ಮಂಗಳವಾರ, ಜೂನ್ 22, 2021
24 °C

ವೈದ್ಯಕೀಯ ಪರಿಕರಗಳ ಮೂಲ: ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾ ಪೀಡಿತರಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿರುವ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಘಟಕದ ಅಧ್ಯಕ್ಷ ಬಿ.ವಿ. ಶ್ರೀನಿವಾಸ್‌ ಹಾಗೂ ಕಾರ್ಯಕರ್ತರನ್ನು ದೆಹಲಿ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಪೊಲೀಸರು ಶುಕ್ರವಾರ ವಿಚಾರಣೆಗೆ ಒಳಪಡಿಸಿದ್ದಾರೆ.

‘ಮಾನವೀಯ ನೆರವಿನ ನೆಪದಲ್ಲಿ ರೆಮ್‌ಡಿಸಿವಿರ್‌ ಇಂಜಕ್ಷನ್‌, ಆಮ್ಲಜನಕ ಸಿಲಿಂಡರ್‌ಗಳು ಮತ್ತು ಚಿಕಿತ್ಸಾ ಪರಿಕರಗಳನ್ನು ಕೊರೊನಾ ಪೀಡಿತರಿಗೆ ನೀಡಲಾಗುತ್ತಿದೆ. ಜನಸಾಮಾನ್ಯರಿಗೆ ನೇರವಾಗಿ ದೊರೆಯದ ಈ ಪರಿಕರಗಳು ನಿಮಗೆ ಎಲ್ಲಿಂದ ಸಿಗುತ್ತಿವೆ’ ಎಂದು ಪೊಲೀಸರು ವಿಚಾರಣೆ ವೇಳೆ ಪ್ರಶ್ನಿಸಿದ್ದಾರೆ.

‘ರಾಜಕಾರಣಿಗಳು ಕೊರೊನಾ ಪೀಡಿತರಿಗೆ ಔಷಧಿ ಹಾಗೂ ಇತರ ವಸ್ತುಗಳನ್ನು ಅಕ್ರಮವಾಗಿ ವಿತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಆರೋಪಿಸಿ ಡಾ.ದೀಪಕ್ ಸಿಂಗ್ ಎಂಬುವವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಕಾಂಗ್ರೆಸ್‌ ಮುಖಂಡರಾದ ಪ್ರಿಯಾಂಕಾ ಗಾಂಧಿ, ಶ್ರೀನಿವಾಸ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು.

ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಈ ಸಂಬಂಧ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿತ್ತು.

ಆಮ್‌ ಆದ್ಮಿ ಪಕ್ಷ (ಎಎಪಿ)ದ ಶಾಸಕ ದಿಲೀಪ್ ಪಾಂಡೆ, ಬಿಜೆಪಿಯ ದೆಹಲಿ ಘಟಕದ ವಕ್ತಾರ ಹರೀಶ್ ಖುರಾನಾ ಅವರನ್ನೂ ಈ ಮೊದಲು ವಿಚಾರಣೆಗೆ ಒಳಪಡಿಸಿದ್ದ ಪೊಲಿಸರು, ವೈದ್ಯಕೀಯ ಪರಿಕರಗಳ ಮೂಲವನ್ನು ಪ್ರಶ್ನಿಸಿದ್ದರು.

ತಮ್ಮ ಪತ್ನಿಯ ಚಿಕಿತ್ಸೆಗಾಗಿ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ ಹಾಗೂ ದೆಹಲಿಯ ಮಾಜಿ ಶಾಸಕ ಮುಖೇಶ್ ಶರ್ಮಾ ಅವರ ನೆರವಿನಿಂದ ರೆಮ್‌ಡಿಸಿವಿರ್‌ ಇಂಜಕ್ಷನ್‌ ಪಡೆದಿದ್ದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ಮಾಜಿ ಸಂಸದ ಶಾಹಿದ್ ಸಿದ್ದಿಕ್‌ ಅವರೂ ಪೊಲೀಸರ ವಿಚಾರಣೆ ಎದುರಿಸಿದ್ದಾರೆ.

‘ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಅಪರಾಧ ದಳದ ಪೊಲೀಸ್‌ ಸಿಬ್ಬಂದಿ ನನ್ನಿಂದ ಕೆಲವು ವಿವರ ಪಡೆದಿದ್ದಾರೆ. ಸಾಮಾಜಿಕ ಕಾರ್ಯ ಮಾಡುತ್ತಿರುವ ನಮಗೆ ಭಯವಿಲ್ಲ. ನಮ್ಮ ಮಾನವೀಯ ಕಾರ್ಯ ನಿಲ್ಲುವುದೂ ಇಲ್ಲ’ ಎಂದು ಕನ್ನಡಿಗ, ಭದ್ರಾವತಿ ಮೂಲದ ಬಿ.ವಿ. ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪೊಲೀಸರ ಮೂಲಕ ಬೆದರಿಕೆ ಒಡ್ಡಿ, ಮಾನವೀಯ ಸೇವೆಯಲ್ಲಿ ತೊಡಗಿರುವ ಕಾಂಗ್ರೆಸ್‌ನ ಯುವ ಕಾರ್ಯಕರ್ತರನ್ನು ತಡೆಯಲಾಗದು ಎಂದು ಪಕ್ಷದ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು