ಬುಧವಾರ, ಏಪ್ರಿಲ್ 21, 2021
25 °C

‘ಋತುಮಾನ’ದ ಮೊಬೈಲ್‌ ಆ್ಯಪ್‌

ರೂಪಾ ಕೆ.ಎಂ. Updated:

ಅಕ್ಷರ ಗಾತ್ರ : | |

Prajavani

ಸೃಜನಶೀಲ ಹಾಗೂ ಸೃಜನೇತರ ಸಾಹಿತ್ಯದ ಸಿಹಿಯನ್ನು ಎಲ್ಲಾ ಋತುಮಾನಗಳಲ್ಲಿ  ಕನ್ನಡ ಓದುಗರಿಗೆ ಉಣಬಡಿಸುತ್ತಿರುವ ಋತುಮಾನ ವೆಬ್‌ಸೈಟ್‌ ಹೊಸ ಪ್ರಯತ್ನದತ್ತ ಹೆಜ್ಜೆ ಇಟ್ಟಿದ್ದು, ಮೊಬೈಲ್‌ ಆ್ಯಪ್‌ವೊಂದನ್ನು ಬಿಡುಗಡೆಗೊಳಿಸಿದೆ. 

ಇದು ಆ್ಯಂಡ್ರಾಯ್ಡ್‌ ಹಾಗೂ ಐಪೋನ್‌ ಬಳಕೆದಾರರಿಗೆ ಲಭ್ಯವಿದೆ. ಋತುಮಾನದ ಹೊಸ ಪ್ರಕಟಣೆಗಳನ್ನು ಉಚಿತವಾಗಿ ಓದಬಹುದು. ಪುಸ್ತಕ, ಇ– ಬುಕ್, ಆಡಿಯೊ ಬುಕ್, ಸಾಹಿತ್ಯಿಕ ಗ್ರೀಟಿಂಗ್ ಕಾರ್ಡ್‌ಗಳನ್ನು ಖರೀದಿಸಬಹುದು. 

ಈ ಬಗ್ಗೆ ಮಾಹಿತಿ ಹಂಚಿಕೊಂಡ ಋತುಮಾನ ಬಳಗದ ಸಂಪಾದಕರಲ್ಲಿ ಒಬ್ಬರಾದ ಕುಂಟಾಡಿ ನಿತೇಶ, ‘ಈ ಹಿಂದೆ ಪ್ರಯೋಗಾರ್ಥ ಆ್ಯಪ್‌ ರಚಿಸಲಾಗಿತ್ತು. ಓದುಗಸ್ನೇಹಿಯಾಗಿ ರೂಪುಗೊಳಿಸಿ ಹೊಸದಾಗಿ ಬಿಡುಗಡೆ ಮಾಡಿದ್ದೇವೆ. ಋತುಮಾನ ವೆಬ್‌ಸೈಟ್‌ನಲ್ಲಿರುವಂತೆ ಕಥನ, ಚಿಂತನ, ಪುಸ್ತಕ ಪರೀಕ್ಷೆ, ವ್ಯಕ್ತಮಧ್ಯ, ದಾಖಲೀಕರಣಗಳೆಂಬ ಆಯ್ಕೆಗಳಿವೆ. ಜತೆಗೆ ಹೊಸತು ಎಂಬ ಆಯ್ಕೆಯನ್ನು ಸೇರಿಸಲಾಗಿದೆ’ ಎನ್ನುತ್ತಾರೆ. 

ವೆಬ್‌ಸೈಟ್‌ನಲ್ಲಿರುವ ಪ್ರಕಟಣೆಗಳು, ಲೇಖನಗಳನ್ನು ಉಚಿತವಾಗಿ ಓದುವ ಹಾಗೇ ಆಯ್ಕೆ ನೀಡಲಾಗಿದೆ. ಈ ಹಿಂದೆ ಋತುಮಾನ ಆನ್‌ಲೈನ್‌ ಅಂಗಡಿಯಲ್ಲಿ ಪುಸ್ತಕ ಖರೀದಿಸಬಹುದಿತ್ತು. ಈಗ ಈ ಆ್ಯಪ್‌ನಲ್ಲಿಯೇ ಇ–ಬುಕ್‌, ಆಡಿಯೊ ಬುಕ್‌ ಜತೆಗೆ ಪುಸ್ತಕಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. 

‘ಇತರೆ’ ಎನ್ನುವ ಆಯ್ಕೆಯಲ್ಲಿ ಸಾಹಿತ್ಯಿಕ ಗ್ರೀಟಿಂಗ್‌ ಕಾರ್ಡ್‌ಗಳಿವೆ. ಕುವೆಂಪು, ಯಶವಂತ ಚಿತ್ತಾಲ, ಗೋಪಾಲಕೃಷ್ಣ ಅಡಿಗರ ಕಥೆ ಮತ್ತು ಕಾವ್ಯ ನುಡಿ ಇರುವ ಗ್ರೀಟಿಂಗ್ಸ್‌ಗಳಿವೆ.  ಕನ್ನಡ ಜಗತ್ತಿನ ಪ್ರಾತಃಸ್ಮರಣೀಯರಾದ ಕುವೆಂಪು, ಬಿ.ವಿ.ಕಾರಂತ, ಪಿ.ಲಂಕೇಶ್‌, ರಾಜ್‌ಕುಮಾರ್‌, ಶಂಕರ್‌ನಾಗ್‌, ಪುಟ್ಟಣ್ಣ ಕಣಗಾಲ್‌ ಅವರ ಚಿತ್ರಗಳಿರುವ ಕ್ಯಾಲೆಂಡರ್‌ಗಳಿವೆ. ಇವನ್ನು ಖರೀದಿಸಿ ಪ್ರೀತಿ ಪಾತ್ರರಿಗೆ ಕೊಡುಗೆಯಾಗಿಯೂ ನೀಡಬಹುದು. 

ಜತೆಗೆ ಪ್ರಕಾಶಕರ ಅನುಮತಿ ಮೇರೆಗೆ ಎರಡು ಇ–ಬುಕ್‌ಗಳನ್ನು ಈ ಆ್ಯಪ್‌ನಲ್ಲಿ ನೀಡಲಾಗಿದೆ. ಜಿ.ರಾಜಶೇಖರ್‌ ಅವರ ‘ಕಾಗೋಡು ಸತ್ಯಾಗ್ರಹ’ ಪುಸ್ತಕ  ಮರುಮುದ್ರಣಗೊಳ್ಳದೇ ಇರುವುದರಿಂದ, ಅದನ್ನು ಇ–ಬುಕ್‌ ಆಗಿ ಋತುಮಾನವೇ ಹೊರ ತಂದಿದೆ.

ಸದ್ಯಕ್ಕೆ ಋತುಮಾನದಿಂದ ಎರಡು ಪುಸ್ತಕಗಳನ್ನು ಹೊರತರುವ ಚಿಂತನೆಯೂ ಇದೆ. ಕ್ರಮೇಣ ಇವು  ಇ–ಬುಕ್‌ ಆಗಿಯೂ ಓದುಗರ ಮುಂದಿರಲಿವೆ. ಮುಂದಿನ ದಿನಗಳಲ್ಲಿ ಋತುಮಾನ ಪ್ರಕಾಶನ ಆಗಿಯೂ ಕಾರ್ಯನಿರ್ವಹಿಸಲಿದೆ. ಇದು ಪ್ರವೃತ್ತಿಯಾಗಿರುವುದರಿಂದ ಸಮಯ  ಹೊಂದಿಸಿಕೊಳ್ಳುವ ಅನಿವಾರ್ಯತೆಯನ್ನು ನಿತೇಶ ವ್ಯಕ್ತಪಡಿಸುತ್ತಾರೆ. 

‘ಮೊದಲಿನಿಂದಲೂ ಋತುಮಾನ ವಿಚಾರಸಾಹಿತ್ಯಕ್ಕೆ ಒತ್ತು ನೀಡುತ್ತಾ ಬಂದಿದೆ. ಯಾವ ಪುಸ್ತಕಗಳನ್ನು ಪ್ರಕಟಿಸಬೇಕು ಮತ್ತು ಪ್ರಕಟಿಸಬಾರದು ಎಂಬ ವಿಷಯದಲ್ಲಿ ಸ್ಪಷ್ಟತೆ ಇದೆ. ಸಾಹಿತ್ಯಿಕ ಗ್ರೀಟಿಂಗ್‌ ಕಾರ್ಡ್‌ಗಳಂತೆ ಪೇಂಟಿಂಗ್ಸ್‌ಗಳನ್ನು ಮಾರುವುದಿಲ್ಲ. ದೊಡ್ಡ ದೊಡ್ಡ ಪುಸ್ತಕಗಳನ್ನು ಇ–ಬುಕ್‌ ಮಾಡುವ ಇರಾದೆ ಇಲ್ಲ. ಪೋನಿನಲ್ಲಿ ದೊಡ್ಡ ಪುಸ್ತಕಗಳನ್ನು ಓದುವುದು ಕಷ್ಟ ಇರುವುದರಿಂದ, ಚಿಕ್ಕ ಚಿಕ್ಕ ಪುಸ್ತಕಗಳನ್ನು ಹುಡುಕಿ ತರಲು ಮನಸ್ಸು ಮಾಡಿದ್ದೇವೆ’ ಎಂದು ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.

ಋತುಮಾನಕ್ಕೆ ಕೇಳುಗರು ದಕ್ಕಿರುವುದರಿಂದ ಇನ್ನಷ್ಟು ಆಡಿಯೊ ಪುಸ್ತಕಗಳನ್ನು ಉಚಿತವಾಗಿ ಕೇಳಿಸುವ ಮನಸ್ಸಿದೆ. ಇದೊಂದು ಸ್ವಯಂ ಸೇವಾ ಟ್ರಸ್ಟ್‌ ಆಗಿರುವುದರಿಂದ ದಾನಿಗಳು ಮುಂದೆ ಬಂದರೆ ಅದು ಸಾಧ್ಯ ಎನ್ನುತ್ತಾರೆ ನಿತೇಶ.   

ಗೂಗಲ್ ಪ್ಲೇ ಸ್ಟೋರ್ / ಆಪಲ್ ಆ್ಯಪ್ ಸ್ಟೋರ್ ನಲ್ಲಿ “ruthumana” ಎಂದು ಹುಡುಕಿ ,ಇಂದೇ ನಿಮ್ಮ ಫೋನ್‌ಗಳಿಗೆ ಡೌನ್ಲೋಡ್ ಮಾಡಿಕೊಳ್ಳಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು