ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ಗೆ ತಡೆ ಶೌಚಾಲಯದತ್ತ ನಡೆ…

Last Updated 3 ಅಕ್ಟೋಬರ್ 2019, 9:31 IST
ಅಕ್ಷರ ಗಾತ್ರ

ದಶಕದ ಹಿಂದೆ ಆ ಊರಲ್ಲಿ ಇಬ್ಬರೇ ಕ್ಯಾನ್ಸರ್‌ ರೋಗಿಗಳಿದ್ದರು. ಈಗ ಅವರ ಸಂಖ್ಯೆ ಎಂಟಕ್ಕೆ ಏರಿದೆ. ಈ ಕ್ಯಾನ್ಸರ್‌ ಹರಡುವುದಕ್ಕೆ ಪ್ಲಾಸ್ಟಿಕ್‌ ಕೂಡ ಒಂದು ಕಾರಣ ಎಂಬುದನ್ನು ಅರಿತು, ಗ್ರಾಮವನ್ನು ಪ್ಲಾಸ್ಟಿಕ್‌ಮುಕ್ತ ಮಾಡಲು ಹೊರಟವರು ಹುಬ್ಬಳ್ಳಿ ತಾಲ್ಲೂಕಿನ ಅಂಚಟಗೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಶಿವಪ್ಪ ಬಿಡ್ನಾಳ.

ಹೀಗೆ ಗ್ರಾಮವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಹೊರಟಾಗ, ಆರಂಭದಲ್ಲಿ ಗ್ರಾಮಸ್ಥರಿಂದ ದೊರೆತ ನೀರಸ ಪ್ರತಿಕ್ರಿಯೆ, ಅವರಿಗೂ ನಿರಾಸೆ ಮಾಡಿತ್ತು. ನಂತರ ತಮ್ಮ ಪರಿಸರಪ್ರಿಯ ಕಾರ್ಯಕ್ಕೆ ಶಾಲಾ ಮಕ್ಕಳನ್ನು ಆಶ್ರಯಿಸಿದರು. ವೇಸ್ಟ್ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಯಾವುದೇ ಪ್ಲಾಸ್ಟಿಕ್ ತ್ಯಾಜ್ಯ ತಂದುಕೊಟ್ಟವರಿಗೆ ₹2 ನೀಡುವುದಾಗಿ ಘೋಷಿಸಿದರು. ಮಕ್ಕಳು ಮನೆಯಲ್ಲಿರುವ ಪ್ಲಾಸ್ಟಿಕ್‌ ಬಾಟಲಿ, ಬ್ಯಾಗ್‌ಗಳನ್ನಷ್ಟೇ ಅಲ್ಲ, ರಸ್ತೆ ಬದಿ ಬಿದ್ದವುಗಳನ್ನೂ ತಂದುಕೊಟ್ಟರು. ಈಗ ಮಕ್ಕಳಿಗೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿಕೊಡುವುದು ಅಭ್ಯಾಸವಾಗಿದೆ. ಎಲ್ಲಿಯೇ ಪ್ಲಾಸ್ಟಿಕ್‌ವಸ್ತು ಸಿಗಲಿ ಮಕ್ಕಳು ಶಾಲೆಗೆ ತರುತ್ತಾರೆ. ಹೀಗೆ ಸಂಗ್ರಹಿಸಿದ ಬಾಟಲಿ, ಬ್ಯಾಗ್‌ಗಳ ಸಂಖ್ಯೆ 10 ಸಾವಿರ ದಾಟಿದೆ.

ಹೀಗೆ ಪ್ಲಾಸ್ಟಿಕ್ ತ್ಯಾಜ್ಯ ತಂದ ಮಕ್ಕಳಿಗೆ ಹಣ ನೀಡುವುದಕ್ಕಾಗಿ ಬಸವರಾಜ್ ಅವರು, ಆರು ತಿಂಗಳ ತಮ್ಮ ಗೌರವ ಧನವನ್ನು ವಿನಿಯೋಗಿಸಿದ್ದಾರೆ.

ಈ ಬೆಳವಣಿಗೆ ನಂತರ, ಗ್ರಾಮದಲ್ಲಿರುವ ಪ್ಲಾಸ್ಟಿಕ್ ಬ್ಯಾಗ್‌, ಬಾಟಲಿ, ರಬ್ಬರ್‌, ರಟ್ಟು, ಪೇಪರ್‌ ಮುಂತಾದ ತ್ಯಾಜ್ಯಗಳ ಸಂಗ್ರಹಕ್ಕೆ ₹35 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಜೊತೆಗೆ ಎರೆಹುಳು ಗೊಬ್ಬರ ತಯಾರಿಸುವ ಘಟಕಗಳನ್ನೂ ನಿರ್ಮಿಸಲಾಗುತ್ತಿದೆ. ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ಮನೆ, ಮನೆಗೆ ಬಕೆಟ್‌ಗಳನ್ನು ನೀಡಲಾಗುತ್ತಿದೆ. ತ್ಯಾಜ್ಯದಿಂದ ಆದಾಯ ಪಡೆಯಲು ಯೋಜಿಸಲಾಗಿದೆ.

ಗ್ರಾಮದ ಆಡಳಿತ ಸುಧಾರಣೆಗೆ ಮುಂದಾಗಿರುವ ಪಂಚಾಯ್ತಿ ಸದಸ್ಯರು, ಸಮಸ್ಯೆಗಳನ್ನು ತಿಳಿಸಲು ವಾಟ್ಸ್‌ಆ್ಯಪ್‌ ಸಂಖ್ಯೆ ನೀಡಿದ್ದಾರೆ. ಪಂಚಾಯ್ತಿಯಲ್ಲಿ ದೂರುಪೆಟ್ಟಿಗೆ ಹಾಕಿದ್ದಾರೆ. ಜತೆಗೆ ಗ್ರಾಮದಲ್ಲಿನ ಶಾಲೆ, ಅಂಗನವಾಡಿಗಳು ಹಾಗೂ ಪಂಚಾಯ್ತಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಅಲ್ಲಿ ಏನು ನಡೆಯುತ್ತದೆ ಎಂಬುದನ್ನು ಪಂಚಾಯ್ತಿಯಲ್ಲಿಯೇ ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

ಬಯಲು ಬಹಿರ್ದೆಸೆ ಮುಕ್ತ ಹೆಬ್ಬಳ್ಳಿ

‘ಬಯಲಿನಲ್ಲಿ ಸಂಡಾಸ್‌ಗೆ ಹೋಗಬೇಡಿ, ಅದರಿಂದ ರೋಗ ರುಜಿನ ಬರತಾವ. ಸರ್ಕಾರ ಸಹಾಯಧನ ನೀಡತೈತಿ. ಪಾಯಿಖಾನೆ ಕಟ್ಟಿಸಿಕೊಳ್ಳಿ’ ಹೀಗೆಂದು ಹೇಳಿ ಗುಲಾಬಿ ಹೂ ನೀಡಿ ಜನರಲ್ಲಿ ಶೌಚಾಲಯ ಜಾಗೃತಿ ಕೆಲಸ ಮಾಡುತ್ತಾ, ಗ್ರಾಮವನ್ನೇ ಬಯಲು ಬಹಿರ್ದೆಸೆ ಮುಕ್ತಗೊಳಿಸಿದವರು ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿಯ ‘ಸ್ವಚ್ಛಗ್ರಾಹಿ’ ಕರಿಬಸಪ್ಪ ಗುಡಿಸಲಮನಿ.

ಏಳನೇ ತರಗತಿ ಓದಿರುವ ಕರಿಬಸಪ್ಪ, ಹೆಬ್ಬಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 2014 ರಿಂದ ಗುತ್ತಿಗೆ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕಸ ವಿಲೇವಾರಿಯ ಟ್ರ್ಯಾಕ್ಟರ್ ಓಡಿಸುವುದರ ಜೊತೆಗೆ ಸ್ವಚ್ಛಗ್ರಾಹಿಯಾಗಿ ಶೌಚಾಲಯ ನಿರ್ಮಾಣದ ಬಗೆಗೂ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ರಾಜ್ಯದಲ್ಲಿ ಎಲ್ಲ ಮನೆಗಳಲ್ಲಿ ಶೌಚಾಲಯ ಕಟ್ಟಿಸಿಕೊಂಡ ಗ್ರಾಮಗಳ ಸಂಖ್ಯೆ ದೊಡ್ಡದಿರಬಹುದು. ಆದರೆ, ಕಟ್ಟಿಸಿದ ಶೌಚಾಲಯಗಳನ್ನು ಬಳಸಿದಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಹೆಬ್ಬಳ್ಳಿಯಲ್ಲಿ ಮಾತ್ರ ಎಲ್ಲರೂ ಶೌಚಾಲಯ ಬಳಸುವಂತೆ ಪ್ರೇರೇಪಿಸುತ್ತಿದ್ದಾರೆ ಕರಿಬಸಪ್ಪ. ತಂಬಿಗೆ ಹಿಡಿದುಕೊಂಡು ಬಯಲು ಕಡೆ ಹೊರಟಿರುವವನ್ನು ಕಂಡರೆ, ಅವರನ್ನು ನಿಲ್ಲಿಸಿ ತಿಳಿ ಹೇಳುತ್ತಾರೆ. ಶೌಚಾಲಯ ಬಳಸುವಂತೆ ಮನವೊಲಿಸುತ್ತಿದ್ದಾರೆ.

ಗ್ರಾಮದಲ್ಲಿ 2,761 ಕುಟುಂಬಗಳಿವೆ. ಐದು ವರ್ಷಗಳ ಹಿಂದೆ ಬಹಳಷ್ಟು ಮನೆಗಳಲ್ಲಿ ಶೌಚಾಲಯಗಳಿರಲಿಲ್ಲ. ಶೌಚಕ್ಕೆ ಎಲ್ಲರೂ ಬಯಲಿಗೆ ತೆರಳುತ್ತಿದ್ದರು. ‘ಬಯಲಿನಲ್ಲಿ ಶೌಚ ಮಾಡಿದರೆ ಆಗುವ ಸಮಸ್ಯೆಗಳ ಬಗೆಗೆ ತಿಳಿ ಹೇಳುತ್ತಿದ್ದೆ. ಜೊತೆಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳೊಂದಿಗೂ ತೆರಳಿ ಜಾಗೃತಿ ಮೂಡಿಸುತ್ತಿದ್ದೆ. 2017ರ ವೇಳೆಗೆ ಹೆಬ್ಬಳ್ಳಿ, ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿದೆ’ ಎನ್ನುತ್ತಾರೆ ಕರಿಬಸಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT