ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನ್ ಹೋರಾಟ ಯಾರಿಗಾಗಿ? ಅಫ್ಗಾನಿಸ್ತಾನ ಹಾಳಾದರೆ ಲಾಭ ಯಾರಿಗೆ?: ಅಶ್ರಫ್ ಘನಿ

ಅಕ್ಷರ ಗಾತ್ರ

ಕಾಬೂಲ್:‌ ದೇಶದಲ್ಲಿ ಯುದ್ಧ ಪರಿಸ್ಥಿತಿ ಮುಂದುವರಿದಿರುವುದಕ್ಕೆ ತಾಲಿಬಾನ್‌ ಸಂಘಟನೆ ಹೊಣೆಯಾಗಿದೆ. ಅವರು ಹೋರಾಟ ಮಾಡುತ್ತಿರುವುದು ಯಾರಿಗಾಗಿ? ದೇಶ ವಿನಾಶವಾದರೆ ಯಾರಿಗೆ ಲಾಭ? ಎಂದು ಅಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿ ಪ್ರಶ್ನಿಸಿದ್ದಾರೆ. ದೇಶದಲ್ಲಿ ಹಿಂಸಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿ ಈ ರೀತಿ ಮಾತನಾಡಿದ್ದಾರೆ.

ಖೋಸ್ಟ್‌ ಪ್ರಾಂತ್ಯದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ, ಪ್ರಜಾತಂತ್ರ ಮತ್ತು ಸಹಬಾಳ್ವೆಯನ್ನು ಬೆಂಬಲಿಸಲು ದೇಶದ ಜನರು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದ್ದಾರೆ.

ಅಮೆರಿಕವು ತನ್ನ ಸೇನೆಯನ್ನು ಹಿಂಪಡೆದುಕೊಳ್ಳುವ ಪ್ರಕ್ರಿಯ ಆರಂಭಿಸಿದ ಬಳಿಕ ತಾಲಿಬಾನ್‌ ಉದ್ದೇಶಪೂರ್ವಕವಾಗಿ ಸರ್ಕಾರದ ವಿರುದ್ಧ ದಾಳಿಯನ್ನು ತೀವ್ರಗೊಳಿಸಿದೆ. ʼದೇಶದಲ್ಲಿ ಯುದ್ಧ ಪರಿಸ್ಥಿತಿ ಮುಂದುವರಿದಿರುವುದಕ್ಕೆ ತಾಲಿಬಾನ್‌ ಕಾರಣ. ಅವರು ಹೋರಾಟ ಮಾಡುತ್ತಿರುವುದು ಯಾರಿಗಾಗಿ? ಅಫ್ಗಾನಿಸ್ತಾನ ನಾಶವಾದರೆ, ಅಫ್ಗನ್ನರು ಕೊಲ್ಲಲ್ಪಟ್ಟರೆ ಯಾರಿಗೆ ಲಾಭವಾಗುತ್ತದೆ? ಎಂಬುದನ್ನು ತಾಲಿಬಾನ್‌ ಹೇಳಬೇಕುʼ ಎಂದು ಘನಿ ಒತ್ತಾಯಿಸಿದ್ದಾರೆ.

ʼತಾಲಿಬಾನ್‌ ಸಂಘಟನೆಯವರು ಅಫ್ಗಾನಿಸ್ತಾನಕ್ಕಾಗಿ ಹೋರಾಡುತ್ತಿದ್ದಾರೆಯೇ? ಅಥವಾ ದೇಶವನ್ನು ಬೇರೆಯವರ ನಿಯಂತ್ರಣದಲ್ಲಿರಿಸಲು ಬಯಸುತ್ತಿದ್ದಾರೆಯೇ ಎಂಬುದಕ್ಕೂ ಉತ್ತರಿಸಬೇಕುʼ ಎಂದು ಆಗ್ರಹಿಸಿದ್ದಾರೆ.

ʼನೀವು ಅಫ್ಗಾನಿಸ್ತಾನವನ್ನು ಪ್ರೀತಿಸುತ್ತೀರಿ ಎಂದಾದರೆ, ನೀವು ಡುರಾಂಡ್ ರೇಖೆಯನ್ನು ಒಪ್ಪಿಕೊಂಡಿಲ್ಲವೆಂದು ಮಾತುಕೊಡಿ. ಅಫ್ಗಾನಿಸ್ತಾನದ ನೀರನ್ನು ಬೇರೆಯವರಿಗೆ ಮಾರುವುದಿಲ್ಲವೆಂದು ಮಾತು ಕೊಡಿ. ನೀವು ಮತ್ತೊಬ್ಬರ ಸೇವೆ ಮಾಡುವುದಿಲ್ಲ ಎಂದು ವಚನ ನೀಡಿʼ ಎಂದು ತಾಲಿಬಾನ್‌ ಸಂಘಟನೆಯತ್ತ ಬೊಟ್ಟುಮಾಡಿ ಕೇಳಿದ್ದಾರೆ.

ಮುಂದುವರಿದು, ಸರ್ಕಾರವು ದೇಶದಲ್ಲಿ ಶಾಂತಿ ನೆಲೆಗೊಳಿಸಲು ಬಯಸುತ್ತದೆ ಮತ್ತು ಅದಕ್ಕಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದರೆ, ತಾಲಿಬಾನ್‌ ಹಿಂಸಾಚಾರವನ್ನು ಮುಂದುವರಿಸಿದೆ. ಅವರು (ತಾಲಿಬಾನ್‌) ಮಾತುಕತೆಗೆ ಬರಬೇಕು. ಹೊರಗಿನವರ ಮಾತು ಕೇಳಿ ತಮ್ಮದೇ ದೇಶವನ್ನು ನಾಶ ಮಾಡಿಕೊಳ್ಳಬಾರದುʼ ಎಂದು ಕಿವಿಮಾತು ಹೇಳಿದ್ದಾರೆ.

ಅಫ್ಗಾನಿಸ್ತಾನದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಯೋಜನೆ ಆರಂಭವಾಗಿದ್ದು, ಆಗಸ್ಟ್ 31ರಂದು ಪೂರ್ಣಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಹೇಳಿದ್ದರು.

ಅಂದಹಾಗೆ, ತಾಲಿಬಾನ್‌ ದೇಶದಾದ್ಯಂತ ಸಾಕಷ್ಟು ಜಿಲ್ಲೆಗಳನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿದೆ. ಸೇನೆ ವಾಪಸಾತಿ ಪ್ರಕ್ರಿಯೆ ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ನಾಗರಿಕ ಸರ್ಕಾರ ಪತನಗೊಂಡು, ತಾಲಿಬಾನ್‌ ಅಫ್ಗಾನಿಸ್ತಾನವನ್ನು ವಶಕ್ಕೆ ಪಡೆಯಲಿದೆ ಎಂದು ಯುಎಸ್‌ ಗುಪ್ತಚರ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT