ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಜೀವನ್‌ ಮಿಷನ್‌: ₹ 4,400 ಕೋಟಿ ವೆಚ್ಚಕ್ಕೆ ಸಂಪುಟ ಸಭೆ ಒಪ್ಪಿಗೆ

Last Updated 10 ಫೆಬ್ರುವರಿ 2022, 0:55 IST
ಅಕ್ಷರ ಗಾತ್ರ

ಬೆಂಗಳೂರು: ಜಲಜೀವನ್‌ ಮಿಷನ್‌ ಯೋಜನೆಯಡಿ ರಾಜ್ಯದ ಎಂಟು ಜಿಲ್ಲೆಗಳ 6,358 ಜನವಸತಿಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಪೂರೈಸಲು₹ 4,400.66 ಕೋಟಿ ವೆಚ್ಚದಲ್ಲಿ 17 ಕಾಮಗಾರಿಗಳನ್ನು ಕೈಗೊಳ್ಳುವಪ್ರಸ್ತಾವಕ್ಕೆ ಸಂಪುಟ ಸಭೆ ಮಂಜೂರಾತಿ ನೀಡಿದೆ.

ಸಂಪುಟ ಸಭೆಯ ಬಳಿಕ ವಿವರ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುದಾರಿಕೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ರಾಜ್ಯ ಸರ್ಕಾರದ ಪಾಲು ಮತ್ತು ಫಲಾನುಭವಿಗಳ ವಂತಿಕೆಯನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಇದಕ್ಕಾಗಿವಿಶ್ವ ಬ್ಯಾಂಕ್‌ನಿಂದ ₹ 4,500 ಕೋಟಿ ಸಾಲ ಪಡೆದು ಬಳಸಿಕೊಳ್ಳಲಾಗುವುದು’ ಎಂದರು.

ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ಮತ್ತು ಕಾಪು ತಾಲ್ಲೂಕಿನ 1,904 ಜನವಸತಿಗಳಿಗೆ ನೀರು ಪೂರೈಸುವ ₹ 1,215 ಕೋಟಿ ವೆಚ್ಚದ ಕಾಮಗಾರಿ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆ ಪಟ್ಟಣ ಮತ್ತು ಇತರ 21 ಗ್ರಾಮೀಣ ಜನವಸತಿಗಳಿಗೆ ಕುಡಿಯುವ ನೀರು ಒದಗಿಸುವ ₹ 367.65 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಂಪುಟ ಒಪ್ಪಿಗೆ ನೀಡಿದೆ.

ಹಾಸನ ಜಿಲ್ಲೆ ಅರಕಲಗೂಡು, ಹೊಳೆನರಸೀಪುರ, ಬೇಲೂರು, ಆಲೂರು, ಚನ್ನರಾಯಪಟ್ಟಣ ಮತ್ತು ಹಾಸನ ತಾಲ್ಲೂಕುಗಳ 2,396 ಗ್ರಾಮ ಗಳಿಗೆ ಒಟ್ಟು ₹ 1,475 ಕೋಟಿ ವೆಚ್ಚದಲ್ಲಿ ನೀರು ಪೂರೈಸುವ ಐದುಕಾಮಗಾರಿಗಳ ಅಂದಾಜು ಪಟ್ಟಿಗೆ ಸಂಪುಟ ಅನುಮೋದನೆ ನೀಡಿದೆ. ರಾಮನಗರ ಜಿಲ್ಲೆಯ 1,041 ಜನವಸತಿಗಳಿಗೆ ₹ 825 ಕೋಟಿ ವೆಚ್ಚದಲ್ಲಿ ನೀರು ಒದಗಿಸುವ ಎರಡು ಕಾಮಗಾರಿಗಳಿಗೂ ಮಂಜೂರಾತಿ ನೀಡಲಾಗಿದೆ.

ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ 61 ಜನವಸತಿಗಳಿಗೆ ನೀರು ಪೂರೈಸುವ ₹ 131.21 ಕೋಟಿ ವೆಚ್ಚದ ಕಾಮಗಾರಿ, ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಶಿವಮೊಗ್ಗ ತಾಲ್ಲೂಕಿನ 349 ಜನವಸತಿಗಳಿಗೆನೀರು ಒದಗಿಸುವ ₹ 104.73 ಕೋಟಿ ವೆಚ್ಚದ ಕಾಮಗಾರಿ, ಚಿಕ್ಕಬಳ್ಳಾಪುರ ಜಿಲ್ಲೆಯ 41 ಜನವಸತಿಗಳಿಗೆ ₹ 28.30 ಕೋಟಿ ವೆಚ್ಚದ ಎರಡು ಕಾಮಗಾರಿಗಳು ಹಾಗೂ ಉತ್ತರ ಕನ್ನಡ ಜಿಲ್ಲೆ ಅಂಕೋಲಾ, ಕಾರವಾರ ಮತ್ತುಕುಮಟಾ ತಾಲ್ಲೂಕಿನ 349 ಜನವಸತಿಗಳಿಗೆ ನೀರು ಪೂರೈಸುವ ₹ 253.77 ಕೋಟಿ ವೆಚ್ಚದ ಮೂರು ಕಾಮಗಾರಿಗಳಿಗೂ ಒಪ್ಪಿಗೆದೊರಕಿದೆ.

ಅನುಭವ ಮಂಟಪ: ಪರಿಷ್ಕೃತ ಅಂದಾಜಿಗೆ ಒಪ್ಪಿಗೆ
ಬೀದರ್‌ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಯೋಜನೆಯ ಪರಿಷ್ಕೃತ ಅಂದಾಜು ಪಟ್ಟಿಗೆ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ. ₹ 500 ಕೋಟಿ ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಿಸುವ ಪ್ರಸ್ತಾವಕ್ಕೆ ಹಿಂದೆ ಒಪ್ಪಿಗೆ ನೀಡಲಾಗಿತ್ತು. ಪರಿಷ್ಕೃತ ಅಂದಾಜಿನಲ್ಲಿ ಯೋಜನಾ ವೆಚ್ಚ ₹ 560 ಕೋಟಿಗೆ ಏರಿಕೆಯಾಗಿದೆ. ಹೆಚ್ಚುವರಿ ವೆಚ್ಚವನ್ನೂ ಒಳಗೊಂಡಿರುವ ಪರಿಷ್ಕೃತ ಅಂದಾಜು ಪಟ್ಟಿಗೆ ಸಂಪುಟ ಅನುಮೋದನೆ ನೀಡಿದೆ’ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT