ಸೋಮವಾರ, ಮಾರ್ಚ್ 30, 2020
19 °C

ಸಿಂಗಪುರ ವೇದಿಕೆಯಲ್ಲಿನಮ್ಮೂರ ನಾಟ್ಯ ಪ್ರತಿಭೆ

ಲಕ್ಷ್ಮೀನಾರಾಯಣ ಹೆಗಡೆ ಕಲಗಾರು. Updated:

ಅಕ್ಷರ ಗಾತ್ರ : | |

Prajavani

ಅವರು ಭರತನಾಟ್ಯ ಕಲಾವಿದೆ. ಯಕ್ಷಗಾನ ಪ್ರದರ್ಶನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಚಿತ್ರ ಬರೆಯುತ್ತಾರೆ. ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ನೃತ್ಯಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಈ ಯುವ ಪ್ರತಿಭೆ, ದೂರದ ಸಿಂಗಪುರದ ಜನರಿಗೆ ನಮ್ಮ ದೇಶದ ಭರತನಾಟ್ಯ ಮತ್ತು ಯಕ್ಷಗಾನ ಪರಿಚಯಿಸುತ್ತಿದ್ದಾರೆ.

ಅವರ ಹೆಸರು ಶ್ರೀಲೇಖಾ ಚಂದ್ರಶೇಖರ. ಶಿವಮೊಗ್ಗ ಜಿಲ್ಲೆಯ ನಿಟ್ಟೂರಿನ ಕೊಳಕಿಯವರು. ಚಂದ್ರಶೇಖರ್ – ಸಂಧ್ಯಾ ದಂಪತಿಯ ಪುತ್ರಿ. ಚಂದ್ರಶೇಖರ್ ಉದ್ಯೋಗ ನಿಮಿತ್ತ ಸಿಂಗಪುರಕ್ಕೆ ಹೋಗಿ ಅಲ್ಲೇ ನೆಲೆಸಿದರು. ಹೀಗಾಗಿ ಶ್ರೀಲೇಖಾ ಅವರ ಹುಟ್ಟು, ಬೆಳವಣಿಗೆ, ಶಿಕ್ಷಣ ಎಲ್ಲವೂ ಸಿಂಗಪುರದಲ್ಲೇ ನಡೆಯಿತು. ವಿದೇಶದಲ್ಲಿದ್ದರೂ, ಭಾರತೀಯ ಕಲೆ, ಸಂಸ್ಕೃತಿಯನ್ನು ಆರಾಧಿಸುತ್ತಿದ್ದ ಶ್ರೀಲೇಖಾ, ಹನ್ನೊಂದು ವರ್ಷಗಳಿಂದ ಭರತನಾಟ್ಯ ಕಲಿಯುತ್ತಿದ್ದಾರೆ.

ಸಿಂಗಪುರ ಇಂಡಿಯನ್‌ ಫೈನ್‌ ಆರ್ಟ್ಸ್‌ನಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ಅವರು ಖ್ಯಾತ ಭರತನಾಟ್ಯ ಕಲಾವಿದೆ ಪಿ.ಎನ್‌.ವಿಕಾಸ್ ಅವರ ಶಿಷ್ಯೆ. ಶ್ರೀಲೇಖಾ ಅವರ ಭರತನಾಟ್ಯ ರಂಗಪ್ರವೇಶ, ಭಾರತದಲ್ಲೇ ನಡೆಯಬೇಕೆಂದು, ಕುಟುಂಬದವರ ಅಭಿಲಾಷೆಯಾಗಿತ್ತು. ಅದರಂತೆ, 2017ರಲ್ಲಿ ಬೆಂಗಳೂರಿಗೆ ಬಂದು, ಮಲ್ಲೇಶ್ವರದ ಶ್ರೀಕೃಷ್ಣದೇವರಾಯ ಕಲಾಮಂದಿರದಲ್ಲಿ ಗುರು ಗಾಯತ್ರಿ ಶ್ರೀರಾಂ ಅವರ ಮಾರ್ಗದರ್ಶನದಲ್ಲಿ ರಂಗಪ್ರವೇಶ ಪೂರೈಸಿದರು.

ನೃತ್ಯ, ಯಕ್ಷಗಾನ ಪರಿಚಯ
ಭರತನಾಟ್ಯದ ಆಂಗಿಕ ಪ್ರಾಕಾರಗಳು, ಅಭಿನಯವನ್ನು ಮೈಗೂಡಿಸಿಕೊಂಡಿರುವ ಶ್ರೀಲೇಖಾ ತನ್ನ ವೈವಿಧ್ಯಮಯ ನೃತ್ಯದಿಂದಾಗಿ ಸಿಂಗಪುರದ ನೃತ್ಯಾಭಿಮಾನಿಗಳ ಗಮನ ಸೆಳೆದಿದ್ದಾರೆ. ಅಲ್ಲಿನ ಜನತೆಗೆ ಭರತನಾಟ್ಯ, ಸಮೂಹ ನೃತ್ಯ, ಯಕ್ಷಗಾನದ ಸವಿ ಉಣಿಸಿದ್ದಾರೆ. ಸಿಂಗಪುರದ ಮುದ್ರಾ ಸೊಸೈಟಿ, ಚಾಂಗ್‌ ಪಾಂಗ್ ಕಮ್ಯುನಿಟಿ ಸೆಂಟರ್ ನ ಮಲ್ಟಿರೇಷಿಯಲ್ ಕಾರ್ಯಕ್ರಮ, ಸಿಫಾಸ್‍ನ ಕಲಾ ಉತ್ಸವಮ್, ಅಲ್ಲಿನ ಕನ್ನಡ ಸಂಘ ಸೇರಿದಂತೆ ಹಲವೆಡೆ ಯಕ್ಷಗಾನ ಪ್ರದರ್ಶಿಸಿದ್ದಾರೆ.

ಸಿಂಗಪುರ ಫೈನ್ ಆರ್ಟ್ಸ್‌ ಸೊಸೈಟಿಯಲ್ಲಿ ಹಿಂದೂಸ್ತಾನಿ ಗಾಯನ ಅಭ್ಯಾಸಮಾಡುತ್ತಿರುವ ಅವರು ನೃತ್ಯದ ಜತೆ ಚಿತ್ರಕಲೆಯಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಮಾತ್ರವಲ್ಲ, ವೈವಿಧ್ಯಮಯ ಚಿತ್ರಗಳನ್ನು ರಚಿಸಿ, ಪ್ರದರ್ಶನ ಏರ್ಪಡಿಸಿದ್ದಾರೆ.

ನೃತ್ಯೋತ್ಸವ, ಪುರಸ್ಕಾರಗಳು
ಶ್ರೀಲೇಖಾ ಬೆಂಗಳೂರಿನಲ್ಲಿ ನಡೆದ ಎನ್‍ಆರ್‍ಐ ಕ್ಲಾಸಿಕಲ್ ನೃತ್ಯೋತ್ಸವ-2017, ತಮಿಳುನಾಡಿನ ಚಿದಂಬರ್ನಲ್ಲಿ ನಾಟ್ಯಾಂಜಲಿ ಉತ್ಸವ –2018, ಒಡಿಶಾದ ಭುವನೇಶ್ವರದಲ್ಲಿ ನಡೆದ ಅಂತರಾಷ್ಟ್ರೀಯ ನೃತ್ಯೋತ್ಸವ–2018 ದಲ್ಲಿ ಪಾಲ್ಗೊಂಡಿದ್ದಾರೆ. 2018ರ ಡಿಸೆಂಬರ್‍ಲ್ಲಿ ಉಡುಪಿಯ ಶ್ರೀಕೃಷ್ಣ ಮಠದ ವಸಂತಮಂಟಪದಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.

ಎಂಟನೇ ವಯಸ್ಸಿನಲ್ಲೇ ಸಿಂಗಪುರ ರಾಷ್ಟ್ರೀಯ ಮಟ್ಟದ ಭರತಮ್ ನೃತ್ಯ ಸ್ಪರ್ಧಯಲ್ಲಿ ಪ್ರಥಮಸ್ಥಾನ ಪಡೆದ ಅತ್ಯಂತ ಕಿರಿಯ ಬಾಲಕಿ ಎಂಬ ಹೆಗ್ಗಳಿಕೆಗೆ ಶ್ರೀಲೇಖಾ ಪಾತ್ರರಾಗಿದ್ದಾರೆ. 2015 ಮತ್ತು 2018 ರ ಜಿಐಐಎಸ್ ಕೋ ಕರಿಕ್ಯುಲರ್ ಎಕ್ಸೆಲೆನ್ಸ್ ಜಸ್ಟಿಸ್ ಧರ್ಮಾಧಿಕಾರಿ ಅವಾರ್ಡ್, ಪ್ರವಾಸಿ ಎಕ್ಸ್ಪ್ರೆಸ್, ಪಾಪನಾಶ ಶಿವನ್, ಡ್ಯಾನ್ಸಿಂಗ್ ಸ್ಟಾರ್ಸ್ ಆಫ್ ಸಿಂಗಪುರ್, ಸೇರಿದಂತ ಹಲವು ನೃತ್ಯ ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಗಳಿಸಿದ್ದಾಳೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು