ಸೋಮವಾರ, ಮೇ 23, 2022
30 °C

ಶಿಷ್ಟಾಚಾರ ಅಂತರಂಗದ ಶಕ್ತಿ

ರಘು ವಿ. Updated:

ಅಕ್ಷರ ಗಾತ್ರ : | |

Prajavani

ಶಿಷ್ಟಾಚಾರವು ವ್ಯಕ್ತಿಯ ನಡವಳಿಕೆಯನ್ನು ಸಿಹಿಯಾಗಿ, ಸಹನೀಯವಾಗಿ ತಿದ್ದಿ ರೂಪಿಸುವಂತಹದ್ದು. ಮನುಷ್ಯಪ್ರಾಣಿಯನ್ನು ಮನುಷ್ಯನನ್ನಾಗಿಸುವುದು ಈ ಶಿಷ್ಟಾಚಾರದ ನಡೆಯೇ. ಇದು ಆರಂಭದಲ್ಲಿ ಹೊರಗಿನಿಂದ ಆರೋಪಿತವಾದ ಕಲಿಕೆಯಾದರೂ ಕ್ರಮೇಣ ಅದು ವ್ಯಕ್ತಿಯ ಅಂತರಂಗದ ಸ್ಫುರಣೆಯಾಗಿ ಇಡೀ ವ್ಯಕ್ತಿತ್ವಕ್ಕೇ ಒಂದು ಸೌರಭವನ್ನು ಒದಗಿಸುತ್ತದೆ. ಮಕ್ಕಳಿಗೆ ಮಾತು ಕಲಿಸುವ ನಾವು ‘ಮಾತಾಡುವ’ ಕ್ರಮವನ್ನು ತಿಳಿಸುತ್ತೇವೆಯೇ? ಶ್ರೀರಾಮನ ವ್ಯಕ್ತಿತ್ವದ ಒಂದು ಪ್ರಮುಖ ಅಂಶವೇ ಅವನು ‘ಸ್ಮಿತಪೂರ್ವಭಾಷೀ’ ಎಂಬುದು. ಎದುರಿಗೆ ಬಂದವರು ತನ್ನತ್ತ ಮುಗುಳ್ನಗೆ ಬೀರಿದರೆ ಮಾತ್ರವೇ ನಾವು ಪ್ರತಿಯಾಗಿ ನಗಬೇಕು ಎಂದು ನಾವು ಭಾವಿಸಬಹುದು. ಆದರೆ ಶ್ರೀರಾಮನು ‘ಸ್ಮಿತಪೂರ್ವಭಾಷೀ’ ಎಂದರೆ ತಾನೇ ಮೊದಲಿಗೆ ಮುಗುಳ್ನುಗುವುದರ ಜೊತೆಗೆ ತಾನೇ ಮಾತನಾಡಿಸಿಬಿಡುತ್ತಿದ್ದ. ಇಡೀ ರಾಮಾಯಣದಲ್ಲಿ ಅವನು ಸ್ನೇಹವನ್ನು ಗಳಿಸುತ್ತ ಬೆಳೆಸುತ್ತ ಹೋದ. ನದಿ ದಾಟಿಸಿದ ಗುಹನಿಂದ ಹಿಡಿದು, ಜಟಾಯುವರೆಗೆ; ಶಬರಿಯಿಂದ ಹಿಡಿದು ರಾವಣನ ತಮ್ಮ ವಿಭೀಷಣನವರೆಗೆ ಅವನ ಸ್ನೇಹದ ಪಟ್ಟಿ ಬೆಳೆಯುತ್ತ ಹೋಯಿತು. ನಗುವುದು, ನಗುತ್ತ ಮಾತನಾಡಿಸುವುದು ಬಹಳ ಮುಖ್ಯ ನಡವಳಿಕೆ.

‘ಒಳ್ಳೆಯ ನಡವಳಿಕೆ ಅತ್ಯುತ್ತಮ ವಿದ್ಯೆಯೂ ತೆರೆಸಲಾಗದ ಬಾಗಿಲುಗಳನ್ನು ತೆರೆಸುತ್ತದೆ’ ಎನ್ನುತ್ತಾನೆ ಕ್ಲಾರೆನ್ಸ್ ಥಾಮಸ್ (Good manners will open doors that the best education cannot) ಹೀಗೆಂಬುದರ ಅರ್ಥ – ವಿದ್ಯಾದದಾತಿ ವಿನಯಂ ಎಂದಷ್ಟೇ ಅಲ್ಲ. ಏಕೆಂದರೆ ಇವತ್ತು ಈ ‘ವಿನಯ’ದ ಅರ್ಥ ಓಲೈಕೆ ಎಂಬಲ್ಲಿಗೆ ಬಂದುಬಿಟ್ಟಿದೆ. ಇಲ್ಲಿ ವಿನಯವೆಂದರೆ ವ್ಯಕ್ತಿ ತನ್ನ ಆತ್ಮಗೌರವಕ್ಕೆ ಚ್ಯುತಿ ಬಾರದಂತೆ ಇತರರನ್ನು ಆದರಿಸುವುದು. ಒಳ್ಳೆಯ ನಡವಳಿಕೆ ಮುಚ್ಚಿದ ಬಾಗಿಲುಗಳನ್ನು ತೆರೆಸಿದಂತೆ ಕೆಟ್ಟ ನಡವಳಿಕೆಗಳು ತೆರೆದ ಬಾಗಿಲುಗಳನ್ನು ಮುಚ್ಚಿಸಿಬಿಡುತ್ತವೆ. ನಡವಳಿಕೆ ಎಂಬುದು ವ್ಯಕ್ತಿಯೊಬ್ಬ ಸಮಾಜದಲ್ಲಿ ವರ್ತಿಸುವ ಬಗೆ. ಅದು ಊಟ, ಉಡುಗೆ ತೊಡುಗೆಗಳಿಗಿಂತ ಅವನು ಸಮಾಜದ ಇತರ ಸದಸ್ಯರೊಂದಿಗೆ ಹೇಗೆ ನಡೆದುಕೊಳ್ಳುತ್ತಾನೆ, ಅವನ ವರ್ತನೆ, ಕ್ರಿಯೆ-ಪ್ರತಿಕ್ರಿಯೆಗಳು ಹೇಗಿವೆ ಎಂಬುದರ ಸೂಚಕ ಆಗಿರುತ್ತದೆ. ಅವುಗಳಲ್ಲಿ ಮುಖ್ಯವಾದವುಗಳನ್ನು ನಾವೀಗ ಗಮನಿಸಬಹುದು.

ಎದುರಿಗೆ ಬಂದವರು ಮೊದಲಿಗೆ ಮುಗುಳ್ನಕ್ಕು ಮಾತನಾಡಿಸಲಿ ಎಂದು ಕಾಯದೇ ನಾವು ನಕ್ಕು ಮಾತಾಡಿಸಿ ಅವರ ಯೋಗಕ್ಷೇಮ ವಿಚಾರಿಸಬೇಕು. ಇದೊಂದು ಸರಳ ನಡೆ ಎನಿಸಿದರೂ, ಅದು ಎಲ್ಲರಿಗೂ ಏಕೆ ಸಾಧ್ಯವಾಗದು ಎಂಬ ಪ್ರಶ್ನೆ ಏಳುತ್ತದೆ. ಉತ್ತರವೂ ಸುಲಭ; ನಮ್ಮ ಪ್ರತಿಷ್ಠೆ, ಅಹಂಕಾರಗಳು ಅಡ್ಡಿಯಾಗುವುದರಿಂದ ಇದನ್ನು ರೂಢಿಸಿಕೊಳ್ಳುವುದು ಅಭ್ಯಾಸದಿಂದ, ಅಹಂಕಾರ ಮರ್ದನದಿಂದ ಮಾತ್ರ ಸಾಧ್ಯ. ಆದರೆ ಒಮ್ಮೆ ಈ ನಡವಳಿಕೆ ನಮ್ಮದಾದರೆ ಇಡೀ ಜಗತ್ತೇ ನಮ್ಮದಾದಂತೆ. ಏಕೆಂದರೆ ಎಲ್ಲರೂ ನಮ್ಮ ಮಿತ್ರರಾಗಿ ಪರಿವರ್ತಿತರಾಗಿಬಿಡುತ್ತಾರೆ. ನಮ್ಮೆಡೆಗೆ ಆಕರ್ಷಿತರೂ ಆಗಿಬಿಡುತ್ತಾರೆ.

ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಸೌಜನ್ಯತೆಯ ಲಕ್ಷಣ. ಇದೂ ಕೂಡ ನಮ್ಮ ನಡವಳಿಕೆಯ ಒಂದು ಭಾಗವಾಗಲಿ. ಯಾರಿಂದ ಯಾವುದೇ ಕನಿಷ್ಠ ಸಹಾಯ ದೊರೆತರೂ ತಕ್ಷಣ ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ‘ಧನ್ಯವಾದಗಳು’, ‘ನಿಮ್ಮಿಂದ ಉಪಕಾರವಾಯಿತು’, ‘ಕೃತಜ್ಞತೆಗಳು’ ಇತ್ಯಾದಿ ಧನ್ಯವಾದ ಸೂಚಕಗಳನ್ನು ಧಾರಾಳವಾಗಿ ಬಳಸಬೇಕು. ಮನೆಯವರೇ ಆದರೂ, ಅವರ ಸೇವೆ-ಸಹಾಯಗಳಿಗೆ ಕೃತಜ್ಞತೆ ಸಲ್ಲಿಸುವುದನ್ನು ಮರೆಯಬಾರದು. ಉಪಕಾರ ಸ್ಮರಣೆ ಸಜ್ಜನಿಕೆಯ ಅತಿ ಪ್ರಮುಖ ಗುಣ. ಅದು ನಮ್ಮಲ್ಲಿ ಸದಾ ಜಾಗೃತವಾಗಿರಬೇಕು.

ಮೇಲಿನ ಎರಡು ಶಿಷ್ಟಾಚಾರ ಪದ್ಧತಿಗೆ ಪೂರಕವಾದದ್ದು ಮೂರನೆಯದು: ಅಭಿನಂದನೆಗಳನ್ನು ಸಲ್ಲಿಸುವುದು. ಕಚೇರಿಯಲ್ಲೋ ಮನೆಯಲ್ಲೋ – ಎಲ್ಲೇ ಇರಲಿ ವ್ಯಕ್ತಿಯೊಬ್ಬರು ಸಾಧನೆಗೈದ ಸುದ್ದಿ ದೊರೆತ ಕೂಡಲೇ ಅವರನ್ನು ಅಭಿನಂದಿಸಬೇಕು. ಯಾರಿಗೆ ಅಭಿನಂದನೆ ಸಲ್ಲಿಸಲು ಕಷ್ಟ ಎನಿಸುತ್ತದೆಯೋ ಅವರಿಗೆ ಅವರೊಳಗಿನ ಅಸೂಯೆ–ಅಹಂಕಾರಗಳು ಅದನ್ನು ತಡೆದಿವೆ ಎಂದು ತಿಳಿಯಬೇಕು. ತಾನು ಸಾಧಿಸಲಾಗದ್ದನ್ನು ಬೇರೆಯವರು ಸಾಧಿಸಿದರಲ್ಲ – ಎಂದು ಭಾವಿಸದೆ ಹೃತ್ಪೂರ್ವಕವಾಗಿ ಅಭಿನಂದಿಸಿ, ಅವರ ವಿಶ್ವಾಸ ಗಳಿಸಿ, ಆ ಗೆಲುವಿನ ಗುಟ್ಟನ್ನೂ ಅರಿಯಬಹುದು.

ಅಬ್ಬರದ ಮಾತು, ಜಂಬ, ಅಹಂಕಾರದ ಮಾತು ಬೇಡ. ನಾವೆಂತಹವರು ಎಂಬುದು ನಮ್ಮ ನಡವಳಿಕೆಯಿಂದಲೇ ಗೊತ್ತಾಗುವುದರಿಂದ ನಮ್ಮ ಬಗ್ಗೆ ನಾವು ಜಂಬ ಕೊಚ್ಚಬಾರದು. ತಂಡದ ಮಾತಿನ ಜಾಡಿನಲ್ಲಿ ಅದೇ ದನಿಯನ್ನು ಹಿಡಿದು ಮಾತಾಡಬೇಕು. ಬೇಕೆಂದೇ, ಗಮನ ಸೆಳೆಯಲೆಂದೇ ಅಬ್ಬರದ ಮಾತು, ಗಡುಸಾದ ಮಾತು ಬಳಸಬಾರದು. ಜನರಿಗೆ ನಮ್ಮ ಬಗ್ಗೆ ವಿವರ ಬೇಕಿಲ್ಲ. ಬೇಕಿದ್ದರೆ ಕೇಳಿ ಪಡೆಯುತ್ತಾರೆ. ವ್ಯಕ್ತಿಸಂಬಂಧಗಳು ಹಾಳಾಗಲು ಅಹಂಕಾರವೇ ಕಾರಣ. ಅದನ್ನು ಪಕ್ಕಕ್ಕಿಟ್ಟು ಮಾತನಾಡಿದಾಗ ಎಲ್ಲರಿಗೂ ನಾವು ಪ್ರಿಯರಾಗುತ್ತೇವೆ.

ಮಾತನಾಡುವ ಮುನ್ನ ಕೇಳಿಸಿಕೊಳ್ಳಬೇಕು. ಕಿವಿಗೆ ಹೆಚ್ಚು ಕೆಲಸ ಕೊಟ್ಟು ಬಾಯಿಗೆ ಕಡಿಮೆ ಸಮಯ ಕೊಡಬೇಕು. ಬೇರೆಯವರ ಮಾತುಗಳನ್ನು ಪೂರ್ಣವಾಗಿ ಕೇಳಿಸಿಕೊಂಡು ಬಳಿಕ ಪ್ರತಿಯಾಗಿ ಮಾತನಾಡಬೇಕು. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆಯ ಮಾತೆ ಇದೆ. ದುಡುಕಿ ಮಾತನಾಡಲೇಬಾರದು. ಬಿಲ್ಲಿನಿಂದ ಹೊರಟ ಬಾಣವನ್ನು ಹಿಂಪಡೆಯಲಾಗದಂತೆ ಬಾಯಿಂದ ಹೊರಟ ಮಾತನ್ನು ಮತ್ತೆ ಹಿಂಪಡೆಯಲಾರೆವು.
ಖಂಡನೆ, ನಿಂದನೆ, ದೂರು – ಈ ಮೂರು ಜನರಿಂದ ನಮ್ಮನ್ನು ದೂರ ಮಾಡುತ್ತವೆ. ಖಂಡಿಸುವ ಬದಲು ಅಪೇಕ್ಷಿತ ಬದಲಾವಣೆಗಳನ್ನು ಸೂಚಿಸಬಹುದು. ಹಾಗೆಯೇ ನಿಂದಿಸುವ ಬದಲು ಅವರೆಂತಿದ್ದರೆ ನಮಗೆ ಹಿತವೆಂದು ಹೇಳಬಹುದು. ಇನ್ನು ದೂರುವುದಂತೂ ಸಲ್ಲದು. ದೂರು ಹೇಳುವುದೆಂದರೆ, ಬೆನ್ನ ಹಿಂದೆ ಚಾಡಿ ಹೇಳಿದಂತೆ.

ಬಹಳ ಮುಖ್ಯವಾದ ನಡವಳಿಕೆಯೊಂದಿದೆ, ಅದು ಸಮಯಪ್ರಜ್ಞೆ. ಇದು ಎಲ್ಲ ಪ್ರಜ್ಞೆಗಳಿಗಿಂತ ಮುಖ್ಯ. ಬೇರೆಯವರ ಸಮಯ ಮೌಲ್ಯವುಳ್ಳದ್ದು. ಯಾರನ್ನೂ ಅನವಶ್ಯಕವಾಗಿ ಕಾಯಿಸಬಾರದು. ಸಭೆಗಳಿಗೆ, ಸ್ನೇಹಿತರ ಭೇಟಿಗೆ, ಸಮಾರಂಭಗಳಿಗೆ ಸರಿಯಾದ ಸಮಯಕ್ಕೆ ತಲುಪಬೇಕು. ಅದು ಸಮಯಕ್ಕೆ ಸಲ್ಲಿಸುವ ಗೌರವ, ಸಭೆಗೆ ನೀಡುವ ಮನ್ನಣೆ. 

ಇತರರನ್ನು ಗೌರವಿಸುವುದ ಕೂಡ ನಮ್ಮ ನಡವಳಿಕೆಯ ಅಂಗವಾಗಲಿ. ನಿಷ್ಠುರವಾದ ಕಟು ಮಾತು, ಒರಟಾದ ಭಾಷೆ, ಸಿಡುಕುವುದು ಒಂದು ಬಗೆಯ ಲೋಪವಾದರೆ ಅಶ್ಲೀಲ ನೋಟ, ಅಶ್ಲೀಲ ಭಾಷೆ, ದ್ವಂದ್ವಾರ್ಥದ ಸಂಭಾಷಣೆ – ಇವು ಇನ್ನೊಂದು ಬಗೆಯ ಲೋಪ. ಎಚ್ಚರದ, ಗೌರವದ ವರ್ತನೆಯಿಂದ ನಮ್ಮ ಬಗೆಗಿನ ಗೌರವವೂ ಹೆಚ್ಚುತ್ತದೆ. ಅಡ್ಡ ಹೆಸರಿಟ್ಟು ಕರೆಯುವುದು ಅಥವಾ ವೈಯಕ್ತಿಕ ಹಣಕಾಸಿನ ವ್ಯವಹಾರವನ್ನು ಪ್ರಶ್ನಿಸುವುದು, ವೈಯಕ್ತಿಕ ವಿಚಾರಗಳನ್ನು ಕೇಳುವುದು ಇವುಗಳೂ ಕೂಡ ಉತ್ತಮ ಶಿಷ್ಟಾಚಾರದ ಉಲ್ಲಂಘನೆಯಾಗುತ್ತದೆ.

ನಮ್ಮ ವೇಷ-ಭೂಷಣ ವರ್ತನೆಗಳು ಲಾಯಕ್ಕಾಗಿರಬೇಕು. ಬಟ್ಟೆಗಳು ಶುಭ್ರವಾಗಿರಬೇಕು. ಆಧುನಿಕ ಜೀವನ ಸೃಜಿಸುತ್ತಿರುವ ಸಂದರ್ಭಗಳು ಹೊಸತಾದರೂ ಮೂಲ ಶಿಷ್ಟಾಚಾರದ ನಡವಳಿಕೆಗಳ ಮೇಲೆ ಹೊಸತನ್ನು ಕಟ್ಟಿಕೊಳ್ಳಬೇಕು. ಮೊಬೈಲ್ ಪೋನ್, ಲ್ಯಾಪ್‍ಟಾಪ್, ಕಚೇರಿ ವಸ್ತುಗಳ ಬಳಕೆ, ಸಾರ್ವಜನಿಕ ಸಾರಿಗೆಯಲ್ಲಿ ನಡವಳಿಕೆ, ಸಮಾರಂಭಗಳಲ್ಲಿ ಸಕ್ರಿಯ ಭಾಗವಹಿಸುವಿಕೆ, ವಾಹನಚಾಲನೆ – ಇವೆಲ್ಲವೂ ಶಿಷ್ಟಾಚಾರದ ಪರಿಧಿಯೊಳಗೆ ಬರುವಂತಹವೇ. ಒಟ್ಟಿನಲ್ಲಿ ಶಿಷ್ಟಾಚಾರ ಕೇವಲ ತೋರಾಣಿಕೆಗೆ ಅಲ್ಲ; ಅದು ನಮ್ಮ ಅಂತರಂಗದ ಅಭಿವ್ಯಕ್ತಿ, ನಮ್ಮ ಸುಪ್ತವ್ಯಕ್ತಿತ್ವದ ಪ್ರತಿಫಲನ ಎಂದು ತಿಳಿದು ಪ್ರಜ್ಞಾಪೂರ್ವಕವಾಗಿ ರೂಢಿಸಿಕೊಳ್ಳಬೇಕು. ಇತರರಿಗೆ ನೋವಾಗದಂತೆ ನಮ್ಮ ಆತ್ಮಗೌರವಕ್ಕೂ ಚ್ಯುತಿ ಬರದಂತೆ ನಡೆದುಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು