ಗುರುವಾರ , ಫೆಬ್ರವರಿ 25, 2021
20 °C

ಮನೆಯೆಂಬ ಶಾಲೆಯಲ್ಲಿ ಮಕ್ಕಳ ಲವಲವಿಕೆ

ವಿದ್ಯಾಶ್ರೀ ಎಸ್‌. Updated:

ಅಕ್ಷರ ಗಾತ್ರ : | |

Prajavani

‘ಮಗಳಿಗೆ ಯಾವಾಗ ಶಾಲೆ ಶುರುವಾಗತ್ತೋ ಅಂಥ ಆಗಿಬಿಟ್ಟಿದೆ. ದಿನಪೂರ್ತಿ ಟಿವಿ, ಮೊಬೈಲ್‌ ನೋಡ್ಕೊಂಡು ಕೂತಿರುತ್ತಾಳೆ. ಅವಳನ್ನು ಸೃಜನಶೀಲವಾಗಿ ಇರಿಸುವುದೇ ನನಗೆ ದೊಡ್ಡ ತಲೆನೋವು. ಹೇಳಿದ ಮಾತನ್ನೇ ಕೇಳುವುದಿಲ್ಲ. ಪುಸ್ತಕವನ್ನೇ ಮುಟ್ಟುವುದಿಲ್ಲ’ ಹೀಗೆ ಮಗಳ ದೂರನ್ನು ಸವಿತಾ ಒಂದೇ ಉಸಿರಿಗೆ ಹೇಳುತ್ತಿದ್ರೆ, ಗಿರಿಜಾ ‘ನನ್ನ ಮಗನದೂ ಇದೇ ಕಥೆ’ ಎಂದು ದನಿಯಾದಳು.

ಸಾಂಪ್ರದಾಯಿಕ ಶಾಲೆಗೆ ಪರ್ಯಾಯವಾದ ‘ಹೋಂ ಸ್ಕೂಲಿಂಗ್‌’ ಪದ್ಧತಿಯಲ್ಲಿ ಮಕ್ಕಳು ಈಗ ಕಲಿಯುತ್ತಿದ್ದಾರೆ. ಪೋಷಕರೇ ಮಕ್ಕಳಿಗೆ ಶಿಕ್ಷಕರಾಗಿರುವ ಈ ಸಂದರ್ಭದ ನಿರ್ವಹಣೆ ಒಂದು ರೀತಿಯಲ್ಲಿ ಸವಾಲೇ ಸರಿ. ಪೋಷಕರಿಗೆ ಕಚೇರಿ ಕೆಲಸದ ಜೊತೆಗೆ ಮಕ್ಕಳನ್ನು ನಿಭಾಯಿಸುವ ಕಲೆ ಗೊತ್ತಿರುವುದು ಮುಖ್ಯವಾಗಿದ್ದರೆ, ಮಕ್ಕಳಿಗೆ ಶಾಲಾ ವಾತಾವರಣಕ್ಕೆ ಹೊರತಾಗಿರುವ ಕಲಿಕೆಯ ಅನುಭವವನ್ನು ಒಗ್ಗಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ಸಮಯದಲ್ಲಿ ಮಕ್ಕಳನ್ನು ಲವಲವಿಕೆಯಿಂದ ಇರಿಸುವ ಕೌಶಲವನ್ನು ಅರಿಯುವುದು ಬಹಳ ಮುಖ್ಯ.

ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಕೆ ಎಂಬುದು ಕೇವಲ ವಿದ್ಯಾರ್ಥಿ ಕೇಂದ್ರಿತವಾಗಿಯಷ್ಟೇ ಇರದೇ, ಪೋಷಕ ಕೇಂದ್ರಿತವೂ ಆಗಿದೆ. ಹಾಗಾಗಿ ಮಕ್ಕಳು ಉತ್ಸಾಹಭರಿತರಾಗಿ, ಚಟುವಟಿಕೆಯಿಂದ ದಿನ ಕಳೆಯಬೇಕೆಂದರೆ ಅದಕ್ಕೆ ಪೋಷಕರ ಪೂರ್ವ ಸಿದ್ಧತೆ ಇರಬೇಕು. ಮಕ್ಕಳ ಸಾಮರ್ಥ್ಯ, ಕಲಿಕೆಯನ್ನು ಪ್ರೇರೇಪಿಸುವ ಅಂಶಗಳ ಬಗ್ಗೆ ತಿಳಿದುಕೊಂಡರೆ ಅವರನ್ನು ಚಟುವಟಿಕೆಯಿಂದ ಇರಿಸುವುದು ಸುಲಭವಾಗಲಿದೆ.

ದಿನಚರಿಯ ಪಟ್ಟಿ ಮಾಡಿ: ಮಕ್ಕಳು ಏಳುವ ಸಮಯದಿಂದ ಅವರು ಮಲಗುವವರೆಗಿನ ದಿನಚರಿಯ ಪಟ್ಟಿಯನ್ನು ಹಿಂದಿನ ದಿನ ಸಿದ್ಧ ಮಾಡಿಟ್ಟುಕೊಳ್ಳಿ. ಓದಿಗೆ, ಆಟವಾಡಲು, ಟಿವಿ ನೋಡಲು, ಇತರ ಚಟುವಟಿಕೆಗಳಿಗೆ ಎಷ್ಟೆಷ್ಟು ಸಮಯ ನೀಡಬಹುದು ಎಂಬುದರ ಸ್ಪಷ್ಟತೆ ನಿಮಗಿದ್ದರೆ ಅನುಕೂಲವಾಗುತ್ತದೆ. ಆದರೆ, ಸಂಪೂರ್ಣ ಅದಕ್ಕೆ ಬದ್ಧರಾಗಿರುವಂತೆ ಮಕ್ಕಳಿಗೆ ಒತ್ತಡ ಹೇರಬೇಡಿ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅದರಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬಹುದು. ದಿನಚರಿ ಸಿದ್ಧತೆಯಿಂದ ಪೋಷಕರಿಗೂ ತಮಗಾಗಿ ಸಮಯ ಹೊಂದಿಸಿಕೊಳ್ಳುವುದಕ್ಕೆ ನೆರವಾಗುತ್ತದೆ. ಇದರಿಂದ ಸಮಯ ವ್ಯರ್ಥವಾಗುವುದು ತಪ್ಪುತ್ತದೆ.

ಮಕ್ಕಳ ಮಾನಸಿಕ ಸ್ಥಿತಿ ಅರಿಯಿರಿ: ಮಕ್ಕಳು ಮನೆಯಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವುದರಿಂದ ಸ್ನೇಹಿತರ ಒಡನಾಟವೂ ಕಡಿಮೆ ಆಗಿದೆ. ಹಾಗಾಗಿ, ಮನೆಯಲ್ಲಿ ಅವರು ಖುಷಿಯಾಗಿರುವ ವಾತಾವರಣ ನಿರ್ಮಿಸಿ. ಸಮಯ ಸಿಕ್ಕಾಗ ಅವರೊಂದಿಗೆ ಆಟವಾಡಿ. ಮಕ್ಕಳ ಮೆದುಳಿಗೆ ಕೆಲಸ ಕೊಡುವಂತಹ ಬಹಳಷ್ಟು ಆಟಿಕೆಗಳಿವೆ. ಸಾಧ್ಯವಾದರೆ ಅವುಗಳನ್ನು ತಂದುಕೊಡಿ. ಪೌಷ್ಟಿಕಾಂಶಕ್ಕಾಗಿ ಮಕ್ಕಳಿಗೆ ವಿಭಿನ್ನ ಆಹಾರ ಕೊಡುವಂತೆ, ಅವರ ದಿನಚರಿಯನ್ನು ಲವವಿಕೆಯಿಂದ ಇರಿಸಲು ನವೀನ ಚಟುವಟಿಕೆಗಳನ್ನು ರೂಪಿಸಿ. ಏಕತಾನತೆಗೆ ಹೊರತಾದ ವಿಭಿನ್ನ ಚಟುವಟಿಕೆಗಳಿರಬೇಕು.

ಲವಲವಿಕೆಯಿಂದಿರಿ: ಮನೆಯವರು ಸೃಜನಶೀಲರಾಗಿರಬೇಕು. ಪೋಷಕರು ಟಿ.ವಿ, ಮೊಬೈಲ್‌ಗಳಲ್ಲಿ ಹೆಚ್ಚಿನ ಸಮಯ ವ್ಯಯಿಸಿದರೆ ಮಕ್ಕಳು ಅದನ್ನೇ ಕಲಿಯುತ್ತಾರೆ. ಹಾಗಾಗಿ ಬಿಡುವಿದ್ದಾಗ ಪುಸ್ತಕಗಳನ್ನು ಓದಿ. ಯಾವುದಾದರೂ ಕಲೆಯಲ್ಲಿ ತೊಡಗಿಸಿಕೊಳ್ಳಿ. ಮನೆ ಕೆಲಸದ ಜೊತೆಗೆ ವ್ಯಾಯಾಮ ಮಾಡುವುದು, ಉತ್ತಮ ಹವ್ಯಾಸಗಳಿಗೆ ಸಮಯ ಮೀಸಲಿಡಿ. ಮಕ್ಕಳು ಇದರಿಂದ ಪ್ರೇರಿತರಾಗುತ್ತಾರೆ.

ಮನೆಯ ವಾತಾವರಣ ಹೀಗಿರಲಿ: ಮಕ್ಕಳಿಗೆ ಶಿಸ್ತಿನ ಹೆಸರಿನಲ್ಲಿ ಶಿಕ್ಷೆ ನೀಡುವುದನ್ನು ಕಡಿಮೆ ಮಾಡಿ. ಅವರು ತಪ್ಪು ಮಾಡಿದಾಗ ಭಯದಿಂದ ಬುದ್ಧಿ ಹೇಳಿಕೊಡುವ ಬದಲು, ಸರಿ–ತಪ್ಪುಗಳ ಬಗ್ಗೆ ಪ್ರೀತಿಯಿಂದ ಅರಿವು ಮೂಡಿಸಿ. ಕಲಿಕಾ ವಾತಾವರಣ ನಿರ್ಮಿಸಬೇಕು. ಪೋಷಕರು ಮಗುವಿನೊಂದಿಗೆ ಸಮಯ ಕಳೆಯಬೇಕು. ಅವರ ಸಾಮರ್ಥ್ಯಗಳನ್ನು ವೃದ್ಧಿಸುವ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಕೆಲಸ ಮಾಡಬೇಕು. ಸಣ್ಣಪುಟ್ಟ ಕೆಲಸಗಳಲ್ಲಿ ಮಕ್ಕಳು ತೋರಿಸುವ ಜಾಣ್ಮೆಯನ್ನು ಮನದುಂಬಿ ಪ್ರೋತ್ಸಾಹಿಸಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು