ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಲಕ್ಷ ಟನ್ ರಾಗಿ ಹೆಚ್ಚುವರಿ ಖರೀದಿಗೆ ಕೇಂದ್ರಕ್ಕೆ ಪತ್ರ: ಸಚಿವ ಉಮೇಶ ಕತ್ತಿ

Last Updated 15 ಫೆಬ್ರುವರಿ 2022, 19:15 IST
ಅಕ್ಷರ ಗಾತ್ರ

ಬೆಂಗಳೂರು: ‘ಕನಿಷ್ಠ ಬೆಂಬಲ ಬೆಳೆ (ಎಂಎಸ್‌ಪಿ) ಯೋಜನೆಯಡಿ 3 ಲಕ್ಷ ಟನ್ ರಾಗಿ ಹೆಚ್ಚುವರಿ ಖರೀದಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಆಹಾರ ಸಚಿವ ಉಮೇಶ ಕತ್ತಿ ತಿಳಿಸಿದರು.

ವಿಧಾನಸಭೆಯಲ್ಲಿ ಗಮನಸೆಳೆಯುವ ಸೂಚನೆಯಡಿ ರಾಗಿ ಖರೀದಿ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಅವರು, ‘2.10 ಲಕ್ಷ ಟನ್ ರಾಗಿ ಖರೀದಿಗೆ ಕೇಂದ್ರ ಅನುಮತಿ ನೀಡಿತ್ತು. ಸಣ್ಣ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಲ್‌ನಿಂದ ಗರಿಷ್ಠ 20 ಕ್ವಿಂಟಲ್‌ ರಾಗಿ ಖರೀದಿಸಬಹುದು. ಈಗಾಗಲೇ 13,329 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇದೇ ಮಾರ್ಚ್‌ 31ವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ’ ಎಂದರು.

ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಕೆ.ಎಂ. ಶಿವಲಿಂಗೇಗೌಡ, ‘ರಾಗಿ ಖರೀದಿ ಸ್ಥಗಿತಗೊಳಿಸಿರುವುದರಿಂದ ರೈತರಿಗೆ ತೊಂದರೆಯಾಗಿದೆ. ಈ ಬಾರಿ ಶೇ 80ರಷ್ಟು ರೈತರು ರಾಗಿ ಬೆಳೆದಿದ್ದಾರೆ. ಆದರೆ, ಸಣ್ಣ ರೈತರು, ದೊಡ್ಡ ರೈತರು ಎಂದು ವಿಭಜಿಸಿದ್ದೀರಿ. ಹೀಗಾದರೆ ದೊಡ್ಡ ರೈತರು ಎಲ್ಲಿ ಹೋಗಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ಸಿನ ಕೃಷ್ಣ ಬೈರೇಗೌಡ, ‘ಬೆಲೆ ಕುಸಿದಾಗ ಸರ್ಕಾರ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಬಹುದೆಂಬ ವಿಶ್ವಾಸದಿಂದ ಹೆಚ್ಚಿನ ರೈತರು ರಾಗಿ ಬೆಳೆಯುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ಮಾರ್ಗಸೂಚಿಯಲ್ಲಿ ಸಣ್ಣ, ಅತಿ ಸಣ್ಣ ರೈತರು ಎಂಬ ನಿರ್ಬಂಧ ಇಲ್ಲ’ ಎಂದರು.

‘ಸರ್ಕಾರದ ಆದೇಶದ ಪ್ರಕಾರ ಐದು ಎಕರೆಗಿಂತ ಹೆಚ್ಚು ಭೂಮಿ ಇರುವ ರೈತರಿಂದ ರಾಗಿ ಖರೀದಿಸುವಂತಿಲ್ಲ. ಹೀಗಾದರೆ, ಅವರು ಎಲ್ಲಿಗೆ ಹೋಗಬೇಕು? ಪ್ರತಿ ಕ್ವಿಂಟಲ್ ರಾಗಿಯನ್ನು ಸರ್ಕಾರ₹ 3,377 ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದೆ. ಆದರೆ, ರೈತರು ಅರಸೀಕೆರೆ ಮಾರುಕಟ್ಟೆಯಲ್ಲಿ ₹ 2,000ಕ್ಕೆ, ತುಮಕೂರು ಮಾರುಕಟ್ಟೆಯಲ್ಲಿ ₹ 1,600ಕ್ಕೆ ಮಾರಾಟ ಮಾಡುತ್ತಿದ್ದಾರೆ’ ಎಂದರು.

‘ಕೇಂದ್ರದ ಮಾರ್ಗಸೂಚಿ ಪ್ರಕಾರ ಒಟ್ಟು ಉತ್ಪಾದನೆಯಲ್ಲಿ ಶೇ 25ರಷ್ಟನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಕೇಂದ್ರದ ಅನುಮೋದನೆಅಗತ್ಯವಿಲ್ಲ. ಈ ಬಾರಿ ರಾಜ್ಯದಲ್ಲಿ 14 ಲಕ್ಷ ಟನ್‌ನಲ್ಲಿ ಶೇ 25ರಷ್ಟು, ಅಂದರೆ 4 ಲಕ್ಷ ಟನ್ ಖರೀದಿಸಬಹುದು. ಅದಕ್ಕಿಂತ ಹೆಚ್ಚು ಖರೀದಿ‌ಗೆ ಕೇಂದ್ರದ ಅನುಮತಿ ಪಡೆಯಬೇಕಾಗುತ್ತದೆ. ಸರ್ಕಾರ ಎಲ್ಲ ನಿರ್ಬಂಧಗಳನ್ನುತೆಗೆದು ಹಾಕಿ, ಎಲ್ಲ ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಬೇಕು’ ಎಂದು ಶಿವಲಿಂಗೇಗೌಡ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT