ಸೋಮವಾರ, ಸೆಪ್ಟೆಂಬರ್ 20, 2021
22 °C
ಭಾರತ ಜೋಡಿಸಿ ಆಂದೋಲನದಲ್ಲಿ ಪಾಲ್ಗೊಳ್ಳಲು ನಾಗರಿಕರಿಗೆ ಮನವಿ

‘ಭಾರತ ಒಗ್ಗೂಡಿಸಲು ಮುಂದಾಳುಗಳಾಗಿ’: ಮನದ ಮಾತು ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ನೇತೃತ್ವದ ‘ಭಾರತ್‌ ಛೋಡೊ’ (ಕ್ವಿಟ್‌ ಇಂಡಿಯಾ) ಆಂದೋಲನದಂತೆಯೇ, ದೇಶದ ಪ್ರತಿಯೊಬ್ಬರೂ ಈಗ ‘ಭಾರತ್‌ ಜೋಡೊ’ (ಭಾರತ ಒಗ್ಗೂಡಿಸಿ) ಆಂದೋಲನದ ಮುಂದಾಳತ್ವ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

‘ಮನದ ಮಾತು’ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ‘ನಾವು ಮಾಡುವ ಕೆಲಸಗಳು, ವಿವಿಧತೆಯ ದೇಶವಾದ ಭಾರತವನ್ನು ಜೋಡಿಸುವ ಹಾಗೂ ಕೂಡಿಸುವುದಕ್ಕೆ ಪೂರಕವಾಗಿ ಇರುವಂತೆ ನೋಡಿಕೊಳ್ಳಬೇಕಾದುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.

ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ, ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಆಗಸ್ಟ್‌ 15ರಂದು ದೇಶದ ಜನರು ಏಕಕಾಲಕ್ಕೆ ರಾಷ್ಟ್ರಗೀತೆಯನ್ನು ಹಾಡಲು ಅನುವಾಗುವಂತೆ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ‘ರಾಷ್ಟ್ರಗಾನ ಡಾಟ್‌ ಇನ್’ ಹೆಸರಿನ ಪ್ರತ್ಯೇಕ ವೆಬ್‌ಸೈಟ್‌ ಆರಂಭಿಸಲಾಗಿದೆ. ಈ ವೆಬ್‌ಸೈಟ್‌ ಮೂಲಕ, ಜನರು ರಾಷ್ಟ್ರಗೀತೆಯನ್ನು ಹಾಡಿ, ಧ್ವನಿಮುದ್ರಣ ಮಾಡುವುದರೊಂದಿಗೆ ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದರು.

ಕ್ರೀಡಾಪಟುಗಳನ್ನು ಹುರಿದುಂಬಿಸಿ: ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿರುವ ‘ವಿಕ್ಟರಿ ಪಂಚ್‌ ಅಭಿಯಾನ’ದಲ್ಲಿ ಪಾಲ್ಗೊಳ್ಳುವ ಮೂಲಕ,ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಭಾರತೀಯ ಕ್ರೀಡಾಪಟುಗಳನ್ನು ಹುರಿದುಂಬಿಸುವಂತೆ ಕರೆ ನೀಡಿದರು.

‘ಕೊರೊನಾ ವೈರಸ್‌ ಇನ್ನೂ ಹೋಗಿಲ್ಲ. ಮುಂದೆ ಸಾಲು ಸಾಲು ಹಬ್ಬಗಳು ಬರಲಿದ್ದು, ಆ ಸಂದರ್ಭದಲ್ಲಿ ಜನರು ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಲಸಿಕೆ ಪಡೆಯಬೇಕು. ಲಸಿಕೆ ನಿರಾಕರಿಸುವುದರ ಮೂಲಕ ನೀವು ಮಾತ್ರವಲ್ಲ ನಿಮ್ಮ ಕುಟುಂಬದವರನ್ನೂ, ಊರನ್ನೂ ಅಪಾಯಕ್ಕೆ ಸಿಲುಕಿಸುತ್ತೀರಿ’ ಎಂದು ಎಚ್ಚರಿಸಿದರು.

ಸೋಮವಾರ ನಡೆಯಲಿರುವ ‘ಕಾರ್ಗಿಲ್‌ ದಿನ’ ಆಚರಣೆಯ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ, ‘ಕಾರ್ಗಿಲ್‌ ಯುದ್ಧವು ಭಾರತೀಯ ಸೇನೆಯ ಶೌರ್ಯ ಹಾಗೂ ಸಹನೆಯ ಪ್ರತೀಕವಾಗಿದ್ದು, ಎಲ್ಲರೂ ಕಾರ್ಗಿಲ್‌ ವೀರರಿಗೆ ಗೌರವ ಸಲ್ಲಿಸಬೇಕು’ ಎಂದರು. 

ಬಾಳೆ ಹಿಟ್ಟು, ಬಾಳೆನಾರಿನ ಉತ್ಪನ್ನ ಪ್ರಸ್ತಾಪಿಸಿದ ಮೋದಿ: ‘ಬಾಳೆನಾರಿನಿಂದ ಅತ್ಯುತ್ಕೃಷ್ಟವಾದ ಉತ್ಪನ್ನ ತಯಾರಿಸಬಹುದು ಅಥವಾ ಬಾಳೆಯ ಹಿಟ್ಟಿನಿಂದ ಖಾದ್ಯಗಳನ್ನು ತಯಾರಿಸಬಹುದು ಎಂಬುದನ್ನು ಬಲ್ಲಿರಾ’ ಎಂದು ಕೇಳಿದ ಪ್ರಧಾನಿ, ಕರ್ನಾಟಕ ಹಾಗೂ ಉತ್ತರಪ್ರದೇಶದಲ್ಲಿ ಈ ಬಗ್ಗೆ ನಡೆಯುತ್ತಿರುವ ಪ್ರಯೋಗಗಳನ್ನು ಪ್ರಸ್ತಾಪಿಸಿದರು.

ಬಾಳೆಯ ನಾರಿನಿಂದ ಕೈಚೀಲ ತಯಾರಿಸಲಾಗುತ್ತಿದ್ದು, ಕರ್ನಾಟಕದಲ್ಲಿ ಬಾಳೆ ಹಿಟ್ಟಿನಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಮನದ ಮಾತು; ಪ್ರಸಾರ ಭಾರತಿಗೆ ₹30 ಕೋಟಿ ಆದಾಯ

ನವದೆಹಲಿ: ‘ಮನ್‌ ಕಿ ಬಾತ್’ ರೇಡಿಯೊ ಕಾರ್ಯಕ್ರಮವು, ಕಳೆದ ಏಳು ವರ್ಷಗಳಲ್ಲಿ ಪ್ರಸಾರ ಭಾರತಿಗೆ ₹30.80 ಕೋಟಿ ಆದಾಯ ತಂದುಕೊಟ್ಟಿದೆ.

'ಜನರ ಮನದ ಮಾತು ಕೇಳಿದ್ದರೆ ಈ ಸ್ಥಿತಿ ಇರುತ್ತಿರಲಿಲ್ಲ'

ದೇಶದ ಪ್ರತಿಯೊಬ್ಬರೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳುವಂತೆ ತಮ್ಮ ‘ಮನದ ಮಾತು’ ಕಾರ್ಯಕ್ರಮದಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ‘ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳುವ ಮೊದಲು, ದೇಶದಲ್ಲಿನ ಲಸಿಕೆ ಕೊರತೆಯನ್ನು ನೀಗಿಸಿ’ ಎಂದು ಟ್ವೀಟ್‌ ಮಾಡಿದ್ದಾರೆ.

‘ಪ್ರಧಾನಿ ಮೋದಿ, ದೇಶದ ಜನರ ಮನದ ಮಾತನ್ನು ಅರ್ಥೈಸಿಕೊಂಡಿದ್ದರೆ, ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ರಾಜ್ಯಗಳಲ್ಲಿ ಲಸಿಕೆಯ ಕೊರತೆ ಇರುತ್ತಿರಲಿಲ್ಲ’ ಎಂದು ಟೀಕಿಸಿರುವ ರಾಹುಲ್‌ ಗಾಂಧಿ, ‘ಲಸಿಕೆ ಎಲ್ಲಿ’ ಎಂದು ಪ್ರಶ್ನಿಸಿದ್ದಾರೆ. ಲಸಿಕೆ ಅಭಿಯಾನ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗೆಗಿನ ವಿಡಿಯೊವೊಂದನ್ನು ಹಾಗೂ ಲಸಿಕೆ ಪಡೆಯಲು ಜನರು ಪರದಾಡಬೇಕಾದ ಸ್ಥಿತಿಯ ಬಗೆಗಿನ ಮಾಧ್ಯಮ ವರದಿಗಳನ್ನೂ ಹಂಚಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು