ಗುರುವಾರ , ಜೂನ್ 17, 2021
22 °C

ಕಣ್ಣಿಲ್ಲದ ಕಾಟಿಗೆ ಸಿಕ್ಕಿತು ಸೂರು

ಅಖಿಲೇಶ್‌ ಚಿಪ್ಲಿ Updated:

ಅಕ್ಷರ ಗಾತ್ರ : | |

Prajavani

ಏಪ್ರಿಲ್ ತಿಂಗಳ ಕೊನೆಯಲ್ಲಿ, ಸಾಗರದ ಮಂಚಾಲೆಯ ಮಿತ್ರರೊಬ್ಬರು ಫೋನ್ ಮಾಡಿ, ಕಲ್ಲು ಕ್ವಾರಿಯಲ್ಲಿ ಕಾಡುಕೋಣವೊಂದು ಬಿದ್ದಿದೆ, ಪ್ರಾಯಶಃ ಅದಕ್ಕೆ ಕಣ್ಣು ಕಾಣುತ್ತಿಲ್ಲ, ಅರಣ್ಯ ಇಲಾಖೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದೇವೆ ಎಂದರು. ಇಲಾಖೆಯ ಸಿಬ್ಬಂದಿ ಬಂದು ನೋಡಿದರು. ನೆರಳಿಲ್ಲದ ಕಲ್ಲುಕ್ವಾರಿಯಲ್ಲಿ ಕಾಟಿ ಬಳಲುತ್ತಿತ್ತು. ಶಿವಮೊಗ್ಗದ ವನ್ಯಜೀವಿ ವೈದ್ಯರಿಗೆ ನಾನು ವಿಷಯ ಮುಟ್ಟಿಸಿದೆ. ಸಂಜೆಯ ವೇಳೆಗೆ ಅವರು ಬಂದರು. ಅರಿವಳಿಕೆ ಮದ್ದುನೀಡಿ, ಕಾಟಿಯನ್ನು ಎಚ್ಚರ ತಪ್ಪಿಸಿದರು.

ಪ್ರಾದೇಶಿಕ ಪ್ರಾಬಲ್ಯಕ್ಕಾಗಿ ನಡೆದ ಕಾಳಗದಲ್ಲಿ ಕಾಟಿಯ ಎರಡೂ ಕಣ್ಣುಗಳು ಕಿತ್ತು ಹೋಗಿದ್ದವು. ಸಂತತಿ ಮುಂದುವರೆಸುವ ಕಾಳಗ ಕಾಟಿಯ ಭವಿಷ್ಯವನ್ನೇ ನುಂಗಿ ಹಾಕಿತ್ತು. ಅಲ್ಲದೆ, ಹೊಟ್ಟೆಯ ಕೆಳಭಾಗದಲ್ಲಿ ಆರಿಂಚು ಉದ್ದದ ಆಳವಾದ ಗಾಯ, ಪಶುವೈದ್ಯರು ಆ್ಯಂಟಿಬಯಾಟಿಕ್‌ ಚುಚ್ಚುಮದ್ದಿನ ಜೊತೆಗೆ ಐದು ಬಾಟಲು ಡ್ರಿಪ್ ಹಾಕಿದರು. ಅಷ್ಟರಲ್ಲಿ ಕಾಟಿಗೆ ಎಚ್ಚರವಾಯಿತು. ಟ್ಯಾಂಕರಿನಿಂದ ಸುರಿದ ನೀರನ್ನು ಅಲ್ಪ ಹೀರಿತು. ಅಷ್ಟರಲ್ಲಿ ಕಾಟಿಯು ಕ್ವಾರಿಯಿಂದ ಹತ್ತಿಹೋಗಲು ಅನುವಾಗುವಂತೆ ದಾರಿ ಮಾಡಿಟ್ಟಿದ್ದರು. ಇಲಾಖೆಯ ಸಿಬ್ಬಂದಿ ಅದರ ಕಾವಲಿಗೆ ನಿಂತಿದ್ದರು.

ಮಾರನೇ ದಿನ ಹೊತ್ತಾರೆಯಲ್ಲೇ ಎದ್ದು, ಒಂದು ಹೊರೆಯಾಗುವಷ್ಟು ಕ್ಯಾಲಿಯಾಂಡ್ರಾ ಸೊಪ್ಪನ್ನು ಮುರಿದು ಕಾಟಿಗೆ ತಿನ್ನಿಸುವ ಸಾಹಸಕ್ಕೆ ಮುಂದಾದೆವು. ಕಾಟಿಯು ಕಲ್ಲು ಕ್ವಾರಿಯಿಂದ ಮೇಲೆ ಹೋಗಿ, ಪೊದೆಯಲ್ಲಿ ನಿಂತಿತ್ತು. ರಾತ್ರಿಯ ಹೊತ್ತು ನಾಲಗೆಗೆ ನಿಲುಕಿದ ಕೊಂಚ ಬಿದಿರು ಸೊಪ್ಪನ್ನು ತಿಂದ ಕುರುಹು ಇತ್ತು. ಕಾಟಿಯೋ ಜನಗಳ ದಟ್ಟಣೆಯಿಂದ ಕೆರಳಿತ್ತು. ತಾತ್ಕಾಲಿಕವಾಗಿ ಅದಕ್ಕೆ ‘ಭೀಮ’ ಎಂದು ಹೆಸರಿಟ್ಟು, ರಮಿಸುವ ವ್ಯರ್ಥ ಪ್ರಯತ್ನ ಮಾಡಿದೆ. ಸೊಪ್ಪನ್ನು ಆದಷ್ಟು ಅದರ ಬಾಯಿಯ ಹತ್ತಿರ ಎಸೆಯುವ ಯತ್ನ ಫಲ ನೀಡಿದರೂ, ಅದು ತಿನ್ನಲಿಲ್ಲ, ಬದಲಿಗೆ ಹತ್ತಿರದ ಹುಣಾಲು ಗಿಡವನ್ನು ಸಿಟ್ಟಿನಿಂದ ಘಟ್ಟಿಸಿತು.

ನಾಲ್ಕು ವರ್ಷದ ಕಾಟಿಯನ್ನು ಉಳಿಸಲೇಬೇಕು ಎಂಬ ಇಚ್ಛೆ ನಮ್ಮದು. ನಿಸರ್ಗದ ನಿಯಮದಂತೆ, ಅದು ಹೇಗಾದರೂ ಬದುಕಲಿ ಎನ್ನುವುದು ಕೆಲವರ ಅಭಿಪ್ರಾಯ. ಮತ್ತೆ ಶಿವಮೊಗ್ಗದ ವನ್ಯಜೀವಿ ವೈದ್ಯರು ಬಂದರು. ಅವರ ಅಭಿಪ್ರಾಯದಂತೆ, ಅದು ಇಲ್ಲಿಗೆ ಬಂದಮೇಲೆ ಚೇತರಿಸಿಕೊಂಡಿದೆ. ಅದನ್ನು ಹಿಡಿದು ಮೃಗಾಲಯಕ್ಕೆ ಸಾಗಿಸುವುದು ಒಳ್ಳೆಯದು ಎಂದರು. ವನ್ಯಜೀವಿ ಸಂರಕ್ಷಣಾ ಕಾಯ್ದೆ (1972)ರ ಪರಿಚ್ಛೇದ 2ರ ಅಡಿಯಲ್ಲಿ ಸಂರಕ್ಷಿತ ಜೀವಿಯಾದ ಕಾಟಿಯನ್ನು ಸ್ಥಳಾಂತರ ಮಾಡುವುದಕ್ಕೆ ಅರಣ್ಯಭವನದ ಪರವಾನಗಿ ಕಡ್ಡಾಯ. ಇಂತಹ ಔಪಚಾರಿಕ ನಿಯಮಗಳಿಗೆ ಇ-ಮೇಲ್‌ ಮೂಲಕ ಪರಿಹಾರ ಸಿಕ್ಕಿತು. ಸ್ಥಳಾಂತರ ಮಾಡಲು ಪರವಾನಿಗೆ ಸಿಕ್ಕಿತು. ಅಷ್ಟರಲ್ಲಿ ಕಾಟಿಯು ಕಾಡಿನಲ್ಲಿ ದೂರ ಕ್ರಮಿಸಿತ್ತು. ಅಲ್ಪ-ಸ್ವಲ್ಪ ಆಹಾರವೇನೋ ಸಿಕ್ಕಿತ್ತಾದರೂ ಮುಖ್ಯವಾದ ಜೀವಜಲ ಅದಕ್ಕೆ ಮರೀಚಿಕೆಯಾಗಿತ್ತು. ಸಿಬ್ಬಂದಿ ಪ್ರಕಾರ, ಕಾಟಿ ಚಲಿಸುತ್ತಿದ್ದ ದಿಕ್ಕಿನಲ್ಲೊಂದು ಕೆರೆ ಇತ್ತು.

ಕಾಟಿಯನ್ನು ಮೃಗಾಲಯಕ್ಕೆ ಸ್ಥಳಾಂತರಿಸುವ ಕೆಲಸ ಬಹಳ ಸವಾಲಿನದು. 1500 ಕೆ.ಜಿ. ತೂಗುವ ದೈತ್ಯದೇಹಿಯನ್ನು ಎತ್ತಿ ಲಾರಿಗೆ ಹಾಕಲು ಸೂಕ್ತವಾದ ವ್ಯವಸ್ಥೆ ಇರಬೇಕು. ಕಾಡಿನ ಮಧ್ಯದಲ್ಲಿ ಎಚ್ಚರ ತಪ್ಪಿಸಿ, ಅದನ್ನು ರಸ್ತೆಯವರೆಗೆ ಹೊತ್ತು ತರುವುದು ಅಸಾಧ್ಯದ ಮಾತು. ಕ್ರಮಬದ್ಧ ಕ್ರಿಯಾಯೋಜನೆಯನ್ನು ಮುಂಚಿತವಾಗಿ ಸಿದ್ಧಪಡಿಸಬೇಕಿತ್ತು. ರಾತ್ರಿ ಹೊತ್ತು ಕಾಟಿಯನ್ನು ಹಿಂಬಾಲಿಸಲು ಸಿಬ್ಬಂದಿ ಬೇಕು. ಅಂತೂ ಬೆಳಗ್ಗೆ 6 ಗಂಟೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಬೇಕು ಮತ್ತು ಶಿವಮೊಗ್ಗದ ಸಿಂಹಧಾಮದಲ್ಲಿರುವ ಪಂಜರವನ್ನು ರಾತ್ರಿಯೇ ಸಾಗರಕ್ಕೆ ತರುವ ವ್ಯವಸ್ಥೆ ಮಾಡಬೇಕು. ಪಂಜರವನ್ನು ಇಳಿಸಲು ಮತ್ತು ಲಾರಿಗೆ ಏರಿಸಲು ಕ್ರೇನ್ ಬೇಕು ಎಂದು ನಿರ್ಧರಿಸಿ ಹಿಂದಿನ ದಿನವೇ ವ್ಯವಸ್ಥೆ ಮಾಡಿಕೊಳ್ಳಲಾಯಿತು. ಸಮಾಲೋಚನಾ ಸಭೆ ಮುಗಿಯುವಷ್ಟರಲ್ಲಿ, ಸ್ಥಳದಿಂದ ಒಂದು ಒಳ್ಳೆಯ ಸುದ್ದಿ ಬಂತು. ಕಾಟಿ ಕೆರೆಗೆ ಇಳಿದು ನೀರು ಕುಡಿಯುತ್ತಿತ್ತು. ಬಹುಶಃ ವಾರದ ಬಾಯಾರಿಕೆಯನ್ನು ಒಂದೇ ಬಾರಿ ನೀಗಿಸಿಕೊಂಡಿತು. ಸುಮಾರು ಹದಿನೈದು ನಿಮಿಷ ಜೀವಜಲವನ್ನು ಹೀರಿತು. ಇದೊಂದು ನಮ್ಮ ಯೋಜಿತ ಕಾರ್ಯಾಚರಣೆಗೆ ಧನಾತ್ಮಕವಾದ ಅಂಶ.

ಏಪ್ರಿಲ್ 30ರ ಮುಂಜಾವಿನಲ್ಲಿ ಸ್ಥಳಕ್ಕೆ ತಲುಪುವ ಹೊತ್ತಿಗೆ ಆರು ಗಂಟೆಯಾಗಿತ್ತು. ಹಿಂದಿನ ರಾತ್ರಿ ಭರ್ಜರಿ ಮಳೆಯೂ ಆಗಿದ್ದು, ಕಾಡುಕೋಣದ ಆರೋಗ್ಯ ಹಿತದೃಷ್ಟಿಯಿಂದ ಒಳಿತಾಗಿತ್ತು. ವನ್ಯಜೀವಿ ತಜ್ಞರು, ತಜ್ಞ ವೈದ್ಯರು ಸ್ಥಳಕ್ಕೆ ಬರುವ ಹೊತ್ತಿಗೆ ಸುಮಾರು ಏಳು ಗಂಟೆ. ಸಂಜೆ ನೀರು ಕುಡಿದ ಕಾಟಿಯು ರಾತ್ರಿ ಸುಮಾರು ಅರ್ಧ ಕಿ.ಮೀ ಕ್ರಮಿಸಿತ್ತು. ಕೆರೆಯ ಪಕ್ಕದಲ್ಲಿ ಇರುವ ಸಿಪಿಟಿ(ಕೌ ಪ್ರಿವೆನ್ಷನ್ ಟ್ರೆಂಚ್ – ಅರಣ್ಯ ಒತ್ತುವರಿಯನ್ನು ತಡೆಯುವ ಸಲುವಾಗಿ ಅರಣ್ಯ ಇಲಾಖೆಯವರು ತೆಗೆಯುವ ಚಿಕ್ಕರೂಪದ ಹಳ್ಳ) ಗುಂಟ ಚಲಿಸಿ, ದಟ್ಟವಾದ ಪೊದೆಯಲ್ಲಿ ನಿಂತಿತ್ತು. ಆ ಭಾಗಕ್ಕೆ ಲಾರಿಯಾಗಲೀ ಕ್ರೇನ್ ಆಗಲೀ ಹೋಗುವ ಅನುಕೂಲವಿರಲಿಲ್ಲ. ಕಾಟಿಯನ್ನು ನಿಧಾನವಾಗಿ ರಸ್ತೆಯ ಕಡೆಗೆ ಹೋಗುವ ಹಾಗೆ ಮಾಡಬೇಕು. ಕಣ್ಣಿಲ್ಲದ ಕಾಟಿಗೆ ತೀರಾ ಗಾಬರಿ ಮಾಡುವ ಹಾಗಿಲ್ಲ. ನಮ್ಮ ಯೋಚನೆಗಳು, ಯೋಜನೆಗಳು ಕಾಟಿಗೆ ಅರ್ಥವಾದರೆ ಅಡ್ಡಿಯಿಲ್ಲ. ಅದೊಂದು ವನ್ಯಜೀವಿ, ನಮ್ಮೆಲ್ಲಾ ಯೋಜನೆಗಳನ್ನು ತಲೆಬುಡ ಮಾಡಿ ಇಡೀ ಕಾರ್ಯಾಚರಣೆಯೇ ಬೇರೊಂದು ರೂಪ ಪಡೆಯುವ ಸಾಧ್ಯತೆ ಬಹಳ ಹೆಚ್ಚಾಗಿತ್ತು. ಕಣ್ಣು ಕಳೆದುಕೊಂಡ ಕಾಟಿ ಹೇಗಿದ್ದರೂ ಕಾಡಿನಲ್ಲಿ ಹೆಚ್ಚು ದಿನ ಬದುಕುವುದಿಲ್ಲ, ಆದ್ದರಿಂದ, ಇಂಥದೊಂದು ಅಪಾಯಕಾರಿ ಕಾರ್ಯಾಚರಣೆಗೆ ಮುಂದಾಗಿದ್ದೆವು.

ಕಾಟಿಗಳು ಹೆಚ್ಚಾಗಿ ರಾತ್ರಿ ವೇಳೆ ಚುರುಕಾಗಿರುತ್ತವೆ. ಹೀಗಾಗಿ ಬೆಳಗಿನ ಕಾರ್ಯಾಚರಣೆಗೆ ಮನಸ್ಸು ಮಾಡಿದ್ದೆವು. ಎಂಟು ಗಂಟೆಗೆ ಇಲಾಖೆಯ ಸಿಬ್ಬಂದಿ, ವೈದ್ಯರು, ತಜ್ಞರು ಎಲ್ಲಾ ಸೇರಿದರು. ತಜ್ಞ ವೈದ್ಯರು, ಅರಿವಳಿಕೆ ಚುಚ್ಚುಮದ್ದನ್ನು ತಯಾರು ಮಾಡಿಟ್ಟುಕೊಂಡರು. ಬೆಟ್ಟದ ಮೇಲ್ಭಾಗದಿಂದ ಕಾರ್ಯಾಚರಣೆ ಪ್ರಾರಂಭವಾಯಿತು. ಮೊದಲ ಹತ್ತು ನಿಮಿಷ ಕಾಟಿಯನ್ನು ಎಬ್ಬಿಸುವುದೇ ಕಷ್ಟಕರವಾಯಿತು.

ಚಂಚಲ ಮನಸ್ಸು ಅಪಾಯವಾಗಿರಬಹುದೇ ಎಂದು ಶಂಕಿಸಿತು. ಇಲ್ಲಾ! ಕಿವಿಗಳು ಆಡುತ್ತಿರುವ ದೃಶ್ಯ ಕಾಣಿಸಿತು. ಹತ್ತು ನಿಮಿಷದ ನಂತರ ಕಾಟಿ ಎದ್ದುನಿಂತು, ಪರಿಸ್ಥಿತಿಯನ್ನು ಅವಲೋಕನ ಮಾಡುವಂತೆ ಅತ್ತಿತ್ತ ತಲೆ ಆಡಿಸಿತು. ಸಿಬ್ಬಂದಿ ಗಲಾಟೆ ಹೆಚ್ಚಾಯಿತು. ನಿಧಾನವಾಗಿ ಹಳ್ಳಕ್ಕೆ ಇಳಿಯಿತು. ಇದೀಗ ನಮ್ಮಗಳ ಕೆಲಸ ಸುಲಭ. ಹಳ್ಳದ ಗುಂಟ ನಡೆಯುತ್ತಾ ರಸ್ತೆಯ ಹತ್ತಿರ ಬಂತು. ಅರಿವಳಿಕೆ ಚುಚ್ಚುಮದ್ದು ಕೊಟ್ಟ ಸುಮಾರು ಹತ್ತು ನಿಮಿಷದ ನಂತರದಲ್ಲಷ್ಟೇ ಅದಕ್ಕೆ ಎಚ್ಚರ ತಪ್ಪುತ್ತಿತ್ತು. ಡಾ.ಸುಜಯ್ ಶೂಟ್ ಮಾಡಿದ ಚುಚ್ಚುಮದ್ದು ಕ್ಷಣಮಾತ್ರದಲ್ಲಿ ಕಾಟಿಯ ಹಿಂಭಾಗಕ್ಕೆ ನಾಟಿತು. ಇನ್ನು ಹತ್ತು ನಿಮಿಷದಲ್ಲಿ ಕಾಟಿ ಧರೆಗುರುಳಬೇಕು. ಅಡ್ಡ ತಿರುಗಾಡುವ ದಾರಿ ಇದೆ ಎಂದು ಹತ್ತಡಿಯಷ್ಟು ಜಾಗದಲ್ಲಿ ಹಳ್ಳ ತೋಡಿರಲಿಲ್ಲ. ಕಾಟಿ ಅಲ್ಲಿಗೆ ತಲುಪಿತು.

