ಸೋಮವಾರ, ಸೆಪ್ಟೆಂಬರ್ 27, 2021
22 °C
ಕೇಂದ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ಪ್ರಶ್ನೆ

‘ಹೊಸ ಐಟಿ ನಿಯಮಗಳ ಅವಶ್ಯಕತೆ ಏನಿತ್ತು: ಬಾಂಬೆ ಹೈಕೋರ್ಟ್ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ‘ಈ ಮೊದಲು ಚಾಲ್ತಿಯಲ್ಲಿದ್ದ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ರದ್ದುಪಡಿಸದೆಯೇ, ಹೊಸ ಪ್ರತ್ಯೇಕ ನಿಯಮಗಳನ್ನು ತರಾತುರಿಯಲ್ಲಿ ಜಾರಿಗೆ ತರುವ ಅವಶ್ಯ
ಕತೆ ಏನಿತ್ತು’ ಎಂದು ಕೇಂದ್ರ ಸರ್ಕಾರವನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.

ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ ವಿರುದ್ಧ ಆನ್‌ಲೈನ್ ಸುದ್ದಿತಾಣ ಲೀಫ್‌ಲೆಟ್ ಮತ್ತು ಪತ್ರಕರ್ತ ನಿಖಿಲ್ ವಾಗ್ಳೆ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ವೇಳೆ, ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರಿದ್ದ ಪೀಠವು ಸರ್ಕಾರಕ್ಕೆ ಈ ಪ್ರಶ್ನೆ ಕೇಳಿದೆ.

‘ಸಂವಿಧಾನವು ಕೊಡಮಾಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳು ಭಾರಿ ದುಷ್ಪರಿಣಾಮ ಬೀರುತ್ತವೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ವಿಧಿಸಲಾಗಿರುವ ನಿರ್ಬಂಧದ ವ್ಯಾಪ್ತಿಯನ್ನು ಮೀರಿ, ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಹೇರಲಾಗಿದೆ’ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

‘ಭಾರತೀಯ ಪ್ರೆಸ್ ಕೌನ್ಸಿಲ್ (ಪಿಸಿಐ) ನೀಡಿರುವ ನೀತಿಸಂಹಿತೆಗಳನ್ನು ಪತ್ರಕರ್ತರು ಪಾಲಿಸಬೇಕು’ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಹೇಳಿದರು. ಅವರ ವಾದವನ್ನು ಪೀಠವು ತಳ್ಳಿ ಹಾಕಿತು.

‘ಪಿಸಿಐ ಕೇವಲ ನೀತಿಸಂಹಿತೆಗಳನ್ನು ಹೇಳುತ್ತದೆ. ಅವನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ವಿಧಿಸಿ ಎಂದು ಹೇಳುವುದಿಲ್ಲ. ಪಿಸಿಐ ಮಾರ್ಗಸೂಚಿಗಳಿಗೆ ಅಷ್ಟೊಂದು ಪ್ರಾಮುಖ್ಯವನ್ನು ಹೇಗೆ ನೀಡುತ್ತೀರಿ? ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ದಂಡ ವಿಧಿಸುತ್ತೀರಾ? ಯೋಚಿಸುವ ಸ್ವಾತಂತ್ರ್ಯವಿಲ್ಲದೆ, ಏನನ್ನಾದರೂ ಅಭಿವ್ಯಕ್ತಿಪಡಿಸಲು ಹೇಗೆ ಸಾಧ್ಯ? ಬೇರೊಬ್ಬರ ಯೋಚನಾ ಲಹರಿಯನ್ನು ನೀವು ಹೇಗೆ ನಿರ್ಬಂಧಿಸುತ್ತೀರಿ’ ಎಂದು ಪೀಠವು ಸರ್ಕಾರವನ್ನು ಪ್ರಶ್ನಿಸಿತು.

‘ನೂತನ ನಿಯಮಗಳನ್ನು ಉಲ್ಲಂಘಿಸಿದವರನ್ನು ಕಠಿಣ ಶಿಕ್ಷೆಗ ಗುರಿ ಮಾಡಲಾಗುತ್ತದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಕ್ರಮ ತೆಗೆದುಕೊಳ್ಳಬೇಕಾದ ಸಮಿತಿ ಇನ್ನೂ ರಚನೆಯಾಗಿಲ್ಲ. ಹೀಗಾಗಿ ಹೆದರುವ ಅವಶ್ಯಕತೆ ಇಲ್ಲ’ ಎಂದು ಅನಿಲ್ ಸಿಂಗ್ ಹೇಳಿದರು. ಅವರ ವಾದವನ್ನು ಪೀಠವು ತಿರಸ್ಕರಿಸಿತು.

‘ಸಮಿತಿ ರಚನೆಯಾಗಿಲ್ಲ ಎಂದು ಹೇಳುತ್ತೀರಿ. ಆದರೆ ಅರ್ಜಿದಾರರ ನೆತ್ತಿಯ ಮೇಲೆ ಕತ್ತಿ ತೂಗುತ್ತಲೇ ಇರುತ್ತದೆ ಅಲ್ಲವೇ. ಕಳವಳ ಇರುವುದೇ ಅಲ್ಲಿ’ ಎಂದು ಪೀಠವು ಹೇಳಿತು.

‘ಮೂಲ ಕಾಯ್ದೆಯ ಜತೆಯಲ್ಲಿಯೇ ಹೊಸ ನಿಯಮಗಳು ಪ್ರತ್ಯೇಕ ಮತ್ತು ಪರ್ಯಾಯ ಕಾನೂನಿನಂತೆ ಕೆಲಸ ಮಾಡುತ್ತವೆ’ ಎಂದು ಅರ್ಜಿದಾರರ ಪರ ವಕೀಲರು ಪ್ರತಿಪಾದಿಸಿದರು. ಪೀಠವೂ ಸರ್ಕಾರದ ಮುಂದೆ ಈ ಪ್ರಶ್ನೆ ಇರಿಸಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು