ಮಂಗಳವಾರ, ಸೆಪ್ಟೆಂಬರ್ 21, 2021
22 °C

ಉತ್ತರ ಪ್ರದೇಶ ಚುನಾವಣೆ| ಸಣ್ಣ ಪಕ್ಷಗಳ ಜತೆ ಕಾಂಗ್ರೆಸ್‌ ಮೈತ್ರಿ: ಅಜಯ್‌ಕುಮಾರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಉತ್ತರ ಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಸಣ್ಣ ಪಕ್ಷಗಳೊಂದಿಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳಲಿದೆ. ದೊಡ್ಡ ಪಕ್ಷಗಳೊಂದಿಗೆ ಕೈ ಜೋಡಿಸುವ ಬಗ್ಗೆ ಚಿಂತನೆಯನ್ನೂ ಮಾಡುವುದಿಲ್ಲ’ ಎಂದು ಉತ್ತರ ಪ್ರದೇಶದ ಕಾಂಗ್ರೆಸ್‌ ಮುಖ್ಯಸ್ಥ ಅಜಯ್‌ಕುಮಾರ್ ಲಲ್ಲು ಭಾನುವಾರ ತಿಳಿಸಿದರು.

‘ಕಳೆದ 32 ವರ್ಷಗಳಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿ ಇಲ್ಲದಿದ್ದಾಗ ಬಿಜೆಪಿ, ಬಿಎಸ್‌ಪಿ, ಎಸ್‌ಪಿ ಉತ್ತರ ಪ್ರದೇಶದಲ್ಲಿ ಆಳ್ವಿಕೆ ನಡೆಸಿವೆ. ಆದರೆ, ಈ ಪಕ್ಷಗಳು ಜನರ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಸರ್ಕಾರ ರಚಿಸಲು ಸಿದ್ಧವಾಗಿದೆ’ ಎಂದು ಅವರು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್‌ ಪ್ರಮುಖ ಎದುರಾಳಿಯಾಗಿದೆ. ಕಾಂಗ್ರೆಸ್‌ ಮೇಲೆ ಜನರ ಕಣ್ಣಿದೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಾಯಕತ್ವದಲ್ಲಿ ಪಕ್ಷವು ಚುನಾವಣೆ ಗೆಲ್ಲುತ್ತದೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಉತ್ತರ ಪ್ರದೇಶ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತಿರುವ ಪ್ರಿಯಾಂಕಾ ಗಾಂಧಿ ಅವರ ಮೇಲ್ವಿಚಾರಣೆಯಲ್ಲಿ ಕಾಂಗ್ರೆಸ್‌ ಚುನಾವಣೆ ಎದುರಿಸಲಿದೆ. ಮುಖ್ಯಮಂತ್ರಿ ಕುರಿತಾಗಿ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ’ ಎಂದು ಅವರು ಹೇಳಿದರು.

‘ಬಿಜೆಪಿ ಗದ್ದಿ ಚೋಡೋ’ (ಬಿಜೆಪಿ ಅಧಿಕಾರ ಬಿಡಿ) ಅಭಿಯಾನದ ಉದಾಹರಣೆ ನೀಡಿದ ಅಜಯ್‌ ಕುಮಾರ್‌,‘ 90 ಲಕ್ಷ ಜನರೊಂದಿಗೆ ನೇರ ಸಂವಾದ ನಡೆಸುವ ನಿಟ್ಟಿನಲ್ಲಿ ಕಳೆದ ತಿಂಗಳು ಗ್ರಾಮ ಪಂಚಾಯತ್‌ ಮತ್ತು ವಾರ್ಡ್‌ಗಳಲ್ಲಿ ಕಾಂಗ್ರೆಸ್ ನಾಯಕರು ಮೂರು ದಿನಗಳನ್ನು ಕಳೆದರು. ಬೆಲೆ ಏರಿಕೆ, ನಿರುದ್ಯೋಗ, ರೈತರ ಸಂಕಷ್ಟ, ಬಡತನ, ಮೀಸಲಾತಿ, ಮಹಿಳೆಯರ ಭದ್ರತೆ, ಪ್ರಜಾಪ್ರಭುತ್ವದ ಕಗ್ಗೊಲೆ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಜನರಿಗೆ ಬಿಜೆಪಿ ಮೇಲೆ ಆಕ್ರೋಶವಿದೆ. ಸಾಮಾನ್ಯ ಜನರು ಕಾಂಗ್ರೆಸ್‌ನೊಂದಿಗೆ ಇದ್ದಾರೆ’ ಎಂದು ಅವರು  ತಿಳಿಸಿದರು.

ಜಾತಿಗಣತಿ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,‘ ಕಾಂಗ್ರೆಸ್‌ ಪಕ್ಷವು ಜಾತಿ ಗಣತಿಯ ಪರವಾಗಿದೆ. ಯುಪಿಎ ಆಡಳಿತದಲ್ಲಿದ್ದಾಗ ಕಾಂಗ್ರೆಸ್‌ ಜಾತಿಗಣತಿಯನ್ನು ನಡೆಸಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಜಾತಿಗಣತಿಯನ್ನು ನಿಲ್ಲಿಸಿತು. ಬಿಜೆಪಿ ಜಾತಿಗಣತಿಯ ಪರವಾಗಿಲ್ಲ’ ಎಂದು ಅವರು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು