ಮಂಗಳವಾರ, ಏಪ್ರಿಲ್ 20, 2021
27 °C

ಪುರುಷರೇ, ಪಾತ್ರೆ ತೊಳೆದಿದ್ದೀರಾ?

ಶ್ರೀಧರ್‌ ಕುಲಕರ್ಣಿ Updated:

ಅಕ್ಷರ ಗಾತ್ರ : | |

‘ಏ ಜಯಾ, ಪಾಪ ಅವನ ಕಡೆ ಯಾಕ ಭಾಂಡೆ ತೊಳಸ್ತಿ?’ ಎಂದರು ನಮ್ಮ ಅತ್ತೆ. ‘ಅಂವಾ ತೊಳದರ ಏನ ತಪ್ಪಾತು, ಅವನೂ ಊಟಾ ಮಾಡ್ಯಾನ, ಮತ್ತss ಅಡುಗಿನೂ ಮಾಡಿಲ್ಲಾ, ತೊಳಿಲಿ ಬಿಡ’, ಎಂದಳು ನನ್ನ ಹೆಂಡತಿ. ‘ನೀವ ನೀವ ಇದ್ದಾಗ ಏನ ಬೇಕಾದ್ರು ಮಾಡಕೊಳ್ರಿ, ಆದರ ನಾ ಇರೂತನಾ ಶ್ರೀಧರ ಭಾಂಡೆ ತೊಳೆಯೂ ಹಂಗಿಲ್ಲ ನೋಡು’ ಎಂದು ಸ್ಪಷ್ಟವಾಗಿ ಹೇಳಿದರು ನಮ್ಮ ಅತ್ತೆ. ಇದನ್ನೆಲ್ಲಾ ಕೇಳಿಸಿಕೊಂಡರೂ ಸಿಂಡರೆಲ್ಲಾ ತರಹ ನಿರ್ಲಿಪ್ತವಾಗಿ ಒಂದೊಂದೇ ಪಾತ್ರೆ ತೊಳೆದು ಪಕ್ಕದ ಬುಟ್ಟಿಯಲ್ಲಿ ಹಾಕುತ್ತಿದ್ದೆ.

ಅತ್ತೆಯವರು ಮಗಳ ಎರಡನೇ ಹೆರಿಗೆಗೆಂದು ಮೊದಲ ಬಾರಿಗೆ ಅಮೆರಿಕಕ್ಕೆ ಬಂದ ಕಾಲವದು. ಆಗ ಏಳರಲ್ಲಿ ಹುಟ್ಟಿದ ಕುಲದೀಪಕ ಈಗ ಐದಡಿ ಹತ್ತು ಇಂಚಿನ, ಹದಿನೆಂಟರ ತರುಣನಾಗಿದ್ದಾನೆ. ಹೇಳುವ ಉದ್ದೇಶ ಇಷ್ಟೆ, ಆ ಹದಿನೆಂಟು ವರುಷಗಳಿಂದ ನನ್ನ ಭಾಂಡೆಯ ಡ್ಯೂಟಿ ಇನ್ನೂ ನಡೀತಾ ಇದೆ. ಮೂರು ನೌಕರಿ ಬದಲಾಯಿಸಿದೆ, ನಾಲ್ಕು ಮನೆ ಬದಲಾಯಿಸಿದೆವು, ಆರು ಕಾರು ಬದಲಾಯಿಸಿದೆ, ಆದರೆ ಈ ಕರ್ತವ್ಯದಿಂದ ಮಾತ್ರ ಮುಕ್ತಿ ಸಿಕ್ಕಿಲ್ಲ. ಹಾಗೇನಾದರೂ ಹೆಂಡತಿಯ ಮುಂದೆ ದುಃಖ ಹೇಳಿಕೊಂಡರೆ ‘ಅಡುಗಿ ಮಾಡಲಿಕ್ಕೆ ಒಬ್ಬರನ್ನ ಇಟಗೊ, ನಾ ಭಾಂಡೆ ಮಾಡತೇನಿ’ ಎನ್ನಬೇಕೆ!

ಅಪ್ಪ ಕಟ್ಟಿದ ಮನೆಗೆ ಮಗ ಕಳಸ ಇಡಬೇಕು ಎಂಬ ಅಪೇಕ್ಷೆ ಸಹಜೀಕ. ಅಪ್ಪನ ಆಸೆಯಂತೆ ಎಂಜಿನಿಯರಿಂಗ್ ಕಲಿತು, ಒಳ್ಳೆಯ ನೌಕರಿ ಮಾಡಿಕೊಂಡು, ಒಂದು ಸ್ವಂತ ಮನೆ ಮಾಡಿಕೊಂಡಿದ್ದೇನೊ ನಿಜ. ಆದರೆ, ಇನ್ನು ಕೆಲವು ವಿಷಯಗಳಲ್ಲಿ ಹಿಂದೆ ಬಿದ್ದಂತೆನಿಸುತ್ತದೆ. ಹುಬ್ಬಳ್ಳಿಯ ತಬೀಬ್‌ ಲ್ಯಾಂಡಿನ ವಾಳ್ವೇಕರ ಚಾಳಿನಲ್ಲಿ ಬೆಳೆಯುತ್ತಿದ್ದಾಗ ಒಂದಿಷ್ಟು ಕುಂದುಕೊರತೆಗಳು ಇದ್ದದ್ದೇನೊ ನಿಜ. ಆದರೆ, ಈ ಕೊರತೆಗಳನ್ನೆಲ್ಲ ಮೀರಿಸುವಂತಹ ಅನುಕೂಲಗಳಿದ್ದವು. ಅಂತಹ ವಾತಾವರಣದಲ್ಲಿ, ಅಂತಹ ಆರ್ಥಿಕ ಪರಿಸ್ಥಿತಿಯಲ್ಲಿ, ಒಂದು ತರಹದ ಐಷಾರಾಮಿ ಜೀವನಶೈಲಿಯಿತ್ತು. ಹೇಗಂತೀರಾ?

ಪಡಸಾಲೆಯಲ್ಲಿದ್ದ ಸೀಲಿಂಗ್ ಫ್ಯಾನ್, ಎರಡೂ ಕೋಣೆಗಳ ನಡುವೆ ನೇತು ಹಾಕಿದ್ದ ಟ್ಯೂಲೈಟು, ಅಡುಗೆಮನೆಯಲ್ಲಿ ರಾರಾಜಿಸುತ್ತಿದ್ದ ಗ್ಯಾಸ್ ಸ್ಟೊವ್‌, ಒಂದು ಸಿಲಿಂಡರ್‌ ಖಾಲಿಯಾದರೆ ತಿಂಗಳುಗಟ್ಟಲೆ ಕಾಯಿಸಲಾರದಂತೆ ಮನೆಯಲ್ಲಿದ್ದ ಮತ್ತೊಂದು ಸಿಲಿಂಡರ್‌, ರೇಶನ್ ಕಾರ್ಡಿನಿಂದ ಬರೀ ಸಕ್ಕರೆ ತಂದು ಉಳಿದೆಲ್ಲಾ ಕಾಳು-ಕಡಿಗಳನ್ನು ದುರ್ಗದಬೈಲಿನ ಬೊಬ್ಬಿ ಅವರ ಅಂಗಡಿಯಿಂದ ತಿಂಗಳಿಗೊಮ್ಮೆ ಹಮಾಲನ ಹೆಗಲ ಮೇಲೆ ಹೊರಿಸಿಕೊಂಡು ಬರುವುದು, ನೆರೆಹೊರೆಯವರು ಅಸೂಯೆ ಪಡುವಂತೆ ಮನೆಗೆ ಬೆಳಿಗ್ಗೆ ಬರುತ್ತಿದ್ದ ದಿನಪತ್ರಿಕೆ, ಸೆಕೆಂಡ್‌ ಸ್ಯಾಟರ್ಡೆಗೊಮ್ಮೆ ಮಧ್ಯಾಹ್ನ ಅಪ್ಪ ತರುತ್ತಿದ್ದ ಬಾಂಬೆ ಬೇಕರಿಯ ಕಲಾಕಂದ ಮತ್ತು ಪಫ಼್, ಒಂದೇ, ಎರಡೇ... ಆದರೆ, ಇವೆಲ್ಲವನ್ನೂ ಮೀರಿದ ಐಷಾರಾಮದ ಸಂಗತಿ ಎಂದರೆ ಪ್ರತಿದಿನ ಮನೆಗೆ ಬರುತ್ತಿದ್ದ ಅಡುಗೆಯವರು ಮತ್ತು ಪಾತ್ರೆ ಹಾಗೂ ಬಟ್ಟೆ ಶುಚಿಗೊಳಿಸುವವರು.

ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆಲ್ಲ ಬರುತ್ತಿದ್ದ ಅಡುಗೆ ಮಾಮಿ, ಬಿಸಿ ಬಿಸಿ ಚಪಾತಿ ಅಥವಾ ಭಕ್ಕರಿ, ಪಲ್ಯ, ಅನ್ನ ಮತ್ತು ಸಾರು ಮಾಡಿ ಹೋಗುತ್ತಿದ್ದರು. ಒಂದು ದಿನ ಚಪಾತಿಯಾದರೆ ಇನ್ನೊಂದು ದಿನ ಭಕ್ಕರಿ, ದಿನವೂ ಒಂದು ತೊಪ್ಪಲ ಪಲ್ಯ, ವಾರಕ್ಕೊಂದು ಸರ್ತಿ ಇಡ್ಲಿ ಅಥವಾ ದೋಸೆ. ಅವರು ಬಂದುಹೋದ ನಂತರ ಬರುವ ನಿಂಗಮ್ಮ ಪಾತ್ರೆ ತೊಳೆದು, ಬಟ್ಟೆ ಒಗೆದು, ಒಣಹಾಕಿ ಹೋಗುತ್ತಿದ್ದಳು. ಬ್ರಾಹ್ಮಣರಾಗಿದ್ದ ಅಡುಗೆ ಮಾಮಿ ತಿಂಗಳಲ್ಲಿ ಮೂರು ದಿನ ಬರದಾಗ ಸ್ಟೇಶನ್ ರೋಡಿನಲ್ಲಿದ್ದ ಆನಂದ ಭವನದ ಸಾಂಬಾರನ್ನು ಸವಿಯುವ ಸುಖ, ಒಂದೊಂದು ಸಾರಿ ಬ್ಲೂಸ್ಟಾರಿನಿಂದ ತರುವ ಎಗ್‌ ಕರಿಯ ರುಚಿ, ಹಬ್ಬ-ಹರಿದಿನಗಳಂದು ಕಾಕೂನ ಅದ್ಭುತ ಹೋಳಿಗೆ ಮತ್ತು ಘಮಘಮ ಸಾರು. ಅದು, ಸುಖಮಯ ಜೀವನ.

ಇದೆಲ್ಲದರ ಮಧ್ಯೆ ನಿಂಗಮ್ಮನ ಕೆಲಸದ ಬಗ್ಗೆ ಬಹಳ ಯೋಚಿಸುತ್ತಿರಲಿಲ್ಲ. ಅವಳು ಬೆಳಿಗ್ಗೆ ಕೆಲಸಕ್ಕೆ ಬರದಿದ್ದರೆ ಸಂಜೆಗೆ ಬರುತ್ತಿದ್ದಳು, ಕೆಲವೊಮ್ಮೆ ಯಾವುದೋ ಸಂಬಂಧಿಯ ಮಣ್ಣಿಗೆಂದು ಹೋದರೆ ತನ್ನ ಸೊಸೆಯನ್ನು ಕಳಿಸುತ್ತಿದ್ದಳು, ಅವಳೂ ಬರದಿದ್ದರೆ ಅಪ್ಪ ಇನ್ನೊಬ್ಬ ಕೆಲಸದವಳು, ಕಮಲಿಗೆ ಪಾತ್ರೆ ತೊಳೆಯಲು ಕೇಳುತ್ತಿದ್ದ. ಒಟ್ಟಿನಲ್ಲಿ ಹೇಳಬೇಕೆಂದರೆ, ನಾನಾಗಲಿ, ನನ್ನ ತಂಗಿಯಾಗಲಿ, ಚಿಕ್ಕವರಿದ್ದಾಗ ಎಂದೂ ಪಾತ್ರೆ ತೊಳೆಯಲಿಲ್ಲ! ನಿಜ ಅರ್ಥದಲ್ಲಿ ಇದು ಐಷಾರಾಮ, ಅಲ್ಲವೇ?

ಚಿಕ್ಕವನಿದ್ದಾಗ ಮತ್ತು ಮುಂದೆ ಭಾರತದಲ್ಲಿ ನೌಕರಿ ಮಾಡುವಾಗ, ಪಾತ್ರೆ ತೊಳೆಯುವ ಬಗ್ಗೆ ಎಂದೂ ತಲೆ ಕೆಡಿಸಿಕೊಳ್ಳಬೇಕಾಗಿರಲಿಲ್ಲ. ಆದರೆ ಅಮೆರಿಕಕ್ಕೆ ಬಂದಮೇಲೆ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಯಿತು. ಬೊಬ್ಬಿಯವರ ಅಂಗಡಿಯಿಂದ ಕಾಳು-ಕಡಿ ತರುವ ಹಮಾಲ ಇಲ್ಲಿಲ್ಲ, ದಿನ ಬೆಳಗಾದರೆ ಬಂದು ಬಿಸಿ ಬಿಸಿ ಅಡುಗೆ ಮಾಡಿ ಕೊಡುವ ಮಾಮಿ ಇಲ್ಲಿಲ್ಲ, ತಿಂದು ಇಟ್ಟ ಪಾತ್ರೆಗಳನ್ನು ತೊಳೆಯುವ ನಿಂಗಮ್ಮ ಇಲ್ಲಿಲ್ಲ. ಇದೊಂದು ರೀತಿ ಹಿಂಬಡ್ತಿ ತಾನೇ? ಕಾಳು-ಕಡಿ ತರಲು ಕಾರು ಇದ್ದಿದ್ದರಿಂದ ಆ ಸಮಸ್ಯೆ ಬಗೆಹರಿಯಿತು. ಮನೆಯ ಒಡತಿ, ನನ್ನ ಹೆಂಡತಿ, ಮದುವೆ ಆದಾಗ ಅಡುಗೆಯ ಜವಾಬ್ದಾರಿ ತೆಗೆದುಕೊಂಡಿದ್ದಲ್ಲದೆ ಕಳೆದ 25 ವರ್ಷಗಳಿಂದ ಬಿಸಿಬಿಸಿಯಾದ, ರುಚಿರುಚಿಯಾದ, ಪೌಷ್ಟಿಕ ತಿಂಡಿ, ತಿನಿಸು ಹಾಗೂ ಊಟ ಬಡಿಸುತ್ತಿದ್ದಾಳೆ. ಅದು ನನ್ನ ಮತ್ತು ನನ್ನ ಮಕ್ಕಳ ಭಾಗ್ಯವೆಂದೇ ಹೇಳಬೇಕು. ಇದನ್ನೆಲ್ಲ ಅವಳು ನನಗೆ ಹೇಳಿಸಿ ಬರೆಸಿರಬಹುದು ಎಂದು ನಿಮಗೇನಾದರೂ ಸಂಶಯ ಬಂದಿದ್ದರೆ ಅದಕ್ಕೆ ನಾನು ಹೊಣೆಗಾರನಲ್ಲ!

ಇರಲಿ, ನಮ್ಮ ಅತ್ತೆಯವರು ನಮಗಿಂತ ಒಂದು ತಲೆಮಾರು ಹಿಂದಿನವರು. ಗೃಹಿಣಿಯಾಗಿ ಮನೆ, ಸಂಸಾರ ನಿಭಾಯಿಸಿದವರು. ಮನೆಯ ಗಂಡಸಿನ ಕೈಯಲ್ಲಿ ಪಾತ್ರೆ ತೊಳೆಸುವುದು ಅವರ ಮನಸ್ಸಿಗೆ ಹಿಡಿಸದಾಗಿತ್ತು.

ಆದರೆ ಅಮೆರಿಕಕ್ಕೆ ಬಂದಮೇಲೆ, ಇಲ್ಲಿಯ ಜೀವನ ಶೈಲಿಯನ್ನು ಅಳವಡಿಸಿಕೊಂಡಮೇಲೆ, ತನ್ನ ನೌಕರಿಯ ಜೊತೆಗೆ ಮನೆಯನ್ನೂ ಸಂಭಾಳಿಸುತ್ತಿರುವ ಹೆಂಡತಿ ಇದ್ದ ಮೇಲೆ, ನಾನು ನಾಲ್ಕು ಪಾತ್ರೆ ತೊಳೆಯುವುದು ಹೆಚ್ಚಿನ ಮಾತೇ? ಹಾಗಂತಲೆ ಕಳೆದ 21 ವರ್ಷಗಳಿಂದ ದಿನಕ್ಕೆರಡು ಸಾರಿ ಶರ್ಟಿನ ತೋಳೇರಿಸಿ ಪಾತ್ರೆ ತೊಳೆಯಲು ನಿಂತಾಗ, ಇತ್ತ ಹೆಂಡತಿ ಅಡುಗೆ ಮಾಡುತ್ತಿರುವಾಗ, ಅಲ್ಲಿ ಸುಪುತ್ರ ಟೀವಿಯ ಮುಂದೆ ಕುಳಿತು ಫ಼ುಟಬಾಲ್ ಆಟ ನೋಡುತ್ತಿರುವುದನ್ನು ನೋಡಿದಾಗ, ಅಥವಾ ಮಗಳು ಐಫೋನಿನಲ್ಲಿ ಸತತವಾಗಿ, ಬೇಸರ ಮಾಡಿಕೊಳ್ಳದೆ ಸ್ಕ್ರೋಲ್ ಮಾಡುತ್ತಿರುವಾಗ, ಬ್ರೇಕಪ್ ಚಲನಚಿತ್ರದಲ್ಲಿ ಜೆನ್ನಿಫ಼ರ್ ಆನ್ನಿಸ್ಟನ್ ತನ್ನ ಗಂಡನಿಗೆ  I want you to want to do the dishes  ಎಂದು ಕೂಗಾಡಿದ್ದು ನೆನಪಿಗೆ ಬರುತ್ತದೆ. ನೀವೆಂದಾದರೂ ಮನಃಪೂರ್ವಕವಾಗಿ, ಸ್ವಂತ ಇಚ್ಛೆಯಿಂದ ಪಾತ್ರೆ ತೊಳೆದಿದ್ದೀರಾ? ದಯವಿಟ್ಟು ಉತ್ತರಿಸಬೇಡಿ! ಹೀಗೆ ಕೆಲವೊಂದು ಸಾರಿ ಪಾತ್ರೆ ತೊಳೆಯಲು ಬೇಜಾರಾದಾಗ ನಿಂಗಮ್ಮನ ನೆನಪಾಗುತ್ತದೆ.

ನಿಂಗಮ್ಮ ನಮ್ಮ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದದ್ದು ಸುಮಾರು 30–40 ವರ್ಷಗಳ ಹಿಂದೆ. ಆಗಿನ ಅವಳ ಪರಿಸ್ಥಿತಿಗೂ ಈಗಿನ ನನ್ನ ಪರಿಸ್ಥಿತಿಗೂ ತುಂಬಾ ವ್ಯತ್ಯಾಸವಿದೆ. ಪ್ರತಿಸಾರಿ ನಾನು ಅಡುಗೆಮನೆಯ ಸಿಂಕಿನ ಮುಂದೆ ನಿಂತು ಪಾತ್ರೆ ತೊಳೆಯುವಾಗ ಅವಳು ಕುಕ್ಕರಗಾಲಿನಲ್ಲಿ ಕುಳಿತು ಪಾತ್ರೆ ತೊಳೆಯುವ ದೃಶ್ಯ ಕಣ್ಮುಂದೆ ಬರುತ್ತದೆ.

ಎಷ್ಟೋ ವರ್ಷಗಳಿಂದ  Western Toilet ಉಪಯೋಗಿಸುತ್ತಿರುವ, ಯೋಗಾಭ್ಯಾಸವನ್ನೂ ಮಾಡದ ನಾನು ಈಗ ಹಾಗೆ ಕುಳಿತುಕೊಳ್ಳುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಸಿಂಕಿನಲ್ಲಿ ನಳದಿಂದ ನೀರು ಧಾರಾಕಾರವಾಗಿ ಸುರಿಯುತ್ತಿರುವಾಗ ನಿಂಗಮ್ಮನಿಗೆ ಒಂದು ಚಿಕ್ಕ ಬಕೇಟಿನಲ್ಲಿ ನೀರು ಕೊಟ್ಟು ಬುಟ್ಟಿಗಟ್ಟಲೆ ಪಾತ್ರೆ ತೊಳೆಯಲು ಹೇಳಿದ್ದು ನೆನಪಾಗುತ್ತದೆ. ನಳದ ಹಿಡಿಕೆಯನ್ನು ಸ್ವಲ್ಪ ಬಲಕ್ಕೆ ತಿರುಗಿಸಿದಾಗ ತಕ್ಷಣ ಬರುವ ಬೆಚ್ಚನೆಯ ನೀರು ಅವಳಿಗೆ ಕೊಟ್ಟ ತಣ್ಣೀರಿನ ನೆನಪು ಮಾಡಿ ಕೊಡುತ್ತದೆ. ಹಿಂದಿನ ರಾತ್ರಿ ಸಿಂಕಿನಲ್ಲಿ ಬಿಸಿನೀರಿನಲ್ಲಿ ನೆನಸಿ ಇಟ್ಟ ಪಾತ್ರೆಗಳಿಂದ ಕೊಳೆ ಮತ್ತು ಜಿಗಿ ಸರಾಗವಾಗಿ ಹೋಗುವಾಗ ಕಟುಕಾದ ಹಂಚನ್ನು ಅವಳು ಇಟ್ಟಂಗಿ ಮತ್ತು ಇದ್ದಲಿಯ ಚೂರಿನಿಂದ ಗೀಚಿಗೀಚಿ ಕೆರೆದದ್ದು ಜ್ಞಾಪಕಕ್ಕೆ ಬರುತ್ತದೆ. ಪಾಪ ಗಂಡ ಭಾಂಡೆ ತೊಳಿತಾನ ಅಂತ ನನ್ನ ಹೆಂಡತಿ harsh chemicals ಇಲ್ಲದಂತಹ Dawn Platinum ಪ್ರೀತಿಯಿಂದ ತಂದು ಕೊಟ್ಟಾಗ ನಿಂಗಮ್ಮನ ಸೆಲೆತ ಕೈಗಳು ನೆನಪಿಗೆ ಬರುತ್ತವೆ.

ನನ್ನ ಐಫೋನಿನಲ್ಲಿ Spotify Premiumನಲ್ಲಿ ಹಳೆಯ ಹಿಂದಿ ಹಾಗೂ ಕನ್ನಡ ಚಿತ್ರಗೀತೆಗಳನ್ನು Bluetooth ಮುಖಾಂತರ Bose speakerನಿಂದ ಕೇಳುತ್ತಾ ತನ್ಮಯನಾಗಿ ಪಾತ್ರೆ ತೊಳೆಯುವಾಗ ಅವಳು ಒಂದಾದ ಮೇಲೆ ಒಂದರಂತೆ ಐದಾರು ಮನೆಗಳ ಪಾತ್ರೆಗಳನ್ನು ಅವಸರದಲ್ಲಿ ತೊಳೆಯುವ ದೃಶ್ಯ ಕಣ್ಮುಂದೆ ಬರುತ್ತದೆ. ನಾನು ಎಲ್ಲ ಪಾತ್ರೆಗಳನ್ನು ತೊಳೆದು ಬುಟ್ಟಿಯಲ್ಲಿ ಹಾಕಿದಾಗ ಜಗತ್ತನ್ನೇ ಗೆದ್ದಂತೆ ಹೆಂಡತಿಯ ಕಡೆ ನೋಡಿ ಪ್ರಶಂಸೆ ಅಪೇಕ್ಷಿಸುವಾಗ ಪಕ್ಕದ ಮನೆಯವರು ನಿಂಗಮ್ಮನಿಗೆ ‘ನೀ ಈಗೀಗ ಯಾಕೊ ಸ್ವಚ್ಛ ತೊಳಿವಲ್ಲಿ ನೋಡವಾ, ಹಿಂಗಾದರ ಬಿಡಸಬೇಕಾಗತದ’ ಎಂದು ಹೆದರಿಸಿದ್ದು ನೆನಪಾಗುತ್ತದೆ. ಇಲ್ಲಿ Minimum wage $15 ಆಗಲೆಂದು ಜನ ಪ್ರತಿಭಟಿಸುವಾಗ ಆರವತ್ತರ ಮುದುಕಿ ಕೆಮ್ಮು ನೆಗಡಿ ಬಂದರೂ, ಜ್ವರ ಬಂದರೂ, ಬಿಟ್ಟೂ ಬಿಡದಂತೆ ದುಡಿಯುವಾಗ, ಎರಡು ರೂಪಾಯಿ ಹೆಚ್ಚಿಗೆ ಕೊಡಲು ಜನ ಹಿಂದೇಟು ಹಾಕುತ್ತಿದ್ದದ್ದು ನೆನಪಾಗುತ್ತದೆ.

ಮೂಲಭೂತ ಪ್ರಶ್ನೆ ಏನೆಂದರೆ, ಈ ತರಹದ ಕೆಲಸ ಮಾಡುವವರ ಜೀವಕ್ಕೆ ಅಷ್ಟೆ ಬೆಲೆಯೇ? ನಾನು ಅಮೆರಿಕಕ್ಕೆ ಬಂದು ನಮ್ಮ ಕೆಲಸಗಳನ್ನು ನಾನೇ ಮಾಡದೆ ಹೋಗಿದ್ದರೆ ಇಷ್ಟೆಲ್ಲಾ ವಿಚಾರ ಮಾಡುತ್ತಿದ್ದೆನೇ? ಬಹುಶಃ ಇಲ್ಲ ಎನಿಸುತ್ತದೆ. ಆಧುನಿಕರಣದಿಂದ, ಹೊಸ ತಂತ್ರಜ್ಞಾನದಿಂದ ಆಗಿರುವ ಪ್ರಗತಿ ಅದ್ಭುತ. ವಾಶಿಂಗ್‌ ಮಶೀನ್ ಆಗಲಿ, ಡಿಶ್ ವಾಶರ್ ಆಗಲಿ, ಅಥವಾ ಈಗ ಬರುತ್ತಿರುವ self driving ಕಾರುಗಳಾಗಲಿ, ನಮ್ಮ ಜೀವನವನ್ನು ಬಹಳ ಆರಾಮದಾಯಕ ಮಾಡಿವೆ.

ಉಳಿದಂತಹ ಇನ್ನೂ ಎಷ್ಟೋ ಕೆಲಸಗಳಿಗೆ, ನಾಲ್ಕು ದುಡ್ಡಿಗೋಸ್ಕರ, ತಮ್ಮ ದೇಹ ಹಾಗೂ ಜೀವವನ್ನು ತೇಯುವ ನಮ್ಮ ಸಹಜೀವಿಗಳ ಬಗ್ಗೆ ಸ್ವಲ್ಪ ಅನುಕಂಪ ಬೇಕಲ್ಲವೇ? ಆ ಭಾವನೆ ಬರಲು ದೇಶ ಬಿಟ್ಟು ಅಮೆರಿಕಕ್ಕೆ ಬಂದು ಇಪ್ಪತ್ತು ವರ್ಷಗಟ್ಟಲೆ ಪಾತ್ರೆ ತೊಳೆಯಬೇಕಾಗಬಾರದಿತ್ತು. ಆದರೆ ಹಿಂದಿಯಲ್ಲಿ ಒಂದು ಗಾದೆ ಇದೆ, ದೇರ್‌ ಆಯೆ ಪರ್‌ ದುರುಸ್ತ್‌ ಆಯೆ, ಅಥವಾ ಆಂಗ್ಲ ಭಾಷೆಯಲ್ಲಿ Better late than never ಎನ್ನುವ ತರಹ ಈಗ ನಾನು ನಮ್ಮ ನಿಂಗಮ್ಮನನ್ನು ಹುಡುಕಲು ಹೊರಟಿರುವೆ. ಆಗಲೆ 60 ದಾಟಿದ್ದ ಅವಳು ಈಗ ಜೀವಂತ ಇರುವ ಸಾಧ್ಯತೆ ಕಡಿಮೆ. ಆದರೆ ಅವಳ ಮಕ್ಕಳು ಹಾಗು ಮೊಮ್ಮಕ್ಕಳನ್ನು ಹುಡುಕಿ ಅವರಿಗೆ ನನ್ನ ಧನ್ಯವಾದ ಹೇಳುವುದು ಮುಖ್ಯವಾಗಿದೆ. ಬರಿ ಬಾಯಿಮಾತಿನಿಂದ ಅರ್ಪಿಸುವ ಕೃತಜ್ಞತೆ ಬಹುಶಃ ಸಾಕಾಗಲಿಕ್ಕಿಲ್ಲ, ಅಲ್ಲವೇ? ನನ್ನ ಮಗ ನನಗೆ ಹೇಳಿದಂತೆ Even charity is selfish. You get something out of it. ಇನ್ನೊಬ್ಬರಿಗೆ ಸಹಾಯ ಮಾಡಿದಾಗ ಆಗುವ ತೃಪ್ತಿಯನ್ನು ಅಳಿಯಲಿ ಸಾಧ್ಯವಿಲ್ಲ. ಅವನು ಹೇಳುವುದು ಸರಿ ತಾನೇ?

ಅಮೆರಿಕದಲ್ಲಿರುವ ನನ್ನ ಅಣ್ಣ-ತಮ್ಮಂದಿರೆ (ಅಕ್ಕ-ತಂಗಿಯರೆ ದಯವಿಟ್ಟು ಕ್ಷಮಿಸಿ), ನೀವೂ ನನ್ನ ತರಹ ಭಾರತದಲ್ಲಿ ಸುಖದ ಜೀವನ ಕಳೆದು ಈಗ ಇಲ್ಲಿ ನಿಮ್ಮ ಮನೆಯಲ್ಲಿ ನಿಂಗಮ್ಮನ ಕೆಲಸ ಮಾಡುತ್ತಿರಬಹುದು. ನನ್ನವಳ ಹಾಗೆ ನಿಮ್ಮ ಹೆಂಡತಿಯರೂ ನೌಕರಿ ಜೊತೆಗೆ ಮಕ್ಕಳು, ಸ್ವಚ್ಛತೆ, ಅಡುಗೆ, ಎಲ್ಲವನ್ನೂ ನಿಭಾಯಿಸುತ್ತಿರಬಹುದು. ನಮ್ಮ ಮಕ್ಕಳ ಹಾಗೆ ನಿಮ್ಮ ಮಕ್ಕಳೂ ಸೋಫಾದ ಮೇಲೆ ಅಥವಾ ತಮ್ಮ ರೂಮಿನಲ್ಲಿ ಕುಳಿತುಕೊಂಡು Xbox, Instagram, SnapChat, TikTok ನಲ್ಲಿ ಮಗ್ನರಾಗಿರಬಹುದು. ಆಗೀಗ ನಿಮ್ಮ ಮನಸಿನಲ್ಲೂ ನಿಮ್ಮ ನಿಂಗಮ್ಮ ಬರುತ್ತಿರಬಹುದು. ಅವಳು ಈಗ ಎಲ್ಲಿದ್ದಾಳೆ ಹಾಗೂ ಹೇಗಿದ್ದಾಳೆ?

ಇನ್ನು ಭಾರತದಲ್ಲಿರುವ ನನ್ನ ಆತ್ಮೀಯ ಅಣ್ಣಂದಿರೆ ಮತ್ತು ತಮ್ಮಂದಿರೆ, ನಿಮ್ಮ ಬದುಕು ಹಾಗೂ ಜೀವನಶೈಲಿ ಈಗ ಹೇಗಿದೆ ನನಗೆ ಪೂರ್ಣ ಅರಿವಿಲ್ಲ. ಆದರೆ ನಿಮ್ಮ ತಾಯಿ ಮತ್ತು ಅತ್ತೆಯವರು ಇರುವವರೆಗೆ ನೀವು ಪಾತ್ರೆ ತೊಳೆಯಲಿಕ್ಕಿಲ್ಲ ಎಂದು ಅನಿಸಿಕೆ. ನಿಮ್ಮದು ಅಂತಹ ಸುಖದ ಜೀವನವಾಗಿದ್ದರೆ ನಿಮ್ಮಲ್ಲೊಂದು ವಿನಂತಿ. ಇಂದು ರಾತ್ರಿ ಮಲಗುವ ಮುನ್ನ ಬುಟ್ಟಿಯಲ್ಲಿರುವ ಪಾತ್ರೆಗಳನ್ನು ಒಂದು ಸಾರಿ ನೋಡಿ. ಅವು ಒಣಗಿ ಕಟಿ ಕಟಿಯಾಗಿದ್ದರೆ, ಸ್ವಲ್ಪ ನೀರುಹಾಕಿ, ಸ್ವಲ್ಪ ನೆನೆಯಲಿ. ಕೃಷ್ಣ ಪರಮಾತ್ಮ ಹೇಳಿದಂತೆ ‘ಕರ್ಮಣ್ಯೆ ವಾಧಿಕರಸ್ತೆ ಮಾ ಫಲೇಷು ಕದಾಚನ.....’

ಲೇಖಕ: ಅಮೆರಿಕದ ಬೋಸ್ಟನ್‌ ನಗರದ ನಿವಾಸಿ, ಹುಬ್ಬಳ್ಳಿ ಮೂಲ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು