ಸೋಮವಾರ, ಮೇ 17, 2021
21 °C

ನೂರಕ್ಕೂ ಅಧಿಕ ಜನರಿಂದ 5000 ಬಾರಿ ಅತ್ಯಾಚಾರ: ಹೈದರಾಬಾದ್‌ ಸಂತ್ರಸ್ತೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಮಹಿಳೆಯೊಬ್ಬರು ತಮ್ಮ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ 139 ಮಂದಿ ವಿರುದ್ಧ ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ತನ್ನ ದೂರಿನಲ್ಲಿ ಉಲ್ಲೇಖಿಸಿರುವವರ ಪೈಕಿ ಹಲವರು ಮಹಿಳೆಯರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಂಜಗುಟ್ಟ ಪೊಲೀಸ್‌ ಠಾಣೆಯಲ್ಲಿ ಗುರುವಾರ ಈ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಸದಸ್ಯರು, ವೈದ್ಯರು, ಚಿನ್ನಾಭರಣ ಮಾರಾಟಗಾರರು, ಪತ್ರಕರ್ತರು, ಸಿನಿಮಾ ಕ್ಷೇತ್ರದವರು, ಕುಟುಂಬಸ್ಥರ ಹೆಸರುಗಳು ಇವೆ. ಇದರಲ್ಲಿ ಕೆಲವರು ಬೆಂಗಳೂರು ಮತ್ತು ಅಮೆರಿಕದಲ್ಲಿ ಇರುವುದಾಗಿ ಹೇಳಲಾಗಿದೆ.

ಇದನ್ನೂ ಓದಿ: 

ಇದಲ್ಲದೇ, ಹೆಸರೇ ಇಲ್ಲದ ಹಲವರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ.

‘ನಿರುದ್ಯೋಗಿಯಾಗಿರುವ ಮಹಿಳೆಯು 2009ರಲ್ಲಿ ಮರಿಯಲಗುಡ್ಡ ಎಂಬಲ್ಲಿನ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದರು. ಮೊದಲಿಗೆ ಪತಿಯ ಮನೆಯವರಿಂದ ಲೈಂಗಿಕ ದೌರ್ಜನ್ಯ, ಹಿಂಸೆ ಆರಂಭವಾಯಿತು. ಹೀಗಾಗಿ 2010ರಲ್ಲಿ ಪತಿಯಿಂದ ವಿಚ್ಚೇದನ ಪಡೆದ ಮಹಿಳೆಯು ಕಾಲೇಜಿಗೆ ಸೇರಿ, ವಿದ್ಯಾಭ್ಯಾಸ ಆರಂಭಿಸಿದ್ದರು,’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಇದಾದ ನಂತರ, ಆಕೆ ಮೇಲೆ ಹಲವಾರು ಪುರುಷರು 5,000 ಬಾರಿ ಅತ್ಯಾಚಾರ ಮಾಡಿದ್ದಾರೆ. ಮಹಿಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾರೆ. ಆಕೆ ಮೇಲಿನ ಲೈಂಗಿಕ ದೌರ್ಜನ್ಯವನ್ನು, ಆಕೆಯೊಂದಿಗಿನ ಆಕ್ಷೇಪಾರ್ಹ ಭಂಗಿಗಳನ್ನು ವಿಡಿಯೊ ಚಿತ್ರಿಕರಣ ಮಾಡಲಾಗಿದೆ. ಅಲ್ಲದೆ, ಜಾತಿಯ ಹೆಸರಿನಲ್ಲಿ ನಿಂದಿಸಲಾಗಿದೆ,’ ಎಂಬ ಶೋಚನೀಯ ವಿಚಾರ ಎಫ್‌ಐಆರ್‌ನಿಂದ ತಿಳಿದು ಬಂದಿದೆ.

‘ನನ್ನ ಮೇಲೆ ದೌರ್ಜನ್ಯವೆಸಗಿರುವ ಪುರುಷರು ಕೊಲೆ ಬೆದರಿಯನ್ನೂ ಹಾಕಿದ್ದಾರೆ. ಆಸಿಡ್ ಮತ್ತು ಪೆಟ್ರೋಲ್ ಸುರಿದು ಚಿತ್ರಹಿಂಸೆ ನೀಡಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ,’ ಎಂದು ಮಹಿಳೆ ಹೇಳಿದ್ದಾರೆ. ‘ಅರೋಪಿಗಳು ಆನ್‌ಲೈನ್ ಲೈಂಗಿಕ ದಂಧೆ ನಡೆಸುತ್ತಿದ್ದಾರೆ. ನನ್ನಂತೆ ಅನೇಕ ಹುಡುಗಿಯರು ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ,’ ಎಂದು ಮಹಿಳೆ ಆರೋಪಿಸಿದ್ದಾರೆ.

‘ಮಹಿಳೆಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಆಕೆಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು. ಮಹಿಳೆಯ ದೂರಿಗೆ ಸಂಬಂಧಿಸಿದಂತೆ ಸಾಕ್ಷಿಗಳನ್ನು ಕಲೆಹಾಕಲಾಗುತ್ತಿದೆ,’ ಎಂದು ಪಂಜಗುಟ್ಟ ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯರ ಮೇಲಿನ ದೌರ್ಜನ್ಯ, ಜಾತಿ ನಿಂದನೆ ಪ್ರಕರಣಗಳನ್ನು ಮಹಿಳೆಯ ದೂರಿನ ಆಧಾರದಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು