ಮಂಗಳವಾರ, ಸೆಪ್ಟೆಂಬರ್ 21, 2021
21 °C
1.12 ಲಕ್ಷ ಜನರ ಕೊರೊನಾ ಸೋಂಕಿನ ಮೂಲವೇ ಪತ್ತೆಯಾಗಿಲ್ಲ

4 ದಿನ 37 ಸಾವಿರ ಕೋವಿಡ್‌ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ 9,280 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 3.79 ಲಕ್ಷ ದಾಟಿದೆ.

ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಜೂನ್‌ನಿಂದ ಏರುಗತಿ ಪಡೆದಿದ್ದು, ಈ ತಿಂಗಳ ನಾಲ್ಕು ದಿನಗಳ
ಲ್ಲಿಯೇ 37,063 ಪ್ರಕರಣಗಳು ವರದಿಯಾಗಿವೆ. ಪ್ರತಿನಿತ್ಯ ಸರಾಸರಿ 9,265 ಮಂದಿ ಸೋಂಕಿತರಾಗಿರುವುದು ದೃಢಪಟ್ಟಿದೆ. ಇದರಿಂದಾಗಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಲಕ್ಷದ ಗಡಿಯತ್ತ (99,101) ದಾಪುಗಾಲು ಇರಿಸಿದೆ. ಸದ್ಯ ಸೋಂಕು ದೃಢ ಪ್ರಮಾಣ ಶೇ 11.5 ರಷ್ಟಿದೆ. ಕೋವಿಡ್ ಪೀಡಿತರಲ್ಲಿ ಮತ್ತೆ 116 ಮಂದಿ ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ ಸಾವಿಗೀಡಾದವರ ಒಟ್ಟು ಸಂಖ್ಯೆ 6,170ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮರಣ ‍ಪ್ರಮಾಣ ದರ ಶೇ 1.3ರಷ್ಟು ಇದೆ. 

ಕೋವಿಡ್ ಪರೀಕ್ಷೆಗಳ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿದ್ದು, ಸದ್ಯ ರಾಜ್ಯದಲ್ಲಿ ಪ್ರತಿ 10 ಲಕ್ಷ ಮಂದಿಗೆ ಸರಾಸರಿ 10,614 ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಒಂದೇ ದಿನ 31,641 ಆ್ಯಂಟಿಜೆನ್‌ ಸೇರಿದಂತೆ 73,192 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಬೆಂಗಳೂರಿನಲ್ಲಿ 1,732 ಮಂದಿ ಸೇರಿದಂತೆ ರಾಜ್ಯದಲ್ಲಿ 6,161 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ರಾಜ್ಯದಲ್ಲಿ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 2.74 ಲಕ್ಷ ದಾಟಿದೆ.

ಬೆಂಗಳೂರಿನಲ್ಲಿ ಹೊಸದಾಗಿ 2,963 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 1.41 ಲಕ್ಷ ದಾಟಿದೆ. ಮೈಸೂರಿನಲ್ಲಿ ಮತ್ತೆ 776 ಮಂದಿ ಕೋವಿಡ್ ಪೀಡಿತರಾಗಿದ್ದು, ಅಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20 ಸಾವಿರದ ಗಡಿ (20,504) ದಾಟಿದೆ. ಬಳ್ಳಾರಿ, ತುಮಕೂರು ಹಾಗೂ ದಕ್ಷಿಣ ಕನ್ನಡದಲ್ಲಿ 400ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು (25), ಮೈಸೂರು (11 ಧಾರವಾಡ (10), ದಾವಣಗೆರೆ (10) ಜಿಲ್ಲೆಯಲ್ಲಿ ಅಧಿಕ ಮರಣ ಪ್ರಕರಣಗಳು ಶುಕ್ರವಾರ ದೃಢಪಟ್ಟಿವೆ. 

ಪ್ರಯಾಣದ ಇತಿಹಾಸ: ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಈವರೆಗೆ ವರದಿಯಾದ ಪ್ರಕರಣಗಳಲ್ಲಿ 2.15 ಲಕ್ಷಕ್ಕೂ ಅಧಿಕ ಮಂದಿ ದೇಶೀಯ ಪ್ರಯಾಣದ ಇತಿಹಾಸ ಹೊಂದಿದ್ದಾರೆ. 1.12 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವ ಮೂಲ ಇನ್ನೂ ಪತ್ತೆಯಾಗಿಲ್ಲ. ಕೋವಿಡ್ ಪ್ರಕರಣಗಳು ದುಪ್ಪಟ್ಟಾಗಲು ರಾಜ್ಯದಲ್ಲಿ 25 ದಿನಗಳು ಹಾಗೂ ದೇಶದಲ್ಲಿ 29 ದಿನಗಳನ್ನು ತೆಗೆದುಕೊಳ್ಳುತ್ತಿವೆ.

ಒಟ್ಟು ಪ್ರಕರಣಗಳಲ್ಲಿ ಶೇ 91.99ರಷ್ಟು ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಬಹಿರಂಗವಾಗಿ ಗೋಚರಿ
ಸಿಲ್ಲ. ಶೇ 8.1ರಷ್ಟು ಮಂದಿಯಲ್ಲಿ ವಿವಿಧ ಲಕ್ಷಣಗಳು ಕಾಣಿಸಿಕೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.