ಸೋಮವಾರ, ಮಾರ್ಚ್ 1, 2021
30 °C

ಜಾತಿ ರಾಜಕಾರಣ ಮತ್ತು ವಿವೇಕಹೀನ ವಿ.ವಿ.ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿ ರಾಜಕಾರಣ ಮತ್ತು ವಿವೇಕಹೀನ ವಿ.ವಿ.ಗಳು

2014ರ ಲೋಕಸಭೆ ಚುನಾವಣೆ ಸಂದರ್ಭ. ರಾಷ್ಟ್ರೀಯ– ಅಂತರರಾಷ್ಟ್ರೀಯ ಮಟ್ಟದಲ್ಲಿ ಚುನಾವಣೆಯನ್ನು  ಸೂಕ್ಷ್ಮವಾಗಿ ಗಮನಿಸಲಾಗಿತ್ತು. ನರೇಂದ್ರ ಮೋದಿ ಅವರ ಕಾರಣಕ್ಕೆ ಚುನಾವಣೆಗೆ ವಿಪರೀತ ಮಹತ್ವ ಬಂದಿತ್ತು. ಮೋದಿ ಅವರ ಸ್ವಂತ ಕ್ಷೇತ್ರ ವಾರಾಣಸಿ ಈ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿತ್ತು. ದೇಶ– ವಿದೇಶಗಳ ಮಾಧ್ಯಮ ಪ್ರತಿನಿಧಿಗಳ ದಂಡೇ ವಾರಾಣಸಿಗೆ ಬಂದಿಳಿದಿತ್ತು. ಕಡೆಯ ಒಂದು ವಾರದ ಪ್ರಚಾರವಂತೂ ಹುಚ್ಚು ಹಿಡಿಸುವಂತಿತ್ತು. ಹೊಸ ಪೀಳಿಗೆ ಮತದಾರರು ಯುದ್ಧಕ್ಕೆ ಹೊರಟವರಂತೆ ವರ್ತಿಸುತ್ತಿದ್ದರು.‘ಬನಾರಸ್‌ ಹಿಂದೂ ವಿಶ್ವವಿದ್ಯಾಲಯ’ದ (ಬಿಎಚ್‌ಯು) ವಾತಾವರಣ ಇನ್ನೂ ಬಿಸಿಯಾಗಿತ್ತು. ಆ ವೇಳೆಯಲ್ಲಿ  ತರಗತಿಗಳು ನಡೆಯುತ್ತಿರಲಿಲ್ಲ. ಅಕಸ್ಮಾತ್‌ ನಡೆದರೂ ವಿದ್ಯಾರ್ಥಿಗಳು ಹೋಗುತ್ತಿರಲಿಲ್ಲ. ರಾಜಕೀಯ ಸಭೆ, ಸಮಾರಂಭ, ಮೆರವಣಿಗೆಗಳಲ್ಲೇ ಅವರು ಸಕ್ರಿಯರಾಗಿದ್ದರು. ಅತ್ಯಂತ ಹಳೆ ವಿಶ್ವವಿದ್ಯಾಲಯಗಳಲ್ಲಿ  ಬಿಎಚ್‌ಯು ಒಂದು. ಉಳಿದೆಡೆಯಂತೆ ಅಲ್ಲೂ ಎಡಪಂಥೀಯ, ಬಲಪಂಥೀಯ ಮತ್ತಿತರ ವಿಚಾರಧಾರೆಗಳಿಗೆ ಬದ್ಧವಾಗಿರುವ ವಿದ್ಯಾರ್ಥಿ ಸಂಘಟನೆಗಳಿವೆ. ಈ ಸಂಘಟನೆಗಳ ನಡುವಿನ ಪೈಪೋಟಿಯಿಂದಾಗಿ ವಾರಾಣಸಿ ಚುನಾವಣೆಯೂ ಸ್ಫೋಟಕ ವಾತಾವರಣ ಸೃಷ್ಟಿಸಿತ್ತು. ಆದರೆ, ಯಾವುದೇ ಅಹಿತಕರ ಘಟನೆ ನಡೆಯದೆ ಮತದಾನ ಶಾಂತಿಯುತವಾಗಿ ಮುಗಿಯಿತು.ಇದು ಬಿಜೆಪಿ ನೇತೃತ್ವದ ಎನ್‌ಡಿಎ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೊದಲಿದ್ದ ಸ್ಥಿತಿ. ಅಧಿಕಾರಕ್ಕೆ ಬಂದ ಬಳಿಕ  ಪರಿಸ್ಥಿತಿ ಏನಾಗಿದೆ ಎನ್ನುವುದಕ್ಕೆ ಬಹುಶಃ ಕಳೆದ ವರ್ಷದ ಚೆನ್ನೈ ಐಐಟಿ ಬೆಳವಣಿಗೆ, ಇತ್ತೀಚೆಗೆ ಹೈದರಾಬಾದ್‌ ಕೇಂದ್ರೀಯ  ವಿಶ್ವವಿದ್ಯಾಲಯದಲ್ಲಿ  ನಡೆದ ಘಟನೆಗಳನ್ನು ಪ್ರಸ್ತಾಪಿಸಬಹುದು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಾತಾವರಣ ಬದಲಾಗಿದೆ. ತಮ್ಮ ಚಿಂತನೆ ವಿರೋಧಿಸುವವರನ್ನು ‘ದೇಶದ್ರೋಹಿ’ಗಳಂತೆ ನೋಡಲಾಗುತ್ತಿದೆ. ವಿಶ್ವವಿದ್ಯಾಲಯಗಳಲ್ಲೂ ಇದು ಪ್ರತಿಫಲಿಸುತ್ತಿದೆ. ಬಿಜೆಪಿ ಅಂಗ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಬೇರೆ ಬೇರೆ ವಿದ್ಯಾರ್ಥಿ ಸಂಘಟನೆಗಳ ಜತೆ ದೆಹಲಿ ವಿಶ್ವವಿದ್ಯಾಲಯ, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಮತ್ತಿತರ ಕಡೆಗಳಲ್ಲಿ ಸಂಘರ್ಷಕ್ಕಿಳಿದಿದೆ.ಚೆನ್ನೈ ಐಐಟಿ ವಿದ್ಯಾರ್ಥಿಗಳು ದೇಶದ್ರೋಹದ ಕೆಲಸ ಮಾಡಿರಲಿಲ್ಲ. ಜನ ಮೆಚ್ಚುವ ಕೆಲಸವನ್ನೇ ಮಾಡಿದ್ದರು. ಅಂಬೇಡ್ಕರ್‌ ಹಾಗೂ ಪೆರಿಯಾರ್‌ ಹೆಸರಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಿದರು. ಸಮಕಾಲೀನ ಸವಾಲುಗಳ ಬಗ್ಗೆ ಉಪನ್ಯಾಸ ಮತ್ತು ಚರ್ಚೆ ಏರ್ಪಡಿಸುವುದು ಅದರ ಉದ್ದೇಶ. 2014ರ ಏಪ್ರಿಲ್‌ನಲ್ಲಿ ಆರಂಭವಾದ  ಅಧ್ಯಯನ ಕೇಂದ್ರ ಮುಂದೆ ಎಂತಹ ಇಕ್ಕಟ್ಟಿನ ಪರಿಸ್ಥಿತಿ ಎದುರಿಸಿತು ಎಂಬ ಸಂಗತಿ ಎಲ್ಲರಿಗೂ ಗೊತ್ತಿದೆ.‘ಅಂಬೇಡ್ಕರ್‌– ಪೆರಿಯಾರ್‌ ಅಧ್ಯಯನ ಕೇಂದ್ರವು ವಿದ್ಯಾರ್ಥಿಗಳ ನಡುವೆ ದ್ವೇಷ ಹರಡುತ್ತಿದೆ’ ಎಂದು ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಬಂದ ಅನಾಮಧೇಯ ದೂರೊಂದು ದೊಡ್ಡ ಅವಾಂತರ ಸೃಷ್ಟಿಸಿತು. ಸಚಿವಾಲಯ ದೂರನ್ನು ಐಐಟಿಗೆ ರವಾನಿಸಿತು. ಐಐಟಿ ಆಡಳಿತ ಮಂಡಳಿಗೆ ಅಷ್ಟು ಸಾಕಿತ್ತು. ಅದು ಅಧ್ಯಯನ ಕೇಂದ್ರದ ಮಾನ್ಯತೆ ರದ್ದು ಮಾಡಿತು. ಇದರ ವಿರುದ್ಧ ವಿಶ್ವವಿದ್ಯಾಲಯದಲ್ಲಿ ಹೋರಾಟ ನಡೆಯಿತು. ಬೇರೆ ಐಐಟಿ, ವಿಶ್ವವಿದ್ಯಾಲಯಗಳು  ಹೋರಾಟವನ್ನು ಬೆಂಬಲಿಸಿದವು. ಮಾನ್ಯತೆ ರದ್ದು ಆದೇಶವನ್ನು ಐಐಟಿ ವಾಪಸ್‌ ಪಡೆಯಿತು.ನಮ್ಮ ಐಐಟಿ ಹಾಗೂ ವಿಶ್ವವಿದ್ಯಾಲಯಗಳು ಹೇಗೆ ವಿವೇಕ ರಹಿತವಾಗಿ ನಡೆದುಕೊಳ್ಳುತ್ತಿವೆ ಎನ್ನುವುದಕ್ಕೆ ಇದೊಂದು ನಿದರ್ಶನ ಸಾಕು. ಚೆನ್ನೈ ಐಐಟಿಯಲ್ಲಿ ಅಂಬೇಡ್ಕರ್‌– ಪೆರಿಯಾರ್‌ ಅಧ್ಯಯನ ಕೇಂದ್ರ ಸ್ಥಾಪಿಸಿದ ವಿದ್ಯಾರ್ಥಿಗಳು ದಲಿತ ಮತ್ತು ಹಿಂದುಳಿದ ಜಾತಿಗೆ ಸೇರಿದವರು. ಈ ವಿದ್ಯಾರ್ಥಿಗಳ ವಿರುದ್ಧ ದೂರು ಕೊಟ್ಟವರು ಯಾರೆಂದು ಊಹಿಸುವುದು ಕಷ್ಟವಲ್ಲ. ಅದೂ ಜಾತಿ ರಾಜಕಾರಣದ ಫಲವಲ್ಲದೆ ಮತ್ತೇನಲ್ಲ. ಜಾತಿ ರಾಜಕಾರಣ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಇದೆ. ಕೆಲವೆಡೆ ಹೆಚ್ಚಿರಬಹುದು, ಕೆಲವು ಕಡೆ ಕಡಿಮೆ ಇರಬಹುದು ಅಷ್ಟೆ. ಹೈದರಾಬಾದ್‌  ವಿ.ವಿ.ಯಲ್ಲಿ ನಡೆದಿರುವುದೂ ಅದೆ.ಚೆನ್ನೈ ಐಐಟಿಯಂತೆ ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದಲ್ಲೂ ಪ್ರಬಲ ಚಳವಳಿ ಸಂಘಟಿಸಿದ್ದರೆ ಸಂಶೋಧನಾ ವಿದ್ಯಾರ್ಥಿ ರೋಹಿತ್‌ ವೇಮುಲ ಆತ್ಮಹತ್ಯೆ ಮಾಡಿಕೊಳ್ಳುವ ಹೀನ ಕೃತ್ಯಕ್ಕೆ ಮುಂದಾಗುತ್ತಿರಲಿಲ್ಲ ವೇನೊ? ರೋಹಿತ್‌ ಸೇರಿ ಹಾಸ್ಟೆಲ್‌ನಿಂದ ಹೊರಹಾಕಲಾದ ಐವರು ವಿದ್ಯಾರ್ಥಿಗಳ ಜತೆ ಮಿಕ್ಕವರು ನಿಲ್ಲಲಿಲ್ಲ. ಇವರ ಬೆಂಬಲಕ್ಕೆ ಮಿಕ್ಕ ವಿದ್ಯಾರ್ಥಿಗಳು ನಿಂತಿದ್ದರೆ ಪರಿಸ್ಥಿತಿ ಬೇರೆಯಾಗಿರುತ್ತಿತ್ತು. ಆದರೆ, ಶಿಕ್ಷೆಗೊಳಗಾದ ವಿದ್ಯಾರ್ಥಿಗಳ ಸಂಕಟ, ಅವಮಾನ ಬೇರೆಯವರಿಗೆ ಅರ್ಥವಾಗಲಿಲ್ಲ.ಊರು ಮುಳುಗಿಹೋದ ಮೇಲೆ ಏನೋ ಮಾಡಿದಂತೆ... ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಡಜನ್‌ಗೂ ಹೆಚ್ಚು ಪ್ರಾಧ್ಯಾಪಕರು ಈಗ ತಮ್ಮ ಆಡಳಿತಾತ್ಮಕ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಅವರು ಈ ಕೆಲಸವನ್ನು ಮೊದಲೇ ಮಾಡಬಹುದಿತ್ತು. ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ನಿಲಯದಿಂದ ಹೊರ ಹಾಕಿದಾಗಲೇ ಪ್ರತಿಭಟಿಸಿದ್ದರೆ ಅನ್ಯಾಯ ಸರಿಪಡಿಸಲು ಅವಕಾಶವಿತ್ತು.ಅವಿಭಜಿತ ಆಂಧ್ರಪ್ರದೇಶ ಮೂಲತಃ ಹೋರಾಟದ ಕಣ. ಅಲ್ಲಿ ಮಹತ್ವದ ಹೋರಾಟಗಳು ನಡೆದಿವೆ. ಇತ್ತೀಚಿನ ತೆಲಂಗಾಣ ಹೋರಾಟವಂತೂ ಎಲ್ಲರ ಮನಸ್ಸಿ ನೊಳಗೆ ಹಸಿರಾಗಿದೆ. ಆ ನೆಲದಲ್ಲಿ ವಿಚಾರವಂತರಿದ್ದಾರೆ, ನಕ್ಸಲರಿದ್ದಾರೆ, ಪ್ರಗತಿಪರರಿದ್ದಾರೆ, ಎಡಪಂಥೀಯರಿದ್ದಾರೆ, ಬೇರೆ ಬೇರೆ ವಿಚಾರಧಾರೆಗೆ ಬದ್ಧವಾದ ಜನರಿದ್ದಾರೆ. ಇಷ್ಟಾದರೂ ವಿಶ್ವವಿದ್ಯಾಲಯದ ವಿರುದ್ಧ ಅವರೇಕೆ ದನಿ ಎತ್ತಲಿಲ್ಲ ಎನ್ನುವುದು ಮಾತ್ರ ನಿಗೂಢ.ಕಾಂಗ್ರೆಸ್‌, ಬಿಎಸ್‌ಪಿ, ಟಿಎಂಸಿ ಹಾಗೂ ಎಎಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ರೋಹಿತ್‌ ಆತ್ಮಹತ್ಯೆ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ವಿದ್ಯಾರ್ಥಿಗಳನ್ನು ಹಾಸ್ಟೆಲ್‌ನಿಂದ ಹೊರಹಾಕಿದರೂ ಚಕಾರ ಎತ್ತದೆ ಮೌನವಾಗಿದ್ದ ರಾಜಕೀಯ ನಾಯಕರು ಇದೀಗ ಬೊಬ್ಬೆ ಹಾಕುತ್ತಿದ್ದಾರೆ. ದಲಿತರು ಹಾಗೂ ಹಿಂದುಳಿದ ವರ್ಗಗಳನ್ನು ಮತ ಬ್ಯಾಂಕುಗಳಾಗಿ ನೋಡುವ ರಾಜಕೀಯ ಪಕ್ಷಗಳ ಧೋರಣೆ ಬದಲಾಗಿಲ್ಲ. ‘ಬೇರೆ ಪಕ್ಷಗಳು ಈ ಪ್ರಕರಣ ಬಳಸಿಕೊಂಡು ರಾಜಕೀಯ ಮಾಡುತ್ತಿವೆ’ ಎಂದು ಆರೋಪಿಸುತ್ತಿರುವ ಬಿಜೆಪಿ ಅಕಸ್ಮಾತ್‌ ವಿರೋಧ ಪಕ್ಷವಾಗಿದ್ದರೆ ಇದೇ ಕೆಲಸ ಮಾಡುತ್ತಿತ್ತು.ರೋಹಿತ್‌ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಕೊಡುವ ಯತ್ನ ನಡೆಯುತ್ತಿದೆ. ಅವರ ಜಾತಿ, ಕುಟುಂಬದ ಹಿನ್ನೆಲೆ, ತಂದೆ– ತಾಯಿಗೆ ಸಂಬಂಧಿಸಿದ ಮಾಹಿತಿಗಳನ್ನು ಕೆದಕಲಾಗುತ್ತಿದೆ. ವೇಮುಲ ಪರಿಶಿಷ್ಟ ಜಾತಿಗೆ ಸೇರಿದವರಲ್ಲ, ಕಲ್ಲು ಒಡೆಯುವ ವಡ್ಡರ ಜಾತಿಯವರು, ಆದರೂ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಪೊಲೀಸರು ರೋಹಿತ್‌ ಕುಟುಂಬದ ಹಿನ್ನೆಲೆ, ಇತಿಹಾಸ ಕೆದಕುವ ಕೆಲಸ ಆರಂಭಿಸಿದ್ದಾರೆ.‘ರೋಹಿತ್‌ನ ತಂದೆ– ತಾಯಿ ಒಟ್ಟಿಗಿಲ್ಲ. ಪ್ರತ್ಯೇಕವಾಗಿದ್ದಾರೆ. ಅವನ ಸಹೋದರ ಇಸ್ಲಾಂಗೆ ಮತಾಂತರ ಆಗಿದ್ದಾನೆ. ವೇಮುಲನ ಮಾನಸಿಕ ಸ್ಥಿತಿ ಸರಿ ಇರಲಿಲ್ಲ’ ಎಂಬ ಕಥೆಗಳು ದೆಹಲಿಯಲ್ಲಿ ಹರಿದಾಡುತ್ತಿವೆ. ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿ ನಾಯಕ ನಾಗಪ್ಪನನ್ನು ‘ಬೇಟೆ’ ಆಡಲು ಅವನ ಕುಟುಂಬದ ಹಿನ್ನೆಲೆ, ಹುಟ್ಟಿನ ರಹಸ್ಯ, ತಾಯಿ, ಸಹೋದರಿ ಇತಿಹಾಸ ಕೆದಕಿದಂತೆ, ರೋಹಿತ್‌ ಕುಟುಂಬದ ಮಾಹಿತಿ ಜಾಲಾಡಲಾಗುತ್ತಿದೆ. ಅವರ ಕುಟುಂಬವನ್ನು ಮಾನಸಿಕವಾಗಿ ಕುಗ್ಗಿಸುವ ಉದ್ದೇಶದಿಂದ ಇಂಥ ಕುತಂತ್ರಕ್ಕೆ ಕೈಹಾಕಿರಬಹುದು.ವೇಮುಲ ದಲಿತರಲ್ಲದೆ, ವಡ್ಡರ ಜಾತಿಗೆ ಸೇರಿದ್ದರೂ ತಪ್ಪಲ್ಲ. ವಡ್ಡರ ಸಮಾಜ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಉತ್ತಮ ಸ್ಥಿತಿಯಲ್ಲಿದೆ ಎಂದು ಹೇಳುವಂತಿಲ್ಲ. ಈ ಜಾತಿಯಲ್ಲಿ ಹುಟ್ಟಿದ ಒಬ್ಬ ಹುಡುಗ ಪಿಎಚ್‌.ಡಿ. ಮಾಡುವ ಹಂತ ತಲುಪುವ ವಿಚಾರ ಸಾಮಾನ್ಯವಲ್ಲ. ಅವರ ಇಷ್ಟು ವರ್ಷದ ಸಾಧನೆ ಹಿಂದೆ ಇಡೀ ಕುಟುಂಬದ ದೊಡ್ಡ ಹೋರಾಟವೇ ಇರುತ್ತದೆ ಎನ್ನುವುದು ನಿರ್ವಿವಾದ. ರೋಹಿತ್‌ ಬದುಕಿ  ಹೋರಾಡಬೇಕಿತ್ತು. ಕುಟುಂಬದಲ್ಲಿ ಉನ್ನತ ಶಿಕ್ಷಣ ಪಡೆದ ಮೊದಲ ವ್ಯಕ್ತಿಯಾಗಿ, ಉಳಿದವರಿಗೆ ಆಸರೆಯಾಗಿ ನಿಲ್ಲಬೇಕಿತ್ತು. ಎಲ್ಲ ಕುಟುಂಬಗಳಲ್ಲೂ ಇಂಥದ್ದೊಂದು ನಿರೀಕ್ಷೆ ಇರುತ್ತದೆ. ಆದರೆ, ಮೊದಲ ಪೀಳಿಗೆಯ ವಿದ್ಯಾವಂತರಿರುವ ದಲಿತರು, ಹಿಂದುಳಿದವರ ಕುಟುಂಬಗಳಲ್ಲಿ ನಿರೀಕ್ಷೆ ಸ್ವಲ್ಪ ಹೆಚ್ಚಿರುತ್ತದೆ. ರೋಹಿತ್‌ ಅದನ್ನು ಹುಸಿಗೊಳಿಸಬಾರದಿತ್ತು.ರೋಹಿತ್‌ ಮತ್ತು ಅವರ ಮಿತ್ರರ ಪ್ರಕರಣದಲ್ಲಿ ವಿಶ್ವವಿದ್ಯಾಲಯವು ಕೇಂದ್ರದ ಕೈಗೊಂಬೆಯಾಗಿ ವರ್ತಿಸಿರುವುದು ಮೇಲ್ನೋಟಕ್ಕೆ ಕಾಣುವಂತಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದಿಂದ ಪತ್ರ ಬಂದ ಬಳಿಕ ಈ ವಿದ್ಯಾರ್ಥಿಗಳನ್ನು ಕಾಲೇಜು, ಹಾಸ್ಟೆಲ್‌ನಿಂದ ಉಚ್ಚಾಟಿಸುವ ತೀರ್ಮಾನ ಮಾಡಲಾಗಿದೆ. ಬಳಿಕ ಕಾಲೇಜಿನಿಂದ ಉಚ್ಚಾಟಿಸುವ ತೀರ್ಮಾನ ಹಿಂದಕ್ಕೆ ಪಡೆಯಲಾಗಿದೆ. ಇದು ಏಕಪಕ್ಷೀಯ ತೀರ್ಮಾನದಂತೆ ಕಾಣುತ್ತದೆ.ಆರೋಪ ಕುರಿತು ವಿದ್ಯಾರ್ಥಿಗಳಿಂದ ವಿವರಣೆ ಕೇಳದೆ, ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿಲ್ಲ. ವೇಮುಲ ಆತ್ಮಹತ್ಯೆ ಬಳಿಕ ನಾಲ್ವರ ಉಚ್ಚಾಟನೆ ರದ್ದುಪಡಿಸಲಾಗಿದೆ. ಇದಕ್ಕೆಲ್ಲ ಮೂಲ ಕಾರಣ ಸಚಿವ ಬಂಡಾರು ದತ್ತಾತ್ರೇಯ ಅವರ ಪತ್ರ. ದತ್ತಾತ್ರೇಯ ತಮ್ಮ ಕ್ಷೇತ್ರದ ಭಾಗವಾದ ಹೈದರಾಬಾದ್‌ ಕೇಂದ್ರೀಯ ವಿ.ವಿ.ಯಲ್ಲಿ ಜಾತಿವಾದಿಗಳು, ಸಮಾಜಘಾತುಕ ಶಕ್ತಿಗಳು, ದೇಶದ್ರೋಹಿಗಳು ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬರೆದ ಪತ್ರ ರಾದ್ಧಾಂತಕ್ಕೆ ಕಾರಣವಾಯಿತೆಂದು ಹೇಳಲಾಗುತ್ತಿದೆ.ಪಾಕಿಸ್ತಾನದ ಭಯೋತ್ಪಾದಕ ಯಾಕೂಬ್‌ ಮೆಮನ್‌ ಗಲ್ಲು ಶಿಕ್ಷೆ ಪ್ರತಿಭಟಿಸಿ ಹೈದರಾಬಾದ್‌ ವಿಶ್ವವಿದ್ಯಾಲಯದ ‘ಅಂಬೇಡ್ಕರ್‌ ವಿದ್ಯಾರ್ಥಿ ಸಂಘಟನೆ’ ಪ್ರತಿಭಟನೆ ನಡೆಸಿತ್ತು. ಅದನ್ನು ಪ್ರಶ್ನಿಸಿದ ವಿಶ್ವವಿದ್ಯಾಲಯದ ಎಬಿವಿಪಿ ಅಧ್ಯಕ್ಷ ಸುಶೀಲ್ ಕುಮಾರ್‌ ಅವರ ಮೇಲೆ ಹಲ್ಲೆ ಮಾಡಲಾಯಿತು ಎಂದು ದೂರಲಾಗಿದೆ. ಬಂಡಾರು ದತ್ತಾತ್ರೇಯ ಈ ವಿಷಯವನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.‘ಗಲ್ಲು ಶಿಕ್ಷೆ ಇರಬೇಕೇ ಅಥವಾ ರದ್ದಾಗಬೇಕೇ?’ ಎಂಬ ವಿಚಾರ ಕಳೆದ ಕೆಲವು ವರ್ಷಗಳಿಂದ ಬಿಸಿ ಬಿಸಿ ಚರ್ಚೆಗೆ ವಸ್ತುವಾಗುತ್ತಿದೆ.  ಗಲ್ಲು ಶಿಕ್ಷೆ ಜಾರಿಯಾದ ಪ್ರತೀ ಸಂದರ್ಭದಲ್ಲಿ ಅದು ರದ್ದಾಗಬೇಕು ಎಂದು ಬಹಳಷ್ಟು ಜನ ವಾದಿಸುತ್ತಾರೆ. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗಲ್ಲು ಶಿಕ್ಷೆ ಕೊಡಬೇಕು ಎಂದು ಹೇಳುವವರ ಸಂಖ್ಯೆ ಕಡಿಮೆಯಿಲ್ಲ. ಜಗತ್ತಿನ ಅನೇಕ ರಾಷ್ಟ್ರಗಳು ಗಲ್ಲು ಶಿಕ್ಷೆಗೆ ಇತಿಶ್ರೀ ಹಾಡಿವೆ.ಭಾರತದ ಕಾನೂನು ಆಯೋಗ ಅನೇಕ ವರದಿಗಳಲ್ಲಿ ಗಲ್ಲು ಶಿಕ್ಷೆ ರದ್ದಿಗೆ ಶಿಫಾರಸು ಮಾಡಿದೆ. ಗಲ್ಲು ಶಿಕ್ಷೆ ವಿರೋಧಿಸಿದ ತಕ್ಷಣ ಅಥವಾ ಅದರ ವಿರುದ್ಧ ಪ್ರತಿಭಟನೆ ನಡೆಸಿದಾಕ್ಷಣ ಯಾರಿಗೂ ದೇಶದ್ರೋಹಿಗಳೆಂದು ಹಣೆಪಟ್ಟಿ ಕಟ್ಟುವುದು ನ್ಯಾಯಸಮ್ಮತ ಕ್ರಮವಾಗಲಾರದು. ಇದು ಪ್ರತಿಯೊಬ್ಬರ ವ್ಯಕ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ ಪ್ರಶ್ನೆ. ಸಂವಿಧಾನದತ್ತವಾಗಿರುವ ಈ ಹಕ್ಕನ್ನು ಎಲ್ಲರೂ ಗೌರವಿಸಬೇಕು. ಅಧಿಕಾರದಲ್ಲಿ ಇರುವವರು ಇನ್ನೂ ಹೆಚ್ಚು ಗೌರವಿಸಬೇಕು. ಹೈದರಾಬಾದ್‌ ವಿಶ್ವವಿದ್ಯಾಲಯ ಐವರು ವಿದ್ಯಾರ್ಥಿಗಳ ವಿಷಯದಲ್ಲಿ ತಪ್ಪು ಮಾಡಿದೆ. ಉಚ್ಚಾಟಿಸುವ ಮೂಲಕ ಅವರಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿದೆ.ವಿಶ್ವವಿದ್ಯಾಲಯ ಮೊದಲೇ ಎಚ್ಚರಿಕೆ ವಹಿಸಿದ್ದರೆ, ಎಬಿವಿಪಿ ಮತ್ತು ಎಎಸ್ಎ ವಿದ್ಯಾರ್ಥಿಗಳನ್ನು ಚರ್ಚೆಗೆ ಕರೆದು ಸರ್ವಸಮ್ಮತವಾಗಿ ಸಮಸ್ಯೆ ಬಗೆಹರಿಸಬಹುದಿತ್ತು. ‘ಈ ಪ್ರಕರಣದಿಂದ ರೋಹಿತ್‌ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ನನಗೆ ಅನಿಸಿರಲಿಲ್ಲ’ ಎಂದು ಸುಶೀಲ್ ಕುಮಾರ್‌ ಪಶ್ಚಾತ್ತಾಪದ ದನಿಯಲ್ಲಿ ಹೇಳಿದ್ದಾರೆ. ತನ್ನ ಕ್ರಮದ ಪರಿಣಾಮವನ್ನು ವಿಶ್ವವಿದ್ಯಾಲಯ ಮೊದಲೇ ಗ್ರಹಿಸದೇ ಹೋಗಿದ್ದು ಅಕ್ಷಮ್ಯ.ದತ್ತಾತ್ರೇಯ ಅವರ ಪತ್ರದ ಸಂಬಂಧ ಹೈದರಾಬಾದ್‌ ವಿಶ್ವವಿದ್ಯಾಲಯಕ್ಕೆ ಐದು ಸಲ ಸೂಚನೆಗಳನ್ನು ಕಳುಹಿಸಿದ ಮಾನವ ಸಂಪನ್ಮೂಲ ಸಚಿವಾಲಯ ಬೇರೆಯವರಿಂದ ಬಂದ ದೂರುಗಳ ವಿಷಯದಲ್ಲೂ ಇದೇ ರೀತಿ ನಡೆದುಕೊಂಡಿದೆಯೇ ಎನ್ನುವುದು ಪ್ರಶ್ನಾರ್ಹ. ರಾಜ್ಯಸಭೆ ಮಾಜಿ ಸದಸ್ಯ, ಕಾಂಗ್ರೆಸ್ಸಿನ ಹನುಮಂತ ರಾವ್‌ ಕಳೆದ  ನವೆಂಬರ್‌ನಲ್ಲಿ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಒಂದು ಪತ್ರ ಬರೆದಿದ್ದಾರೆ.ಅವರು ಈ ಪತ್ರ ಬರೆದಾಗ ರಾಜ್ಯಸಭೆ ಸದಸ್ಯರಾಗಿದ್ದರು. ಅದರಲ್ಲಿ, ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರ, ಜಾತಿ ರಾಜಕಾರಣ ನಡೆಯುತ್ತಿದೆ ಎಂದೂ ಆರೋಪಿಸಿದ್ದರು. ಜಾತಿ ರಾಜಕಾರಣಕ್ಕೆ ಅನೇಕ ಕೆಳಜಾತಿ ವಿದ್ಯಾರ್ಥಿಗಳು ಬಲಿಯಾಗಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದ್ದರು. ಆದರೆ, ಅವರ ಪತ್ರ ಏನಾಗಿದೆ ಎಂದು ಬೇರೆಯವರಿಗೆ ಬೇಡ, ಸ್ವತಃ ರಾವ್‌ ಅವರಿಗೂ ಗೊತ್ತಿಲ್ಲ. ಮಾನವ ಸಂಪನ್ಮೂಲ ಸಚಿವಾಲಯ ಯಾರ ಹಿತ ಕಾಪಾಡುತ್ತಿದೆ ಎಂಬುದಕ್ಕೆ ಮತ್ಯಾವ ಪುರಾವೆ ಬೇಕು?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.