ಈಗ ಮತ್ತೆ ಕಾಡಿನೊಳಕ್ಕೆ ಹೋಗುವ ಅಪಾಯದ ಸ್ಥಿತಿ ನಿರ್ಮಾಣವಾಯಿತು. ಕಾಡಿನೊಳಕ್ಕೆ ಹೋಗಲು ಕಾಟಿ ಮತ್ತು ಹೋಗದ ಹಾಗೆ ತಡೆಯಲು ನಾವು. ಜೋರಾಗಿ ಕೂಗುತ್ತಾ ಅದರ ಎದುರಿಗೆ ಗದ್ದಲ ಮಾಡುತ್ತಿದ್ದೆವು. ಕ್ಷಣಗಣನೆ ಆರಂಭವಾಯಿತು. ಕಾಟಿ ಹಟ ತೊಟ್ಟು ಹಳ್ಳ ಹತ್ತಿ, ದಾರಿಯನ್ನು ಬಳಸಿ, ಮುಂದುವರೆದ ಹಳ್ಳಕ್ಕೆ ಇಳಿಯಿತು ಅಷ್ಟೆ. ಅರಿವಳಿಕೆ ಕೆಲಸ ಮಾಡಿತ್ತು. ಅಲ್ಲೇ ಕುಸಿಯಿತು. ಅರಿವಳಿಕೆ ಚುಚ್ಚುಮದ್ದಿನ ಪ್ರಭಾವ ಇರುವುದು ಬರೀ ನಲವತ್ತು ನಿಮಿಷ ಮಾತ್ರ. ಅಷ್ಟರಲ್ಲಿ ಮುಖ್ಯ ಕಾರ್ಯಾಚರಣೆ ಮುಗಿಯಬೇಕು. ಹಳ್ಳದಲ್ಲಿ ಬಿದ್ದ ಕಾಟಿಯನ್ನು ರಸ್ತೆಗೆ ತರುವ ಮೊದಲು ಒಂದಿಷ್ಟು ಮಣ್ಣು ಕೆಲಸ ಮಾಡಬೇಕು. ನಮ್ಮ ಹತ್ತಿರ ಜೆಸಿಬಿ ಇಲ್ಲ. ಊರಿನಲ್ಲಿದ್ದ ಜೆಸಿಬಿಯನ್ನು ತುರ್ತಾಗಿ ತರಲಾಯಿತು.

ಈ ಮಧ್ಯೆ, ವಿವಿಧ ಆ್ಯಂಟಿಬಯಾಟಿಕ್‌ ಔಷಧಗಳನ್ನು ಕಾಟಿಗೆ ಚುಚ್ಚಲಾಯಿತು. ಜೆಸಿಬಿ ಬಂದು ಮಣ್ಣು ತೆಗೆಯಿತು. ಕ್ರೇನ್ ಬೆಲ್ಟುಗಳನ್ನು ಬಳಸಿ, ಕಾಟಿಯ ಎದೆ-ಹೊಟ್ಟೆಯ ಗುಂಟ ಸುತ್ತಲಾಯಿತು. ಜೆಸಿಬಿ ಯಂತ್ರ ನಿಧಾನವಾಗಿ ಕಾಟಿಯನ್ನು ಕಬ್ಬಿಣದ ಪಂಜರದ ಹತ್ತಿರ ತಂದಿತು. ಊರಿನವರೆಲ್ಲಾ ಸೇರಿ, ಐಸ್ಸಾ, ಐಸ್ಸಾ ಎನ್ನುತ್ತಾ ಕಾಟಿಯನ್ನು ಪಂಜರದ ಒಳಗೆ ಕಳುಹಿಸಲು ಸಫಲರಾದರು ಎಂಬಲ್ಲಿಗೆ ಕಾಟಿ ಹಿಡಿದ ಸಾಹಸದ ಕಥೆ ಮುಗಿಯಿತು. ಕಾಟಿಯೀಗ ಶಿವಮೊಗ್ಗದ ತ್ಯಾವರೇಕೊಪ್ಪದ ಹುಲಿ-ಸಿಂಹ ಧಾಮದಲ್ಲಿ ಆರೋಗ್ಯವಾಗಿದೆ. ಹ್ಞಾಂ! ಈ ತರಹದ ಕಾಟಿ ಕಾರ್ಯಾಚರಣೆ ಮಾಡಿದ್ದು, ಕರ್ನಾಟಕದಲ್ಲಿ ಇದೇ ಮೊದಲು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು