ಸೋಮವಾರ, ಸೆಪ್ಟೆಂಬರ್ 26, 2022
24 °C

ಉತ್ತರ ಪ್ರದೇಶ: ಯೋಗಿ ಸಂಪುಟದ ಸಚಿವ ನಿಶಾದ್‌ಗೆ ಜಾಮೀನು ರಹಿತ ವಾರಂಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ : ಯೋಗಿ ಆದಿತ್ಯನಾಥ ಸರ್ಕಾರದ ಸಂಪುಟ ದರ್ಜೆ ಸಚಿವ, ಬಿಜೆಪಿ ಮಿತ್ರ ಪಕ್ಷ ನಿಶಾದ್‌ ಪಾರ್ಟಿಯ ಅಧ್ಯಕ್ಷರೂ ಆದ ಸಚಿವ ಸಂಜಯ್‌ ನಿಶಾದ್ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಿರುವ ಗೋರಖಪುರ ನ್ಯಾಯಾಲಯ, ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸುವಂತೆ ಆದೇಶಿಸಿದೆ.

ಏಳು ವರ್ಷಗಳ ಹಿಂದೆ ನಿಶಾದ್ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಸಮನ್ಸ್‌ ಜಾರಿ ಮಾಡಿದರೂ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಾರಣ ಸಿಜೆಎಂ ಜಗನ್ನಾಥ್‌ ಅವರು ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದ್ದಾರೆ. 
 
ಸಮುದಾಯದ ಮೀಸಲಾತಿಗೆ ಒತ್ತಾಯಿಸಿ ರೈಲ್ವೆ ಹಳಿಗಳ ಮೇಲೆ ಧರಣಿ ನಡೆಸುತ್ತಿದ್ದ ವೇಳೆ ನಿಶಾದ್ ಮತ್ತು ಪೊಲೀಸರ ನಡುವೆ ಹಿಂಸಾಚಾರ ಮತ್ತು ಘರ್ಷಣೆ ಉಂಟಾಗಿತ್ತು.  2015ರಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಪ್ರತಿಭಟನಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರು. ಗೋರಖಪುರ ಜಿಲ್ಲೆಯ ಸಹಜನ್ವಾನ್ ಪೊಲೀಸ್‌ ಠಾಣೆಯಲ್ಲಿ ಸಂಜಯ್ ನಿಶಾದ್‌ ಸೇರಿದಂತೆ 36 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ನಿಶಾದ್‌ಗೆ ಜಾಮೀನು ಮಂಜೂರಾಗಿತ್ತು.
 
‘ಸಚಿವರು ನ್ಯಾಯಾಲಯದ ನಿರ್ದೇಶನಗಳನ್ನು ಪಾಲನೆ ಮಾಡುವರು’ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
 
ನಿಶಾದ್ ಪಕ್ಷವು ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ನಂತರ ಅವರು ಯೋಗಿ ಸರ್ಕಾರದಲ್ಲಿ ಕ್ಯಾಬಿನಟ್‌ ಸಚಿವರಾಗಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು