ಸೋಮವಾರ, ನವೆಂಬರ್ 28, 2022
20 °C

ಇಂಧನ ಕ್ಷೇತ್ರಕ್ಕೆ ಶೇ 71ರಷ್ಟು ಹೂಡಿಕೆ: ಮುರುಗೇಶ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನವೀಕರಣಗೊಳಿಸಬಹುದಾದ ಇಂಧನ ಮತ್ತು ಹಸಿರು ಜಲಜನಕ ಉತ್ಪಾದನೆ ಸೇರಿದಂತೆ ಇಂಧನ ಕ್ಷೇತ್ರಕ್ಕೆ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಶೇಕಡ 71ರಷ್ಟು ಹೂಡಿಕೆ ಹರಿದುಬಂದಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಶೇಕಡ 38ರಷ್ಟು ಹೂಡಿಕೆ ಒಪ್ಪಂದಗಳಾಗಿದ್ದರೆ, ಹಸಿರು ಜಲಜನಕ ಉತ್ಪಾದನೆಗೆ ಶೇ 33ರಷ್ಟು ಒಪ್ಪಂದಗಳಾಗಿವೆ. ವಿದ್ಯುತ್‌ ಚಾಲಿತ ವಾಹನಗಳು ಸೇರಿದಂತೆ ಉತ್ಪಾದನಾ ವಲಯ, ಮೂಲಸೌಕರ್ಯ ಮತ್ತು ಕೈಗಾರಿಕಾ ಪಾರ್ಕ್‌, ಸಾರಿಗೆ ಮೂಲಸೌಕರ್ಯ ಕ್ಷೇತ್ರಕ್ಕೆ ತಲಾ ಶೇ 9ರಷ್ಟು ಹೂಡಿಕೆ ಪ್ರಸ್ತಾವಗಳು ಬಂದಿವೆ’ ಎಂದು ವಿವರಿಸಿದರು.

ಸಮ್ಮೇಳನಕ್ಕೂ ಮೊದಲೇ ₹ 2.83 ಲಕ್ಷ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವಗಳಿಗೆ ಏಕ ಗವಾಕ್ಷಿ ಹಾಗೂ ರಾಜ್ಯ ಉನ್ನತ ಮಟ್ಟದ ಸಮಿತಿಯಿಂದ ಒಪ್ಪಿಗೆ ನೀಡಲಾಗಿತ್ತು. ₹ 5.41 ಲಕ್ಷ ಕೋಟಿ ಮೊತ್ತದ ಹೂಡಿಕೆ ಒಪ್ಪಂದಗಳಿಗೆ ಜಿಮ್‌ನಲ್ಲಿ ಸಹಿ ಹಾಕಲಾಗಿದೆ. ₹ 1.57 ಲಕ್ಷ ಕೋಟಿ ಮೊತ್ತದ ಹೂಡಿಕೆ ಘೋಷಣೆಗಳು ಸಮ್ಮೇಳನದಲ್ಲೇ ಪ್ರಕಟವಾಗಿವೆ. ಒಟ್ಟಾರೆ 667 ಪ್ರಸ್ತಾವಗಳ ಮೂಲಕ ₹ 9.81 ಲಕ್ಷ ಕೋಟಿ ಹೂಡಿಕೆ ಹರಿದುಬಂದಿದೆ ಎಂದರು.

ನೋಡಲ್‌ ಅಧಿಕಾರಿಗಳ ನೇಮಕ: ಬಾಕಿ ಇರುವ ಹೂಡಿಕೆ ಪ್ರಸ್ತಾವಗಳಿಗೆ ಏಕ ಗವಾಕ್ಷಿ ಮತ್ತು ರಾಜ್ಯ ಉನ್ನತ ಮಟ್ಟದ ಸಮಿತಿಯಿಂದ ಒಪ್ಪಿಗೆ ನೀಡಲು 90 ದಿನಗಳ ಗಡುವು ನೀಡಲಾಗುವುದು. ಹೂಡಿಕೆ ಒಪ್ಪಂದಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಸಮನ್ವಯ ಸಮಿತಿಗಳನ್ನೂ ರಚಿಸಲಾಗುವುದು. ಹೂಡಿಕೆದಾರರು ತ್ವರಿತವಾಗಿ ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಬೇಕಿರುವ ಅನುಮತಿಗಳನ್ನು ತ್ವರಿತವಾಗಿ ಕೊಡಿಸಲು ಈ ಸಮಿತಿಗಳು ನೆರವಾಗಲಿವೆ ಎಂದು ಹೇಳಿದರು.

ಈ ಉದ್ದಿಮೆಗಳಿಗಾಗಿ 50,000 ಎಕರೆ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು. ಬೆಂಗಳೂರು ಮತ್ತು ಸುತ್ತಮುತ್ತ 20,000 ಎಕರೆ ಹಾಗೂ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ 30,000 ಎಕರೆ ಜಮೀನು ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

ಹೂಡಿಕೆ ಪ್ರಸ್ತಾವಗಳ ಕುರಿತು ಬ್ಯಾಂಕ್‌ಗಳ ಜತೆಗೂ ಮಾಹಿತಿ ಹಂಚಿಕೊಳ್ಳಲಾಗುವುದು. ಹೂಡಿಕೆದಾರರು ಬ್ಯಾಂಕ್‌ಗಳಿಂದ ತ್ವರಿತವಾಗಿ ಸಾಲ ಪಡೆಯುವುದಕ್ಕೆ ಪೂರಕವಾಗಿ ಸರ್ಕಾರ ಸಹಕಾರ ನೀಡಲಿದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು