ಶನಿವಾರ, ಜೂನ್ 25, 2022
27 °C

ಶಾಂತಿಯಿಂದ ಬದುಕಲು ಬಿಜೆಪಿ ಬಿಡಲ್ಲ: ಮಮತಾ ಬ್ಯಾನರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‘ಮುಕುಲ್‌ ರಾಯ್‌ ಅವರು ಟಿಎಂಸಿಗೆ ಮರಳಿರುವುದರಿಂದ, ಬಿಜೆಪಿಯು ಯಾರೊಬ್ಬರನ್ನೂ ಶಾಂತಿಯುತವಾಗಿ ಬದುಕಲು ಬಿಡುವುದಿಲ್ಲ. ಪ್ರತಿಯೊಬ್ಬರ ಮೇಲೂ ಒತ್ತಡ ಹೇರುತ್ತದೆ ಎಂಬುದು ಸಾಬೀತಾದಂತಾಗಿದೆ. ರಾಯ್‌ ಅವರು ಬಿಜೆಪಿಯೊಳಗೆ ಹಿಂಸೆ ಹಾಗೂ ಬೆದರಿಕೆಯನ್ನು ಅನುಭವಿಸಿದ್ದಾರೆ’ ಎಂದು ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ಮುಕುಲ್‌ ರಾಯ್‌ ಹಾಗೂ ಅವರ ಪುತ್ರ ಶುಭ್ರಾಂಶು ಅವರನ್ನು ಮರಳಿ ಟಿಎಂಸಿಗೆ ಬರಮಾಡಿಕೊಂಡ ನಂತರ, ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಬಿಜೆಪಿಯಿಂದ ಟಿಎಂಸಿಗೆ ಪಕ್ಷಾಂತರ ಆರಂಭವಾಗಲಿದೆ ಎಂದು ಮಮತಾ ಹೇಳಿದ್ದಾರೆ. ಆದರೆ, ವಿಧಾನಸಭಾ ಚುನಾವಣೆಗೂ ಸ್ವಲ್ಪವೇ ಮುನ್ನ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದ ಮುಖಂಡರು ಮತ್ತು ಕಾರ್ಯಕರ್ತರನ್ನು ಮರಳಿ ಪಕ್ಷಕ್ಕೆ ಸೇರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚುನಾವಣೆಗೂ ಮುನ್ನ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ದೀಪೇಂದು ಬಿಸ್ವ, ಸೊನಾಲಿ ಗುಹಾ ಮುಂತಾದ ಕೆಲವು ಮುಖಂಡರು ಮಮತಾ ಅವರಿಗೆ ಪತ್ರ ಬರೆದು ಟಿಎಂಸಿಗೆ ಮರಳುವ ಇಚ್ಛೆಯನ್ನು ಈಗಾಗಲೇ ವ್ಯಕ್ತಪಡಿಸಿದ್ದಾರೆ.

ಒಂದು ಕಾಲದಲ್ಲಿ ಟಿಎಂಸಿಯಲ್ಲಿ ಮಮತಾ ಅವರ ನಂತರದ ಸ್ಥಾನದಲ್ಲಿದ್ದ ರಾಯ್‌ ಅವರನ್ನು ನಾರದ ಮಾರುವೇಷದ ಕಾರ್ಯಾಚರಣೆ ಘಟನೆಯ ನಂತರ, 2015ರ ಫೆಬ್ರುವರಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. 2017ರ ನವೆಂಬರ್‌ ತಿಂಗಳಲ್ಲಿ ಅವರು ಪಕ್ಷ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

‘ರಾಯ್‌ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಪ್ರಯತ್ನವನ್ನು ಮಮತಾ ಅವರು ಮಾರ್ಚ್‌ ತಿಂಗಳ ಕೊನೆಯಲ್ಲಿ ಆರಂಭಿಸಿದ್ದರು. ಪಕ್ಷಾಂತರಿಗಳನ್ನು ಮರಳಿ ಕರೆತಂದರೆ ಪಕ್ಷದೊಳಗೆ ಅಸಮಾಧಾನ ಹೊಗೆಯಾಡಬಹುದೆಂಬ ಕಾರಣಕ್ಕೆ ಉಳಿದ ನಾಯಕರನ್ನು ಕರೆತರುವ ಪ್ರಯತ್ನಗಳನ್ನು ಮಾಡಿರಲಿಲ್ಲ. ರಾಯ್‌ ಅವರ ಸಂಘಟನಾ ಚಾತುರ್ಯವನ್ನು ಅರಿತಿರುವ ಮಮತಾ, ವಿಶೇಷ ಪ್ರಕರಣವೆಂದು ಅವರನ್ನು ಮರಳಿ ಕರೆತಂದಿದ್ದಾರೆ’ ಎಂದು ರಾಜಕೀಯ ವಿಶ್ಲೇಷಕ ರಜತ್‌ ರಾಯ್‌ ಹೇಳಿದ್ದಾರೆ.

ಮಿಶ್ರ ಪ್ರತಿಕ್ರಿಯೆ

ಮುಕುಲ್‌ ರಾಯ್‌ ಅವರ ಪಕ್ಷತ್ಯಾಗಕ್ಕೆ ಬಿಜೆಪಿಯೊಳಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ರಾಯ್‌ ಅವರ ನಿರ್ಗಮನದಿಂದ ಪಕ್ಷದ ಸಂಘಟನೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಆಗುವುದಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಹೇಳಿದ್ದಾರೆ. ಆದರೆ ‘ಲಾಬಿ ರಾಜಕಾರಣವು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಾರಂಭಿಸಿದೆ’ ಎಂದು ಮಾಜಿ ಸಂಸದ ಅನುಪಂ ಹಜಾರೆ ಹೇಳಿದ್ದಾರೆ.

‘ಮುಕುಲ್‌ ಬಾಬು ಹಿರಿಯ ಮುಖಂಡ. ಅವರಿಗೆ ಶುಭ ಹಾರೈಸುತ್ತೇವೆ. ಆದರೆ, ಟಿಎಂಸಿ ಸೇರುವುದಕ್ಕೂ ಮುನ್ನ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ಪಕ್ಷದ ಇತರ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಬೇಕಿತ್ತಲ್ಲವೇ? ಬಿಜೆಪಿ ಟಿಕೆಟ್‌ನಿಂದ ಗೆದ್ದಿರುವ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕಿತ್ತಲ್ಲವೇ’ ಎಂದು ಬಿಜೆಪಿ ಕಾರ್ಯದರ್ಶಿ ಪ್ರಕಾಶ್‌ ಮಜುಂದಾರ್‌ ಪ್ರಶ್ನಿಸಿದ್ದಾರೆ.

ಮುಕುಲ್‌ ರಾಯ್‌, ಸವ್ಯಸಾಚಿ ದತ್ತ ಮುಂತಾದ ಹಿರಿಯ ಮುಖಂಡರಿಗೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಲ್ಲಿ ಸರಿಯಾದ ಸ್ಥಾನಮಾನ, ಗೌರವ ಸಿಕ್ಕಿರಲಿಲ್ಲ. ಬದಲಿಗೆ ಸುವೇಂದು ಅಧಿಕಾರಿ, ನಟ ಮಿಥುನ್‌ ಚಕ್ರವರ್ತಿಯಂಥವರಿಗೆ ಎಲ್ಲಾ ಹೊಣೆಯನ್ನು ನೀಡಲಾಗಿತ್ತು ಎಂದು ಬಿಜೆಪಿಯೊಳಗಿನ ಕೆಲವು ನಾಯಕರು ಹೇಳಿದ್ದಾರೆ.

* ಲ್ಲಾ ಪರಿಚಿತ ಮುಖಗಳನ್ನು ಮತ್ತೆ ನೋಡಲು ತುಂಬಾ ಖುಷಿಯೆನಿಸುತ್ತದೆ.

–ಮುಕುಲ್‌ ರಾಯ್‌, ಬಿಜೆಪಿ ತ್ಯಜಿಸಿ ಟಿಎಂಸಿ ಸೇರಿದ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು