ಭಾನುವಾರ, ಏಪ್ರಿಲ್ 11, 2021
30 °C

ಯುರೇನಿಯಂ ಪುಷ್ಟೀಕರಣ: ಎಚ್ಚರಿಕೆ, ಇರಾನ್‌ ಮೇಲೆ ಮತ್ತಷ್ಟು ನಿರ್ಬಂಧ ಸಾಧ್ಯತೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: 2015ರ ಅಣು ಒಪ್ಪಂದ ಮೀರಿ ಯುರೇನಿಯಂ ಪುಷ್ಟೀಕರಣ(ಶಕ್ತಿ ವೃದ್ಧಿಸುವುದು)ನಡೆಸಿರುವ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. 

‘ಇರಾನ್‌ ಎಚ್ಚರದಿಂದಿರಲಿ. ನೀವು ಯುರೇನಿಯಂ ಪುಷ್ಟೀಕರಿಸುತ್ತಿರುವುದು ಒಂದೇ ಕಾರಣಕ್ಕಾಗಿ. ಆ ಕಾರಣ ಏನು ಎಂದು ನಾನು ಹೇಳಬೇಕಾಗಿಲ್ಲ. ಆದರೆ ಇದು ಸರಿಯಲ್ಲ’ ಎಂದು ನ್ಯೂಜೆರ್ಸಿಯಲ್ಲಿ ವರದಿಗಾರರಿಗೆ ಟ್ರಂಪ್‌ ತಿಳಿಸಿದ್ದಾರೆ. 

ಇರಾನ್‌ ನಡೆ ಕುರಿತು ಭಾನುವಾರ ಪ್ರತಿಕ್ರಿಯೆ ನೀಡಿದ್ದ, ಅಮೆರಿಕ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಮೈಕ್‌ ಪಾಂಪಿಯೋ, ‘ಒಪ್ಪಂದ ಮೀರಿದ ಇರಾನ್‌ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸುತ್ತೇವೆ’ ಎಂದಿದ್ದರು. 2015ರ ಒಪ್ಪಂದದ ಪ್ರಕಾರ ಶೇ 3.67 ಪುಷ್ಟೀಕರಣ ಪರಿಮಿತಿಯನ್ನು ವಿಧಿಸಲಾಗಿತ್ತು. 

ಶೇ 4.5 ಪುಷ್ಟೀಕರಣ: ಯುರೇನಿಯಂ ಪುಷ್ಟೀಕರಣ ಮಿತಿ ಶೇ.4.5 ದಾಟಿದೆ ಎಂದು ಇರಾನ್‌ ಅಣು ಇಂಧನ ಸಂಸ್ಥೆ ವಕ್ತಾರ ಬೆಹರೌಜ್‌ ಕಮಲ್ವಂಡಿ ತಿಳಿಸಿದ್ದಾರೆ ಎಂದು ಐಎಸ್‌ಎನ್‌ಎ ಸುದ್ದಿಸಂಸ್ಥೆ ವರದಿ ಮಾಡಿದೆ. ‘ಇಷ್ಟು ಶುದ್ಧವಾದ ಯುರೇನಿಯಂ ದೇಶದ ವಿದ್ಯುತ್‌ ಘಟಕದ ಅಗತ್ಯವನ್ನು ಪೂರೈಸುತ್ತದೆ’ ಎಂದು ಕಮಲ್ವಾಂಡಿ ಉಲ್ಲೇಖಿಸಿದ್ದಾರೆ. 

ಶ್ವೇತಭವನ ಟೀಕಿಸಿದ್ದಕ್ಕೆ ಟ್ರಂಪ್‌ ಆಕ್ರೋಶ
ಅಮೆರಿಕದಲ್ಲಿನ ಬ್ರಿಟನ್‌ ರಾಯಭಾರಿ ಅಮೆರಿಕದ ಅಧ್ಯಕ್ಷರು ಮತ್ತು ಶ್ವೇತಭವನವನ್ನು ‘ಅಸಮರ್ಥ’ ಮತ್ತು ‘ಸಾಟಿ ಇಲ್ಲದ ನಿಷ್ಕ್ರಿಯ’ ಎಂದು ಟೀಕೆ ಮಾಡಿದ್ದಕ್ಕೆ ಡೊನಾಲ್ಡ್ ಟ್ರಂಪ್ ಅವರು ಬ್ರಿಟನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಹಸ್ಯವಾಗಿರಬೇಕಾಗಿದ್ದ ರಾಯಭಾರಿ ಟೀಕೆ ಸೋರಿಕೆಯಾದ ಬಗ್ಗೆ ಬ್ರಿಟನ್‌ ತನಿಖೆಗೆ ಆದೇಶಿಸಿದೆ.

ರಾಯಭಾರಿ ಕಿಮ್‌ ಡರೋಚ್ ಅವರೇನು ಬ್ರಿಟನ್‌ಗಾಗಿ ಸರಿಯಾಗಿ ಕೆಲಸ ಮಾಡಲಿಲ್ಲ ಎಂದಿರುವ ಟ್ರಂಪ್, ತಾವು ಮತ್ತು ತಮ್ಮ ಆಡಳಿತ ಬ್ರಿಟನ್‌ ರಾಯಭಾರಿಯ ಅಭಿಮಾನಿಯೇನಾಗಿರಲಿಲ್ಲ ಎಂದು ಹೇಳಿದ್ದಾರೆ.

ಟ್ರಂಪ್ ಆಡಳಿತವು ‘ನಶಿಸಿಹೋಗತಕ್ಕುದು’ ಮತ್ತು ‘ಅಪಕೀರ್ತಿಯೊಂದಿಗೇ ಕೊನೆಯಾಗುವುದು’ ಎಂದು ಡರೋಚ್‌ ವ್ಯಂಗ್ಯವಾಡಿದ್ದರು. ಭಾನುವಾರ ಪತ್ರಿಕೆಗಳಲ್ಲಿ ಇವರ ಹೇಳಿಕೆಗಳು ಪ್ರಕಟವಾಗಿದ್ದವು. ಯು.ಕೆಯ ವಿದೇಶಿ ಮಂತ್ರಾಲಯವು ಈ ಮಾಹಿತಿ ಸೋರಿಕೆಯ ತನಿಖೆ ನಡೆಸುವುದಾಗಿ ಹೇಳಿದೆ.

ರಾಯಭಾರಿ ಟೀಕೆಯಿಂದ ಆಗಬಹುದಾದ ಹಾನಿಯನ್ನು ಸರಿಪಡಿಸಿ ಅಮೆರಿಕ ಜತೆ ಸಂಬಂಧ ಸುಧಾರಣೆಗೆ ಬ್ರಿಟನ್‌ ಮುಂದಾಗಿದೆ. ಬ್ರಿಟನ್‌ ‍ಪ್ರಧಾನಿ ತೆರೆಸಾ ಮೇ ಅಮೆರಿಕ ಜತೆಗಿನ ಬಾಂಧವ್ಯ ಹಾಳಾಗದಂತೆ ನೋಡಿಕೊಳ್ಳುವ ಕ್ರಮಗಳ ಬಗ್ಗೆ ಚಿಂತನೆ ನಡೆಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು