆಗಿನ ಒಪ್ಪಂದವನ್ನು 2018ರ ಅಕ್ಟೋಬರ್‌ನಲ್ಲಿ ಮಲಿಕ್ ರದ್ದುಪಡಿಸಿದ್ದರು. ಆದರೆ, ಎರಡು ದಿನಗಳ ಬಳಿಕ ಒಪ್ಪಂದಕ್ಕೆ ಅನುಮೋದನೆ ನೀಡಿದ್ದ ಅವರು, ಪ್ರಕ್ರಿಯೆಯನ್ನು ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆಸಲಾಗಿದೆಯೇ ಎಂದು ಪರಿಶೀಲಿಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಿರ್ದೇಶನ ನೀಡಿದ್ದರು.

ಇದೇ ವೇಳೆ ಮಲಿಕ್, ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದಾಗಿಯೂ ಹೇಳಿದ್ದಾರೆ.‌

ʼಒಂದುವೇಳೆ ರೈತರ ಹೋರಾಟ ಮುಂದುವರಿದರೆ, ನಾನು ನನ್ನ ಸ್ಥಾನ ತ್ಯಜಿಸುತ್ತೇನೆ ಮತ್ತು ಯಾರಿಗೂ ಅಂಜದೆ ಅವರೊಂದಿಗೆ (ರೈತರೊಂದಿಗೆ) ನಿಲ್ಲುತ್ತೇನೆ. ನಾನು ಯಾವುದೇ ತಪ್ಪು ಮಾಡದಿರುವಾಗ ಇದು ಸಾಧ್ಯ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬ ತೃಪ್ತಿ ಇದೆ‌ʼ ಎಂದಿದ್ದಾರೆ.

ಒತ್ತಡಕ್ಕೆ ಮಣಿಯದೆ ಮತ್ತು ಸಮಾಜದ ಏಳಿಗೆಗಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಹೊಸದಾಗಿ ನೇಮಕಗೊಳ್ಳುವ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ʼಒತ್ತಡಗಳು ಬರುತ್ತವೆ ಮತ್ತು ಲಂಚ ಪಡೆಯುವಾಗ ಒಳ್ಳೆಯದಾಗುತ್ತದೆ ಎಂದು ನೀವು ಭಾವಿಸುತ್ತೀರಿ. ತಮ್ಮ ತವರಿನಲ್ಲಿ ಹುಲ್ಲಿನ ಗುಡಿಸಲನ್ನೂ ಹೊಂದಿರದ ಹಾಗೂ ಜೈಪುರದಲ್ಲಿ ಅರಮನೆಯಂತ ಮನೆ ನಿರ್ಮಿಸಿರುವ ಸಾಕಷ್ಟು ಅಧಿಕಾರಿಗಳು ಇದ್ದಾರೆ.‌ ಆದರೆ, ನೀವು ದೃಢವಾಗಿ ಮತ್ತು ಪ್ರಾಮಾಣಿಕವಾಗಿ ಇದ್ದರೆ, ಯಾರೊಂದಿಗೆಬೇಕಾದರೂ ಹೋರಾಡಬಹುದುʼ ಎಂದು ಹೇಳಿದ್ದಾರೆ.

ಮಲಿಕ್‌ ಅವರು ತಮ್ಮ ನಿವೃತ್ತಿಯ ಬಳಿಕ ವಾಸಿಸಲು ಸ್ವಂತ ಮನೆಯನ್ನೂ ಹೊಂದಿಲ್ಲ. ಈ ಬಗ್ಗೆ ಅವರು, ʼನನಗೆ ಮನೆ ಇಲ್ಲ ಎಂಬ ಬಗ್ಗೆ ಯಾವುದೇ ಚಿಂತೆಇಲ್ಲʼ ಎಂದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು