ಗುರುವಾರ , ಏಪ್ರಿಲ್ 9, 2020
19 °C

ಹಣಗೆರೆ ಭಾವೈಕ್ಯದ ಬೆಳ್ಳಿಗೆರೆ

ಸತೀಶ್.ಜಿ.ಕೆ.ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಪ್ರವೇಶಿಸುತ್ತಿದ್ದಂತೆ ಹಸಿರ ತೋರಣದಂತೆ ಸ್ವಾಗತಿಸುವುದು ‘ಶೆಟ್ಟಿಹಳ್ಳಿ ಅಭಯಾರಣ್ಯ’. ತಂಪಿನ ವಾತಾವರಣದಲ್ಲಿ ಹಾಗೆ ಮುಂದಕ್ಕೆ ಹೋದರೆ ಕಾಡು-ಕಣಿವೆಗುಂಟ ಅಂಕುಡೊಂಕಿನ ಹಸಿರುಹಾದಿ. ಮುಕ್ಕಾಲುತಾಸು ಕ್ರಮಿಸುವಷ್ಟರಲ್ಲಿ ಎದುರಾಗುತ್ತದೆ, ಸಾಮರಸ್ಯದ ಸವಿಯನ್ನು ಹಂಚುವ ‘ಹಣಗೆರೆ’ ಎಂಬ ಪುಟ್ಟ ಹಳ್ಳಿ.

ಚೆಲುವೆಲ್ಲಾ ತನ್ನದೆನ್ನುವ ಮಲೆನಾಡಿನ ತೀರ್ಥಹಳ್ಳಿ, ತನ್ನ ಸಾಹಿತ್ಯಿಕ-ಸಾಂಸ್ಕೃತಿಕ ಶ್ರೀಮಂತಿಕೆಯಿಂದಲೂ ಎಲ್ಲರ ಕಣ್ಮನ ಸೆಳೆಯುತ್ತಿದೆ. ನಾಡಿನ ಹೆಮ್ಮೆಯ ಹಣಗೆರೆ ಎಂಬ ಪುಟ್ಟ ಊರು ಸೌಹಾರ್ದ ಕೇಂದ್ರವಾಗಿಯೂ ನೆಲೆಕಂಡುಕೊಂಡಿದೆ. ವಿನಾಕಾರಣ ಕ್ಷೋಭೆಗೊಳ್ಳುತ್ತಲೇ ಉಳಿದಿರುವ ವರ್ತಮಾನಕ್ಕೆ ಧರ್ಮಸಮನ್ವಯದ ಪಾಠ ಹೇಳುವ ಜಾಗದಂತಿದೆ ಇದು. ಯಾತ್ರಾತ್ರಿಗಳಿಗೆ ಶಿವಮೊಗ್ಗ- ಆಯನೂರು-ಬೆಜ್ಜವಳ್ಳಿ-ತೀರ್ಥಹಳ್ಳಿ ಮಾರ್ಗದ ಭಾವಯಾನವು ಕಾಡುಸಂಚಾರದ ಖುಷಿಯೊಂದಿಗೆ, ಹಳ್ಳಿಸೊಗಡಿನ ಸಾಮೀಪ್ಯ, ಕೃಷಿಕಸುಬುಗಳ ಸಾಂಗತ್ಯವನ್ನೂ ತುಂಬಿಕೊಡುತ್ತದೆ.

ಸೌಹಾರ್ದದ ವೈಶಿಷ್ಟ್ಯವೇನಿದೆ?
ಹಣಗೆರೆಯಲ್ಲಿ ಒಂದೇ ಸೂರಿನಡಿ ಮಂದಿರ ಮಸೀದಿಗಳೆರಡೂ ಇವೆ. ದೇವಾಲಯ ಪ್ರವೇಶಿಸುತ್ತಿದ್ದಂತೆ ಇಕ್ಕೆಲಗಳಲ್ಲಿ ಭೂತರಾಯ, ಚೌಡೇಶ್ವರಿ ದೇವರು ಮುಖಾಮುಖಿಯಾಗಿ ನಿಂತಿದ್ದರೆ, ಎದುರುಗಡೆ ಇರುವುದೇ ಸಯ್ಯದ್ ಸಾದತ್ ದರ್ಗಾ. ಭಕ್ತರೇ ಅರ್ಚಕರಾಗಿ ಇಷ್ಟದಂತೆ ಪೂಜೆಮಾಡಿ, ಹಣ್ಣು-ಕಾಯಿಗಳನ್ನು ಅರ್ಪಿಸಿ ಆರಾಧಿಸುವುದು ಇಲ್ಲಿನ ವಿಶೇಷ.

ಮುಸ್ಲಿಂ ಜನಾಂಗದವರಾದ ಮುಜಾವರರು(ಉಸ್ತುವಾರಿ) ಸಕ್ಕರೆಯ ಒದಿಕೆಯನ್ನು ದೇವರಿಗೊಪ್ಪಿಸಿ, ಅರಬ್ಬೀ ಶ್ಲೋಕಗಳ ಪಠಣದೊಂದಿಗೆ ನವಿಲುಗರಿಯಲ್ಲಿ ತಲೆಸವರಿ, ಸನ್ಮಂಗಳವನ್ನು ಹಾರೈಸುವುದು ಇಲ್ಲಿಯ ರೂಢಿ. ಅಲ್ಲಿ ಬಂದವರು ಇಲ್ಲಿಯೂ, ಇಲ್ಲಿ ಬಂದವರು ಅಲ್ಲಿಯೂ ಪ್ರಾರ್ಥಿಸಿ ಹೊರಡುತ್ತಾರೆ. ಹಿಂದೂ ದೇವರನ್ನು ಸುತ್ತಿಬರಲು ಹೊರಟವರು ಮಸೀದಿಯನ್ನೂ ಸುತ್ತಿಬರುತ್ತಾರೆ. ಇಲ್ಲಿ ಎರಡೂ ಧರ್ಮಸಂಸ್ಕೃತಿಗಳ, ಆಚರಣೆಗಳ ಸಮ್ಮಿಲನ. ಭಾವೈಕ್ಯದ ಕೈಗನ್ನಡಿ.


ಹಣಗೆರೆಯಲ್ಲಿ ಒಂದೇ ಸೂರಿನಡಿ ಇರುವ ಮಂದಿರ ಹಾಗೂ ಮಸೀದಿ

ಹೀಗೊಂದು ನಂಬಿಕೆ
ಅದೊಂದು ಕಾಲದಲ್ಲಿ, ಶೆಟ್ಟಿಹಳ್ಳಿ ಅಭಯಾರಣ್ಯದ ಹೃದಯ ಭಾಗದಂತಿರುವ ಹಣಗೆರೆಯ ಕೆರೆದಡದಲ್ಲಿ ಬಾಗ್ದಾದ್ ಸೂಫಿಸಂತರಾದ ಹಜ್ರತ್ ಸಯ್ಯದ್ ಸಾದತ್‍ರು ಧ್ಯಾನಸ್ಥರಾಗಿದ್ದರು. ಗ್ರಾಮದ ಅಣ್ಣ-ತಂಗಿಯರಾದ ಭೂತರಾಯ-ಚೌಡಮ್ಮರು ಹಾಲು, ಹಣ್ಣು, ಆಹಾರ ನೀಡುತ್ತ ಸಂತರಿಗೆ ನೆರವಾಗಿದ್ದರು. ಮುಂದೆ ಲೋಕಕಲ್ಯಾಣಕ್ಕಾಗಿ ಅಲ್ಲಿಯೇ ಜೀವಂತ ಸಮಾಧಿಯಾದ ಸಂತರ ಅಕ್ಕಪಕ್ಕದಲ್ಲೇ ಭೂತರಾಯ-ಚೌಡಮ್ಮರು ನೆಲೆನಿಂತರು. ನಂತರದಲ್ಲಿ ಆ ಜಾಗವು ಹಿಂದೂ-ಮುಸ್ಲಿಂ ಧರ್ಮಗಳ ಶ್ರದ್ಧಾಕೇಂದ್ರವಾಗಿ ಉಳಿಯಿತು. ಇದೆಲ್ಲ ಜನರಲ್ಲಿರುವ ನಂಬಿಕೆ ಮತ್ತು ವಿಶ್ವಾಸ.

ಮೂರು ಮೈಲಿಯಾಚೆಯ ಕಾಡುಗುಡ್ಡದ ತುದಿಯಲ್ಲಿರುವ ಗುಹೆಯಲ್ಲಿನ ಬಸವನ ಬಾಯಿಯಿಂದ ಚಿಮ್ಮುವ ತೀರ್ಥವು ಹಣಗೆರೆ, ಬಸವನಗದ್ದೆ ಮತ್ತು ಅಲಸೆ ಕ್ಷೇತ್ರಕ್ಕೆ ವರ್ಷವಿಡೀ ನಿರಂತರವಾಗಿ ಹರಿಯುತ್ತದೆ. ವರ್ಷಕ್ಕೊಮ್ಮೆ ಗಂಧಉತ್ಸವ-ಉರುಸ್ಸನ್ನು ಹಿಂದೂ-ಮುಸ್ಲಿಂಬಾಂಧವರೆಲ್ಲಾ ಜತೆಸೇರಿ ಶ್ರದ್ಧಾಭಕ್ತಿ ಮತ್ತು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಂದು ಸುತ್ತಲಿನ ಭೂಒಡೆಯರಾಗಿದ್ದ ಬಸವನಗದ್ದೆಯ ಭಟ್ಟರ ಮನೆಯಲ್ಲಿ ಪೂಜೆ ಮಾಡುವ ಮೂಲಕವೇ ಗಂಧಉತ್ಸವಕ್ಕೆ ಚಾಲನೆ.

ಸ್ಥಳ ಮಹಾತ್ಮೆ
ಹಣಗೆರೆ, ಕೇವಲ ಶಿವಮೊಗ್ಗಕ್ಕಷ್ಟೇ ಸೀಮಿತವಲ್ಲ, ನೆರೆಯ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ ಮತ್ತು ದಕ್ಷಿಣ ಕನ್ನಡ ಭಾಗಗಳಲ್ಲಿ ಭಕ್ತರ ಸಂಖ್ಯೆ ದೊಡ್ಡದಿದೆ. ಮಾತ್ರವಲ್ಲ ದೂರದ ತುಮಕೂರು, ಬೆಂಗಳೂರು ಅಲ್ಲದೇ ತಮಿಳುನಾಡು, ಗೋವಾ ರಾಜ್ಯಗಳಿಂದಲೂ ಭಕ್ತರು ತಂಡೋಪತಂಡವಾಗಿ ಬಂದು ಪೂಜೆ-ನೈವೇದ್ಯಗಳನ್ನು ಅರ್ಪಿಸಿ ಇಲ್ಲಿಯ ತಾಜಾ ಪರಿಸರದಲ್ಲಿಯೇ ಅಡಿಗೆ-ಊಟ ಮುಗಿಸಿ ಹೊರಡುವುದೂ ಇದೆ. ನಿತ್ಯವೂ ಅಂದಾಜು ಮೂರುಸಾವಿರ ಜನ ಮತ್ತು ಹುಣ್ಣಿಮೆ-ಅಮವಾಸ್ಯೆಗಳಂದು ಇಪ್ಪತ್ತು ಸಾವಿರ ಜನರು ಭೇಟಿ ನೀಡುತ್ತಿರುವ ಸ್ಥಳವಿದು. ಹರಕೆ ಸಂಕಲ್ಪಗಳ ಸಂಕೇತವಾಗಿ ಪ್ರಾಂಗಣದಲ್ಲಿರುವ ಮತ್ತೀಮರದ ಬುಡದಲ್ಲಿ ಮೊಳೆನೆಡುವುದು, ಬೀಗಜಡಿಯುವುದು, ತಾಯತ-ತ್ರಿಶೂಲಗಳನ್ನು ಅರ್ಪಿಸಿ ಹರಕೆ ಹೊರುವ ಪದ್ಧತಿ ಇದೆ. ಮೋಸ-ವಂಚನೆಗಳ ವಿರುದ್ಧ ಹುಯಿಲು ಹಾಕುವ, ನಂಬಿಕಸ್ತರಿಗೆ ನ್ಯಾಯಸಂದಾಯ ನೀಡುವ ಶಕ್ತಿದೇವರ ತಾಣವೂ ಹೌದು.

ಕೊರತೆ-ನಿರೀಕ್ಷೆಗಳು
1985 ರಿಂದ ಮುಜರಾಯಿ ಇಲಾಖೆಗೆ ಸೇರಿರುವ ಹಣಗೆರೆ ಕ್ಷೇತ್ರದಲ್ಲಿ ವಾರ್ಷಿಕ ₹10 ಲಕ್ಷದವರೆಗೆ ಹಣ ಸಂಗ್ರಹವಾಗುತ್ತಿದೆ. ಹಾಗಿದ್ದೂ ಇಲ್ಲಿನ ಮೂಲಸೌಕರ್ಯಗಳ ಕೊರತೆ ಬೇಸರ ಹುಟ್ಟಿಸುತ್ತಿದೆ. ಪ್ರಮುಖವಾಗಿ, ಸೂಕ್ತ ಹೊಣೆಗಾರಿಕೆ, ನಿರ್ವಹಣೆಗಳಿಲ್ಲದ ಪರಿಣಾಮ ಕ್ಷೇತ್ರವು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ. ದೇವಸ್ಥಾನದ ಪಕ್ಕದಲ್ಲಿಯೇ ಇರುವ ಕೆರೆ, ನೀರಿನ ಬದಲು ಕಸತುಂಬುವ ತೊಟ್ಟಿಯಾಗಿಬಿಟ್ಟಿದೆ. ಬಿಗಿಯಾದ ಕಾನೂನು ಇಲ್ಲದ್ದರಿಂದ ಯಾತ್ರಾತ್ರಿಗಳು ತಮ್ಮ ವಾಸ್ತವ್ಯ, ಅಡಿಗೆ-ಊಟದ ನಂತರ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುತ್ತಾರೆ. ಇಂಥ ತ್ಯಾಜ್ಯಗಳು ಸಾಂಕ್ರಾಮಿಕ ರೋಗಹರಡುವಿಕೆಗೂ ಕಾರಣವಾಗುತ್ತಿದೆ. ಆಡಳಿತ ಯಂತ್ರವು ಸ್ಥಳೀಯ ಉತ್ಸಾಹಿ ಮತ್ತು ಕಾಳಜಿಯುಳ್ಳ ಯುವಕರ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿ ನಿಸರ್ಗದ ಮಡಿಲಿನ ಚೆಂದದ ಪರಿಸರವನ್ನು ಉಳಿಸಿಕೊಳ್ಳುವತ್ತ ಅಡಿ ಇಡಬೇಕಾಗಿದೆ. ಇದು ಸ್ಥಳಿಯರ ಮತ್ತು ಪ್ರವಾಸಕ್ಕೆ ಬರುವ ಸಾವಿರಾರು ಭಕ್ತರ ಆರೋಗ್ಯ ದೃಷ್ಟಿಯಿಂದ ಕಾರ್ಯ ಪ್ರವೃತ್ತರಾಗಬೇಕೆಂಬುದು ಸ್ಥಳೀಯರಾದ ಕೆರೆಹಳ್ಳಿ ರಮೇಶರ ಒತ್ತಾಯ. 

ಚಿತ್ರಗಳು: ಲೇಖಕರವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)