ಬೆಂಗಳೂರು: ರಾಜ್ಯ ಸರ್ಕಾರಕ್ಕೆ ವರಮಾನ ತಂದು ಕೊಡುವ ಇಲಾಖೆಗಳಲ್ಲಿ ಮೂರನೇ ಸ್ಥಾನದಲ್ಲಿರುವ ಸಾರಿಗೆ ಇಲಾಖೆಯಲ್ಲಿ ಶೇ 55ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.
ಸಾರಿಗೆ ನಿಯಮ ಉಲ್ಲಂಘನೆ ತಡೆಯವಲ್ಲಿ ಮಹತ್ತರ ಪಾತ್ರ ನಿರ್ವಹಿಸುವ ಹುದ್ದೆಗಳೆಂದೇ ಗುರುತಿಸಿಕೊಂಡಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ), ಹಿರಿಯ ಮೋಟಾರು ವಾಹನ ನಿರೀಕ್ಷಕರು, ಮೋಟಾರು ವಾಹನ ನಿರೀಕ್ಷಕ (ಐಎಂವಿ) ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇವೆ.
ಈ ಮೂರು ವೃಂದದ ಒಬ್ಬ ಅಧಿಕಾರಿ ಎರಡರಿಂದ ಮೂರು ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಚೆಕ್ ಪೋಸ್ಟ್ ಮತ್ತು ಕಚೇರಿ ಎರಡೂ ಕಡೆ ಕೆಲಸ ಮಾಡಬೇಕಾದ ಒತ್ತಡ ಇದೆ.
‘ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ರಸ್ತೆ ಸುರಕ್ಷತಾ ನಿಯಮದನ್ವಯ ಘಟನೆ ನಡೆದ ಸ್ಥಳಕ್ಕೆ ಅನುಗುಣವಾಗಿ ರಾಷ್ಟ್ರೀಯ ಹೆದ್ದಾರಿ ಅಥವಾ ರಾಜ್ಯ ಹೆದ್ದಾರಿ ಎಂಜಿನಿಯರ್‌ಗಳು, ಪೊಲೀಸರು ಮತ್ತು ಮೋಟಾರು ವಾಹನ ನಿರೀಕ್ಷಕರು ತೆರಳಿ ಜಂಟಿ ಸಮೀಕ್ಷೆ ನಡೆಸಬೇಕು. ಇತರ ಕೆಲಸಗಳ ಜೊತೆಗೆ ಕೋರ್ಟ್ ಪ್ರಕರಣಗಳಿಗೂ ಓಡಾಡಬೇಕು. ಹೀಗಾಗಿ, ಕೆಲಸದ ಒತ್ತಡ
ಹೆಚ್ಚಿದೆ’ ಎಂದು ಮೋಟಾರು ವಾಹನ ನಿರೀಕ್ಷಕರೊಬ್ಬರು ಹೇಳಿದರು.
ಐಎಂವಿ ಹುದ್ದೆಗಳಿಗೆ 2008 ರಲ್ಲಿ 103 ಮಂದಿಯನ್ನು ನೇಮಕಾತಿ ಮಾಡಿಕೊಂಡಿತ್ತು. ಆದರೆ, ಪೆಟ್ರೋಲ್‌ನಿಂದ ಚಾಲಿತ ಭಾರಿ ವಾಹನಗಳ (ಬಸ್, ಲಾರಿ) ದುರಸ್ತಿ ಬಗ್ಗೆ ಒಂದು ವರ್ಷದ ಸೇವಾನುಭವದ ಅರ್ಹತೆ ಇಲ್ಲ ಎಂಬ ಕಾರಣಕ್ಕೆ ಕೆಎಟಿ ಮತ್ತು ಹೈಕೋರ್ಟ್ ತೀರ್ಪಿನಿಂದ ಅವರೆಲ್ಲರೂ ಹುದ್ದೆ ಕಳೆದುಕೊಂಡರೂ, ಸುಪ್ರೀಂ ಕೋರ್ಟ್‌ನ ‘ಅಂತಿಮ ತೀರ್ಪಿಗೆ ಒಳಪಟ್ಟು’ ಮುಂದುವರಿಯುವಂತಾಗಿದೆ.
2019ರ ಜುಲೈ 4ರಂದು ಮತ್ತೆ 129 ಮೋಟಾರು ವಾಹನ ನಿರೀಕ್ಷಕ ಹುದ್ದೆಗೆ ಕೆಪಿಎಸ್‌ಸಿ ತಾತ್ಕಾಲಿಕ ಪಟ್ಟಿ ಪ್ರಕಟಿಸಿದೆ. ಆದರೆ, ಅಭ್ಯರ್ಥಿಗಳು ಪೆಟ್ರೋಲ್‌ನಿಂದ ಚಾಲಿತ ಭಾರಿ ವಾಹನಗಳ ದುರಸ್ತಿ ಬಗ್ಗೆ ಸೇವಾ ಅನುಭವದ ಪ್ರಮಾಣಪತ್ರ ಸಲ್ಲಿಸಬೇಕೆಂಬ ನಿಯಮದ ಕಾರಣಕ್ಕೆ ಹಲವರು ನಕಲಿ ಪ್ರಮಾಣಪತ್ರ ಸಲ್ಲಿಸಿದ್ದರು. ಹೀಗಾಗಿ, ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ದೂರಿ ಅನೇಕರು ಕೆಪಿಎಸ್‌ಸಿಗೆ ಆಕ್ಷೇಪ ಸಲ್ಲಿಸಿದ್ದರು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ.
ಐಎಂವಿ ನೇಮಕ: ಹಸಿರುನಿಶಾನೆ
129 ಮೋಟಾರು ವಾಹನ ಇನ್‌ಸ್ಪೆಕ್ಟರ್ ಹುದ್ದೆಯ ತಾತ್ಕಾಲಿಕ ಪಟ್ಟಿಗೆ ಸಂಬಂಧಿಸಿದಂತೆ ಇತ್ತೀಚೆಗೆ ತೀರ್ಪು ನೀಡಿರುವ ಹೈಕೋರ್ಟ್, ‘ಅರ್ಹತೆ’ಯ ಗೊಂದಲಕ್ಕೆ ತೆರೆ ಎಳೆದಿದೆ.
ಪೆಟ್ರೋಲ್‌ನಿಂದ ಚಾಲಿತ ಭಾರಿ ವಾಹನಗಳ (ಬಸ್, ಲಾರಿ) ದುರಸ್ತಿ ಬಗ್ಗೆ ಒಂದು ವರ್ಷದ ಸೇವಾ ಅನುಭವ ಪ್ರಮಾಣಪತ್ರ ಮತ್ತು ಭಾರಿ ವಾಹನ (ಹೆವಿ) ಚಾಲನಾ ಪ್ರಮಾಣಪತ್ರಬೇಕೆಂಬ ಅರ್ಹತೆಯನ್ನು ಮೋಟಾರು ವಾಹನ ಕಾಯ್ದೆಯಿಂದ 2019ರ ಮಾರ್ಚ್ 8ರಂದು ಕೇಂದ್ರ ಸರ್ಕಾರ ತೆಗೆದುಹಾಕಿದೆ. ಹೀಗಾಗಿ, ರಾಜ್ಯ ಸರ್ಕಾರ ಕೂಡಾ ಕಾಯ್ದೆಗೆ ತಿದ್ದುಪಡಿ ಮಾಡಿಕೊಂಡಿದೆ. ಈ ಬಗ್ಗೆ ಕೆಪಿಎಸ್‌ಸಿ ಮತ್ತು ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರವನ್ನು ಹೈಕೋರ್ಟ್ ಪರಿಗಣಿಸಿದೆ. ಈ ಅರ್ಹತೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಆಯ್ಕೆ ಪ್ರಕ್ರಿಯೆ ಮುಂದುವರಿಸಲು ಇದ್ದ ತಡೆ ನಿವಾರಣೆಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.