ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸು: ಕಣ್ಮರೆಯಾದ ಒಂದು ಅರ್ಥಪೂರ್ಣ ಕನಸು

Last Updated 16 ಜೂನ್ 2018, 9:21 IST
ಅಕ್ಷರ ಗಾತ್ರ

‘ಮುಂದೂಡಿದ ಕನಸಿಗೆ ಏನಾಗುತ್ತದೆ?’
ಈ ಪ್ರಶ್ನೆ ಲ್ಯಾಂಗ್ಸ್‌ಟನ್ ಹ್ಯೂಸ್ ಅರವತ್ತು ವರ್ಷಗಳ ಕೆಳಗೆ ಬರೆದ ‘ಎ ಡ್ರೀಮ್ ಡೆಫರ್ಡ್’ ಕವಿತೆಯ ಶುರುವಿನಲ್ಲಿ ಎದುರಾಗುತ್ತದೆ. ಇದಕ್ಕೆ ಕವಿತೆ ಹುಡುಕುವ ಉತ್ತರಗಳು ಕೂಡ ಪ್ರಶ್ನೆಯ ರೂಪದಲ್ಲೇ ಬೆಳೆಯುತ್ತವೆ: ‘ಅದು ಬಿಸಿಲಿನಲ್ಲಿ ಒಣಗಿದ ದ್ರಾಕ್ಷಿಯಂತೆ ಒಣಗುವುದೆ?’ ಎಂಬ ಉತ್ತರರೂಪದ ಪ್ರಶ್ನೆ ಶುರುವಿನಲ್ಲಿದ್ದರೆ, ‘ಅದು ಸ್ಫೋಟಗೊಳ್ಳುವುದೆ?’ ಎಂಬ ಪ್ರಶ್ನೆ ಕವಿತೆಯ ಕೊನೆಗೆ ಬರುತ್ತದೆ; ಮುಂದೂಡಿದ ಕನಸಿಗೆ ಇನ್ನೂ ಏನೇನಾಗಬಹುದು ಎಂಬುದನ್ನು ಓದು­ಗರೇ ಸೇರಿಸಿಕೊಳ್ಳುತ್ತಾ ಹೋಗುವಂತೆ ಪ್ರೇರೇಪಿ­ಸುತ್ತಾ ಕವಿತೆ ನಿಲ್ಲುತ್ತದೆ; ಮುಗಿಯುವುದಿಲ್ಲ.

ಕೆಲವು ತಿಂಗಳುಗಳ ಕೆಳಗಷ್ಟೇ ‘ಪ್ರಜಾವಾಣಿ’ಯ ಈ ಪುಟದಲ್ಲಿ ಮಂಗಳವಾರ ಬಿಟ್ಟು ಮಂಗಳವಾರ ‘ಕಳ್ಳುಬಳ್ಳಿ’ ಅಂಕಣದ ಜೊತೆಗೆ ಕಾಣಿಸಿಕೊಳ್ಳುತ್ತಿದ್ದ ವಸು ಮಳಲಿ ಅವರನ್ನು ಕಂಡಾಗಲೆಲ್ಲ ನನಗೆ ಅವರ ಬತ್ತದ ಕನಸುಗಾರಿಕೆ ಕಂಡು ಬೆರಗಾಗುತ್ತಿತ್ತು. ದೈಹಿಕ ಶಿಥಿಲತೆ ಅಥವಾ ಅಕಡೆಮಿಕ್ ವಾತಾವರಣದ ಜಡತೆಗಳೆರಡೂ ಅವರನ್ನು ಕುಗ್ಗಿಸಲಿಲ್ಲ. ಅವರು ಇನ್ನಿಲ್ಲವೆಂಬ ಸುದ್ದಿ ಎರಗಿದ ತಕ್ಷಣ ಹುಟ್ಟಿದ ದುಃಖದ ಜೊತೆಗೇ ‘ಎ ಡ್ರೀಮ್ ಡೆಫರ್ಡ್’ ಎಂಬ ಸಾಲು ಯಾಕೋ ಮತ್ತೆ ಮತ್ತೆ ಮುತ್ತತೊಡ­ಗಿತು. ರೂಪಕಗಳ ಸತ್ಯ ನಿಜಕ್ಕೂ ರುದ್ರಭೀಕರ ಎಂದು ಮತ್ತೊಮ್ಮೆ ಅನ್ನಿಸತೊಡಗಿತು. ಅದ­ರಲ್ಲೂ ಇವತ್ತು ನಿರಂತರ ಮುಂದೂಡಿಕೆಗೆ ಒಳ­ಗಾದ ವಸುವಿನ ಕನಸುಗಳು ಕೇವಲ ಖಾಸಗಿ ಕನಸುಗಳಾಗಿರಲಿಲ್ಲ. ಕರ್ನಾಟಕದ ವಿವಿಧ ವಲಯಗಳಿಗೆ ನೀಡಬೇಕಾದ ಗಂಭೀರ ಉಪನ್ಯಾಸ­ಗಳು, ಸಿನಿಮಾ ಸ್ಕ್ರಿಪ್ಟ್, ಸಂಗೀತ, ಹೊಸ ತಲೆಮಾರಿಗಾಗಿ ಪ್ರಗತಿಪರ ಚಿಂತನೆಗಳ ಪುಸ್ತಕ ಸಂಪಾದನೆ, ಇತಿಹಾಸದ ವಿದ್ಯಾರ್ಥಿಗಳಿಗೆ ಆಧುನಿಕೋತ್ತರ ಚಿಂತನ ಮಾರ್ಗಗಳು, ಮಹಿಳಾ ವೇದಿಕೆಗಳಿಗಾಗಿ ಅನೇಕ ಬಗೆಯ ಸಂಶೋಧನಾ ಸಾಮಗ್ರಿಗಳ ತಯಾರಿ... ಹೀಗೆ ಒಂದಲ್ಲ ಒಂದು ಕನಸಿನ ಹಣ್ಣನ್ನು ಅಂಗೈಲಿ ಹಿಡಿದವರಂತೆ ವಸು ಕಣ್ಣರಳಿಸಿ ಮಾತಾಡುತ್ತಿದ್ದರು. ಈಚೆಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯ ಬಗ್ಗೆ ಅವರು ಕೊಟ್ಟ ಉಪನ್ಯಾಸ ಕನ್ನಡ ವಿಶ್ವ­ವಿದ್ಯಾಲಯ ಕಂಡ ಹತ್ತು ಶ್ರೇಷ್ಠ ಉಪನ್ಯಾಸ­ಗಳಲ್ಲಿ ಒಂದಾಗಿತ್ತು ಎಂದು ಚಿಂತಕ ರಹಮತ್ ತರೀಕೆರೆ ಹೇಳುತ್ತಾರೆ. ಆ ಉಪನ್ಯಾಸ ಕೊಟ್ಟ ಕಾಲದಲ್ಲಿ ವಸು ತಮ್ಮ ಬದುಕಿನ ಕೊನೆಯ ಘಟ್ಟದಲ್ಲಿದ್ದರು.

ನಮ್ಮ ಹತ್ತಿರದವರಿಗೆ ಕಾಯಿಲೆಯಾದಾಗ­ಲೆಲ್ಲ ನಮ್ಮೊಳಗೆ ವಿಚಿತ್ರ ಭಯ ಶುರುವಾಗುತ್ತದೆ. ಆ ಭಯ ಎಲ್ಲರ ಅನುಭವಕ್ಕೂ  ಬಂದಿರುತ್ತದೆ. ಒಂದು: ಅವರನ್ನು ಕಳೆದುಕೊಳ್ಳುವ ಭಯ. ಇನ್ನೊಂದು: ನಾವು ಅವರ ಕಷ್ಟವನ್ನು ಕೊನೆಗಾಣಿಸಲು ಏನೂ ಮಾಡಿಲ್ಲವಲ್ಲ ಎಂದು ನಮಗರಿವಿಲ್ಲದೆಯೇ ನಮ್ಮೊಳಗೆ ಹಬ್ಬಿಕೊಳ್ಳುವ ಪಾಪಪ್ರಜ್ಞೆ.

ನಾನು ಕೆಲಸ ಮಾಡುವ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಚರಿತ್ರೆಯ ಪ್ರಾಧ್ಯಾಪಕರಾ­ಗಿದ್ದ ವಸು ಎರಡು ವರ್ಷದ ಕೆಳಗೆ ಜ್ಞಾನ­ಭಾರತಿಯ ಅಶೋಕಭವನದ ಮೆಟ್ಟಿಲೇರಿ ಬಂದ ದಿನ ಕೂಡ ನನಗೆ ಹೀಗಾಗಿತ್ತು. ವಸು ಕೆಲವೇ ದಿನಗಳ ಕೆಳಗೆ ಕಿಮೋಥೆರಪಿ ಚಿಕಿತ್ಸೆ ಮುಗಿಸಿ­ಕೊಂಡು ಕ್ಲಾಸಿಗೆ ಹಾಜರಾಗಿದ್ದರು. ಕೂದಲು ಉದುರಿದ ತಲೆಗೆ ಹಸಿರು ನೀಲಿ ಬೆರೆತ ಸ್ಕಾರ್ಫ್ ಕಟ್ಟಿಕೊಂಡಿದ್ದರು. ಗಂಡಸಾದ ಕಾರಣಕ್ಕೆ ನನ್ನ ಗಂಟಲಲ್ಲಿ ಉಕ್ಕಿ ಅಲ್ಲೇ ನೆಲೆನಿಂತ ಅಳು; ವಸುವಿನ ಭಯಾನಕ ಕಷ್ಟವನ್ನು ಕೊನೆಗಾಣಿಸಲು ನಾವೆಲ್ಲ ಏನೂ ಮಾಡಲಾಗಿಲ್ಲವಲ್ಲ ಎಂದು ಹಟಾತ್ತನೆ ಮೈತುಂಬ ಹಾಯ್ದುಹೋದ ಕಸಿವಿಸಿ. 

ಆ ಇಡೀ ಭಾವವನ್ನು ನನ್ನಿಂದ ಹೊಡೆದು ಓಡಿಸುವಂತೆ ವಸು ನಕ್ಕರು. ಅದೇ ಆಗ ಚೇತರಿಸಿ­ಕೊಂಡ ರೋಗಿಯಂತೆ ತನ್ನನ್ನು ನೋಡಲೇಕೂಡ­ದೆಂದು ಸೂಚಿಸುವಂತೆ ಕೂಡ ವಸು ನಕ್ಕರು. ವಸು ಆಸ್ಪತ್ರೆಯಲ್ಲಿದ್ದಾಗ ನೋಡದ ನನಗೆ ಅವರಿಗೆ ಕಾಯಿಲೆಯಾಗಿದ್ದೇ ಸುಳ್ಳಿರಬೇಕು ಎನ್ನಿಸುವಷ್ಟು ಅವರ ಮುಖ ಫ್ರೆಶ್ ಆಗಿತ್ತು. ನೀವು ಅಷ್ಟೆಲ್ಲ ಕಷ್ಟಗಳನ್ನು ಹಾದು ಬಂದಿದ್ದೀರಿ ಎಂದು ನಿಮ್ಮ ಮುಖ ನೋಡಿದರೆ ಅನ್ನಿಸುವುದೇ ಇಲ್ಲ ಎಂದು ನಿಜಕ್ಕೂ ಆಳದಲ್ಲಿ ಅನಿಸಿದ್ದನ್ನು ಹೇಳಿದೆ. ವಸು ಅತ್ಯಂತ ಸಮಾಧಾನದಿಂದ ನಕ್ಕರು. ಅದು ನನಗೆ ಹುಸಿಯೆನ್ನಿಸಲಿಲ್ಲ. ವಸು ಸಾವನ್ನು ಗೆದ್ದಿದ್ದಾರೆ ಎಂದುಕೊಂಡೆ.ಪ್ರಜಾವಾಣಿಯಲ್ಲಿ ತಮ್ಮ ಹೆಸರಿಗೆ ತಮ್ಮೂರು ಮಳಲಿಯನ್ನು ಸೇರಿಸಿ­ಕೊಂಡು ‘ಕಳ್ಳುಬಳ್ಳಿ’ ಶುರು ಮಾಡಿದ ಮೊದಲ ದಿನ ಅವರು ಬರೆದ ‘ಒಡಲ ಬೆಂಕಿ ಆರದಿರಲಿ’ ಬರಹ­ದಲ್ಲಿ ಅವರ ಆ ಘಟ್ಟದ ತಲ್ಲಣಗಳೆಲ್ಲ ಇರುವಂತೆ ಕಂಡಿತು. ಆ ವಿವರಗಳನ್ನು ಎದುರಿಸ­ಲಾರದೆ ನಾನು ಅವತ್ತು ಆ ಅಂಕಣ ಓದುವು­ದನ್ನೇ ತಪ್ಪಿಸಿಕೊಂಡೆ.  ಅಂಕಣ ಬರವಣಿಗೆ ವಸು­ವಿಗೆ ಅಪಾರ ಸಾರ್ಥಕ್ಯ ಭಾವ ಹಾಗೂ ಹೊಸ ಜೀವನೋದ್ದೇಶ ಎರಡನ್ನೂ ಕೊಟ್ಟು ಅವರನ್ನು ಪೊರೆಯತೊಡಗಿತು. ಅಂಕಣ ಪ್ರಕಟವಾದ ದಿನ ಬರುತ್ತಿದ್ದ ಫೋನ್ ಕರೆಗಳು ಹಾಗೂ ಟೀಕೆಗಳು ಅವರನ್ನು ಇನ್ನಷ್ಟು ಜೀವಂತಗೊಳಿಸುತ್ತಿದ್ದವು.

ಈ ವರ್ಷಗಳಲ್ಲಿ ವಸು ಬದುಕಿದ ಒಂದೊಂದು ದಿನವೂ, ಅವರು ತೊಡಗಿಕೊಂಡ ಪ್ರತಿ ಬೌದ್ಧಿಕ ಹಾಗೂ ಸೃಜನಶೀಲ ಕೆಲಸವೂ ಅವರು ಸಾವಿನ ಜೊತೆ ನಡೆಸಿದ ಸೆಣಸಾಟವೇ ಆಗಿದ್ದುದರ ಸುಳಿವು ನನ್ನ ಕಣ್ಣಿಗೂ ಹತ್ತುತ್ತಿತ್ತು. ಪ್ರತಿ ಸೂಕ್ಷ್ಮಜೀವಿಯೂ ಆಳವಾಗಿ ತೊಡಗಿ ನಡೆಸುವ ಪ್ರತಿ ಕೆಲಸವೂ ಎಲ್ಲೋ ಆಳದಲ್ಲಿ ಸಾವನ್ನು ಮುಂದೂಡುವ ಪ್ರಯತ್ನವೇ ಎಂದುಕೊಳ್ಳುವ ನನಗೆ ಅವೆಲ್ಲ ನಾವೆಲ್ಲ ತೀವ್ರವಾಗಿ ತೊಡಗಿ ಮಾಡುವ ಕೆಲಸಗಳಂತೆಯೇ ಕಾಣತೊಡಗಿದ್ದವು. ಅದರಲ್ಲೂ ಕಾಲೇಜು ಹುಡುಗಿಯಾಗಿದ್ದಾಗಿ­ನಿಂದ ಸಹಜ ನಾಯಕತ್ವದ ಗುಣ ಚಿಮ್ಮುತ್ತಿದ್ದ ವಸು ಎಂಥ ಕಷ್ಟದ ಎದುರೂ ಸುಮ್ಮನೆ ಕೂತಿರುವುದು ಸಾಧ್ಯವೇ ಇರಲಿಲ್ಲ. ಕಾಲೇಜಿನ ಯೂನಿಯನ್ ಎಲೆಕ್ಷನ್ನಿಗೆ ನಿಂತು ಗೆದ್ದ ವಸು, ವಿಶ್ವವಿದ್ಯಾಲಯದ ಕೊಕ್ಕೊ ಟೀಮಿನ ನಾಯಕಿಯಾಗಿದ್ದವರು. ಹೀಗಾಗಿ ಜೊತೆಯಲ್ಲಿ­ದ್ದವರನ್ನು ತನ್ನೊಡನೆ ಮುಂದೊಯ್ಯಬೇಕೆಂಬ ನಾಯಕಧ್ವನಿ ಅವರು ಮಾತಾಡಿದಾಗ, ಬರೆ­ದಾಗ, ಸಂವಾದ ಮಾಡಿದಾಗ ಮತ್ತೆ ಮತ್ತೆ ಕಾಣುತ್ತಿತ್ತು.

‘ಸಮಾಜದಲ್ಲಿ ಮತ್ತು ಚರಿತ್ರೆಯಲ್ಲಿ ಧ್ವನಿ ಕಳೆದುಕೊಂಡವರ ಧ್ವನಿಯಾಗಬೇಕಾದುದು ಮೌಖಿಕ ಇತಿಹಾಸ’ ಎಂಬ ಉದ್ದೇಶದಿಂದ ‘ಮೌಖಿಕ ಇತಿಹಾಸ’ ಪುಸ್ತಕ ಬರೆದ ವಸು ಕರ್ನಾಟಕದಲ್ಲಿ ಚರಿತ್ರೆಯನ್ನು ನೋಡಲು ಮೌಖಿಕ ಆಕರಗಳನ್ನು ಬಳಸಲು ಉತ್ಸುಕರಾಗಿ­ದ್ದರು. ಇರ್ಫಾನ್ ಹಬೀಬ್ ಅವರ ಮಾದರಿ­ಯಲ್ಲಿ ಜನಸಮುದಾಯದ ಚರಿತ್ರೆಯನ್ನು ನೋಡಲೆತ್ನಿಸಿದ ವಸು ಆ ದಿಕ್ಕಿನಲ್ಲಿ ಅಪಾರ  ಕೆಲಸ ಮಾಡುವ ಸಾಧ್ಯತೆಯಿತ್ತು. ಅವರು ಕೆಲವೇ ತಿಂಗಳಲ್ಲಿ ‘ಕನ್ನಡದೊಳ್ ಭಾವಿಸಿದ ಜನಪದಂ’ ಎಂಬ ಬೃಹತ್ ರೆಫರೆನ್ಸ್ ಪುಸ್ತಕವನ್ನು ಸಂಪಾದಿಸಿ ಕೊಟ್ಟರು. ಈ ಪುಸ್ತಕ ವಸು ಅವರು ಎಡತಾಕು­ತ್ತಿದ್ದ ಹಲಬಗೆಯ ಶಿಸ್ತುಗಳನ್ನು ಪರಿಚಯಿಸು­ತ್ತದೆ. ಕರ್ನಾಟಕದಲ್ಲಿ ಎಸ್. ಚಂದ್ರಶೇಖರ್, ಷ. ಶೆಟ್ಟರ್, ಅಶೋಕ ಶೆಟ್ಟರ್ ಮುಂತಾದ ಚರಿತ್ರಕಾರರಂತೆ ನಂತರದ ತಲೆಮಾರಿನ ಸಿ.ಆರ್.ಗೋವಿಂದರಾಜು, ವಸು ಕೂಡ ಕನ್ನಡ ಸಾಹಿತ್ಯದೊಂದಿಗೆ ನಿಕಟ ಸಂಬಂಧ­ವಿಟ್ಟುಕೊಂಡು ಇತಿಹಾಸ ಲೇಖನವನ್ನು ಮುಂದುವರೆಸಿದರು. ವಸುವಿನಲ್ಲಿ ಸ್ತ್ರೀವಾದ ಹಾಗೂ ಎಡಪಂಥೀಯ ನೋಟಕ್ರಮಗಳೆರಡೂ ಬೆರೆತು ಈ ಎಲ್ಲರಿಗಿಂತ ಭಿನ್ನವಾಗಿ ನಡೆಯಲೆತ್ನಿಸಿ­ದರು. ಅವರು ಹಲಬಗೆಯ ಕಲಾಪ್ರಕಾರಗಳ ಜೊತೆಗೆ ಒಡನಾಡುತ್ತಿದ್ದುದರಿಂದ ಅವರು ಚರಿತ್ರೆ­ಯನ್ನು ನೋಡುತ್ತಿದ್ದ ಕ್ರಮವೂ ಹೆಚ್ಚು ಜೀವಂತ­ವಾಗಿತ್ತು. 

ಅನಿಮೇಷನ್ ಮೂಲಕ ಇಂಡಿಯಾದ ಇತಿಹಾಸವನ್ನು ನಿರ್ಮಿಸುವ ಬೃಹತ್ ಪ್ರಯತ್ನ­ವನ್ನೂ ಅವರು ಮಾಡಿದರು. ಅದು ನಿಂತು ಹೋಯಿತು. ಈ ನಡುವೆ ಹಾಲಿವುಡ್‌ಗೆ ಹೋಗಿ ಅಲ್ಲಿ ಒಂದು ಪುಟ್ಟ ಸಿನಿಮಾ ಕೋರ್ಸ್ ಕೂಡ ಮಾಡಿ ಬಂದರು. ಆ ನಂತರ ಅವರು ‘ಶಸ್ತ್ರ’ ಎಂಬ ಸಿನಿಮಾ ಶೂಟ್ ಮಾಡುತ್ತಿದ್ದರು. ಈ ಸಿನಿಮಾ ಶೂಟಿಂಗಿನ ಕಾಲದಲ್ಲಿ ಹಟಾತ್ತನೆ ಕಾಣಿಸಿ­ಕೊಂಡ ಎದೆನೋವನ್ನು ಅವರು ಉದಾ­ಸೀನ ಮಾಡಲಿಲ್ಲ. ಈ ಎಚ್ಚರ ಕೂಡ ವಸುವಿನ­ಲ್ಲಿದ್ದ ವಿಪತ್ತನ್ನು ಎದುರಿಸುವ, ಬದುಕುವ ಛಲದ ಭಾಗವಾಗಿತ್ತು. ಕಿಮೋಥೆರಪಿಗಳ ಭೀಕರ ಯಾತನೆಗಳನ್ನೂ ಅವರು ಹಾದು ಬಂದರು. ನಾನು ಭೇಟಿಯಾಗುವ ಹೊತ್ತಿಗೆ ವಸು ಆತಂಕದಿಂದ ಪಾರಾದಂತಿದ್ದರು.

ಇನ್ನೇನು ಹರಳುಗಟ್ಟುತ್ತಿದ್ದ ಚಿಂತಕಿಯಾಗಿ ವಸು ವಿದ್ಯಮಾನಗಳನ್ನು ನೋಡುತ್ತಿದ್ದ ರೀತಿ­ಯಲ್ಲಿ ಎಡಪಂಥೀಯ ಒಲವಿತ್ತು. ಆದರೆ ಆ ಹಣೆ­ಪಟ್ಟಿ ಹಚ್ಚಿಕೊಳ್ಳಲು ಅವರೊಳಗೆ ಹಿಂಜರಿಕೆ­ಯಿತ್ತು. ಆದರೆ ಜನವಾದಿ ಮಹಿಳಾ ಸಂಘಟ­ನೆ ಬಗ್ಗೆ ಅವರಿಗೆ ಅಪಾರ ವಿಶ್ವಾಸವಿತ್ತು. ಮೊಗಳ್ಳಿ ಗಣೇಶರಂಥ ಚಿಂತಕರ ಹಾಗೆ ವಸು ಕೂಡ ಈಚೆಗೆ ಸಮೂಹ ಪ್ರಜ್ಞೆ ಎಂಬುದನ್ನು ಜಾನಪದೀಯ ನೆಲೆಯಲ್ಲಿ ವಿವರಿಸಿಕೊಳ್ಳಲೆತ್ನಿಸುತ್ತಿದ್ದರು. ಮೂರು ವರ್ಷಗಳ ಕೆಳಗೆ ತಮ್ಮೂರಾದ ಹಾಸನ ಜಿಲ್ಲೆಯ ಮಳಲಿಗೆ ಹೋಗಿ ಅಲ್ಲಿನ ಗ್ರಾಮದೇವತೆ ಮಳಲಿ ಗಿಡ್ಡಮ್ಮನ ಜಾತ್ರೆಯನ್ನು ಚಿತ್ರೀಕರಿಸಿಕೊಂಡು ಬಂದಿದ್ದರು. ‘ಅದೆಲ್ಲ ಯಾಕೆ ಮಾಡ್ತೀರಿ? ಟೈಂ ವೇಸ್ಟ್!’ ಎಂದು ನಾನು ಕುಟುಕಿದರೆ ಅದನ್ನೂ ನಕ್ಕು ಸ್ವೀಕರಿಸುತ್ತಿದ್ದರು. ಸಿದ್ಧಾಂತಗಳು ಒಂದೆಡೆ ಎಳೆದರೆ, ಕಾಲದ ಒತ್ತಾಯಗಳು ಮತ್ತೊಂದೆಡೆ ಅವರನ್ನು ಎಳೆಯುತ್ತಿದ್ದಂತೆ ಕಾಣುತ್ತಿತ್ತು. ಇವೆರಡರ ನಡುವಣ ಬಿರುಕು ಅವರಿಗೂ ಗೊತ್ತಿತ್ತು. ಅವನ್ನು ಕುರಿತು ನಮ್ಮಂಥವರ ಟೀಕೆಗೂ ಅವರಲ್ಲೊಂದು ವಿಶಾಲ ಸ್ಪೇಸ್ ಇತ್ತು. ಅವರು ಮೆಚ್ಚುವ ಸಿನಿಮಾಗಳನ್ನು, ಹೆಣೆಯುವ ಸ್ಕ್ರೀನ್ ಪ್ಲೇಗಳನ್ನು ಕುರಿತು ನಾನು ರೇಗಿಸಿದಾಗ ವಸು ಕೊಂಚ ಮುದುಡಿದರೂ, ವಿಷಯ ಬದಲಿಸಿ ನನ್ನನ್ನೇ ಹಗುರಗೊಳಿಸಲೆತ್ನಿಸುತ್ತಿದ್ದರು. ಮತ್ತೆ ಸಿಕ್ಕಾಗ ಆ ಛಾಯೆ ಅವರಲ್ಲಿ ಒಂಚೂರೂ ಇರುತ್ತಿರಲಿಲ್ಲ. ಹೆಣ್ಣಿನ ರಿಯಾಯಿತಿಯನ್ನಾಗಲೀ ಹೆಣ್ಣೆಂಬ ಕಾರಣಕ್ಕೆ ತನ್ನ ಮಾತಿಗೆ ಮನ್ನಣೆ ನೀಡ­ಬೇಕೆಂದಾಗಲೀ ವಸು ನಿರೀಕ್ಷಿಸುತ್ತಿರಲಿಲ್ಲ.

ತಮ್ಮ ತಾತ್ವಿಕತೆಗಳನ್ನೂ ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನೂ ತಾವು ಹೇಳಬಯಸಿದ್ದನ್ನು ಹೇಳಲು ತಕ್ಕ ಪ್ರಕಾರಗಳನ್ನೂ ತಮಗೆ ಸರಿ ಕಂಡಂತೆ ರೂಪಿಸಿಕೊಂಡಿದ್ದ ವಸು ಚರಿತ್ರೆ, ಸಂಶೋಧನಾ ಉಪನ್ಯಾಸ, ಸಿನಿಮಾ, ಜಾನಪದ, ಸಂಸ್ಕೃತಿವಿಮರ್ಶೆ.. ಹೀಗೆ ಎಲ್ಲ ವಲಯಗಳಲ್ಲೂ ತುಂಬ ಗಟ್ಟಿಯಾದದ್ದನ್ನು ತಮ್ಮ ಡೆಸ್ಕ್ ಟಾಪಿ­ನಲ್ಲಿ, ತಮ್ಮ ಡೈರಿ ಹಾಗೂ ನೋಟ್ ಬುಕ್ಕುಗಳಲ್ಲಿ ಬಿಟ್ಟು ಹೋದಂತಿದೆ.
ಅವು ಸಂಪುಟಗಳಲ್ಲಿ ಪ್ರಕಟವಾದಾಗ ವಸುವಿನ ಒಟ್ಟು ಸತ್ವ ಇನ್ನಷ್ಟು ಪ್ರಖರವಾಗಿ ಕಾಣಬಲ್ಲದು. ವಸು ಕಂಡ ಕನಸುಗಳು ಸಂಪುಟಗಳ ಚೌಕಟ್ಟಿನಲ್ಲಿ ಬರಲಿ; ಅವರ ಅಪೂರ್ಣ ಸಿನಿಮಾವನ್ನು ಸಿನಿಮಾ ಕಲೆ ಬಲ್ಲವರು ಪೂರ್ಣಗೊಳಿಸಲಿ.   

ವಸು ತೀರಿಕೊಂಡ ಫೆಬ್ರುವರಿ ಮೂರರಂದು ಹನ್ನೊಂದು ವರ್ಷಗಳ ಕೆಳಗೆ ಕನ್ನಡನಾಡಿನ ಶ್ರೇಷ್ಠ ನಾಯಕರಲ್ಲೊಬ್ಬರಾದ ಪ್ರೊ.ಎಂ.ಡಿ. ನಂಜುಂಡ­ಸ್ವಾಮಿ­ಯವರು ಕೂಡ ಕ್ಯಾನ್ಸರಿಗೆ ಬಲಿಯಾ­ದದ್ದು ನೆನಪಾಗುತ್ತಿದೆ. ಈ ಬಗೆಯ ಖಚಿತ ನಿಲುವುಗಳುಳ್ಳ ಚಿಂತಕ, ಚಿಂತಕಿಯರ ನಿರ್ಗಮನ­ಗಳು ನಮ್ಮೆಲ್ಲರ ಸಾಮೂಹಿಕ ವೈಚಾರಿಕ ಪ್ರಯತ್ನ­ಗಳಿಗೆ ಎಂಥ ಹಿನ್ನಡೆ ತರುತ್ತವೆ ಎಂಬುದನ್ನು ನೆನೆದರೆ ದುಗುಡ ಮುತ್ತ­ತೊಡಗುತ್ತದೆ.

ಕೊನೆ ಟಿಪ್ಪಣಿ: ಅರ್ಥಪೂರ್ಣ ಸ್ನೇಹದ ಅಲಿಖಿತ ನಿಯಮಗಳು
‘ಸ್ನೇಹ ಅಂದರೆ ಅಂಟು ಅಂತ! ಗೊತ್ತಾ ಸಾರ್?’ ಎಂದು ಕನ್ನಡದ ಬಹು ದೊಡ್ಡ ವಿಮರ್ಶಕರಲ್ಲೊಬ್ಬರಾದ ಕಿ.ರಂ. ನಾಗರಾಜರು ಕೇಳಿದರು. ನನ್ನ ಅಚ್ಚರಿ ಕಂಡು, ‘ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ’ ಎಂದು ಶುರುವಾಗುವ ಅಕ್ಕಮಹಾದೇವಿಯ ವಚನದಲ್ಲಿ ಸ್ನೇಹ ಎಂಬ ಪದಕ್ಕೆ ಅಂಟು ಎಂಬ ಅರ್ಥವಿರು­ವು­ದನ್ನು ತೋರಿಸಿದರು. ಸ್ನೇಹ ಎಂಬ ಪದಕ್ಕೆ ಅಂಟು ಎಂಬ ಅರ್ಥ ಕೊಡುವ  ವ್ಯಾಪ್ತಿ ಅದ್ಭುತವಾದುದು. 

ಇವತ್ತು ವಸು ಅವರನ್ನು ನೆನೆಯುತ್ತಿರುವ ಬಹುತೇಕರು ಅವರ ಸ್ನೇಹ ಪ್ರವೃತ್ತಿಯ ಬಗೆಗೆ ಹೆಚ್ಚು ಮಾತಾಡುತ್ತಿರುವುದರಿಂದ ಅರ್ಥಪೂರ್ಣ ಸ್ನೇಹದ ಅಲಿಖಿತ ನಿಯಮಗಳ ಬಗೆಗೆ ಯೋಚಿ­ಸಿದೆ. ಅಂಟಿಕೊಂಡ ಸ್ನೇಹಿತರಾದ ಮೇಲೆ, ಅಲ್ಲಿ ಎಲ್ಲವನ್ನೂ ಹೇಳುವ ಅವಕಾಶವಿರಬೇಕು; ಅಲ್ಲಿ ಹೆಚ್ಚಿನ ಸುಳ್ಳಿಗೆ ಅವಕಾಶವಿರಬಾರದು. ಈಕೆ ಮಹಿಳೆಯೆಂದಾಗಲೀ ಇವರು ನಮ್ಮ ಕಡೆಯವ­ರೆಂದಾಗಲೀ, ಜಾತಿಯವರೆಂದಾಗಲೀ  ಮುಖ­ಸ್ತುತಿ ಮಾಡಬಾರದು. ಒಂದು ವಿಚಾರದಲ್ಲಿ ನಮ್ಮನ್ನು ಒಪ್ಪಲಿಲ್ಲವೆಂದ ಮಾತ್ರಕ್ಕೆ ಅವರನ್ನು ದ್ವೇಷಿಸಬಾರದು. ಅಲ್ಲಿ ಮೆಚ್ಚುಗೆ, ಟೀಕೆ­ಗಳೆ­ರಡೂ ತೀರ ಸಹಜವಾಗಿರಬೇಕು. ‘ಎಲ್ಲತತ್ವದೆಲ್ಲೆ ಮೀರಿ’  ಸತ್ಯ ಹುಡುಕುವ ಮುಕ್ತತೆ ಬೆಳೆಸಿ­ಕೊಂಡರಂತೂ ಅದು ಇನ್ನಷ್ಟು ಅದ್ಭುತ. ಹೀಗೆ ಈ ಪಟ್ಟಿಯನ್ನು ನಾವು ಬೆಳೆಸುತ್ತಾ ಹೋಗಬಹುದು. ನಲವತ್ತೇಳನೆಯ ವಯಸ್ಸಿಗೆ ಆಳವಾದ ಪ್ರೌಢ ಸ್ಥಿತಿ ತಲುಪತೊಡಗಿದ್ದ ವಸುವಿನ ನಿಸ್ವಾರ್ಥ ಸ್ನೇಹದ ಕನ್ನಡಿಯ ಮೂಲಕ ಈ ಸರಳ ಸತ್ಯಗಳು ಮತ್ತೊಮ್ಮೆ ನಿಚ್ಚಳವಾಗತೊಡಗಿದವು. 

ನಿಮ್ಮ ಅನಿಸಿಕೆ ತಿಳಿಸಿ
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT