ಬುಧವಾರ, ಮಾರ್ಚ್ 29, 2023
23 °C

ಲಾಲ್‌ಚೌಕ್ ಕಾರ್ಯಕ್ರಮದಿಂದ ದೂರ ಉಳಿದ ಅಬ್ದುಲ್ಲಾ, ಮುಫ್ತಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್‌ ಜೋಡೊ ಯಾತ್ರೆಯಲ್ಲಿ ಜಮ್ಮು–ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್‌ ಅಬ್ದುಲ್ಲಾ, ಒಮರ್‌ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ‍ಅವರು ಉತ್ಸಾಹದಿಂದಲೇ ಪಾಲ್ಗೊಂಡಿದ್ದರು.

ಆದರೆ, ಲಾಲ್‌ಚೌಕ್‌ನಲ್ಲಿ ಭಾನುವಾರ ನಡೆದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮದಿಂದ ಈ ಮೂವರು ಮಾಜಿ ಮುಖ್ಯಮಂತ್ರಿಗಳು ದೂರ ಉಳಿದಿದದ್ದು ಚರ್ಚೆಗೆ ಕಾರಣವಾಗಿದೆ.

ಶ್ರೀನಗರದಿಂದ ಲಖನ್‌ಪುರಕ್ಕೆ ತೆರಳಿದ್ದ ಫಾರೂಕ್‌ ಅಬ್ದುಲ್ಲಾ, ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ, ಅವರೊಂದಿಗೆ ಹೆಜ್ಜೆ ಹಾಕಿದ್ದರು. ಒಂದು ಹಂತದಲ್ಲಿ, ರಾಹುಲ್‌ ಗಾಂಧಿ ಅವರನ್ನು ಶಂಕರಾಚಾರ್ಯರಿಗೂ ಹೋಲಿಸಿ, ಹೊಗಳಿದ್ದರು.

ಬಹಿಹಾಲ್‌ನಲ್ಲಿ ನಡೆದ ಯಾತ್ರೆಯಲ್ಲಿ ಒಮರ್‌ ಅಬ್ದುಲ್ಲಾ ಪಾಲ್ಗೊಂಡಿದ್ದರು. ಮೆಹಬೂಬಾ ಮುಫ್ತಿ ಹಾಗೂ ಅವರ ಮಗಳು ಇಲ್ತಿಜಾ ಮುಫ್ತಿ ಅವರು ಆವಂತಿಪೊರಾದಲ್ಲಿ ನಡೆದ ಪಾದಯಾತ್ರೆಯಲ್ಲಿ ರಾಹುಲ್‌ ಅವರಿಗೆ ಸಾಥ್‌ ನೀಡಿದ್ದರು.

‘ಕಾಶ್ಮೀರ ಮೂಲದ ರಾಜಕೀಯ ಪಕ್ಷಗಳ ನಾಯಕರು ರಾಹುಲ್‌ ಗಾಂಧಿ ಅವರೊಂದಿಗೆ ಹೆಜ್ಜೆಹಾಕಿದ್ದರು. ಭಾನುವಾರ ಲಾಲ್‌ಚೌಕ್‌ನಲ್ಲಿನಡೆದ ತ್ರಿವರ್ಣ ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು’ ಎಂದು ಹಿರಿಯ ಪತ್ರಕರ್ತ ಅಹ್ಮದ್‌ ಅಲಿ ಫಯ್ಯಾಜ್‌ ಟ್ವೀಟ್‌ ಮಾಡಿದ್ದಾರೆ.

ಜಮ್ಮು–ಕಾಶ್ಮೀರ ಧ್ವಜವನ್ನು ಆರೋಹಣ ಮಾಡಲು ಅನುಮತಿ ನೀಡಿದರೆ ಮಾತ್ರ ತ್ರಿವರ್ಣ ಧ್ವಜಾರೋಹಣ ನೆರವೇರಿಸುವುದಾಗಿ ಮೆಹಬೂಬಾ ಮುಫ್ತಿ ಅವರು ಬಹಿರಂಗವಾಗಿಯೇ ಹೇಳುತ್ತಿದ್ದರು. ಈ ವಿಷಯದ ಬಗ್ಗೆ ಅಬ್ದುಲ್ಲಾ ಮಾತನಾಡಲಿಲ್ಲ.

‘ಒಂದು ವೇಳೆ, ಲಾಲ್‌ಚೌಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಾರೂಕ್‌ ಅಬ್ದುಲ್ಲಾ ಅಥವಾ ಒಮರ್‌ ಅಬ್ದುಲ್ಲಾ ಪಾಲ್ಗೊಂಡಿದ್ದರೆ, ಆಗ ಆ ವಿದ್ಯಮಾನವು ಮೆಹಬೂಬಾ ಮುಫ್ತಿ ಅವರಿಗೆ ರಾಜಕೀಯವಾಗಿ ಭಾರಿ ಲಾಭ ತಂದುಕೊಡುತ್ತಿತ್ತು. ಈ ಕಾರಣಕ್ಕಾಗಿಯೇ ಅಬ್ದುಲ್ಲಾಗಳು ಕಾರ್ಯಕ್ರಮದಿಂದ ದೂರ ಉಳಿದರು’ ಎಂದು ರಾಜಕೀಯ ವಿಶ್ಲೇಷಕ ಮಜೀದ್‌ ಹೈದರಿ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು