ಭಾನುವಾರ, ಜೂನ್ 13, 2021
21 °C
ಪಶ್ಚಿಮ ಬಂಗಾಳದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ವರದಿ ನೀಡುವಂತೆ ಮನವಿ

ಚುನಾವಣೋತ್ತರ ಹಿಂಸಾಚಾರ: ಪಶ್ಚಿಮ ಬಂಗಾಳ ರಾಜ್ಯಪಾಲರನ್ನು ಭೇಟಿಯಾದ ಕೇಂದ್ರ ತಂಡ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ ನಡೆದ ಹಿಂಸಾಚಾರದ ಹಿಂದಿನ ಕಾರಣ ತಿಳಿಯಲು ರಚನೆಯಾಗಿರುವ ಕೇಂದ್ರ ಗೃಹ ಸಚಿವಾಲಯದ ನಾಲ್ವರು ಸದಸ್ಯರ ತಂಡ ಶುಕ್ರವಾರ ರಾಜ್ಯಪಾಲ ಜಗದೀಪ್ ಧನ್‌ಕರ್‌ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿತು.

ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದ ಈ ತಂಡ, ಗುರುವಾರ ಪಶ್ಚಿಮ ಬಂಗಾಳವನ್ನು ತಲುಪಿತು. ಇಲ್ಲಿನ ಸೆಕ್ರಟರಿಯೇಟ್‌ನಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಡಿಜಿಪಿ ಅವರೊಂದಿಗೆ ಸಭೆ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆ ಬಗ್ಗೆ, ಅದರಲ್ಲೂ ವಿಶೇಷವಾಗಿ ಮೇ 2ರಂದು ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಣೆಯ ನಂತರ ಭುಗಿಲೆದ್ದ ಹಿಂಸಾಚಾರ ಕುರಿತು ವರದಿ ನೀಡುವಂತೆ ಸಚಿವಾಲಯದ ತಂಡ ಧನ್‌ಕರ್‌ ಅವರಲ್ಲಿ ಮನವಿ ಮಾಡಿತು.

ಈ ತಂಡವು ಗುರುವಾರ ದಕ್ಷಿಣ 24 ಪರಗಣ ಮತ್ತು ಉತ್ತರ 24 ಪರಗಣ ಜಿಲ್ಲೆಗಳ ಹಲವು ಸ್ಥಳಗಳಿಗೆ ಭೇಟಿ ನೀಡಿ ಮೃತ ವ್ಯಕ್ತಿಗಳ ಕುಟುಂಬದವರು ಮತ್ತು ಸ್ಥಳೀಯರೊಂದಿಗೆ ಚರ್ಚೆ ನಡೆಸಿತು ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಚುನಾವಣೆ ನಂತರ ರಾಜ್ಯದ ವಿವಿಧೆಡೆ ನಡೆದಿರುವ ಹಿಂಸಾಚಾರದಲ್ಲಿ 16 ಮಂದಿ ಮೃತರಾಗಿದ್ದಾರೆ ಎಂದು ಹೇಳಿದ್ದರು.

ಟಿಎಂಸಿ ಗೂಂಡಾಗಳು ಬಿಜೆಪಿ ಕಾರ್ಯಕರ್ತರನ್ನು ಕೊಂದಿದ್ದಾರೆ, ಪಕ್ಷದ ಮಹಿಳಾ ಕಾರ್ಯಕರ್ತರ ಮೇಲೂ ದಾಳಿ ನಡೆಸಿದ್ದಾರೆ. ಕಾರ್ಯಕರ್ತರ ಮನೆಗಳನ್ನು ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದನ್ನು ಅಲ್ಲಗಳೆದಿದ್ದ ಮಮತಾ ಬ್ಯಾನರ್ಜಿ, ‘ಬಿಜೆಪಿ ಅಭ್ಯರ್ಥಿಗಳು ಹೆಚ್ಚಾಗಿ ಗೆದ್ದಿರುವ ಕ್ಷೇತ್ರಗಳಲ್ಲೇ ಹಿಂಸಾಚಾರ ನಡೆದಿದೆ‘ ಎಂದು ಪ್ರತಿಕ್ರಿಯಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು